ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಮೇನಿಯ: ಬಾಲಿವುಡ್‌ನಲ್ಲಿ ಭಯ

Last Updated 24 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿಶ್ವಕಪ್, ಐಪಿಎಲ್ ಎಂದೆಲ್ಲ ಭಾರತದಲ್ಲಿ ಸುದೀರ್ಘ ಮೂರು ತಿಂಗಳ ಕಾಲ ಕ್ರಿಕೆಟ್‌ನದ್ದೇ ಕಾರುಭಾರು. ಈ ಬಾಲ್-ಬ್ಯಾಟುಗಳ ಅಬ್ಬರದಲ್ಲಿ ಬಾಲಿವುಡ್‌ನ ರಂಗು ಮಸುಕಾಗಿದೆ. ಚಿತ್ರಗಳ ಬಿಡುಗಡೆಯ ಕ್ಯಾಲೆಂಡರ್ ಈ ಕ್ರಿಕೆಟ್ ಲೆಕ್ಕಾಚಾರದ ಮೇಲೇ ಸಿದ್ಧವಾಗುತ್ತದೆ. ಯಾವತ್ತೂ ರಜಾಕಾಲವಾದ ಮಾರ್ಚ್- ಏಪ್ರಿಲ್- ಮೇ ಎಂದರೆ ಕಡಿಮೆ ಬಜೆಟ್‌ನ ಸಿನಿಮಾಗಳೂ ಅದೃಷ್ಟ ಹುಡುಕುವ ಸಮಯ.
 
ಯುವ ಪ್ರೇಕ್ಷಕರನ್ನು ಮಲ್ಟಿಪ್ಲೆಕ್ಸ್‌ಗಳಿಗೆ ಸೆಳೆಯಲು ಸದವಕಾಶ. ಆದರೆ ಈ ಬಾರಿ ಧೋನಿ ಪಡೆ ಈ ಯುವಕರನ್ನು ಚಿತ್ರಮಂದಿರಗಳಿಂದ ಮೈದಾನಕ್ಕೆ ಸೆಳೆದುಬಿಟ್ಟಿದೆ. ಕಳೆದ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಪಾಠ ಕಲಿತ ನಿರ್ಮಾಪಕರು ಕ್ರಿಕೆಟ್ ಸಿನಿಮಾಗಳ ಮೇಲೆ ಬೀರುವ ಪ್ರಭಾವವನ್ನು ಚೆನ್ನಾಗೇ ಅವಲೋಕಿಸುತ್ತಿದ್ದಾರೆ. ಹೀಗಾಗೇ ಬಿಡುಗಡೆ ದಿನಾಂಕವನ್ನು ಈ ಮೊದಲೇ ಮುಂದಕ್ಕೆ ಹಾಕಿ ಕೂತಿದ್ದಾರೆ.

ಆದರೆ ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಪಕರು ಕ್ರಿಕೆಟ್ ಮೇನಿಯಾಗೆ ಸವಾಲು ಹಾಕಿದಂತಿದೆ. ‘ದಮ್ ಮಾರೋ ದಮ್’, ‘ಫಾಲ್ತು’, ಅಕ್ಷಯ್‌ಕುಮಾರ್‌ನ ‘ಥ್ಯಾಂಕ್ ಯು’, ಅಭಿಷೇಕ್ ಬಚ್ಚನ್ ಅಭಿನಯದ ‘ಗೇಮ್’, ವಿಕ್ರಮ್ ಭಟ್‌ನ 3ಡಿ ಹಾರರ್ ಸಿನಿಮಾ ‘ಹಂಟೆಡ್’ ಚಿತ್ರಗಳು ಏಪ್ರಿಲ್ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿವೆ. ಇವು ಯುವಕರನ್ನು ಸೆಳೆಯಲು ಎಲ್ಲಾ ರೀತಿಯ ಮಸಾಲೆ ತುರುಕಿದ ಸಿನಿಮಾಗಳು. ಹಾಗಾಗಿ ಈ ನಿರ್ಮಾಪಕರಿಗೆ ಧೈರ್ಯ. ಒಂದಂತೂ ನಿಜ.

ಸುಮಾರು 60 ಕೋಟಿ ರೂಪಾಯಿ ವಹಿವಾಟಿಗೆ ಕ್ರಿಕೆಟ್ ಪಂದ್ಯಗಳು ಸೆಡ್ಡು ಹೊಡೆಯಲಿವೆ. ಇದು ಈ ತಿಂಗಳಲ್ಲೇ ಗೊತ್ತಾಗಿದೆ. ಪ್ರಿಯಾಂಕಾ ಚೋಪ್ರಾಳ ‘ಸಾಥ್ ಖೂನ್ ಮಾಫ್’ ಕಳೆದ ವಾರ ಬಿಡುಗಡೆಯಾಗಿದ್ದು ಗಲ್ಲಾ ಪೆಟ್ಟಿಗೆ ಗಳಿಕೆ ಅಷ್ಟಕ್ಕಷ್ಟೆ. ನಿರ್ಮಾಪಕರು ಈ ಸಂದರ್ಭದಲ್ಲಿ ಬಿಡುಗಡೆಗೆ ತೋರಿದ ಧೈರ್ಯದ ಹಿಂದೆ ಒಂದು ಸಣ್ಣ ಲೆಕ್ಕಾಚಾರ ಅಡಗಿತ್ತು.
 
ಆರಂಭದಲ್ಲಿ ವಿಶ್ವಕಪ್‌ನಲ್ಲಿ ಅಷ್ಟೊಂದು ಕುತೂಹಲಕಾರಿಯಲ್ಲದ ಪಂದ್ಯಗಳೇ ನಡೆಯುವುದರಿಂದ ಪ್ರೇಕ್ಷಕರು ಚಿತ್ರಮಂದಿರದ ಕಡೆ ಸುಳಿಯಬಹುದು ಎಂಬುದು ಅವರ ನಿರೀಕ್ಷೆಯಾಗಿತ್ತು. ಅದೇ ರೀತಿಯಲ್ಲೇ ‘ತನು ವೆಡ್ಸ್ ಮನು’ ಈ ಶುಕ್ರವಾರ ಬಿಡುಗಡೆಯಾಗಿದೆ. ಸಣ್ಣ ಬಜೆಟ್‌ನ ಸಿನಿಮಾಗಳಾದ ‘ಶಾಗಿರ್ದ್’, ‘ಕುಚ್ ಲವ್ ಜೈಸಾ’ ಕೂಡಾ ಮಾರ್ಚ್‌ನಲ್ಲಿ ಬಿಡುಗಡೆಗೆ ಕಾದು ಕೂತಿವೆ.

ಸಿನಿಮಾಗಳಿಗೆ ಮಾರಕವಾದ ಇನ್ನೊಂದು ಅಂಶವೆಂದರೆ ಕ್ರಿಕೆಟ್‌ನ ಬಹುತೇಕ ಲೀಗ್ ಪಂದ್ಯಗಳು ವಾರದ ಕೊನೆಗೆ ನಿಗದಿಯಾಗಿವೆ. ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಭರ್ತಿಯಾಗುವುದು ಈ ವಾರದ ಕೊನೆಯ ದಿನಗಳಲ್ಲೇ. ಇದು ಕೂಡಾ ಸಿನಿಮಾಗಳ ಗಳಿಕೆಗೆ ಬಲವಾದ ಪೆಟ್ಟು ನೀಡಲಿದೆ. ಕಳೆದ ವರ್ಷ ಭಾರಿ ನಷ್ಟ ಅನುಭವಿಸಿದ ಬಾಲಿವುಡ್ ಈ ವರ್ಷದ ಮೊದಲ ತಿಂಗಳಲ್ಲಿ ಚೆನ್ನಾಗಿ ವಹಿವಾಟು ನಡೆಸಿತ್ತು.
 
ನಿರ್ಮಾಪಕರು ಇನ್ನಷ್ಟು ಹಣ ಬಾಚುವ ಕನಸು ಕಂಡ ಬೆನ್ನಲ್ಲೇ ಈ ಕ್ರಿಕೆಟ್ ಮೇನಿಯ ಶುರುವಾಗಿ ಭಾರಿ ಹೊಡೆತ ನೀಡಿದೆ. ಆದರೂ ಮಧ್ಯಾಹ್ನ ಮತ್ತು ಸಂಜೆಯ ಪ್ರದರ್ಶನಕ್ಕಷ್ಟೇ ಹೊಡೆತ ಬೀಳಲಿದೆ. ಅದು ಶೇ 20ರಷ್ಟು ಮಾತ್ರ ಎಂಬುದು ಬಾಲಿವುಡ್ ಪಂಡಿತರ ಲೆಕ್ಕಾಚಾರ. ಏನಿದ್ದರೂ ಮೂರು ತಿಂಗಳ ನಂತರವಷ್ಟೇ ಅದೃಷ್ಟ ಯಾರ ಕಡೆಗಿದೆ ಎಂಬುದು ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT