ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ ಪೋರರ ಲೀಡ್

Last Updated 9 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವಿಶ್ವಕಪ್ ಕ್ರಿಕೆಟ್‌ನ ಪ್ರತಿ ಪಂದ್ಯದ ಪ್ರಾರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಆಟಗಾರರು ತಮ್ಮೊಂದಿಗೆ ಬಿಳಿ ಉಡುಗೆ ಧರಿಸಿದ ಮಕ್ಕಳನ್ನು ಕರೆತಂದು ನಿಲ್ಲಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಇದು ಈ ಬಾರಿಯ ವಿಶ್ವಕಪ್‌ನ ವಿಶೇಷ.

ನೆಚ್ಚಿನ ಕ್ರಿಕೆಟ್ ತಾರೆಗಳ ಕೈ ಹಿಡಿದು ಮೈದಾನದೊಳಗೆ ನಡೆದು, ರಾಷ್ಟ್ರಗೀತೆಗೆ ದನಿಗೂಡಿಸುವ ಮೂಲಕ ರಾಷ್ಟ್ರಾಭಿಮಾನ ಮತ್ತು ಏಕತೆಯನ್ನು ಪ್ರದರ್ಶಿಸುವ ‘ಅದೃಷ್ಟವಂತ’ ಈ ಮಕ್ಕಳ ಸೈನ್ಯದಲ್ಲಿ ನಮ್ಮ ಬೆಂಗಳೂರಿನ ಪುಟಾಣಿಗಳೂ ಇದ್ದಾರೆ. ಇವರನ್ನೆಲ್ಲ ಆಯ್ಕೆ ಮಾಡಿ, ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಸಮ್ಮುಖದಲ್ಲಿ ಕ್ರಿಕೆಟಿಗರೊಂದಿಗೆ ಕೈ- ಜೋಡಿಸುವ ಅವಕಾಶ ಕಲ್ಪಿಸಿದವರು  ‘ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ’ ಕಂಪನಿ.

ಇದಕ್ಕಾಗಿ  ಎಲ್‌ಜಿ ಕಂಪನಿಯು ಐಸಿಸಿ ಕ್ರಿಕೆಟ್ ವಿಶ್ವಕಪ್-2011’ರ ಪ್ರಯುಕ್ತ ‘ಎಲ್‌ಜಿ ಲೀಡ್ ಇಲೆವನ್’ ಸ್ಪರ್ಧೆ ನಡೆಸಿ ಪ್ರತಿ ಪಂದ್ಯಕ್ಕೆ 30 ಮಕ್ಕಳನ್ನು ಆರಿಸುತ್ತಿದೆ.  ಈ ಪ್ರಚಾರ ಅಭಿಯಾನ ಜನವರಿ 15 ರಿಂದ ಪ್ರಾರಂಭವಾಗಿದ್ದು, ಮಾ.5 ರವರೆಗೆ ನಡೆಯಲಿದೆ.

 ಭಾರತದಲ್ಲಿರುವ ಕಂಪನಿಯ ಗ್ರಾಹಕರಲ್ಲಿ ಕ್ರಿಕೆಟ್ ಉತ್ಸಾಹ ಹೆಚ್ಚಿಸುವುದು, ಬಾಲ ಪ್ರತಿಭೆಗಳನ್ನು ವಿಶ್ವ ವೇದಿಕೆಯಲ್ಲಿ  ‘ಭಾರತದ ಭವಿಷ್ಯದ ತಾರೆ’ಗಳು ಎಂದು ಬಿಂಬಿಸುವುದು ಈ ಪ್ರದರ್ಶನದ ಉದ್ದೇಶ. ಇದಕ್ಕಾಗಿ ವಿಶ್ವಕಪ್‌ನಲ್ಲಿ ಪ್ರಾಯೋಜಕತ್ವ ಹೊಂದಿರುವ ಎಲ್‌ಜಿ 10 ಕೋಟಿ ರೂಪಾಯಿಗಳಿಗೂ ಹೆಚ್ಚು ವಿನಿಯೋಗಿಸುತ್ತಿದೆ.

ಕಳೆದ ಭಾನುವಾರ ಬೆಂಗಳೂರಲ್ಲಿ ನಡೆದ ಭಾರತ- ಐರ್ಲೆಂಡ್ ಪಂದ್ಯದಲ್ಲಿ  ಕ್ರಿಕೆಟಿಗರ ಕೈ ಹಿಡಿದು ಮೈದಾನದಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದ ಬೆಂಗಳೂರಿನ ಹರಜಿತ್, ನಯನ ಕೇಸರಿ, ಸಜ್ವಾ ರಿನಾಡ್, ಕೇತನ್, ಗಾಯತ್ರಿ ಸತೀಶ, ಶ್ರೇಯಾ ಭಟ್‌ಗಂತೂ ಭಾರಿ ಖುಷಿಯಾಗಿತ್ತು.‘ಅನಿರೀಕ್ಷಿತವಾದ ಈ ಆಯ್ಕೆ ನಮಗೆ ತುಂಬಾ ಖುಷಿ ತಂದಿದೆ. ಎದುರು ನೋಡುತ್ತಿರುವ ಕ್ರಿಕೆಟ್ ಕಲಿಗಳ ಜತೆ ನಿಲ್ಲುವಂತ ಈ ರೋಮಾಂಚನಕಾರಿ ಅನುಭವ ನಮಗೆ ಪರೀಕ್ಷೆಯ ಭಯ ಮರೆಸಿದೆ. ‘ಬೆಸ್ಟ್ ಆಫ್ ಲಕ್ ಟು  ಟೀಮ್ ಇಂಡಿಯಾ’ ಎಂದು ಮುಗುಳ್ನಗೆ ಸೂಸಿದರು.

ಹೈದರಾಬಾದ್‌ನಿಂದ ಆಯ್ಕೆಯಾಗಿ ನಗರಕ್ಕೆ ಬಂದಿದ್ದ ಸಾಯಿ ರೋಹಿತ್, ಜೆ.ವಿನಿತ್ ರೆಡ್ಡಿಗೆ ಭಾರಿ ಖುಷಿಯಾಗಿತ್ತು.ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿಗಾಗಿ ನಾವು ಪ್ರಾರ್ಥಿಸುತ್ತೇವೆ’  ಎಂದರು. ಮುಸ್ಕಾನ್ ಮಂಜಿಯಾನಿ ಮತ್ತು ಇಲಿಶಾ ಲಕಾನಿ ‘ಮನೆಯಲ್ಲಿ ಕುಳಿತು ಟಿ.ವಿಯಲ್ಲಿ ಮ್ಯಾಚ್ ನೋಡುತ್ತಿದ್ದ ನಾವು ಈಗ ಕ್ರಿಕೆಟ್ ದಿಗ್ಗಜರ ಜತೆ ನಿಂತು ಜಗತ್ತಿಗೇ ಕಾಣುವ ಸಂಗತಿ ನಮಗೆ ಹೆಮ್ಮೆ ಉಂಟು ಮಾಡಿದೆ’ ಎಂದು ಹೇಳುವಾಗ ಪುಳಕಿತರಾಗಿದ್ದರು.

ಪಾಲಕರಲ್ಲೂ ಖುಷಿ
‘ಸಣ್ಣವರಿದ್ದಾಗ ನಮಗೆ ಇಂತಹ ಅವಕಾಶ ಸಿಗಲಿಲ್ಲ ಎನ್ನುವ ಹೊಟ್ಟೆ ಕಿಚ್ಚು ನನಗೆ, ಮಗನ ಆಯ್ಕೆ ತುಂಬ ಸಂತೋಷ ತಂದಿದೆ. ಆದರೆ ಸ್ಪರ್ಧೆಯ ನಿಯಮಗಳ ಪ್ರಕಾರ ಮಕ್ಕಳು ಆಟಗಾರರ ಹಸ್ತಾಕ್ಷರ (ಆಟೋಗ್ರಾಫ್) ಪಡೆಯುವಂತಿಲ್ಲ; ಅದೊಂದು ದೊರೆತಿದ್ದರೆ ಇನ್ನೂ ಖುಷಿಯಾಗುತ್ತಿತ್ತು’ ಎಂದು ಬೆಂಗಳೂರಿನ ಕೇತನ್‌ನ ತಾಯಿ ದೀಪಾಲಿ ಗೊಲಚ್ ಹೇಳಿದರು.

ಮಗಳು ಮುಸ್ಕಾನ್ ಜತೆಗೆ ಹೈದರಾಬಾದ್‌ನಿಂದ ಬಂದಿದ್ದ ಆಶಿಫ್ ಮಂಜಿಯಾನಿ ಅವರಿಗೆ ‘ಮಗಳ ಜತೆ ನನಗೂ ಉಚಿತ ಪಂದ್ಯ ವೀಕ್ಷಿಸುವ ಭಾಗ್ಯ ದೊರೆತಿದೆ’ ಎಂದು ಹೇಳುವಾಗ ಅವರ ಮುಖದಲ್ಲಿ ಸಂತಸ ಇಣುಕುತ್ತಿತ್ತು.

ಆಯ್ಕೆ ಹೇಗೆ?
ಎಲ್‌ಜಿ ಉತ್ಪನ್ನಗಳ ಮಾರಾಟ ಮಳಿಗೆಗಳಲ್ಲಿ ಯಾವುದೇ ಗೃಹಬಳಕೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಮೂಲಕ ಗ್ರಾಹಕರು ನೋಂದಣಿ ಪತ್ರವನ್ನು ಪಡೆಯಬಹುದು ಅಥವಾ www.lg.com  ವೆಬ್‌ಸೈಟ್‌ನಿಂದ ಡೌನ್‌ಲೊಡ್ ಮಾಡಿಕೊಳ್ಳಬಹುದು. 8 ರಿಂದ 14 ವರ್ಷದೊಳಗಿನ ತಮ್ಮ ಮಕ್ಕಳ ಹೆಸರನ್ನು ಈ ಪತ್ರದಲ್ಲಿ ಭರ್ತಿ ಮಾಡಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತ ಮಕ್ಕಳ ಜತೆಗೆ ಪಾಲಕರಲ್ಲೊಬ್ಬರಿಗೆ ಪಂದ್ಯ ವೀಕ್ಷಿಸುವ ಉಚಿತ ಅವಕಾಶ ಲಭಿಸಲಿದೆ. ಮಕ್ಕಳು ಮತ್ತು ಅವರ ಪಾಲಕರ ಸಾರಿಗೆ ಹಾಗೂ ವಸತಿ ವ್ಯವಸ್ಥೆಯ ಎಲ್ಲ  ಖರ್ಚು ವೆಚ್ಚಗಳನ್ನು ಕಂಪನಿ ಭರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT