ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಸಂಭ್ರಮದಲ್ಲಿ ‘ಮಿನಿ ಇಂಗ್ಲೆಂಡ್’

Last Updated 24 ಡಿಸೆಂಬರ್ 2013, 6:13 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹುರುಪು ಈಗಾಗಲೇ ಕೆಜಿಎಫ್ ನಗರದಲ್ಲಿ ಎದ್ದು ಕಾಣುತ್ತಿದೆ. ಹಬ್ಬದ ಸಡಗರ ಒಂದು ತಿಂಗಳಿನಿಂದಲೇ ಶುರುವಾಗಿದೆ. ಹಬ್ಬಕ್ಕೆ ತಯಾರಿಸುವ ಕಜ್ಜಾಯದ ಘಮ ಘಮ ರಸ್ತೆಗಳಿಗೆ ಬಡಿಯುತ್ತಿದೆ.

ಮಿನಿ ಇಂಗ್ಲೆಂಡ್ ಎಂಬ ಅಗ್ಗಳಿಕೆಯನ್ನು ಪಡೆದಿರುವ ಕೆಜಿಎಫ್ ನಗರಕ್ಕೆ ಪ್ರವೇಶಿ­ಸುತ್ತಿದ್ದಂತೆಯೇ ಕಾಣಸಿಗುವುದು ಒಂದು ಚಿನ್ನದ ಗಣಿಯೊಳಗಿಂದ ತೆಗೆದ ಮಣ್ಣಿನ ರಾಶಿ, ಮತ್ತೊಂದು ಚರ್ಚ್ ಮತ್ತು ಚಾಪೆಲ್‌ಗಳು.

ನಗರದಲ್ಲಿ ಸುಮಾರು 120 ಚರ್ಚ್ ಮತ್ತು ಚಾಪೆಲ್‌ಗಳಿವೆ.  ಡಿಸೆಂಬರ್ 24ರ ರಾತ್ರಿ 12 ಗಂಟೆಗೆ ಶುರುವಾಗುವ ಸಾಮೂ­ಹಿಕ ಪ್ರಾರ್ಥನೆಯೊಂದಿಗೆ ಏಸುಕ್ರಿಸ್ತನ ಜನ್ಮ ಸ್ಮರಣೆಯನ್ನು ಮಾಡುವುದರೊಂದಿಗೆ ಶುರುವಾಗುವ ಕ್ರಿಸ್‌ಮಸ್ ಸಡಗರ ಹೊಸ ವರ್ಷ ಆಚರಣೆ ಮೂಲಕ ಮುಕ್ತಾಯವಾಗು­ತ್ತದೆ. ಕ್ರಿಶ್ಚಿಯನ್ನರಲ್ಲಿ ಇರುವ ರೋಮನ್‌ ಕಾಥೋಲಿಕ್‌ ಮತ್ತು ಪ್ರೊಟೆಸ್ಟಂಟ್‌ ಪಂಗಡದವರ ನಡುವೆ ಪೈಪೋಟಿ  ರೀತಿಯಲ್ಲಿ ಹಬ್ಬದ ಸಂಭ್ರಮ ಕಾಣುತ್ತಿದೆ.
ಪ್ರೊಟೆಸ್ಟಂಟ್‌ ಪಂಗಡಕ್ಕೆ ಸೇರಿದ ಪೆಂಟಿಕೋಸ್ಟ್‌, ಎಸ್‌ಡಿಎ, ಸಿಎಸ್‌ಐ, ಸಿಪಿಎಂ, ಲೂದರನ್‌ ಮುಂತಾದ ಉಪಪಂಗಡಗಳು ಪ್ರಾರ್ಥನೆ ಮತ್ತು ದೇವರ ಆರಾಧನೆ ಮೂಲಕ ಜೀಸಸ್‌ ಸಾನಿಧ್ಯವನ್ನು ಕಾಣಲು ಪ್ರಯತ್ನಿಸುತ್ತವೆ. ವಿಗ್ರಹಾರಾಧನೆಯನ್ನು ಮಾಡುವ ರೋಮನ್ ಕ್ಯಾಥೋಲಿಕ್‌ ಚರ್ಚ್‌ಗಳಲ್ಲಿ ಏಸುವಿನ ಆಳೆತ್ತರ ಚಿತ್ರಗಳಿಗೆ ಬಣ್ಣ ಬಳಿದು ಸಿಂಗರಿಸಲಾಗಿದೆ.

ಈಚಿನ ದಿನಗಳಲ್ಲಿ ಕ್ರಿಸ್‌ಮಸ್ ಸಂಭ್ರಮ ಸ್ವಲ್ಪ ಮಸುಕಾಗಿದ್ದರೂ ಬಡವಾಗಿಲ್ಲ. ಒಂದು ವಾರದ ಮೊದಲೇ ಮನೆ ಮತ್ತು ಪ್ರಾರ್ಥನಾ ಮಂದಿರಗಳನ್ನು ಸಿಂಗರಿಸುವ ಕಾರ್ಯ ಶುರುವಾಗಿದೆ. ನಗರದ ಹೊರಭಾಗದಲ್ಲಿ ಬೆಳೆದಿರುವ ಉದ್ದನೆಯ ಹುಲ್ಲುಕಡ್ಡಿಗಳನ್ನು ಕತ್ತರಿಸಿ ಸೈಕಲ್ ಮೇಲೆ ತರುವ ಬಾಲಕರು, ಅದರ ಮೂಲಕ ಗೋದಲಿ ಮಾಡಿ ಖುಷಿ ಪಡುತ್ತಾರೆ.ಗೋದಲಿಯಲ್ಲಿ ಸಣ್ಣ ಬೊಂಬೆ­ಗಳನ್ನು ಪೇರಿಸಿ ಏಸುವಿನ ಜನ್ಮ ವೃತ್ತಾಂತ­ವನ್ನು ತಿಳಿಸುವ ಪ್ರಯತ್ನ ಮಾಡುತ್ತಾರೆ. ಚರ್ಚ್‌ಗಳಲ್ಲಿ ಕಳೆದ ಒಂದು ತಿಂಗಳಿಂದ ನಡೆಸುತ್ತಿದ್ದ ನೃತ್ಯ ಮತ್ತು ಸಂಗೀತದ ತಾಲೀಮುಗಳಿಗೆ ಈ ಒಂದು ವಾರದಲ್ಲಿ ಅಂತ್ಯ ಕಾಣಲಿದೆ. ಶಾಲೆಗಳಲ್ಲಿ ಸಹ ಈಗಾಗಲೇ ಕ್ರಿಸ್‌ಮಸ್ ಅಚರಣೆಯು ಶಾಲಾ ವಾರ್ಷಿಕೋತ್ಸವದ ರೀತಿಯಲ್ಲಿ ನಡೆದಿದೆ. ಈಗಾಗಲೇ ಪ್ರತಿರಾತ್ರಿ ಚರ್ಚ್‌ಗಳ ಸದಸ್ಯರು ಮನೆಮನೆಗೆ ಭೇಟಿ ನೀಡಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ. ಮನೆಯವರು ಚರ್ಚ್‌ನಲ್ಲಿ ಆಚರಿಸುವ ಕ್ರಿಸ್‌ಮಸ್‌ಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

ಕ್ರಿಸ್‌ಮಸ್ ಹಬ್ಬದಾಚರಣೆಯನ್ನು ನಗರದ ಜನತೆಗೆ ತಿಳಿಸಿಕೊಟ್ಟವರು ಬ್ರಿಟಿಷರು.  ಬ್ರಿಟಿಷರು ಇದ್ದಾಗ ಅನುಸರಿಸುತ್ತಿದ್ದ ವರ್ಣಭೇದದಿಂದ ಅವರ ಕ್ರಿಸ್‌ಮಸ್‌ಗೆ ಭಾರತೀಯರನ್ನು ಸೇರಿಸುತ್ತಿರಲಿಲ್ಲ. ಆದರೆ ಅವರ ಬಳಿ ಕೆಲಸ ಮಾಡುತ್ತಿದ್ದ ಭಾರತೀ­ಯರು ಅವರ ರೀತಿ ರಿವಾಜುಗಳನ್ನೆಲ್ಲಾ ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ ಇಂದಿಗೂ ಸಹ  ಟೈ-, ಬೂಟು ಧರಿಸುವವರ ಸಂಖ್ಯೆ ಗಮನಾರ್ಹ.

ಸುಮಾರು ನೂರು ವರ್ಷದ ಹಿಂದೆ ಚಾಂಪಿಯನ್‌ರೀಫ್ಸ್‌ನಲ್ಲಿ ಕಟ್ಟಲ್ಪಟ್ಟ ವಿಕ್ಟರಿ ಚರ್ಚ್ ನಗರದಲ್ಲಿಯೇ ಅತ್ಯಂತ ಪ್ರಾಚೀನವಾದದ್ದು. ಚಿನ್ನದ ಗಣಿ ಕಂಪನಕ್ಕೆ ಒಮ್ಮೆ ಅದರ ಗೋಪುರ ಬಿದ್ದು, ದುರಸ್ತಿಗೊಳಗಾಗಿದ್ದರೂ ಇಂದಿಗೂ ಆಕರ್ಷಣೆ ಉಳಿಸಿಕೊಂಡಿದೆ. ಅದರ ಹಿಂದೆಯೇ ಕ್ರಿಶ್ಚಿಯನ್ ಧರ್ಮದ ವಿವಿಧ ಗುಂಪುಗಳಿಗೆ ಸೇರಿದ ಚರ್ಚ್‌ಗಳು ಸಹ ನಿಧಾನವಾಗಿ ತಲೆ ಎತ್ತಿದವು. ಕ್ರಿಸ್‌ಮಸ್ ಆಚರಣೆಯಲ್ಲಿ ಕೊಂಚ ಭಿನ್ನತೆ ಇದ್ದರೂ ಏಸು ಮಾತ್ರ ಎಲ್ಲರಿಂದಲೂ ಪೂಜಿತ. ಸಾಮೂಹಿಕ ಪ್ರಾರ್ಥನೆ, ಚರ್ಚ್ ಸದಸ್ಯರಿಗೆ ಉಚಿತ ಆಹಾರ ಧಾನ್ಯಗಳ ಸರಬರಾಜು, ಬಟ್ಟೆಗಳ ವಿತರಣೆಗಳನ್ನು ಎಲ್ಲರೂ ಸಾಮಾನ್ಯವಾಗಿ ಮಾಡುತ್ತಾರೆ.

ಕ್ರಿಸ್‌ಮಸ್ ಎಂದರೆ ಕೇಕ್ ಇರಲೇಬೇಕು. ಬ್ರೆಡ್‌ನ ಉಪ ಉತ್ಪನ್ನವಾದ ಕೇಕ್ ಜೀಸಸ್ ಜೀವಿತಾವಧಿಯಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಆಹಾರ ಪದಾರ್ಥವಾಗಿತ್ತು. ಇಂದು ಕೇಕ್ ವಿವಿಧ ರೂಪಗಳನ್ನು ಪಡೆದು ಪರಿಷ್ಕೃತಗೊಂಡಿದೆ. ಈ ಒಂದು ವಾರದ ಅವಧಿಯಲ್ಲಿ ಯಾವುದೇ ಮನೆಗೆ ಹೋದರು ಕೇಕ್ ಸಿಕ್ಕೇ ಸಿಗುತ್ತದೆ. ಬೇಕರಿಗಳಲ್ಲಿ ಉದ್ದನೆಯ ಸಾಲು ನಗರದೆಲ್ಲೆಡೆ ಕಂಡು ಬರುತ್ತಿದೆ. ಓವನ್‌ನಂತಹ ಸಾಧನಗಳು ಇರುವುದರಿಂದ ಕೇಕ್‌ಗಳು ಮನೆಯಲ್ಲಿಯೇ ತಯಾರಾಗುತ್ತವೆ.


ಎಲ್ಲಕ್ಕಿಂತಲೂ ಮತ್ತೊಂದು ಕ್ರಿಸ್‌ಮಸ್ ವಿಶೇಷವೇನೆಂದರೆ ಕ್ರಿಸ್‌ಮಸ್ ಹಬ್ಬದಲ್ಲಿ ಹಿಂದೂಗಳು ಸಹ ಸಕ್ರಿಯವಾಗಿ ಪಾಲ್ಗೊಳ್ಳುವುದು. ಎಂದೂ ಚರ್ಚ್‌ಗೆ ಹೋಗದ ಹಿಂದೂಗಳ ಸಹ ಕ್ರಿಸ್‌ಮಸ್ ದಿನದಂದು ಸ್ನೇಹಿತರೊಡನೆ ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಕೆಜಿಎಫ್ ನಗರದ ಕ್ರಿಸ್‌ಮಸ್ ಹಬ್ಬ ಜಾತಿಗೆ ಸೀಮಿತವಾಗದೆ ಸರ್ವರಿಗೂ ಹಬ್ಬ ಎಂಬ ರೀತಿಯಲ್ಲಿ ಆಚರಣೆಯಾಗುತ್ತಿದೆ.

ಕೇಕ್, ವೈನ್ ಸವಿರುಚಿ...

ಕ್ರಿಸ್‌ಮಸ್‌ ಎಂದರೆ ಕೇಕ್‌ಗೆ ಹೆಚ್ಚಿನ ಪ್ರಾಧಾನ್ಯ. ಜೀಸಸ್‌ ಜೀವಿತಾವಧಿಯಲ್ಲಿ ಬಡವರು ಸಹ ಕೊಳ್ಳಲು ಸಾಧ್ಯವಿದ್ದ ಪದಾರ್ಥವದು. ಅದನ್ನು ಸಾಂಕೇತಿಕ ರೀತಿಯಲ್ಲಿ ಉಪಯೋಗಿಸ­ತೊಡಗಿದ ಮೇಲೆ, ಇತ್ತೀಚಿನ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ವಿವಿಧ ಸ್ವರೂಪದ ಕೇಕ್‌ಗಳು ಪರಿಚಯವಾಗುತ್ತಿವೆ. ಕೇಕ್‌ ಜೊತೆಗೆ ಮಾಂಸಾಹಾರ ಕೂಡ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿಯೂ ಕಾಣಬಹುದು. ಜನವರಿ ಒಂದನೇ ತಾರೀಖಿನವರೆಗೂ ಮಟನ್‌ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ.

ಮನೆಗಳಲ್ಲಿ ಕಜ್ಜಾಯ, ಗಲಗಲ, ರೋಸ್‌ಕೊಕ್ಕೆ ತಯಾರಿ ಜೋರಾಗಿಯೇ ನಡೆದಿದೆ. ವೈನ್‌ ತಯಾರಿಕೆಯಲ್ಲಿ ಪರಿಣತಿಯನ್ನು ಪಡೆದಿರುವವರು ಮೂರು ತಿಂಗಳಿಂದ ವೈನ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ಆಂಗ್ಲೋ ಇಂಡಿಯನ್‌ ಕಾಲೊನಿಯಲ್ಲಿ ಸಿಗುತ್ತಿದ್ದ ವೈನ್‌ಗೆ ಅತಿ ಬೇಡಿಕೆ. ಇಂದು ರಾಬರ್ಟಸನ್‌ಪೇಟೆಯ ಆಂಗ್ಲೋ ಇಂಡಿಯನ್‌ ಕಾಲೊನಿಯಲ್ಲಿ ಬೆರಳಣಿಕೆಷ್ಟು ಆಂಗ್ಲೋ ಇಂಡಿಯನ್‌ಗಳು ಕಾಣಸಿಗುತ್ತಾರೆ. ಅವರಂತೆ ವೈನ್‌ ತಯಾರಕರ ಸಂಖ್ಯೆ ಕೂಡ ಕಡಿಮೆಯಾಗಿದೆ. ದ್ರಾಕ್ಷಿ ಮತ್ತು ಗೋಧಿಯಲ್ಲಿ ತಯಾರು ಮಾಡುವ ವೈನ್‌ ಸಾದ್ವಿಷ್ಟ ಪೇಯ. ಆಲ್ಕೋಹಾಲ್‌ ಮಿಶ್ರಣವಿಲ್ಲದೆ  ಮನೆಗಳಲ್ಲಿ ತಯಾರು ಮಾಡುವ ವೈನ್‌ಗಾಗಿ ವೈನ್‌ ಪ್ರಿಯರು ಹುಡುಕಾಟ ನಡೆಸುತ್ತಿರುವುದನ್ನು ಸಹ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT