ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣವೇ ಮೊದಲ ಮನೆ: ಕುನಾಲ್

ಕ್ರಿಕೆಟ್: ಕರ್ನಾಟಕದ ರಣಜಿ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಆಟಗಾರನ ಅಂತರಂಗ
Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಪುಣೆ: `ನಿತ್ಯ ಅಭ್ಯಾಸ ಮುಗಿಸಿ ಬೇಗನೆ ಮನೆಗೆ ಹೊರಡಬೇಕು ಎನ್ನುವ ಆತುರ ಇರುತ್ತಿರಲಿಲ್ಲ ಏಕೆಂದರೆ, ಕ್ರೀಡಾಂಗಣವೇ ನನ್ನ ಮೊದಲ ಮನೆಯಾಗಿತ್ತು. ಅಂಗಣದಲ್ಲಿಯೇ ಬದುಕು ಅರಳಿ ನಿಲ್ಲಬೇಕು ಎನ್ನುವ ಕನಸು ಕಂಡಿದ್ದೆ. ಆ ಕನಸಿನ ಪಯಣಕ್ಕೆ ಈಗ ಉತ್ತಮ ಆರಂಭ ಲಭಿಸಿದೆ...'

ಕರ್ನಾಟಕದ ರಣಜಿ ಇತಿಹಾಸದಲ್ಲಿ ದಾಖಲೆ ಬರೆದ  25 ವರ್ಷದ ಆಟಗಾರ ಕುನಾಲ್ ಕಪೂರ್ ಅವರ ಮನದಾಳದ ಮಾತಿದು. 78 ವರ್ಷಗಳ ರಣಜಿ ಪುಟಗಳಲ್ಲಿ (ಮೊದಲ ರಣಜಿ ಋತು ಆರಂಭವಾಗಿದ್ದು 1934) ಕರ್ನಾಟಕಕ್ಕೆ ಈ ಸಲ ಎಂದೂ ಮರೆಯಲಾಗದ ಮಧುರ ನೆನಪು ಸಿಕ್ಕಿದೆ. ಅದಕ್ಕೆ ಕಾರಣವಾಗಿದ್ದು ಕುನಾಲ್.

ಹುಬ್ಬಳ್ಳಿಯಲ್ಲಿ ನಡೆದ ಹರಿಯಾಣ ವಿರುದ್ಧದ `ಬಿ' ಗುಂಪಿನ ಪಂದ್ಯದಲ್ಲಿ ಬೆಂಗಳೂರಿನ ಈ ಬ್ಯಾಟ್ಸ್‌ಮನ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರು. ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಆಟಗಾರ ಇವರು. ರಾಷ್ಟ್ರೀಯ ತಂಡದಲ್ಲಿ ಹೆಸರು ಮಾಡಿರುವ ಸಾಕಷ್ಟು ಖ್ಯಾತ ಕ್ರಿಕೆಟ್ ತಾರೆಯರು ತೆರೆಯ ಮರೆಗೆ ಸರಿದು ಹೋಗಿದ್ದಾರೆ. ಆದರೂ, ಅವರಿಂದ ಈ ಸಾಧನೆ ಸಾಧ್ಯವಾಗಿಲ್ಲ.

`ಚೊಚ್ಚಲ ರಣಜಿ ಆಡುತ್ತಿರುವ ಕುನಾಲ್ ಬ್ಯಾಟಿಂಗ್ ಶೈಲಿಯನ್ನು ನೋಡಿದರೆ, ಅವರು ಭವಿಷ್ಯದ ತಾರೆಯಾಗಿ ಬೆಳಗುತ್ತಾರೆ ಎಂದೆನಿಸದೆ ಇರದು. ಅವರ ತಾಳ್ಮೆ, ಬದ್ಧತೆ, ಬ್ಯಾಕ್‌ಫುಟ್, ಫ್ರಂಟ್‌ಫುಟ್ ಲೆಗ್‌ಸೈಡ್‌ನಲ್ಲಿನ ಹೊಡೆತಗಳು ಆಕರ್ಷವಾಗಿರುತ್ತವೆ. ಆದ್ದರಿಂದ ಅವರು ಭವಿಷ್ಯದಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಅವರಂತೆ ಆಗಬಲ್ಲ ಸಾಮಥ್ಯ ಹೊಂದಿದ್ದಾರೆ' ಎಂದು ಹೇಳುತ್ತಾರೆ ಕರ್ನಾಟಕ ತಂಡದ ಮಾಜಿ ಆಟಗಾರ ಆನಂದ್ ಕಟ್ಟಿ.

2012-13ರ ರಣಜಿ ಋತುವಿನಲ್ಲಿ ಕುನಾಲ್ ಸೇರಿದಂತೆ ಬೇರೆ ಬೇರೆ ತಂಡಗಳ ನಾಲ್ವರು ಬ್ಯಾಟ್ಸ್‌ಮನ್‌ಗಳು ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಕಲೆ ಹಾಕಿದ್ದಾರೆ. ಸಿ.ಕೆ. ನಾಯ್ಡು ಟ್ರೋಫಿಯ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕುನಾಲ್ ದ್ವಿಶತಕ ಗಳಿಸಿದ್ದರು.
ಈ ಸಲದ ರಣಜಿ ಟ್ರೋಫಿಯ ಕೊನೆಯ ಲೀಗ್ ಪಂದ್ಯವನ್ನಾಡಲು `ಕ್ವೀನ್ಸ್ ಆಫ್ ದಿ ಡೆಕ್ಕನ್' ಖ್ಯಾತಿಯ ಪುಣೆ ನಗರಕ್ಕೆ ಕರ್ನಾಟಕದ ಆಟಗಾರರು ಆಗಮಿಸಿದ್ದಾರೆ. ಈ ವೇಳೆ ಕಪೂರ್ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನು ಅಕ್ಷರ ರೂಪದಲ್ಲಿ ಇಲ್ಲಿ ಜೋಡಿಸಿಡಲಾಗಿದೆ.

* ಚೊಚ್ಚಲ ರಣಜಿ ಆಡುವ ಕನಸು ನನಸಾದ ಬಗ್ಗೆ?
ಸಾಕಷ್ಟು ವರ್ಷಗಳಿಂದ ಕರ್ನಾಟಕ ತಂಡದಲ್ಲಿ ಆಡಬೇಕೆನ್ನುವ ಕನಸು ಕಂಡಿದ್ದೆ. ಅದು ಈ ವರ್ಷ ನನಸಾಯಿತು. ಸಿ.ಕೆ. ನಾಯ್ಡು (25 ವರ್ಷದೊಳಗಿನವರು) ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೂ ಇದಕ್ಕೆ ಕಾರಣವಾಯಿತು.

* ರಣಜಿಗೆ ಪದಾರ್ಪಣೆ ಮಾಡಿದ ವರ್ಷದಲ್ಲಿಯೇ ಉತ್ತಮ ಪ್ರದರ್ಶನ ನೀಡಿದ್ದೀರಿ. ಈ ಬಗ್ಗೆ?
ಉತ್ತಮ ಆರಂಭ ಪಡೆಯಲು ಸಾಧ್ಯವಾಗಿದ್ದು ಖುಷಿ ನೀಡಿದೆ. ಆದರೆ, ಇದೇ ರೀತಿ ಸತತವಾಗಿ ಆಡುತ್ತಿರಬೇಕು. ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೂ ಸಮರ್ಥವಾಗಿ ಆಡಬೇಕು ಎನ್ನುವ ಗುರಿ ಹೊಂದಿದ್ದೇನೆ.

* ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಬಗ್ಗೆ?
ಖುಷಿಗಿಂತ ಬೇಸರವೇ ಹೆಚ್ಚಿದೆ. ಕ್ವಾರ್ಟರ್ ಫೈನಲ್ ಪ್ರವೇಶಿಸುವುದು ಸುಲಭವಾಗಬೇಕಿದ್ದರೆ, ಹರಿಯಾಣ ವಿರುದ್ಧ ಗೆಲುವು ಅಗತ್ಯವಿತ್ತು. ಶತಕ ಮುಖ್ಯವಲ್ಲ. ತಂಡ ಗೆಲುವು ಸಾಧಿಸಿದ್ದರೆ ಆ ಶತಕಗಳ ಸಂಭ್ರಮ ಹೆಚ್ಚಾಗಿರುತ್ತಿತ್ತು.

* ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಬ್ಯಾಟ್ಸ್‌ಮನ್ ಎಂದು ಗೊತ್ತಾದಾಗ ನಿಮಗೆ ಅನಿಸಿದ್ದೇನು?
ಮೊದಲು ಅಚ್ಚರಿಯಾಯಿತು. ಆದರ ಜೊತೆಗೆ ಬೇಸರವೂ ಆಯಿತು. ಎಲ್ಲಾ ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿ ಪಂದ್ಯ ಗೆಲ್ಲದೇ ಇದ್ದರೆ ಏನು ಪ್ರಯೋಜನ. ಆದ್ದರಿಂದ ದಾಖಲೆಗಿಂತ ಪಂದ್ಯ ಗೆಲ್ಲುವುದು ಮುಖ್ಯ.  

* ನಿಮ್ಮ ಈ ಸಾಧನೆಯ ಹಿಂದೆ?
ಕಠಿಣ ಶ್ರಮ ಹಾಗೂ ಪಾಲಕರ ಬೆಂಬಲ. ಫಿಟ್‌ನೆಸ್‌ಗಾಗಿ ದಿನಕ್ಕೆ ಎರಡು ಗಂಟೆ ಜಿಮ್ ಮಾಡುತ್ತೇನೆ. ಮನೆಗಿಂತ ಕ್ರೀಡಾಂಗಣದಲ್ಲಿಯೇ ಹೆಚ್ಚು ಸಮಯ ಕಳೆಯುತ್ತೇನೆ. ಆಟಕ್ಕೆ ಸಂಬಂಧಿಸಿದ ವಿಷಯಗಳತ್ತ ಮಾತ್ರ ಗಮನ.

* ಮುಂದಿನ ಗುರಿ ಏನು?
13 ವರ್ಷಗಳಿಂದ ಸಾಧ್ಯವಾಗದೇ ಇರುವುದನ್ನು ಸಾಧಿಸಿ ತೋರಿಸಬೇಕು. ಕರ್ನಾಟಕಕ್ಕೆ ಮುಂದಿನ ಒಂದೆರೆಡು ವರ್ಷಗಳಲ್ಲಿ ರಣಜಿ ಟ್ರೋಫಿ ತಂದುಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT