ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿಕ್ ಕ್ಲಿಕ್ ಶಾಪಿಂಗ್

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಿನವೆಲ್ಲ ಕಾಲು ಸೋಲುವಂತೆ ಅಂಗಡಿ ಸುತ್ತಿ, ಜೇಬಿಗೆ ಕತ್ತರಿ ಹಾಕಿಕೊಂಡು, ಸಂಜೆ ಮನೆಗೆ ಹೋಗಿ ಖರೀದಿಸಿದ್ದನ್ನು ನೋಡಿದರೆ, ಸಮಾಧಾನವಿರುವುದಿಲ್ಲ. ಇದು ನನಗೆ ಬೇಕಿತ್ತಾ? ಇದೇ ದುಡ್ಡಿಗೆ ಬೇರೆಯದು ಸಿಗುತ್ತಿರಲಿಲ್ಲವಾ? ಇಂಥ ಅಸಮಾಧಾನಗಳಿಗೆ ಪರಿಹಾರ ನೀಡುವಂತೆ ಆನ್‌ಲೈನ್ ಮಳಿಗೆಗಳು ತೆರೆದುಕೊಂಡಿವೆ.

ಪೇಟೆಯೆಲ್ಲ ಸುತ್ತಾಡುವಂತಿಲ್ಲ. ಪರದೆಯ ಮೇಲೆ ಉತ್ಪನ್ನ ನೋಡಿ, `ಮೂಷಕ~ನನ್ನು (ಮೌಸ್) ಅದುಮಿ ಆದೇಶಿಸಿ, 24 ಗಂಟೆಗಳಲ್ಲಿ ನಿಮ್ಮ ಖರೀದಿ ಮನೆಬಾಗಿಲಿಗೆ ಬರುತ್ತದೆ. ಮಾಲ್‌ಗೆ ಎಡತಾಕುವ ಅಗತ್ಯವಿಲ್ಲ. ಪಾರ್ಕಿಂಗ್ ಸಮಸ್ಯೆಯ ಜಂಜಾಟವಿಲ್ಲ. ಚೌಕಾಸಿ ಮಾಡುವ ಅಗತ್ಯವೂ ಇಲ್ಲ. ಅಗತ್ಯ ಇರುವುದು ಅಂತರ್ಜಾಲ ಸಂಪರ್ಕದ್ದು. 

ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಗಿಳಿದಾಗ ಇದೆಲ್ಲ ನಡೆಯುವುದಿಲ್ಲ ಬಿಡಿ... `ಜಾಗೋ ಗ್ರಾಹಕ್ ಜಾಗೋ~ ಎನ್ನುವಾಗ, ಉತ್ಪನ್ನವನ್ನು ನೋಡದೆ, ಮುಟ್ಟದೆ, ಪರಿಶೀಲಿಸದೆ ಕೊಳ್ಳುವವರು ಯಾರು? ಅಂಗಡಿಗೆ ಬಂದು ನೋಡಿದ ಮೇಲೂ ಹತ್ತಾರು ಸಲ, ಪರಿಶೀಲಿಸಿಯೇ ಕೊಳ್ಳಲು ಹಿಂದೆ ಮುಂದೆ ನೋಡುವವರು ಪರದೆಯ ಮೇಲೆ ನೋಡಿ ಕೊಳ್ಳುತ್ತಾರೆಯೇ?

ಇದ್ಯಾವುದೂ ನಡೆಯುವುದಿಲ್ಲ ಬಿಡಿ ಎಂದು ಮೂಗುಮುರಿದವರೆ ಹೆಚ್ಚು.ಆದರೆ ಈಗ 500 ಬ್ರಾಂಡ್‌ಗಳು 5000 ಉತ್ಪನ್ನಗಳ ಸಂಗ್ರಹಗಳು. ಈ ಮಳಿಗೆಯಲ್ಲಿ ಏನುಂಟು ಏನಿಲ್ಲ? ಉಳಿದ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿಗರು ಈ ಕ್ಲಿಕ್ ಕ್ಲಿಕ್ ಖರೀದಿಯನ್ನು ಹೆಚ್ಚು ನೆಚ್ಚಿಕೊಂಡಿದ್ದಾರಂತೆ. ದೆಹಲಿ, ಚೆನ್ನೈ, ಮುಂಬೈ, ಹೈದರಾಬಾದ್‌ಗಳಿಗಿಂತಲೂ ಇಲ್ಲಿಯ ಖರೀದಿ ಭರಾಟೆಯಿಂದ ಸಾಗಿದೆ.

ಮೂಲ ಕಾರಣ ಬೆಂಗಳೂರಿಗರಲ್ಲಿ ಅತಿ ಹೆಚ್ಚು ಜನರು ಅಂತರ್ಜಾಲ ಸಂಪರ್ಕದೊಂದಿಗೆ ಬೆಸೆದುಕೊಂಡಿದ್ದಾರೆ. ಇವರಿಗೆಲ್ಲ ಬೆರಳತುದಿಯ ಖರೀದಿಯೇ ಹೆಚ್ಚು ಖುಷಿ ನೀಡುತ್ತದೆ. ಇ-ತಂತಿ ಪೇಟೆಯು ಹಲವಾರು ಪ್ರಯೋಗಗಳನ್ನು ಬೆಂಗಳೂರಿನಲ್ಲಿಯೇ ಕೈಗೊಳ್ಳಲಾಗುತ್ತದೆ.

ಇಲ್ಲಿಯ ಪ್ರತಿಕ್ರಿಯೆಯನ್ನು ಆಧರಿಸಿಯೇ ಇತರ ಮಹಾನಗರಗಳಿಗೂ ವಿಸ್ತರಿಸಲಾಗುತ್ತದೆ ಎನ್ನುತ್ತಾರೆ ಫ್ಲಿಪ್‌ಕಾರ್ಟ್‌ನ ರಿಟೇಲ್ ಉಪಾಧ್ಯಕ್ಷ ಅಂಕಿತ್ ನಗೋರಿ. ಈ ಬಗೆಯ ಖರೀದಿಗೆ 18-35 ವರ್ಷ ವಯೋಮಿತಿಯವರೇ ಮುಂದಾಗಿದ್ದಾರೆ. ಹೆಚ್ಚಾಗಿ ಪುರುಷರು ಖರೀದಿಗೆ ಮುಂದಾದ ಗ್ರಾಹಕರು. ಅದರಲ್ಲಿಯೂ ಮೊಬೈಲು, ಐಪಾಡುಗಳ ಖರೀದಿಯ ಭರಾಟೆ ಜೋರಾಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಪುಸ್ತಕಗಳ ಮಾರಾಟವನ್ನು ಯಾವ ಉತ್ಪನ್ನಗಳೂ ಹಿಂದಿಕ್ಕಲಾಗಿಲ್ಲ.

ಜಬೊಂಗ್.ಕಾಂನಲ್ಲಿ ಮಾತ್ರ ಮಹಿಳೆಯರೂ ಸಮಸಮವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ಜೀವನಶೈಲಿಯ ಉತ್ಪನ್ನಗಳು ಹಾಗೂ ಟ್ರೆಂಡಿ, ಫ್ಯಾನ್ಸಿ ಉತ್ಪನ್ನಗಳ ಖರೀದಿ ಜೋರಾಗಿದೆ ಎನ್ನುತ್ತಾರೆ ಜಬಾಂಗ್‌ನ ಸಹ ಸ್ಥಾಪಕ ಪ್ರವೀಣ್ ಸಿನ್ಹಾ. ಫ್ಲಿಪ್‌ಕಾರ್ಟ್‌ನಲ್ಲಿಯೂ ಜೀವನಶೈಲಿಯ ಉತ್ಪನ್ನಗಳನ್ನು ಪರಿಚಯಿಸಿರುವುದರಿಂದ ಅವನ್ನು ಮಹಿಳೆಯರೂ ಇತ್ತ ದೃಷ್ಟಿ ನೆಟ್ಟಿದ್ದಾರೆ ಎನ್ನುವುದು ಅವರ ಸಮರ್ಥನೆ.

ಫ್ಲಿಪ್‌ಕಾರ್ಟ್ ಹಾಗೂ ಜಬೊಂಗ್ ಎರಡೂ ಈಗ ಸಣ್ಣ ಪೇಟೆಗಳತ್ತ ದೃಷ್ಟಿ ನೆಟ್ಟಿವೆ. ಕೊಳ್ಳುವ ಶಕ್ತಿ ಇದ್ದು, ಅಂತರ್ಜಾಲದ ಬಳಕೆಯ ಬಗ್ಗೆ ಮಾಹಿತಿ ಇದ್ದವರಿಗೆ ಸರಳವಾಗಿ ಈ ವ್ಯಾಪಾರದ ಬಗ್ಗೆ ಮಾಹಿತಿ ನೀಡುವುದು ಹಾಗೂ ಅವರನ್ನು ಸೆಳೆಯಬಹುದು. ಅವರಿಗೆ ಆನ್‌ಲೈನ್ ಮಾರುಕಟ್ಟೆ ಬಗ್ಗೆ ಮಾಹಿತಿ ಇದ್ದರೂ ಅನುಭವಕ್ಕೆ ಹಿಂಜರಿಯತ್ತಿದ್ದಾರೆ. ಅವರನ್ನು ಸೆಳೆಯಲೆಂದೇ 30 ದಿನಗಳ ವಾಪಸಾತಿ ಸೌಲಭ್ಯ, ಸತತ ಗ್ರಾಹಕರ ಸಹಯೋಗ ಮುಂತಾದವನ್ನು ಪರಿಚಯಿಸಲಾಗಿದೆ.

`ಉತ್ಪನ್ನವನ್ನು ನೀಡಿ, ಹಣ ಪಡೆಯುವ ತಂತ್ರವನ್ನು ಕಾರ್ಡ್ ಬಳಸುವ ಸೌಲಭ್ಯವನ್ನು ಮೊದಲಿಗೆ ಬೆಂಗಳೂರಿನಲ್ಲಿಯೇ ಆರಂಭಿಸಲಾಗಿತ್ತು. ಇದೀಗ ಎಲ್ಲೆಡೆ ಪರಿಚಯಿಸಲಾಗಿದೆ. ಇದೂ ಆನ್‌ಲೈನ್ ಪೇಟೆಯತ್ತ ಜನರನ್ನು ಸೆಳೆಯುತ್ತಿದೆ~ ಎಂಬುದು ಅವರ ಅಭಿಪ್ರಾಯ.
ಹಬ್ಬದ ಸೀಸನ್‌ಗಳಲ್ಲಿಯ ರಿಯಾಯಿತಿ ಮಾರಾಟ, ವಿಶೇಷ ಉಡುಗೊರೆಯಂಥ ಮಾರಾಟಗಳು ಫ್ಲಿಪ್‌ಕಾರ್ಟ್‌ನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಸೆಳೆದಿವೆಯಂತೆ.
 
ಈ ಸಲದ ಉಡುಗೊರೆ ನೀಡುವ ಹಬ್ಬವಾದ ದೀಪಾವಳಿಗೆ ಸಾಕಷ್ಟು ಪೂರೈಕೆದಾರರು ಹಾಗೂ ಬ್ರಾಂಡ್ ಕಂಪೆನಿಗಳಿಗೆ ಈ ಬಗ್ಗೆ ಫ್ಲಿಪ್‌ಕಾರ್ಟ್ ಈಗಾಗಲೇ ವಿನಂತಿಸಿದೆ. ಗ್ರಾಹಕರಿಗೆ ಆಕರ್ಷಕ ಪ್ಯಾಕೇಜ್‌ಗಳನ್ನು ನೀಡಲು ಅವೂ ಒಪ್ಪಿಕೊಂಡಿವೆ. ದೀಪಾವಳಿಗೆಂದೇ ವಿಶೇಷ ಪುಟಗಳನ್ನು ವೆಬ್‌ತಾಣದಲ್ಲಿ ತೆರೆಯಲಾಗಿದೆ ಎಂದು ನಗೋರಿ ವಿವರಿಸುತ್ತಾರೆ.
 
ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ ವಾರಂಟಿ ಹಾಗೂ ಗ್ಯಾರಂಟಿ ಪತ್ರಗಳನ್ನು ಕೂಡಲೇ ಹಸ್ತಾಂತರಿಸುವುದರಿಂದ ಈವರೆಗೆ ಯಾವುದೇ ದೂರುಗಳು ದಾಖಲಾಗಿಲ್ಲ ಎನ್ನುತ್ತಾರೆ ಅವರು.

`ಇತ್ತೀಚೆಗೆ ಮಾರುಕಟ್ಟೆಯ ಟ್ರೆಂಡ್ ಬದಲಾಗುತ್ತಿದೆ. ಮೊದಲೆಲ್ಲ ಗ್ಯಾಡ್ಜೆಟ್‌ಗಳ ಮಾರಾಟವಾಗುತ್ತಿತ್ತು. ಇದೀಗ ಸಾಮಾನ್ಯರು ಸಹ ಪೀಠೋಪಕರಣ, ಗೃಹಬಳಕೆ ಸಾಮಗ್ರಿಗಳನ್ನು ಕೊಳ್ಳುವಲ್ಲಿ ಸಾಕಷ್ಟು ಉತ್ಸಾಹ ತೋರುತ್ತಿದ್ದಾರೆ ಎನ್ನುವುದು~ ಸಿನ್ಹಾ ಅವರ ಹೇಳಿಕೆ.

ಉದ್ಯೋಗಸ್ಥ ಮಹಿಳೆಯರು ಪ್ರಸವಪೂರ್ವ ಮತ್ತು ಹೆರಿಗೆ ರಜೆಗಳಲ್ಲಿ ಮನೆಯಲ್ಲಿಯೇ ಕುಳಿತು ಸಾಕಷ್ಟು ಶಾಪಿಂಗ್ ಮಾಡುತ್ತಿದ್ದಾರೆ. ಭಾವೀ ತಾಯಂದಿರು ಹಾಗೂ ಹಸುಗೂಸಿನ ಉತ್ಪನ್ನಗಳು ಮಾರಾಟವಾಗುತ್ತವೆ. ಮನೆವರೆಗೂ ಉತ್ಪನ್ನಗಳನ್ನು ಸುರಕ್ಷಿತವಾಗಿ ತಂದೊದಗಿಸುವುದು, ಮರಳಿಸುವ ಸೌಲಭ್ಯಗಳು ಜನರನ್ನು ಸೆಳೆಯುತ್ತಿವೆ.

ಫ್ಯಾಶನ್, ತಂತ್ರಜ್ಞಾನ, ಜೀವನಶೈಲಿ ಮುಂತಾದ ಎಲ್ಲ ಕ್ಷೇತ್ರಗಳನ್ನು ಇ-ಪೇಟೆ ಆವರಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಜನರು ಆಕರ್ಷಿತರಾಗುತ್ತಿದ್ದಾರೆ. ಹಬ್ಬದ ಖರೀದಿಗೆ, ದೂಳು ಬಿಸಿಲು ಗಲಾಟೆ ಮೀರಿ, ಮನೆಯಲ್ಲಿಯೇ ಖರೀದಿಸುವಂತಿದ್ದರೆ ಲಾಗ್‌ಆನ್ ಆಗಿ...
www.flipkart.com/ www.jabong.com
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT