ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮಾಭಿವೃದ್ಧಿ ಸಂಘಗಳ ಸಹಕಾರಕ್ಕೆ ಕರೆ

ತ್ಯಾಜ್ಯ ಸಮಸ್ಯೆ ತಗ್ಗಿಸಲು ವಿಚಾರ ಸಂಕಿರಣದಲ್ಲಿ ಚಿಂತನೆ
Last Updated 22 ಡಿಸೆಂಬರ್ 2012, 20:04 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ತ್ಯಾಜ್ಯದ ಸಮಸ್ಯೆಯನ್ನು ತಗ್ಗಿಸಲು ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು' ಎಂದು ಸುಸ್ಥಿರ ಅಭಿವೃದ್ಧಿ ಕೇಂದ್ರದ (ಸಿಎಸ್‌ಡಿ) ಅಧ್ಯಕ್ಷ ಡಾ.ಎ.ರವೀಂದ್ರ ಹೇಳಿದರು.

ಸುಸ್ಥಿರ ಅಭಿವೃದ್ಧಿ ಕೇಂದ್ರ, ರೋಟರಿ ಬೆಂಗಳೂರು ಮತ್ತು ಎರಿನ್ ಫೌಂಡೇಷನ್ ಸಂಸ್ಥೆಗಳು ನಗರದಲ್ಲಿ ಶನಿವಾರ ಆಯೋಜಿಸಿದ್ದ `ನಗರಗಳಲ್ಲಿ ಘನತ್ಯಾಜ್ಯದ ಉತ್ಪಾದನೆಯನ್ನು ತಗ್ಗಿಸುವ ಮಾರ್ಗಗಳು' ವಿಷಯದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯಗೊಳಿಸಿದರೂ, ಆ ನಿಯಮ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ನಗರದ ತ್ಯಾಜ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ತ್ಯಾಜ್ಯ ವಿಂಗಡಣೆ ಹಾಗೂ ಹಸಿ ತ್ಯಾಜ್ಯ ಸಂಸ್ಕರಣೆಗೆ ನಗರದ ಬಡಾವಣೆಗಳ ನಿವಾಸಿಗಳ ಸಂಘಗಳು ಮುಂದಾಗಬೇಕು. ಇದರಿಂದ ಬಡಾವಣೆಗಳ ಮಟ್ಟದಲ್ಲೇ ಕಸ ಸಂಸ್ಕರಣೆಗೊಂಡು, ನಗರದಿಂದ ಕಸವನ್ನು ಹೊರಗೆ ಸಾಗಿಸುವುದು ತಪ್ಪಲಿದೆ' ಎಂದು ಅವರು ತಿಳಿಸಿದರು.

`ಅಮೆರಿಕದಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ವೈಜ್ಞಾನಿಕ ಹಾಗೂ ವ್ಯವಸ್ಥಿತವಾದ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ತ್ಯಾಜ್ಯ ಸಂಸ್ಕರಣೆಗಾಗಿ 1,365 ಎಕರೆ ಜಮೀನನ್ನು ಮೀಸಲಿಡಲಾಗಿದೆ. ವೈಜ್ಞಾನಿಕ ವಿಧಾನದ ಮೂಲಕ ತ್ಯಾಜ್ಯ ಸಂಸ್ಕರಣೆ ಆಗುತ್ತಿರುವುದರಿಂದ ಅಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗಿಲ್ಲ' ಎಂದು ಅವರು ತಿಳಿಸಿದರು.

`ಮಾರಾಟದ ಎಲ್ಲ ವಸ್ತುಗಳಿಗೆ ಪ್ಲಾಸ್ಟಿಕ್ ಹಾಳೆಗಳಿಂದ ಪ್ಯಾಕ್ ಮಾಡುವುದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಇದು ನಿಯಂತ್ರಣವಾಗಬೇಕು. ಅನಗತ್ಯವಾಗಿ ಎಲ್ಲ ವಸ್ತುಗಳಿಗೂ ಪ್ಲಾಸ್ಟಿಕ್ ಹಾಳೆಗಳಿಂದ ಪ್ಯಾಕ್ ಮಾಡುವುದು ನಿಲ್ಲಬೇಕು. ಇದರಿಂದ ಸಮಸ್ಯೆ ತಕ್ಕಮಟ್ಟಿಗೆ ಕಡಿಮೆಯಾಗುತ್ತದೆ' ಎಂದರು.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಎಚ್.ಸಿ.ಅನಂತಸ್ವಾಮಿ ಮಾತನಾಡಿ, `ನಗರದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿರುವುದೇ ಕಸದ ಸಮಸ್ಯೆಗೆ ಮೂಲ. ಕಳೆದ ಎರಡು ಮೂರು ದಶಕಗಳಲ್ಲಿ ನಗರದ ಜನಸಂಖ್ಯೆ ದ್ವಿಗುಣಗೊಳ್ಳುತ್ತಾ ಬೆಳೆಯುತ್ತಿದೆ. ಸದ್ಯ ನಗರದ ಜನಸಂಖ್ಯೆ ಒಂದು ಕೋಟಿಯನ್ನು ಮೀರಿದೆ. 2020ರ ವೇಳೆಗೆ ದಿನಕ್ಕೆ ಸುಮಾರು ಎಂಟು ಸಾವಿರ ಟನ್ ಕಸ ನಗರದಲ್ಲಿ ಉತ್ಪತ್ತಿಯಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಪ್ರಮಾಣ 2030 ವೇಳೆಗೆ 12.5 ಸಾವಿರ ಟನ್ ಆಗಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ' ಎಂದರು.

`ಬಿಬಿಎಂಪಿಯ ವ್ಯಾಪ್ತಿಯನ್ನು 2007ರಲ್ಲಿ ಎಂಟು ಸಾವಿರ ಚದರ ಕಿಲೋ ಮೀಟರ್‌ಗೆ ವಿಸ್ತರಿಸಿದ್ದರಿಂದ ತ್ಯಾಜ್ಯ ನಿರ್ವಹಣೆ ಕಷ್ಟವಾಗಿದೆ. ನಗರದ ಕಸವನ್ನು ನಗರದಲ್ಲೇ ಸಂಸ್ಕರಿಸಲು ಸಾಧ್ಯವಾಗದೇ ಇರುವುದರಿಂದ ಮಂಡೂರು ಮತ್ತು ಮಾವಳ್ಳಿಪುರಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ನಗರದ ಜನರ ಕೊಳ್ಳುಬಾಕತನವೂ ಕಸದ ಉತ್ಪಾದನೆ ಹೆಚ್ಚಲು ಕಾರಣ. ಹಸಿ ಕಸವನ್ನು ಮಣ್ಣಿಗೆ ಹಾಕಿದರೆ ಅದು ಸಹಜವಾಗಿಯೇ ಸಂಸ್ಕರಣೆಯಾಗುತ್ತದೆ. ಆದರೆ, ಸದ್ಯ ಕಸದ ವಿಂಗಡಣೆಯೇ ಪಾಲಿಕೆಗೆ ಸಮಸ್ಯೆಯಾಗಿದೆ. ಕಸದ ವಿಂಗಡಣೆಯ ಮಹತ್ವವನ್ನು ಜನರು ಅರಿಯಬೇಕು' ಎಂದು ಅವರು ತಿಳಿಸಿದರು.

ತಂತ್ರಜ್ಞಾನ ಅಳವಡಿಕೆಗೆ ಆರ್ಥಿಕ ಕೊರತೆ

`ನಗರದ ತ್ಯಾಜ್ಯದ ಸಮಸ್ಯೆಯನ್ನು ತಗ್ಗಿಸಲು ಆಧುನಿಕ ತಂತ್ರಜ್ಞಾನದ ಹಲವು ಮಾರ್ಗೋಪಾಯಗಳ ವರದಿಗಳನ್ನು ವಿವಿಧ ಸಂಸ್ಥೆಗಳು ಪಾಲಿಕೆಗೆ ಸಲ್ಲಿಸುತ್ತಿವೆ. ಆದರೆ, ಈ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಹಣ ಸದ್ಯ ಪಾಲಿಕೆಯ ಬಳಿ ಇಲ್ಲ. ಆರ್ಥಿಕ ತೊಡಕಿನ ಕಾರಣದಿಂದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ'
-ಎಚ್.ಸಿ.ಅನಂತಸ್ವಾಮಿ,ಮುಖ್ಯ ಎಂಜಿನಿಯರ್, ಘನತ್ಯಾಜ್ಯ ನಿರ್ವಹಣೆ ವಿಭಾಗ, ಬಿಬಿಎಂಪಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT