ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೇ ಖರೇ ಚುನಾವಣೆ ಹಕೀಕತ್!

Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಮೊಳಕಾಲ್ಮೂರು (ಚಿತ್ರದುರ್ಗ): ತಮ್ಮ ಹೆಸರನ್ನು ಬರೆಯಬಾರದು ಎಂಬ ಷರತ್ತಿನೊಂದಿಗೇ ಅವರು ಮಾತಿಗೆ ಕುಳಿತರು. ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಇರುವ ಮರದ ಕೆಳಗೆ ನಮ್ಮ ಮಾತುಕತೆ ಆರಂಭವಾಯಿತು. ಅವರು ಚುನಾವಣೆಯ ಹಕೀಕತ್‌ಗಳನ್ನು ಬಿಚ್ಚಿಡತೊಡಗಿದರು.

‘ನೋಡಿ ಸಾರ್‌, ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಚಂದ್ರಪ್ಪ (ಲಿಡ್ಕರ್‌), ಬಿಜೆಪಿಯಿಂದ ಜನಾರ್ದನಸ್ವಾಮಿ, ಜೆಡಿಎಸ್‌ನಿಂದ ಗೂಳಿಹಟ್ಟಿ ಶೇಖರ್‌ ಸ್ಪರ್ಧೆ ಮಾಡಿದ್ದಾರೆ. ಅವರೇ ಎಲ್ಲ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರಲು ಸಾಧ್ಯವೇ? ಹಣ ಹಂಚೋದು, ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರೋದು ಎಲ್ಲ ನಮ್ಮ ಕೆಲಸ. ನಾವಿಲ್ಲದೆ ಯಾವ ಚುನಾವಣೆಯೂ ನಡೆಯೋದಿಲ್ಲ. ಚುನಾವಣೆಯೇ ನಮಗೆ ಬದುಕು. ಜೀವನಕ್ಕೆ ಆಧಾರ. ಚುನಾವಣೆ ಎಂದರೆ ಸಂಭ್ರಮ ಪಡೋರು ನಾವು’ ಎಂದು ನಿಜವಾದ ಚುನಾವಣೆಯ ಲೋಕವನ್ನು ಪರಿಚಯಿಸತೊಡಗಿದರು.

ಚುನಾವಣೆ ಎಂದರೆ ಬರೀ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳು, ಹಾಲು ಒಕ್ಕೂಟಗಳು, ಸಹಕಾರ ಸಂಘಗಳ ಚುನಾವಣೆಗಳಲ್ಲಿಯೂ ಅಭ್ಯರ್ಥಿಗಳ ಪರ ಕೆಲಸ ಮಾಡುವವರು ಇವರೇ. ವರ್ಷಕ್ಕೆ ಕನಿಷ್ಠ 2 ಚುನಾವಣೆಗಳಾದರೂ ಇರುತ್ತವೆ. ಆಯಾ ಚುನಾವಣೆಯಲ್ಲಿ ಮತದಾರರನ್ನು ಕರೆದುಕೊಂಡು ಬರೋದು, ಅಗತ್ಯವಾದರೆ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗೋದು, ಆಮಿಷ ಒಡ್ಡೋದು, ಅಪಹರಣದ ನಾಟಕ ಮಾಡೋದು ಹೀಗೆ ಸಾಕಷ್ಟು ಕೆಲಸಗಳನ್ನು ಇವರು ಮಾಡುತ್ತಾರೆ.

ಸಾಮಾನ್ಯವಾಗಿ ಪ್ರತಿ ಗ್ರಾಮಗಳಲ್ಲಿಯೂ, ಎಲ್ಲ ಪಕ್ಷಗಳಿಗೂ ಇಂತಹ ಕಾರ್ಯಕರ್ತರು ಇರುತ್ತಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿಯೇ ಇಂಥ 400 ಮುಖಂಡರಿದ್ದಾರಂತೆ. ಈ ಮುಖಂಡರೇ ಅಭ್ಯರ್ಥಿಯ ಭವಿಷ್ಯವನ್ನು ಬರೆಯುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲುವುದಕ್ಕೂ ಈ ಮುಖಂಡರೇ ಕಾರಣವಂತೆ.

‘ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳೂ ಹುಷಾರಾಗಿದ್ದಾರೆ. ಮತದಾರರಿಗೆ ಹಂಚಲು ನೀಡಿದ ಹಣವನ್ನು ಮುಖಂಡರೇ ಕಬಳಿಸಲು ಬಿಡುವುದಿಲ್ಲ. ಅದಕ್ಕೇ ಈ ಕೆಲಸ ಮಾಡುವುದಕ್ಕೆ ನಮಗೇ ಪ್ರತ್ಯೇಕ ಹಣ ನಿಗದಿ ಮಾಡಿಕೊಂಡೇ ನಮ್ಮ ಕೆಲಸ ಆರಂಭಿಸುತ್ತೇವೆ’ ಎಂದು ಅವರು ಹೇಳಿದರು.

‘ಜಾತಿ, ಕ್ಷೇತ್ರದ ಸಮಸ್ಯೆ ಪರಿಹರಿಸುವ ಭರವಸೆ, ಅಭಿವೃದ್ಧಿಯ ಕನಸು ಬಿತ್ತುವುದು ಇವೆಲ್ಲಾ ಸುಳ್ಳು ಸರ್‌. ಹಣವೊಂದೇ ಈಗ ಚುನಾವಣೆಯನ್ನು ಗೆಲ್ಲಿಸುತ್ತದೆ. ಚುನಾವಣೆ ಪ್ರಕಟವಾದ ತಕ್ಷಣ ಅಭ್ಯರ್ಥಿಗಳು ಸ್ಥಳೀಯ ಮುಖಂಡರ  ಸಭೆ ಕರೆಯುತ್ತಾರೆ. ಪಕ್ಷದ ಪದಾಧಿಕಾರಿಗಳ ಸಭೆಯೂ ನಡೆಯುತ್ತದೆ. ಅಲ್ಲಿ ಅಭ್ಯರ್ಥಿ ಹಣ ಕೊಟ್ಟರೆ ಮಾತ್ರ ಎಲ್ಲರೂ ಒಮ್ಮತದಿಂದ ಕೆಲಸಕ್ಕೆ ಬರುತ್ತಾರೆ’ ಎಂದು ಅವರು ಗುಟ್ಟುಬಿಟ್ಟುಕೊಟ್ಟರು.

‘ಲೋಕಸಭೆ ಚುನಾವಣೆಗಿಂತ ಸ್ಥಳೀಯ ಚುನಾವಣೆಯಲ್ಲಿಯೇ ನಮಗೆ ಲಾಭ ಜಾಸ್ತಿ’ ಎಂದು ಹೊಸ ಕತೆಗೆ ನಾಂದಿ ಹಾಡಿದರು. ಗ್ರಾಮ ಪಂಚಾಯ್ತಿ, ಹಾಲು ಒಕ್ಕೂಟ, ಸಹಕಾರ ಸಂಘಗಳ ಚುನಾವಣೆಯಲ್ಲಿ ಮತದಾರರು ಕಡಿಮೆ. ತಲಾ ಒಬ್ಬ ಮತದಾರನಿಗೆ ಸಿಗುವ ಹಣ ಹೆಚ್ಚು. ಅದರಿಂದ ನಮಗೂ ಹೆಚ್ಚಿನ ಲಾಭ. ನಿರ್ದಿಷ್ಟ ಮತದಾರರನ್ನು ಎಲ್ಲಿಗಾದರೂ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಮತದಾನದ ದಿನದವರೆಗೆ ಅವರನ್ನು ನೋಡಿಕೊಳ್ಳುವುದು ನಮ್ ಜವಾಬ್ದಾರಿ. ಅದಕ್ಕೆ ಬೇರೆ ಹಣ ಸಿಗುತ್ತದೆ’ ಎಂದರು.

‘ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪ್ರತಿ ಮತದಾರನಿಗೆ ಸಿಗುವ ಹಣ ಕಡಿಮೆ. ಆಗ ನಾವು ಸಭೆ ಸಮಾರಂಭದ ಹೆಸರಿನಲ್ಲಿ ಹಣ ಮಾಡುತ್ತೇವೆ. ಚುನಾವಣೆ ಸಮಯದಲ್ಲಿ ದೊಡ್ಡ ದೊಡ್ಡ ನಾಯಕರು ಬಂದು ಪ್ರಚಾರ ನಡೆಸಿದರೆ ಮತಗಳು ಜಾಸ್ತಿ ಬೀಳುವುದಿಲ್ಲ. ನರೇಂದ್ರ ಮೋದಿ ಬಂದರೂ ಅಷ್ಟೆ, ರಾಹುಲ್‌ ಗಾಂಧಿ ಬಂದು ಪ್ರಚಾರ ಮಾಡಿದರೂ ಅಷ್ಟೆ. ಆದರೆ ಅವರು ಬರುವುದರಿಂದ ನಮಗೇನು ಲಾಭ ಎಂದರೆ ಅವರ ಪ್ರಚಾರ ಸಭೆಗಳಿಗೆ ಜನರನ್ನು ಕರೆದುಕೊಂಡು ಬರುವ ಕೆಲಸ ನಮ್ಮದೇ. ಹಣ ಕೊಟ್ಟ ಹೊರತೂ ಜನ ಬರುವುದಿಲ್ಲ. ಅದಕ್ಕೂ ನಮಗೆ ಕಂತೆ ಕಂತೆ ಹಣ ಸಿಗುತ್ತದೆ’ ಎಂದು ಅವರು ವಿವರಿಸಿದರು.

‘ನೀವು ಯಾವುದೇ ಗ್ರಾಮಕ್ಕೆ ಹೋಗಿ ಜನ ನಂಬೋದು ನಮ್ಮನ್ನು ಮಾತ್ರ. ಯಾಕೆಂದರೆ ಅವರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವವರು ನಾವು. ಪೊಲೀಸ್‌ ಠಾಣೆ, ತಹಶೀಲ್ದಾರ್‌ ಕಚೇರಿ ಕೆಲಸಗಳನ್ನು ನಾವೇ ಮಾಡಿಸಿಕೊಡುತ್ತೇವೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ ಮುಂತಾದ ಕೆಲಸಗಳಿಗೆ ಅವರು ನಮ್ಮನ್ನೇ ಅವಲಂಬಿಸಿರುತ್ತಾರೆ. ಈ ಕೆಲಸಗಳನ್ನು ಯಾವ ಶಾಸಕ, ಸಂಸದ ಮಾಡಲಾಗದು. ಅದಕ್ಕೆ ಯಾವುದೇ ಚುನಾವಣೆ ಬಂದರೂ ನಾವು ಮುಖ್ಯರಾಗುತ್ತೇವೆ. ನಮ್ಮನ್ನು ಚೆನ್ನಾಗಿ ಬಳಸಿಕೊಂಡವರು ಗೆಲ್ಲುತ್ತಾರೆ’ ಎಂದು ಅವರು ನಕ್ಕರು.

‘ನೀವು ಯಾವುದೇ ಕ್ಷೇತ್ರಕ್ಕೆ ಹೋಗಿ. ಅಲ್ಲಿನ ಮತದಾರರಿಗೆ ಚುನಾವಣೆಯ ಬಗ್ಗೆ ಆಸಕ್ತಿಯೇ ಇಲ್ಲ. ಸಂಭ್ರಮವೂ ಇಲ್ಲ. ಅವರು ಅವರದ್ದೇ ಸಮಸ್ಯೆಯಲ್ಲಿ ಮುಳುಗಿದ್ದಾರೆ. ಈಗ ನಮ್ಮ ಕ್ಷೇತ್ರದ್ದೇ ಉದಾಹರಣೆ ತೆಗೆದುಕೊಳ್ಳಿ. ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಎಲ್ಲ ಕಡೆ ಕುಡಿಯುವ ನೀರಿನದ್ದೇ ತೊಂದರೆ. ಕುಡಿಯುವುದಕ್ಕೇ ನೀರಿಲ್ಲ. ಇನ್ನು ವ್ಯವಸಾಯ ಮಾಡೋದು ಹೇಗೆ? ನಮ್ಮ ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ಕಟ್ಟಿ 50 ವರ್ಷ ಆಗಿದೆ. ಇನ್ನೂ ನೀರಿಲ್ಲ. ಅಲ್ಲಿಗೆ ವಿದ್ಯುತ್ ಸೌಲಭ್ಯ ಕೂಡ ಇಲ್ಲ. ಮೊಳಕಾಲ್ಮೂರು ರೇಷ್ಮೆಗೆ ಪ್ರಸಿದ್ಧ. ಕಂಬಳಿ –ಕೈಮಗ್ಗ ಇದೆ. ನೇಕಾರರು ಸಂಕಷ್ಟದಲ್ಲಿದ್ದಾರೆ. 800 ರಿಂದ ಸಾವಿರ ಅಡಿ ಕೊರೆದರೂ ನೀರು ಬರಲ್ಲ. ನೀರು ಬಂದರೂ ಅದು ಕುಡಿಯಲು ಯೋಗ್ಯವಿಲ್ಲ’ ಎಂದು ಸಮಸ್ಯೆಯ ಗಂಟು ಬಿಚ್ಚಿದರು
.
‘ಹಿರಿಯೂರು ತಾಲ್ಲೂಕಿನಿಂದ ಎಂತೆಂತಹ ರಾಜಕೀಯ ಧುರೀಣರು ಆಯ್ಕೆಯಾಗಿದ್ದಾರೆ. ಆದರೆ ಇನ್ನೂ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬಿಸುವುದು ಸಾಧ್ಯವಾಗಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಇದೊಂದು ಚುನಾವಣಾ ವಿಷಯ ಆಗುತ್ತದೆ. ಚುನಾವಣೆ ಮುಗಿದ ನಂತರ ಸದ್ದು ಅಡಗುತ್ತದೆ. ಮೈಸೂರು ಒಡೆಯರ್‌ ಕಾಲದಲ್ಲಿ ಆಗಿರುವ ಜವನಗೊಂಡನಹಳ್ಳಿ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಲು ಸಾಧ್ಯವಾಗಿಲ್ಲ. ವಾಣಿವಿಲಾಸ ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿ ದಶಕಗಳೇ ಕಳೆದಿವೆ. ಇಡೀ ಚಿತ್ರದುರ್ಗ ಜನ ವಾಣಿ ವಿಲಾಸ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಬರುತ್ತದೆ ಎಂದು ಕಾಯುತ್ತಿದ್ದಾರೆ. ಅವರಿಗೆ ಈಗ ಚುನಾವಣೆ ಎಂದರೆ ಸಂಭ್ರಮ ಪಡುವ ಮನಸ್ಸೇ ಇಲ್ಲ’ ಎಂದು ಅವರು ಮಾತು ಮುಗಿಸಿದರು.

ಈ ಅಪರಿಚಿತ ವ್ಯಕ್ತಿಯ ಮಾತುಗಳನ್ನು ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಹಾಗೂ ಅವರನ್ನು ಗೆಲ್ಲಿಸಲೇ ಬೇಕು ಎಂದು ಪಣತೊಟ್ಟಿರುವ ಸಚಿವ ಆಂಜನೇಯ ಕೂಡ ಒಪ್ಪುತ್ತಾರೆ. ಚಿತ್ರದುರ್ಗದಲ್ಲಿ ಪ್ರಚಾರದಲ್ಲಿ ಬಿಸಿಯಾಗಿದ್ದ ಅವರು ಮಾತಿಗೆ ಸಿಕ್ಕ ಕೊಂಚ ಸಮಯದಲ್ಲಿ ‘ನಾವು ಗ್ರಾಮೀಣ ಪ್ರದೇಶದ ಸಣ್ಣ ಸಣ್ಣ ಮುಖಂಡರ ಮೇಲೆ ಗಮನ ಹರಿಸಿದ್ದೇವೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನವೀನ್‌ ಕೂಡ ಈ ಅನಾಮಧೇಯ ಮುಖಂಡರನ್ನು ‘ಸರಿಯಾಗಿ ನೋಡಿಕೊಳ್ಳುವ’ ಅನಿವಾರ್ಯತೆಯನ್ನು ಒಪ್ಪಿಕೊಂಡರು. ಚುನಾವಣೆ ಎಂದರೆ ಹಾಗೆ. ಗುರಿ ಇಡೋದು ಒಂದು ಕಡೆ. ಮಾವಿನಕಾಯಿ ಬೀಳೋದು ಇನ್ನೊಂದು ಕಡೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT