ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚಿಗೆ ಅರಿಷಿಣ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಕಬ್ಬ ನಾಟಿಗೂ ಮೊದ್ಲು ಗಳೇ ಮಾಡೂದು ಹಿಡ್ಕೊಂಡು ಕಬ್ಬು ಕಟಾವ ಮಾಡಿ ಫ್ಯಾಕ್ಟರೀಗಿ ಕಳಿಸಿ ಕೊಡೂತನ್ಕಾ ಖರ್ಚ ಭಾಳ ಬರ್ತಾವು, ಈ ಖರ್ಚ ಹೆಂಗಾರಾ ಮಾಡಿ ಹೊರಗಿಂದ ಹೊರಗ ಸಾಗ ಹಾಕಬೇಕು. ಕಬ್ಬಿನ ರೊಕ್ಕ ನನ್ನ ಕಿಸೇಕ್ಕ (ಜೇಬಿಗೆ) ಡೈರೆಕ್ಟ್ ಆಗಿ ಬಂದ ಬೀಳಬೇಕು. ಅಂಥಾ ಪ್ಲಾನ್ ಏನ್ ಮಾಡಬೇಕು~ ಎನ್ನುತ್ತ ವಿಜಾಪುರ ತಾಲ್ಲೂಕು ಕಣಬೂರಿನ ರೈತ ವೆಂಕನಗೌಡರು ಬಹಳಷ್ಟು ಆಲೋಚನೆ ಮಾಡಿದರು. ಕೊನೆಗೆ ಅವರ ಮನದಲ್ಲಿ ಮೂಡಿದ್ದು ಅರಿಷಿಣ ಬೆಳೆ.

ಏಳು ತಿಂಗಳಲ್ಲಿ ಕಟಾವಿಗೆ ಬರುವ ಅರಿಷಿಣ ಬೆಳೆಯೋದು; ಅರಿಷಿಣಕ್ಕೆ ಮೂರು, ಮೂರುವರೆ ತಿಂಗಳಾದಾಗ ಕಬ್ಬು ನಾಟಿ ಮಾಡುವದು. ಅರಿಷಿಣದಿಂದ ಬರುವ ಆದಾಯ ಕಬ್ಬು ಬೆಳೆಯಲು ತಗುಲುವ ಖರ್ಚನ್ನು ಪೂರೈಸಿಯೇ ಪೂರೈಸುತ್ತದೆ ಎಂಬ ಲೆಕ್ಕಾಚಾರದಿಂದ ಅರಿಷಿಣ ಕೃಷಿಗೆ ಇಳಿದುಬಿಟ್ಟರು. ಅವರ ನೆರವಿಗೆ, ಸಲಹೆ ಸೂಚನೆಗೆ ನಿಂತವರು ನಂದಿ ಸಕ್ಕರೆ ಕಾರ್ಖಾನೆ ಕೃಷಿ ತಜ್ಞ ಡಾ. ಪಾಂಡುರಂಗ ಬಿರಾದಾರ ಪಾಟೀಲ.

ಮೊದಲಿನ ಕಬ್ಬಿನ ಕಟಾವು ಮಾಡಿದ ನಂತರ ರವದಿಯನ್ನು (ಕಬ್ಬಿನ ಸಿಪ್ಪೆ) ಸುಡದೇ ಪುಡಿ ಮಾಡಿ ಮಣ್ಣಿನಲ್ಲಿ ಸೇರಿಸಿ ಬಿಟ್ಟರಲ್ಲದೇ ಪ್ರತಿ ಎಕರೆಗೆ 5 ಟ್ರಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಿದರು. ಎರಡು ಅಡಿ ಅಂತರವಿಟ್ಟು ಸಾಲು ಕೊರೆದರು. ಜೂನ್ ಮೂರನೇ ವಾರದಲ್ಲಿ ಸೇಲಂ ತಳಿಯ ಅರಿಷಿಣ ಬೀಜವನ್ನು (ಹಸಿ ಕೊಂಬು) ಕ್ವಿಂಟಾಲ್‌ಗೆ 4 ಸಾವಿರ ರೂಪಾಯಿ ದರದಲ್ಲಿ ಖರೀದಿಸಿ ಪ್ರತಿ ಎಕರೆಗೆ 10 ಕ್ವಿಂಟಾಲ್ ಬಿತ್ತಿದರು. ಒಂದು ಸಾಲು ಅರಿಷಿಣಕ್ಕಾದರೆ ಇನ್ನೊಂದು ಸಾಲು ಕಬ್ಬಿಗೆ ಮೀಸಲು. ಅರಿಷಿಣ ಮೊಳಕೆ ಬಂದ ನಂತರ ಎಡೆ ಹೊಡೆದು ಬಿಟ್ಟಿದ್ದರಿಂದ ಕಸ ತೆಗೆಯುವ ಪ್ರಸಂಗವೇ ಬರಲಿಲ್ಲ.

ಅರಿಷಿಣ ಬೆಳೆಗೆ ಮೂರು ತಿಂಗಳಾದಾಗ ಕಬ್ಬು ನಾಟಿ ಮಾಡಿ ಗೋಮೂತ್ರದೊಂದಿಗೆ ಯೂರಿಯಾ ಗೊಬ್ಬರ ಸೇರಿಸಿ ಸಿಂಪಡಿಸಿದರು. ಜೊತೆಗೆ ಡಿಎಪಿ ಹಾಗೂ ಅಮೋನಿಯಂ ಸಲ್ಫೇಟನ್ನು ಕೃಷಿ ತಜ್ಞರ ಸಲಹೆಯ ಮೇರೆಗೆ ಪ್ರತಿ ಎಕರೆಗೆ ಒಂದು ಚೀಲದಂತೆ ಹಾಕಿ ನೀರು ಕೊಟ್ಟರು. ಇದು ಅರಿಷಿಣ ಹಾಗೂ ಕಬ್ಬು ಎರಡಕ್ಕೂ ಪೂರೈಕೆಯಾಗುತ್ತದೆಂಬುದು ಅವರ ಅನುಭವ. ಅರಿಷಿಣ ಈಗ ಕಟಾವಿಗೆ ಬಂದಿದೆ.
 
ಎಕರೆಗೆ 20 ಕ್ವಿಂಟಾಲ್ ಇಳುವರಿ ನಿರೀಕ್ಷಿಸಿದ್ದಾರೆ. ಇದಲ್ಲದೆ ಪ್ರತಿ ಎಕರೆಗೆ 12 ಕ್ವಿಂಟಾಲ್‌ನಷ್ಟು ಬೀಜದ ಗಡ್ಡೆ ದೊರೆಯುವ ಸಾಧ್ಯತೆ ಇದೆ. ಹೀಗೆ ಹಾಲಿ ದರದಲ್ಲಿ ಒಟ್ಟು 1.20 ಲಕ್ಷ ರೂಪಾಯಿ ಆದಾಯ ಬರುತ್ತದೆ ಎಂದು ಅಂದಾಜು ಮಾಡಿದ್ದಾರೆ.
 
`ಈಗ ಹೇಳ್ರಿ, ಅರಿಷಿಣದಿಂದ ಕಬ್ಬಿನ ಬೆಳಿ ಖರ್ಚ ಕಳದು ಒಂದಿಷ್ಟು ಲಾಭಾ ಸಿಗ್ತೇತಿ, ಇನ್ನ ಕಬ್ಬಿನ  ರೊಕ್ಕ ಡೈರೆಕ್ಟಾಗಿ ನನ್ನ ಕಿಸೇಕ್ಕ ಬೀಳತೈತಿಲ್ರೆ?~ ಎಂದು ಪುಳಕಿತರಾಗಿ ಪ್ರಶ್ನಿಸುತ್ತಾರೆ. ಎಕರೆಗೆ ಕನಿಷ್ಠ 60ಟನ್ ಕಬ್ಬು ಬೆಳೆದೇ ತೀರಬೇಕೆಂಬ ಛಲ ತೊಟ್ಟಿದ್ದು ಈ ಮೂಲಕ 1.20 ಲಕ್ಷ ರೂಪಾಯಿ ಬರುತ್ತದೆನ್ನುತ್ತಾರೆ.

ಕಬ್ಬಿಗೆ ರೋಗ ತಗುಲದಂತೆ ಅರಿಷಿಣ ಕಾಪಾಡಿದೆ. ಕಳೆ ತೆಗೆಯುವ ಖರ್ಚೂ ಕಡಿಮೆಯಾಗಿದೆ. ಸಾವಯವದ ಪೋಷಕಾಂಶಗಳನ್ನೂ ಪೂರೈಸಿದೆ ಎನ್ನುವ ವೆಂಕನಗೌಡರು ಮೂರು ಎಕರೆ ತೋಟದಲ್ಲಿ 1200 ಸಾಗವಾನಿ (ತೇಗ) ಗಿಡಗಳನ್ನು ಬೆಳೆಸಿದ್ದಾರೆ. ಮನೆ ಮುಂದೆ, ಹೊಲದ ಬದುವಿನಲ್ಲಿ ಗಿಡನೆಟ್ಟು ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಬೇಕು ಎಂಬುದು ರೈತರಲ್ಲಿ ಅವರ ಮನವಿ. ವೆಂಕನಗೌಡರ ಮೊಬೈಲ್ ಸಂಖ್ಯೆ 99016 23155

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT