ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ನಿವೇಶನಗಳಲ್ಲಿ ಕಸ ಸಾಮ್ರಾಜ್ಯ; ರೋಗ ಭೀತಿ

Last Updated 2 ಜುಲೈ 2012, 10:10 IST
ಅಕ್ಷರ ಗಾತ್ರ

ಹಾಸನ: ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಬಳಕೆಗಾಗಿ ಬಿಟ್ಟಿರುವ ಜಾಗಗಳನ್ನು ನೆರೆಕರೆಯವರು ಒತ್ತುವರಿ ಮಾಡಿಕೊಳ್ಳುವುದು, ನಿವೇಶನದಲ್ಲಿ ಗಿಡಗಂಟಿ ಬೆಳೆಯುವುದು ಒಂದು ಸಮಸ್ಯೆಯಾದರೆ ಖಾಲಿ ನಿವೇಶನಗಳೇ ಕಸದ ತೊಟ್ಟಿಗಳಾಗಿರುವುದು ಹಾಸನದ ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ.

ನಗರದ ಯಾವುದೇ ಬಡಾವಣೆಯಲ್ಲಿ ಸುತ್ತುಹಾಕಿದರೂ ಇಂಥ `ತೊಟ್ಟಿಗಳು~ ಕಾಣಿಸುತ್ತವೆ. ನಗರಸಭೆಯವರು ಇಟ್ಟಿರುವ ತೊಟ್ಟಿಗಳೇ ಯಾವತ್ತೂ ತುಂಬಿ ತುಳುಕುತ್ತಿರುತ್ತವೆ. ಅವುಗಳಿಗೆ ಸ್ಪರ್ಧೆ ನೀಡುವಂತೆ ಈ ಖಾಲಿ ನಿವೇಶನಗಳು ಕಸವನ್ನು ತುಂಬಿಕೊಂಡಿರುತ್ತವೆ. ನಗರಸಭೆಯ ತೊಟ್ಟಿಗಳು ಎರಡು ಮೂರು ದಿನಗಳಿಗೊಮ್ಮೆಯಾದರೂ ಶುಚಿಯಾಗುತ್ತವೆ. ಆದರೆ ಈ ಖಾಲಿ ನಿವೇಶನ ತೊಟ್ಟಿಗಳು ಯಾವತ್ತೂ ಶುಚಿಯಾಗುವುದೇ ಇಲ್ಲ. ಈ ಕಸದ ರಾಶಿ ಹೆಚ್ಚು ಅಪಾಯಕಾರಿಯೂ ಆಗಿದೆ.

ನಗರದೊಳಗೆ ಪಾರ್ಕ್‌ಗೆ ಬಿಟ್ಟ ಜಾಗದಲ್ಲಿ ಶೇ 80ರಷ್ಟು ನಿವೇಶನಗಳು ಕಸದ ತೊಟ್ಟಿಗಳಂತಾಗಿವೆ. ಕೆಲವೆಡೆ ನಗರಸಭೆಯ ಸದಸ್ಯರು ಅವುಗಳನ್ನು ಶುಚಿಗೊಳಿಸಿದ್ದಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಜನರು ನಗರಸಭೆ ಸದಸ್ಯರ ಮೇಲೆ ಒತ್ತಡ ಹೇರಿ ಅಥವಾ ಇನ್ನೂ ಕೆಲವೆಡೆ ತಾವೇ ಶುಚಿ ಮಾಡಿದ ಉದಾಹರಣೆಯೂ ಇದೆ. ಆದರೆ ಖಾಸಗಿ ವ್ಯಕ್ತಿಗೆ ಸೇರಿದ ನಿವೇಶನಗಳಲ್ಲಿ ಹೀಗೆ ಮಾಡಲಾಗುವುದಿಲ್ಲ.

ಆದ್ದರಿಂದ ಪ್ರತಿ ಬಡಾವಣೆಯಲ್ಲೂ ಇಂಥ ಹಲವು ನಿವೇಶನಗಳು ಕಾಣಿಸಿಕೊಳ್ಳುತ್ತಿವೆ. ವಿಚಿತ್ರವೆಂದರೆ ಅಕ್ಕಪಕ್ಕದ ಮನೆಯವರೇ ಇಂಥ ನಿವೇಶನಗಳಲ್ಲಿ ಕಸ ಎಸೆಯುತ್ತಾರೆ.

ಮನೆಕೆಲಸಕ್ಕೆ ಬರುವವರು ಸಹ ಅನೇಕ ಸಂದರ್ಭಗಳಲ್ಲಿ ಇಂಥ ಕೆಲಸ ಮಾಡುತ್ತಾರೆ. ಒಂದಾದ ಮೇಲೆ ಇನ್ನೊಂದು ಮನೆಗೆ ಹೋಗುವ ಅನೇಕ ಮಹಿಳೆಯರು ಪ್ರತಿ ಬಾರಿ ಕಸ ಎಸೆಯಲು ಕಸದ ತೊಟ್ಟಿ ಇರುವಲ್ಲಿಗೆ ಹೋಗುವುದಿಲ್ಲ. ಎರಡು ಮನೆಗಳ ಮಧ್ಯ ಇರುವ ಖಾಲಿ ನಿವೇಶನ ಅಥವಾ ಮನೆಯ ಅಕ್ಕಪಕ್ಕದಲ್ಲಿ ಸಾರ್ವಜನಿಕ ಬಳಕೆಗೆ ಬಿಟ್ಟಿರುವ ಸೈಟನ್ನೇ ಹೆಚ್ಚಿನವರು ತೊಟ್ಟಿ ಮಾಡಿಕೊಂಡಿರುತ್ತಾರೆ. ತಮ್ಮ ಮನೆಯಿಂದ ಕಸ ಆಚೆ ಹೋದರೆ ಸಾಕು ಎಂಬ ಮಾಲೀಕರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಕೆ.ಆರ್.ಪುರಂ, ವಿದ್ಯಾನಗರಗಳಂಥ ಪ್ರತಿಷ್ಠಿತ ಹಾಗೂ ಸುಶಿಕ್ಷಿತರೇ ಇರುವ ಬಡಾವಣೆಗಳಲ್ಲೂ ಈ ಸಮಸ್ಯೆ ಇದೆ. ಜನರ ನಿರ್ಲಕ್ಷ್ಯದಿಂದಲೇ ಈ ಸ್ಥಿತಿ ಬಂದಿರುವುದರಿಂದ ಈ ಒಂದು ವಿಚಾರದಲ್ಲಿ ನಾಗರಿಕರು ನಗರಸಭೆಯನ್ನು ದೂಷಿಸುವಂತಿಲ್ಲ. ಆದರೆ ಖಾಲಿ ಜಾಗವನ್ನು ಶುಚಿಗೊಳಿಸುವಂತೆ ಜಾಗಗಳ ಮಾಲೀಕರಿಗೆ ನೋಟಿಸ್ ನೀಡಿ ಅವರು ಮಾಡದಿದ್ದಲ್ಲಿ ತಾವೇ ಶುಚಿಮಾಡಿ, ಮಾಲೀಕರಿಗೆ ದಂಡ ವಿಧಿಸುವ ಕಾರ್ಯವನ್ನು ನಗರಸಭೆ ಮಾಡಬಹುದು.

ಶಾಲೆಯ ಅಕ್ಕಪಕ್ಕ, ಆಸ್ಪತ್ರೆಯ ಸುತ್ತಮುತ್ತಲಿನ ಅನೇಕ ಕಡೆ ಅಪಾಯಕಾರಿ ಕಸದ ರಾಶಿ ಇದೆ. ಕೆ.ಆರ್.ಪುರಂನ ಒಂದು ನಿವೇಶನದಲ್ಲಿ ಇನ್ನೂ ಎಳನೀರಿನ ಮೊಟ್ಟೆಗಳ ರಾಶಿಯೇ ಇದೆ. ಮಳೆಗಾಲದಲ್ಲಿ ನೀರು ನಿಂತು ಅನೇಕ ರೋಗಗಳು ಹರಡುವ ಅಪಾಯ ಇದೆ.

ಕಂಟೇನರ್‌ಗಳು ಬಂದಿಲ್ಲ:
ವಿವಿಧ ಬಡಾವಣೆಗಳಲ್ಲಿರುವ ಕಸದ ತೊಟ್ಟಿಗಳು ತುಂಬಿ ತುಳುಕುವುದರಿಂದ ತುಂಬ ಕಸ ಬರುವಲ್ಲಿ ಕಂಟೇನರ್‌ಗಳನ್ನು ಇಡಬೇಕು ಎಂದು ನಗರಸಭೆಯವರು ತೀರ್ಮಾನ ಕೈಗೊಂಡು ಹಲವು ತಿಂಗಳೇ ಆಗಿವೆ.

ಆದರೆ ಇನ್ನೂ ಕಂಟೇನರ್‌ಗಳು ಬಂದಿಲ್ಲ. `ಸುಮಾರು 50 ಕಂಟೇನರ್‌ಗಳಿಗೆ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. 10-15 ದಿನಗಳಲ್ಲಿ ಕಂಟೇನರ್‌ಗಳು ಬರಲಿವೆ~ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಖಾಲಿ ನಿವೇಶನಗಳ ಸ್ವಚ್ಛತೆಗೆ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT