ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಭದ್ರತಾ ಸಿಬ್ಬಂದಿಗೆ ತರಬೇತಿ ಇಲ್ಲ...

Last Updated 2 ಡಿಸೆಂಬರ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರತಾ ಸಿಬ್ಬಂದಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ಜಾಗದ ಸಮಸ್ಯೆ­ಯಿಂದಾಗಿ ಸ್ವಂತ ತರಬೇತಿ ಕೇಂದ್ರ ಆರಂಭಿಸಲು ಸಾಧ್ಯವಾಗುತ್ತಿಲ್ಲ. ವೇತನ ಕಡಿಮೆ ಇರುವುದರಿಂದ ಈ ಕೆಲಸಕ್ಕೆ ಸೇರುವವರ ಸಂಖ್ಯೆಯೂ ಕಡಿಮೆ­ಯಾಗಿದೆ. ಇರುವ ಸಿಬ್ಬಂದಿ ಒಂದೇ ಏಜೆನ್ಸಿಯಲ್ಲಿ ಕೆಲಸ ಮಾಡಲು ಇಷ್ಟಪಡುವುದೂ ಇಲ್ಲ....

ಖಾಸಗಿ ಭದ್ರತಾ ಏಜೆನ್ಸಿಗಳ ಮುಖ್ಯ­ಸ್ಥರು ಹೇಳಿಕೊಂಡ ಸಮಸ್ಯೆಗಳಿವು. ‘ಎಟಿಎಂ ಘಟಕಗಳು, ಮಾಲ್‌ಗಳು ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಭದ್ರತೆ ಒದಗಿಸುವವರು ತರಬೇತಿ ಇಲ್ಲದ ಸೆಕ್ಯು­ರಿಟಿ ಗಾರ್ಡ್‌ಗಳು. ನಾಮ ಮಾತ್ರಕ್ಕಷ್ಟೇ ನೇಮಕಗೊಂಡ ಇಂತಹ ಸಿಬ್ಬಂದಿ ಸಾರ್ವ­ಜನಿಕ ಸ್ಥಳಗಳಲ್ಲಿ ಸಮರ್ಥವಾಗಿ ಭದ್ರತಾ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ. ಅವರಿಗೆ ಸೂಕ್ತ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ, ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂಬುದು ಅವರ ಅಳಲು.

‘ಖಾಸಗಿ ಏಜೆನ್ಸಿಗಳ ಸಿಬ್ಬಂದಿಗೆ ಪೊಲೀಸ್‌ ಮಾದರಿಯಲ್ಲಿ ತರಬೇತಿ ನೀಡಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ಮನವಿಗೆ ಸ್ಪಂದಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಹೀಗಾಗಿ, ರಾಜ್ಯದ ಖಾಸಗಿ ಭದ್ರತಾ ಏಜೆನ್ಸಿಗಳ ಮಾಲೀಕರು ಒಟ್ಟಾಗಿ ರಾಮನಗರದ ಕೆಂಗಲ್‌ ಬಳಿ 20 ಎಕರೆ ಜಾಗ ಪಡೆದು ತರಬೇತಿ ಕೇಂದ್ರವನ್ನು ನಿರ್ಮಿಸಲು ಮುಂದಾಗಿದ್ದೇವೆ. 2014ರ ಜ.26ರಂದು ಆ ಕೇಂದ್ರ ಉದ್ಘಾಟನೆ­ಯಾಗಲಿದೆ’ ಎಂದು ರಾಜ್ಯ ಖಾಸಗಿ ಭದ್ರತಾ ಏಜೆನ್ಸಿಗಳ ಸಂಘದ ಅಧ್ಯಕ್ಷ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಕೆ.ಪಿ.ನಾಗೇಶ್ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರವಾನಗಿ ಪಡೆದ ಒಟ್ಟು 950 ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳಿದ್ದು, 4.5 ಲಕ್ಷ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿ­ದ್ದಾರೆ. ನಗರದಲ್ಲಿ 600 ಏಜೆನ್ಸಿಗಳಿದ್ದು, ಸುಮಾರು 2.5 ಲಕ್ಷ ಸೆಕ್ಯುರಿಟಿ ಗಾರ್ಡ್‌­ಗಳಿದ್ದಾರೆ. ಈ ಪೈಕಿ ಸೇನೆಯ ಹಿನ್ನೆಲೆ­ಯಿಂದ ಬಂದವರ ಸಂಖ್ಯೆ ವಿರಳ. ಉಳಿದ­ವರಿಗೆ ತರಬೇತಿ ನೀಡಲು ಸೂಕ್ತ ವಾತಾ­ವರಣ ನಮ್ಮಲ್ಲಿಲ್ಲ. ದೊಡ್ಡ ದೊಡ್ಡ ಏಜೆನ್ಸಿಗಳು ತಮ್ಮದೇ ತರಬೇತಿ ಕೇಂದ್ರ­ಗಳನ್ನು ನಿರ್ಮಿಸಿಕೊಂಡಿವೆ. ಆದರೆ, ಜಾಗದ ಸಮಸ್ಯೆಯಿಂದಾಗಿ ಸಣ್ಣ ಗಾತ್ರದ ಏಜೆನ್ಸಿಗಳಿಗೆ ಇದು ಸಾಧ್ಯವಾಗುತ್ತಿಲ್ಲ’ ಎಂದರು.

ಸಿಬ್ಬಂದಿ ಕೊರತೆ: ‘ಸೆಕ್ಯುರಿಟಿ ಗಾರ್ಡ್‌ ಕೆಲಸಕ್ಕೆ ಸೇರಲು ಯಾರೂ ಇಷ್ಟಪಡುವು­ದಿಲ್ಲ. ಯಾವುದೇ ಕೆಲಸ ಸಿಗದಿದ್ದಾಗ ಕೊನೆಯದಾಗಿ ಈ ಹುದ್ದೆ ಆಯ್ಕೆ ಮಾಡಿ­ಕೊಳ್ಳುತ್ತಾರೆ. ಬೇರೆ ವೃತ್ತಿ ಸಿಕ್ಕರೇ ಸೂಚನೆ ನೀಡದೆ ಹೊರಟು ಹೋಗು­ತ್ತಾರೆ. ಹೀಗಾಗಿ ರಾಜ್ಯದ ಎಲ್ಲಾ ಏಜೆನ್ಸಿ­ಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ನಗರಕ್ಕೇ ಕನಿಷ್ಠ 50,000 ಸಿಬ್ಬಂದಿಯ ಅವಶ್ಯಕತೆ ಇದೆ’ ಎಂದು ಹೇಳಿದರು.

ವೇತನ ಕಡಿಮೆ: ‘ರಾಜ್ಯದಲ್ಲಿರುವ ಬಹುತೇಕ ಸೆಕ್ಯುರಿಟಿ ಗಾರ್ಡ್‌ಗಳು ಉತ್ತರ ಭಾರತ ಮೂಲದವರು. ಅವರು ತಮ್ಮ ರಾಜ್ಯದಲ್ಲೇ ಶಸ್ತ್ರಾಸ್ತ್ರಗಳ ಪರವಾನಗಿ ಪಡೆದುಕೊಂಡು ರಾಜ್ಯಕ್ಕೆ ಬರುತ್ತಾರೆ. ಅಂತಹ ಸಿಬ್ಬಂದಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆ ದಿನಕ್ಕೆ ₨ 342 ವೇತನ ನೀಡಲಾಗುತ್ತದೆ. ಶಸ್ತ್ರಾಸ್ತ್ರ ಪರವಾನಗಿ ಹೊಂದಿರದ ಸಿಬ್ಬಂದಿಗೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾಸಿಕ ₨ 5,817 ವೇತನ ಸಿಗುತ್ತದೆ. ಈ ವೇತನದಿಂದ ಜೀವನ ನಿರ್ವಹಣೆ ಸಾಧ್ಯವಾಗುವುದಿಲ್ಲ ಎಂದು ಸೆಕ್ಯುರಿಟಿ ಗಾರ್ಡ್‌ ಕೆಲಸಕ್ಕೆ ಸೇರುವವರ ಸಂಖ್ಯೆ ಕಡಿಮೆ ಇದೆ’ ಎಂದು ಪೂಜ್ಯಾಯಾ ಸೆಕ್ಯುರಿಟಿ ಸರ್ವಿಸ್‌ ಏಜೆನ್ಸಿಯ ವ್ಯವಸ್ಥಾಪಕ ಪಿ.ರಾಘವೇಂದ್ರ ರೆಡ್ಡಿ ತಿಳಿಸಿದರು.

‘ಭದ್ರತಾ ಸಿಬ್ಬಂದಿಗೆ 100 ಗಂಟೆಗಳ ಕಾಲ ಕ್ಷೇತ್ರ ತರಬೇತಿ (ಫೀಲ್ಡ್‌ ಟ್ರೈನಿಂಗ್‌) ಹಾಗೂ 60 ಗಂಟೆಗಳ ಕಾಲ ತರಗತಿಯಲ್ಲಿ ಪಾಠ (ಕ್ಲಾಸ್‌ ರೂಂ ಟ್ರೈನಿಂಗ್) ಸಿಕ್ಕಿರಬೇಕು ಎಂದು ಪಸರ್‌ ಆಕ್ಟ್‌ ಹೇಳುತ್ತದೆ. ಆದರೆ, ತರಬೇತಿ ಕೇಂದ್ರಗಳೇ ಇಲ್ಲದಿರುವಾಗ ಈ ನಿಯಮಗಳನ್ನು ಪಾಲಿಸುವುದಾದರೂ ಹೇಗೆ. ನಮ್ಮ ಏಜೆನ್ಸಿಯಲ್ಲಿ 500 ಮಂದಿ ಭದ್ರತಾ ಸಿಬ್ಬಂದಿ ಕರ್ತವ್ಯ  ನಿರ್ವಹಿಸುತ್ತಿದ್ದು, ಸ್ವಂತ ಖರ್ಚಿನಲ್ಲಿ ತರಬೇತಿ ಕೇಂದ್ರ ತೆರೆದು ಪಸರ್‌ ಆಕ್ಟ್‌ನ ನಿಯಮ ಪಾಲಿಸುತ್ತಿದ್ದೇವೆ’ ಎಂದರು.

‘ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಗೆ ನಿಯೋಜಿಸುವ ಸೆಕ್ಯುರಿಟಿ ಗಾರ್ಡ್‌ಗೆ ಹಿಂದಿ ಮತ್ತು ಇಂಗ್ಲಿಷ್‌ ಭಾಷೆ ಬರಬೇಕು. ಅವರು ಉತ್ತಮ ದೇಹದಾರ್ಢ್ಯತೆ ಹೊಂದಿರಬೇಕು. ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಭದ್ರತೆಗೆ ಸಂಬಂಧಪಟ್ಟ ಎಲ್ಲ ತರಬೇತಿಗಳನ್ನು ಪೂರ್ಣಗೊಳಿಸಿರಬೇಕು. ಗನ್‌ಮ್ಯಾನ್‌­ಗಳು ಬಂದೂಕು ಪರವಾನಗಿ ಹೊಂದಿರಬೇಕು ಎಂಬೆಲ್ಲ ನಿಯಮ­ಗಳನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಸೇನೆಯಿಂದ ನಿವೃತ್ತರಾದವರು ಮಾತ್ರ ಈ ಅರ್ಹತೆ ಹೊಂದಿರುತ್ತಾರೆ. ಹೀಗಾಗಿ ಖಾಸಗಿ ಭದ್ರತಾ ಏಜೆನ್ಸಿಗಳ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಏಜೆನ್ಸಿಗಳ ಬಲವರ್ಧನೆ ಬಗ್ಗೆಯೂ ಚಿಂತಿಸಬೇಕು’ ಎಂದು ಭಾರತ್‌ ಸೆಕ್ಯುರಿಟಿ ಸರ್ವಿಸ್‌ ಏಜೆನ್ಸಿಯ ಎಚ್‌.ಫಯಾಜ್‌ ಅಹಮದ್‌ ಒತ್ತಾಯಿಸಿದರು.

‘ನಮ್ಮ ಏಜೆನ್ಸಿ ಯಾವುದೇ ತರಬೇತಿ ಕೇಂದ್ರವನ್ನು ಹೊಂದಿಲ್ಲ. ಹೀಗಾಗಿ, ಬೇರೆ ಏಜೆನ್ಸಿಗಳಲ್ಲಿ ಮೂರ್ನಾಲ್ಕು ಕೆಲಸ ಮಾಡಿದ ಅನುಭವ ಹೊಂದಿದವರನ್ನೇ ಹೆಚ್ಚಿನ ವೇತನ ಕೊಟ್ಟು ನೇಮಕ ಮಾಡಿಕೊಳ್ಳಬೇಕಾಗಿದೆ. ಗೃಹರಕ್ಷಕ ದಳ ಹಾಗೂ ಪೌರ ರಕ್ಷಕದಳದ ಸಿಬ್ಬಂದಿಗೆ ತರಬೇತಿ ನೀಡುವ ಸರ್ಕಾರ, ಅದೇ ಜಾಗದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳ ತರಬೇತಿಗೂ ಅವಕಾಶ ನೀಡಿದರೆ ಸಣ್ಣ ಪುಟ್ಟ ಏಜೆನ್ಸಿಗಳಿಗೆ ಅನುಕೂಲವಾಗು­ತ್ತದೆ’ ಎಂದು ಮನವಿ ಮಾಡಿದರು.

ಏಜೆನ್ಸಿಯವರೇ ತರಬೇತಿ ನೀಡಬೇಕು
‘ಖಾಸಗಿ ಏಜೆನ್ಸಿಗಳ ಸೆಕ್ಯುರಿಟಿ ಗಾರ್ಡ್‌ಗಳಿಗೆ ತರಬೇತಿ ನೀಡುವ ಜವಾಬ್ದಾರಿ ಪೊಲೀಸ್‌ ಇಲಾಖೆಯದ್ದಲ್ಲ. ‘ಖಾಸಗಿ ಭದ್ರತಾ ಏಜೆನ್ಸಿಗಳ ನಿರ್ಬಂಧ ಕಾಯ್ದೆ’ (ಪಸರ್ ಆಕ್ಟ್) ಪ್ರಕಾರ, ಏಜೆನ್ಸಿಯವರೇ ತಮ್ಮ ಸಿಬ್ಬಂದಿಗೆ ತರಬೇತಿ ನೀಡಬೇಕು. ಇಲಾಖೆಯಿಂದಲೂ ತರಬೇತಿಯ ಅವಶ್ಯಕತೆ ಇದೆ ಎಂದು ಅವರು ಮನವಿ ಮಾಡಿದರೆ, ಶಸ್ತ್ರಾಸ್ತ್ರ ನಿರ್ವಹಣೆ ಮತ್ತು ಗುಂಡು ಹಾರಿಸುವ ಕೌಶಲದ ಬಗ್ಗೆ ಮಾತ್ರ ತರಬೇತಿ ನೀಡಲಾಗುವುದು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪಸರ್‌ ಆಕ್ಟ್‌ ಎಂದರೇನು?
ಖಾಸಗಿ ಭದ್ರತಾ ಏಜೆನ್ಸಿಗಳ ಆರಂಭ, ನಿರ್ವಹಣೆ ಹಾಗೂ ನಿಯಂತ್ರಣದ ಉದ್ದೇಶಕ್ಕಾಗಿ ಕೇಂದ್ರ  ಸರ್ಕಾರವು 2005ರಲ್ಲಿ  ‘ಪಸರ್‌ ಆಕ್ಟ್‌’ ಜಾರಿಗೆ ತಂದಿದ್ದು, ಜಮ್ಮ–ಕಾಶ್ಮೀರ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ.

ಜಿಲ್ಲೆಯೊಂದರಲ್ಲಿ ಭದ್ರತಾ ಏಜೆನ್ಸಿ ಆರಂಭಿಸುವವರು ಸರ್ಕಾರಕ್ಕೆ ₨5,000  ಶುಲ್ಕ ಪಾವತಿಸಬೇಕು. ಅಂತೆಯೇ ಐದು ಜಿಲ್ಲೆಗಳಲ್ಲಿ ಏಜೆನ್ಸಿ ಆರಂಭಿಸುವವರು ₨10.000 ಹಾಗೂ ರಾಜ್ಯದಾದ್ಯಂತ ಏಜೆನ್ಸಿ ಆರಂಭಿಸುವವರು ₨25,000 ಶುಲ್ಕ ಕಟ್ಟಬೇಕು. ಇದಕ್ಕೂ ಮೊದಲು ಕಾಯ್ದೆಯಡಿ ಪರವಾನಗಿ ಪಡೆಯುವುದು ಕಡ್ಡಾಯ. ಐದು ವರ್ಷಗಳಿಗೊಮ್ಮೆ ಆ ಪರವಾನಗಿಯನ್ನು ನವೀಕರಿಸಬೇಕು ಎಂದು ಕಾಯ್ದೆ ಹೇಳುತ್ತದೆ.

ಭದ್ರತಾ ಸಿಬ್ಬಂದಿಯಾಗಿ ನೇಮಕವಾಗುವ ಅಭ್ಯರ್ಥಿಯ ವಯಸ್ಸು 18 ರಿಂದ 65ರ ಒಳಗಿರಬೇಕು. ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರಬಾರದು. ಏಜೆನ್ಸಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭೂಸೇನೆ, ನೌಕಸೇನೆ ಹಾಗೂ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಬೇಕು. ಉಳಿದವರಿಗೆ ಸೂಕ್ತ ತರಬೇತಿ ಕೊಟ್ಟು ನಂತರ ನೇಮಕ ಮಾಡಿಕೊಳ್ಳಬಹುದು. ಭದ್ರತಾ ಸಿಬ್ಬಂದಿ ಒಂದು ಏಜೆನ್ಸಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಬೇರೊಂದು ಕಡೆ ಕೆಲಸ ಮಾಡುವಂತಿಲ್ಲ’ ಎಂದು ಕಾಯ್ದೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT