ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ: ಏಕರೂಪ ನಿಯಮಾವಳಿಗೆ ಚಾಲನೆ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವವರಿಗೆ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಖಾಸಗಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಮುಕ್ತ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಏಕರೂಪ ನಿಯಮಾವಳಿ ರೂಪಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಸಂಬಂಧ ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಮಾನದಂಡ ಇಲ್ಲ. ಈ ಹಿಂದೆ ಎರಡು ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿದಾಗ ಪ್ರತಿಯೊಂದಕ್ಕೂ ಪ್ರತ್ಯೇಕ ಕಾಯ್ದೆ ರೂಪಿಸಲಾಗಿತ್ತು. ಆದರೆ ಮುಂದೆ ಆರಂಭವಾಗುವ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವಂತೆ ಸಾಮಾನ್ಯ ನಿಯಮಾವಳಿಯನ್ನು ರೂಪಿಲಾಗುತ್ತಿದೆ.

ಉನ್ನತ ಶಿಕ್ಷಣ ಪರಿಷತ್ ಕರಡು ನಿಯಮಾವಳಿಯನ್ನು ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಸದ್ಯದಲ್ಲೇ ಇದಕ್ಕೆ ಅಂತಿಮ ರೂಪ ನೀಡಿ ಮುಂದಿನ ತಿಂಗಳು ನಡೆಯುವ ಪರಿಷತ್ ಸಾಮಾನ್ಯ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ರಾಜ್ಯದಲ್ಲಿ ಸದ್ಯ ಸುಮಾರು 2500 ಕಾಲೇಜುಗಳು, 24 ವಿಶ್ವವಿದ್ಯಾಲಯಗಳಿದ್ದು (ಸಂಗೀತ, ಜಾನಪದ, ಸಂಸ್ಕೃತ ಇತ್ಯಾದಿ ವಿ.ವಿ.ಗಳು ಸೇರಿ) ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಶೇ 12ರಷ್ಟಿದೆ. ಇದನ್ನು ಶೇ 16ಕ್ಕೆ ಹೆಚ್ಚಿಸಬೇಕಾದರೆ ಇನ್ನೂ ಸಾವಿರ ಕಾಲೇಜುಗಳು, 7-8 ವಿಶ್ವವಿದ್ಯಾಲಯಗಳು ಬೇಕಾಗುತ್ತವೆ.
ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲಗಳ ಕೊರತೆ ಇದೆ. ಹೀಗಾಗಿ ಖಾಸಗಿಯವರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂದು ಉನ್ನತ ಶಿಕ್ಷಣ ಪರಿಷತ್ತಿನ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯದಲ್ಲಿ ಈಗಲೂ ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಕಾಲೇಜುಗಳು ಇಲ್ಲದೆ ಇದ್ದರೆ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ 12ರಷ್ಟೂ ಇರುತ್ತಿರಲಿಲ್ಲ. ಇದೆಲ್ಲವನ್ನು ಗಮನಿಸಿದರೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಖಾಸಗಿ ವಿವಿಗಳ ಆರಂಭಕ್ಕೆ ಅವಕಾಶ ನೀಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಗುಣಮಟ್ಟದ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಖಾಸಗಿ ವಿಶ್ವವಿದ್ಯಾಲಯಗಳು ಷರತ್ತುಗಳಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ನೀಡದೆ ಇದ್ದರೆ ಸರ್ಕಾರ ಮಧ್ಯಪ್ರವೇಶಿಸಿ ವಿ.ವಿ ಮಾನ್ಯತೆಯನ್ನು ರದ್ದುಪಡಿಸಲು ಅಧಿಕಾರ ಇರುತ್ತದೆ.

ಪ್ರವೇಶಾತಿ ಮತ್ತು ಸಿಬ್ಬಂದಿ ನೇಮಕ ವಿಚಾರದಲ್ಲಿ ಸರ್ಕಾರ ವಿಧಿಸುವ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಕನಿಷ್ಠ ಇಂತಿಷ್ಟು ಸೀಟುಗಳನ್ನು ಮೀಸಲಾತಿಗೆ ಅನುಗುಣವಾಗಿ ನೀಡಬೇಕು ಎಂದು ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗುತ್ತದೆ. ಅಲ್ಲದೆ ವಿ.ವಿ ಆರಂಭಿಸುವ ಮುನ್ನ ಕನಿಷ್ಠ 10ರಿಂದ 15 ಕೋಟಿ ರೂಶಾಶ್ವತ ದತ್ತಿನಿಧಿ ಇಡಬೇಕಾಗುತ್ತದೆ ಎಂದು ವಿವರಿಸಿದರು.

ವಿ.ವಿ ಆರಂಭಿಸಲು ಕನಿಷ್ಠ 25 ಎಕರೆ ಭೂಮಿ ಹೊಂದಿರಬೇಕಾಗುತ್ತದೆ. ಸಿಬ್ಬಂದಿ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಜೈವಿಕ ತಂತ್ರಜ್ಞಾನ, ಪರಿಸರ ಸಂರಕ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ತೊಡಗಿದರೆ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಅನುದಾನ ಪಡೆಯಲು ಖಾಸಗಿ ವಿ.ವಿ.ಗಳಿಗೆ ಅವಕಾಶ ಇರುತ್ತದೆ.

ಅರ್ಜಿ ಸಲ್ಲಿಕೆ: ಅಜೀಂ ಪ್ರೇಮ್‌ಜಿ ಮತ್ತು ಅಲಯನ್ಸ್ ಖಾಸಗಿ ವಿಶ್ವವಿದ್ಯಾಲಯಗಳಿಗೆ ಎರಡು ವರ್ಷದ ಹಿಂದೆ ಅನುಮತಿ ನೀಡಿದಾಗ ಪ್ರತ್ಯೇಕ ಕಾಯ್ದೆ ರೂಪಿಸಲಾಗಿತ್ತು. ಇದೇ ರೀತಿ ಖಾಸಗಿ ವಿ.ವಿ.ಗಳನ್ನು ಆರಂಭಿಸಲು 9 ಅರ್ಜಿಗಳು ಬಂದಿದ್ದು, ಇದರಲ್ಲಿ ಕಾರ್ಪೊರೇಟ್ ಸಂಸ್ಥೆಗಳೂ ಸೇರಿವೆ.

ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸುವುದಕ್ಕೆ ಸಾಮಾನ್ಯ ನಿಯಮಗಳನ್ನು ರೂಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮಾವಳಿಯ ಚೌಕಟ್ಟಿನಲ್ಲಿ ಯಾರು ಬೇಕಾದರೂ ವಿ.ವಿ ಸ್ಥಾಪಿಸಲು ಮುಂದೆ ಬರಬಹುದಾಗಿದೆ. ಸರ್ಕಾರದ ಮಾನದಂಡಕ್ಕೆ ಅನುಗುಣವಾಗಿ ಇದ್ದರೆ ಅನುಮತಿ ನೀಡಲಾಗುತ್ತದೆ.

ಸಾಮಾನ್ಯ ನಿಯಮಾವಳಿಯನ್ನು ರೂಪಿಸುತ್ತಿದ್ದರೂ, ಅಂತಿಮವಾಗಿ ವಿ.ವಿ ಸ್ಥಾಪನೆಗೆ ಒಪ್ಪಿಗೆ ನೀಡುವಾಗ ವಿಧಾನ ಮಂಡಲದಲ್ಲಿ ಮಸೂದೆಯನ್ನು ಮಂಡಿಸಿ ಕಾಯ್ದೆ ಮಾಡಲಾಗುತ್ತದೆ. 2005ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿ ಪ್ರಕಾರ ಪ್ರತಿಯೊಂದು ಖಾಸಗಿ ವಿ.ವಿಗೆ ಪ್ರತ್ಯೇಕ ಕಾಯ್ದೆ ರೂಪಿಸುವುದು ಅಗತ್ಯವಾಗಿದೆ ಎಂದರು.

ಛತ್ತೀಸ್‌ಗಡ ಸರ್ಕಾರ ಸಾಮಾನ್ಯ ನಿಯಮಾವಳಿ ಅಡಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಮುಂದಾದ ಪರಿಣಾಮ 100ಕ್ಕೂ ಅಧಿಕ ಖಾಸಗಿ ವಿ.ವಿ.ಗಳು ತಲೆ ಎತ್ತಿವೆ. ಬಹುತೇಕ ಕಡೆ ವಾಣಿಜ್ಯ ಸಂಕೀರ್ಣಗಳಲ್ಲೂ ವಿಶ್ವವಿದ್ಯಾಲಯಗಳು ಆರಂಭವಾದವು.

ಈ ರೀತಿ ಅನುಮತಿ ನೀಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದಾಗ ನ್ಯಾಯಾಲಯ ಎಲ್ಲ ಖಾಸಗಿ ವಿ.ವಿ.ಗಳನ್ನು ರದ್ದುಪಡಿಸಿತು. ಅಲ್ಲದೆ ಇನ್ನು ಮುಂದೆ ಪ್ರತಿಯೊಂದು ವಿ.ವಿ. ಆರಂಭಿಸಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಆದೇಶಿಸಿತ್ತು. ಹೀಗಾಗಿ ಸಾಮಾನ್ಯ ನಿಯಮಾವಳಿ ತಂದರೂ ಮುಂದೆ ಪ್ರತ್ಯೇಕ ಕಾಯ್ದೆ ರೂಪಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT