ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡೋ ಹೆಣ್ಣೋ!

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

`ಇನ್ನು ಮುಂದೆ ವಿವಿಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರು ಗಂಡೋ ಹೆಣ್ಣೋ ಎಂಬ ಬಗೆಗಿನ ಮಾಹಿತಿ ಇರುವ ವರದಿಯನ್ನು ಒದಗಿಸಬೇಕು. ಒಂದು ವೇಳೆ ನೀಡಿದ ದಾಖಲೆ ಸುಳ್ಳಾದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಅಲ್ಲದೆ ಕ್ರೀಡಾ ಕೂಟ ಸಂದರ್ಭದಲ್ಲಿ ತಜ್ಞರನ್ನೂ ನೇಮಿಸಲಾಗುವುದು. ಒಂದೊಮ್ಮೆ ಯಾವುದಾದರೂ ಕ್ರೀಡಾಳುಗಳ ಮೇಲೆ ದೂರು ಕೇಳಿಬಂದರೆ ಸ್ಥಳದಲ್ಲೇ ವಿಚಾರಣೆ ನಡೆಸುವ ವ್ಯವಸ್ಥೆಯನ್ನೂ ಮಾಡಲಾಗುವುದು~

-ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ (ವಿಟಿಯು) ಕುಲಪತಿ ಡಾ.ಎಚ್. ಮಹೇಶಪ್ಪ ಅವರು ಹೊರಡಿಸಿರುವ ಆದೇಶವಿದು. ಹವ್ಯಾಸ, ಗೀಳಷ್ಟೇ ಆಗಿದ್ದ ಕ್ರೀಡೆ ಇಂದು ನಗರದಲ್ಲಿ ಜೀವನಶೈಲಿಯೂ ಆಗುತ್ತಿದೆಯೇ ಎಂಬ ಜಿಜ್ಞಾಸೆಯ ಜೊತೆಗೆ ಮುಂದಾಲೋಚನೆಯಿಂದ ಕ್ರೀಡಾರ್ಥಿಗಳು `ಲಿಂಗ~ದ ವಿಷಯದಲ್ಲೂ ಸುಳ್ಳು ಹೇಳಿಕೊಳ್ಳಬಹುದೇ ಎಂಬ ಅನುಮಾನದಿಂದ ಇಂಥ ಆದೇಶ ಹೊಮ್ಮಿರುವ ಸಾಧ್ಯತೆಯೂ ಇದೆ.

ಕ್ರೀಡಾ ಇತಿಹಾಸದಲ್ಲಿ ಕಾಣುವ ಸಾಕಷ್ಟು ವಿವಾದಗಳಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್ ಪಿಂಕಿ  ಪ್ರಾಮಾಣಿಕ್ ವಿವಾದವೂ ಒಂದು. ಆದರೆ, ಇದು ವಿಭಿನ್ನ ಸ್ವರೂಪದ್ದು ಎನ್ನುವುದು ವಿಶೇಷ. ಈ ವಿವಾದ ಕ್ರೀಡಾಪಟುಗಳ ಅಭಿಮಾನವನ್ನು ಕೆದಕಿದ್ದಲ್ಲದೆ, ಹೊಸ ಬಿರುಗಾಳಿಯನ್ನು ಎಬ್ಬಿಸಿದೆ.

2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 4ಗಿ400ಮೀ. ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಜಯಿಸಿದ್ದ ಪಿಂಕಿ `ಅವಳಲ್ಲ ಅವನು~ ಎಂಬ ದೂರು ಕೇಳಿ ಬಂದ ನಂತರ ಸಾಕಷ್ಟು ವಿವಾದ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (ವಿಟಿಯು) ಕ್ರೀಡಾಪಟುಗಳು ಅಚ್ಚರಿಗೊಳ್ಳುವಂತಹ ಆದೇಶವೊಂದನ್ನು ಹೊರಡಿಸಿದೆ.

ವಿಶ್ವವಿದ್ಯಾಲಯ ಹೊರಡಿಸಿರುವ ಈ ಆದೇಶ ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಯುವ ಅಥ್ಲೀಟ್‌ಗಳು, ಅಂತರರಾಷ್ಟ್ರೀಯ ಸ್ಪರ್ಧಿಗಳು ವಿಭಿನ್ನ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಂಕಿ ಪ್ರಾಮಾಣಿಕ್ ಪ್ರಕರಣದ ನಂತರ ವಿಶ್ವವಿದ್ಯಾಲಯ ಹೊರಡಿಸಿದ ಆದೇಶಕ್ಕೆ ವಿಭಿನ್ನ ಅಭಿಪ್ರಾಯಗಳು ಮೂಡಿವೆ. ಆದರೆ ಪುರುಷರ ಸಾಮರ್ಥ್ಯದ ಮುಂದೆ ನಿಂತು ಹೋರಾಡುವಾಗ ನಾವೇ ಸೋಲುತ್ತೇವೆ. ಗೊತ್ತಿದ್ದೂ ಇಂಥ ಅನ್ಯಾಯಗಳ ಬಲೆಗೆ ಬೀಳುವುದಕ್ಕೆ ನಾವು ಸಿದ್ಧರಿಲ್ಲ ಎನ್ನುತ್ತಿದ್ದಾರೆ ಮಹಿಳಾ ಕ್ರೀಡಾಳುಗಳು.

ಲಿಂಗತ್ವ ಪರೀಕ್ಷೆ ಮಾಡಿಸಿಕೊಂಡು ಆ ಬಗ್ಗೆ ದಾಖಲಾತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಒಮ್ಮೆ ಲಿಂಗ ಸಾಬೀತುಪಡಿಸುವ ದಾಖಲಾತಿ ನೀಡಿದರೆ ಮತ್ತೆ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಯಾವುದೇ ಅಳುಕಿಲ್ಲದೆ ಕ್ರೀಡೆಯಲ್ಲಿ ಭಾಗವಹಿಸಬಹುದು.

ಹೀಗಾಗಿ ಪ್ರಾಥಮಿಕ ಹಂತದಿಂದಲೇ ಅವಶ್ಯಕವಿರುವ ಪರೀಕ್ಷೆಗಳನ್ನು ನಡೆಸಿದರೆ ಮುಂದೊಂದು ದಿನ ಸಾಧನೆಯ ಗರಿಯನ್ನು ಹೆಮ್ಮೆಯಿಂದಲೇ ಧರಿಸಬಹುದು. ಇಲ್ಲವಾದರೆ ಅಳುಕಿನ ಬೆನ್ನಲ್ಲೇ ಅವಮರ್ಯಾದೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಲಿಂಗತ್ವ ಪರೀಕ್ಷೆ ನಡೆಸುವುದೇ ಸರಿ ಎನ್ನುತ್ತಾರೆ ಕೆಲ ಕ್ರೀಡಾಳುಗಳು.

ಅವಶ್ಯಕತೆಯೇ ಇಲ್ಲ

`ವಿಶ್ವವಿದ್ಯಾಲಯ ಮಟ್ಟದಲ್ಲಿ ಇಂಥದ್ದೊಂದು ದೃಢೀಕರಣ ಪತ್ರ  ನೀಡುವ ಅವಶ್ಯಕತೆಯೇ ಇಲ್ಲ. ಒಂದು ವೇಳೆ ಕ್ರೀಡಾಳುವಿನ ಲಿಂಗತ್ವದ ಬಗ್ಗೆ ಸಂಶಯವಿದ್ದಲ್ಲಿ ಅಂಥವರನ್ನು ಪರೀಕ್ಷೆಗೆ ಗುರಿ ಮಾಡಬಹುದು. ಅದರ ಬದಲಾಗಿ ಎಲ್ಲೋ ನಡೆದ ಇಂಥ ಪ್ರಕರಣಕ್ಕಾಗಿ ಎಲ್ಲಾ ಕ್ರೀಡಾಳುಗಳು ಲಿಂಗತ್ವ ದಾಖಲಾತಿ ನೀಡಬೇಕು ಎಂಬುದು ಸರಿಯಲ್ಲ.

ಇದೊಂದು ರೀತಿಯಲ್ಲಿ ಮುಜುಗರದ ಜೊತೆಗೆ ಅವಮಾನವೂ ಹೌದು. ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಅನುಮಾನ ಮೂಡಿದರೆ, ಆಗ ಮಾಡಬಹುದು. ಆದರೆ ವಿಶ್ವವಿದ್ಯಾಲಯದ ಮಟ್ಟದಲ್ಲೇ ಈ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಬೇಕು ಎನ್ನುವುದು ಹಾಸ್ಯಾಸ್ಪದ. ಇದರಿಂದ ಕಾಲೇಜುಗಳಲ್ಲಿ ಕ್ರೀಡಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ~. 
-ಅಶ್ವಿನಿ ನಾಚಪ್ಪ,  ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್

ಸಮರ್ಥರಿಗೆ ಮನ್ನಣೆ

`ನನಗೆ ಈ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಕ್ರೀಡಾಳುಗಳು ಇಂಥ ಪರೀಕ್ಷೆ ಮಾಡಿಸಿಕೊಂಡು ದಾಖಲಾತಿ ಸಲ್ಲಿಸುವುದು ಸೂಕ್ತ ಎನಿಸುತ್ತದೆ. ದ್ವಿಲಿಂಗಿಗಳು ಅಥವಾ ಬೇರೆ ಬೇರೆ ರೀತಿಯ ಮಾದಕ ಔಷಧಗಳನ್ನು ಸೇವಿಸಿ ಯಶಸ್ಸು ಗಳಿಸಿದ ಸುದ್ದಿ ಸಾಕಷ್ಟು ಕೇಳಿದ್ದೇವೆ. ಇದರಿಂದ ನಿಜವಾಗಿ ಸಾಮರ್ಥ್ಯ ಇರುವ ಮಹಿಳಾ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಮೊದಲೇ ಅಗತ್ಯ ಪರೀಕ್ಷೆಗಳು ನಡೆದರೆ ಯಾವ ಅಳುಕಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು~
 -ತಿಪ್ಪವ್ವ ಸಣ್ಣಕ್ಕಿ, ಯುವ ಅಥ್ಲೀಟ್

 ಉತ್ಸಾಹ ಕುಗ್ಗಿಸುವ ಮಾರ್ಗ

`ವಿಶ್ವವಿದ್ಯಾಲಯ ಮಟ್ಟದಲ್ಲೇ ಲಿಂಗತ್ವ ದೃಢೀಕರಣ ಪತ್ರ ಸಲ್ಲಿಸುವಂತೆ ಕೇಳಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಉತ್ಸಾಹ ಕುಗ್ಗಿಸುವ ಮತ್ತೊಂದು ಮಾರ್ಗ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಗತ್ಯವೆನಿಸಿದರೆ ಕ್ರೀಡಾಳುಗಳಿಗೆ ಇಂಥದ್ದೊಂದು ಪರೀಕ್ಷೆ ಮಾಡಿಸಬಹುದು. ಆದರೆ ಕ್ರೀಡಾಳುಗಳ ಮನಸ್ಥಿತಿ ಕುಗ್ಗಿಸುವ ಇಂಥ ಪರೀಕ್ಷೆ ವಿ.ವಿ. ಮಟ್ಟದಲ್ಲಿ ಅವಶ್ಯಕತೆ ಇಲ್ಲ~
 -ಪವನ್ ಕುಮಾರ, ಎಂಜಿನಿಯರ್

ಸಮರ್ಥನೀಯ

`ವಿಶ್ವವಿದ್ಯಾಲಯದ ನಿಲುವು ಸಮರ್ಥನೀಯ. ಯಾವ ವಿದ್ಯಾರ್ಥಿ ಎಂಥ ಸಾಧನೆ ಮಾಡುತ್ತಾರೆ ಎಂದು ಊಹಿಸುವುದು ಅಸಾಧ್ಯ. ಹೀಗಾಗಿ ಮೊದಲಿನಿಂದಲೇ ಕ್ರೀಡೆ ಬಯಸುವ ಎಲ್ಲಾ ವಿಷಯದಲ್ಲಿ ಕ್ರೀಡಾಳುಗಳು ಸಮರ್ಥರಾಗಿದ್ದಾರೆ ಎಂಬ ವಿಷಯ ದೃಢಪಟ್ಟರೆ ಮುಂದಿನ ಅವರ ಕ್ರೀಡಾ ಬದುಕಿನಲ್ಲೂ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಹೀಗಾಗಿ  ಲಿಂಗತ್ವ ದೃಢೀಕರಣ ಪತ್ರ ನೀಡುವುದು ಉತ್ತಮ. ವಿದ್ಯಾರ್ಥಿಗಳೂ ಯಾವುದೇ ಅಳುಕಿಲ್ಲದೆ ಭಾಗವಹಿಸಬಹುದು~
 -ಆರ್. ರಾಘವೇಂದ್ರ, ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ

ಅನ್ಯಾಯ ತಪ್ಪುತ್ತದೆ

`ಕ್ರೀಡಾಳುಗಳು ಲಿಂಗತ್ವ ದೃಢೀಕರಣ ಪತ್ರವನ್ನು ಸಲ್ಲಿಸುವಂತೆ ವಿವಿ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ಮಹಿಳಾ ಕ್ರೀಡಾಳುಗಳಿಗೆ ಆಗುವ ಅನ್ಯಾಯ ತಪ್ಪುತ್ತದೆ. ಗಂಡುಮಕ್ಕಳ ಸಾಮರ್ಥ್ಯದ ಮುಂದೆ ಹೆಣ್ಣುಮಕ್ಕಳು ಭಾಗವಹಿಸಿ ಗೆಲ್ಲುವುದು ಕಷ್ಟ. ಹೀಗಾಗಿ ಪರೀಕ್ಷೆ ಮಾಡಿಸಿಕೊಂಡು ದಾಖಲಾತಿ ನೀಡುವುದು ಉತ್ತಮ. ಆದರೆ ಇದಕ್ಕೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಮುಜುಗರ ಹಾಗೂ ಪರೀಕ್ಷೆಗೆ ಸಹಕರಿಸುವುದೂ ಕಷ್ಟ. ಆದರೆ ಮುಂದೆ ಯಾವತ್ತೋ ಈ ಬಗ್ಗೆ ವಿವಾದ ಹುಟ್ಟಿ ಅವಮಾನವಾಗುವುದಕ್ಕಿಂತ ಲಿಂಗತ್ವ ಪರೀಕ್ಷೆ ಉತ್ತಮ~ 
 
-ಪ್ರಣೀತಾ ಪ್ರದೀಪ್, ಯುವ ಅಥ್ಲೀಟ್

ಕ್ರೀಡಾಳುಗಳನ್ನು ಪ್ರೋತ್ಸಾಹಿಸಿ

`ಲಿಂಗತ್ವ ದೃಢೀಕರಣ ಪತ್ರ ನೀಡುವುದು ವಿವಿ ಮಟ್ಟದಲ್ಲಿ ಅಗತ್ಯವಿಲ್ಲ. ಒಬ್ಬ ವ್ಯಕ್ತಿ ಹೆಣ್ಣೋ ಗಂಡೊ ಎಂಬುದು ನೋಡಿದ ಕೂಡಲೇ ಗೊತ್ತಾಗುತ್ತದೆ. ನಡವಳಿಕೆಯಿಂದಲೂ ಇದನ್ನು ಪತ್ತೆಹಚ್ಚಬಹುದು. ಅನುಮಾನ ಮೂಡಿದ ಸಂದರ್ಭದಲ್ಲಿ ಪರೀಕ್ಷೆಗೆ ಒಡ್ಡುವುದು ಸರಿ.

ವಿ.ವಿ.ಗಳು ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ನೀಡುವ ಬಗ್ಗೆ ಯೋಚಿಸಬೇಕೆ ಹೊರತು, ಅವರ ಲಿಂಗತ್ವದ ಬಗ್ಗೆ ಅಲ್ಲ. ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲವಾದ್ದರಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಕಾಲೇಜು ಇನ್ನಷ್ಟು ಕ್ರೀಡಾ ಪ್ರತಿಭೆಗಳನ್ನು ಕಳೆದುಕೊಳ್ಳುತ್ತದೆಯಷ್ಟೇ~.
-ಜಯವಂತಿ ಶ್ಯಾಮ್, ಬಾಸ್ಕೆಟ್‌ಬಾಲ್ ಕೋಚ್

ತಪ್ಪಿಲ್ಲ

 `ಕ್ರೀಡಾಳುಗಳ ಲಿಂಗತ್ವ ದಾಖಲಾತಿ ಕೇಳಿರುವುದು ತಪ್ಪಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವಾಗ ಯಾವ ಗೊಂದಲವೂ ಇರುವುದಿಲ್ಲ. ನಾವು ಸರಿ ಇದ್ದರೆ ಮುಂದೆ ಪಶ್ಚಾತ್ತಾಪ ಪಡುವ ಸಂದರ್ಭವೂ ಬರುವುದಿಲ್ಲ~
 -ರೋಷನ್ ಫೆರಾವೊ, ಬಾಡಿ ಬಿಲ್ಡರ್

ಲಿಂಗತ್ವ ಪರೀಕ್ಷೆ ಇತಿಹಾಸ

ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲುವ ಉದ್ದೇಶದಿಂದ ಕೆಲವು ಪುರುಷರು ಹಾಗೂ ದ್ವಿಲಿಂಗಿಗಳು ಮಹಿಳಾ ಅಭ್ಯರ್ಥಿಯಾಗಿ ಭಾಗವಹಿಸಲು ಪ್ರಾರಂಭಿಸಿದರು. ಈ ಬಗ್ಗೆ ದೂರುಗಳು ಕೇಳಿಬಂದವು. ಹೀಗಾಗಿ 1950ರಲ್ಲಿ ಬೆಲ್ಜಿಯಂನಲ್ಲಿ ನಡೆದ ಯುರೋಪಿಯನ್ ಚಾಂಪಿಯನ್ ಕ್ರೀಡಾಕೂಟಕ್ಕೂ ಮುಂಚೆ ಮಹಿಳಾ ಅಭ್ಯರ್ಥಿಗಳು ಲಿಂಗತ್ವ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ಗಳ ಒಕ್ಕೂಟ (ಐಎಎಎಫ್) ತಿಳಿಸಿತ್ತು.

ಆದರೆ ಲಿಂಗತ್ವ ಪರೀಕ್ಷೆ ಜಾರಿಗೊಳ್ಳಲು ಮತ್ತೆ 16 ವರ್ಷಗಳೇ ಬೇಕಾದವು. ಸೋವಿಯತ್ ಯೂನಿಯನ್ ಹಾಗೂ ಪೂರ್ವ ಯುರೋಪಿನಿಂದ ಆಯ್ಕೆಗೊಂಡ ಅಥ್ಲೀಟ್‌ಗಳಲ್ಲಿ ಹೆಚ್ಚಿನವರು ಪುರುಷರೇ ಇದ್ದ ಕಾರಣ 1966ರಲ್ಲಿ ಲಿಂಗತ್ವ ಪರೀಕ್ಷೆಯನ್ನು ಪ್ರಾರಂಭಿಸಲಾಯಿತು.
 

ಪರೀಕ್ಷಾ ವಿಧಾನ

ಸ್ತ್ರೀರೋಗ (ಗೈನೊಕಾಲಜಿಸ್ಟ್), ಅಂತಃಸ್ರಾವ (ಎಂಡೊಕ್ರೈನೊಲಾಜಿಸ್ಟ್), ಮನಃಶಾಸ್ತ್ರಜ್ಞ(ಸೈಕೊಲಾಜಿಸ್ಟ್) ಮುಂತಾದವರಿಂದ ಲಿಂಗತ್ವ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ರಕ್ತದ ಮಾದರಿ ಸಂಗ್ರಹಿಸಿ ಹಾರ್ಮೊನ್‌ಗಳು, ಜೀನ್ ಹಾಗೂ ಕ್ರೋಮೊಸೋಮ್‌ಗಳನ್ನು ಪರೀಕ್ಷಿಸಲಾಗುತ್ತದೆ.
 
ಈ ಪರೀಕ್ಷೆ ಅತ್ಯಂತ ದುಬಾರಿ. ಇದು ಕಷ್ಟದ ಪರೀಕ್ಷೆಯೂ ಹೌದು. ಅಗೌರವ ಎಂಬ ಭಾವನೆಯೂ ಹಲವರಲ್ಲಿದೆ. ಅಲ್ಲದೆ ಈ ಪರೀಕ್ಷೆ ಎಲ್ಲಾ ಸಂದರ್ಭದಲ್ಲಿ ನಿಖರವಾಗಿರುವುದಿಲ್ಲ ಎಂಬ ವಾದವೂ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT