ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡದಲ್ಲಿ ಭತ್ತಕ್ಕೆ ‘ಭಾರ’ವಾದ ನೀರು

Last Updated 20 ಡಿಸೆಂಬರ್ 2013, 5:54 IST
ಅಕ್ಷರ ಗಾತ್ರ

ಗಜೇಂದ್ರಗಡ: ಬರದ ನಾಡಿನ  ತಗ್ಗು ಪ್ರದೇಶದ ಭರವಸೆಯ ಬೆಳೆ ಎಂದೇ ಬಿಂಬಿತಗೊಂಡ ‘ಭತ್ತ’ಕ್ಕೆ ಇದೀಗ ನೀರು ‘ಭಾರ’ವಾಗಿ ಪರಿಣಮಿಸಿದೆ. ಪರಿಣಾಮ ‘ಭತ್ತ’ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಅತಿಯಾದ ತೇವಾಂಶವಿರುವ ಭೂಪ್ರದೇಶದಲ್ಲಿ ಅನ್ವೇಷನೆಗಾಗಿ ಬೆಳೆದ ‘ಭತ್ತ’ ಕಳೆದ ಮೂರು ದಶಕದಿಂದೀಚೆಗೆ ಬರದ ನಾಡು ಭರವಸೆಯ ಬೆಳೆಗಳಲ್ಲಿ ಒಂದಾಗಿದೆ. ಕೃಷಿಕರ ನಿರೀಕ್ಷೆಗೂ ಮೀರಿ ಬೆಳೆದು ಬೆಳೆಗಾರರ ಭರವಸೆಗಳನ್ನು ಇಮ್ಮಡಿಗೊಳಿಸಿರುವ  ಭರವಸೆಯ ಬೆಳೆಗಳಲ್ಲಿ ಭತ್ತ ಅಗ್ರಸ್ಥಾನ ಪಡೆದುಕೊಂಡು ಬೀಗುತ್ತಿತ್ತು. ಆದರೆ ಭತ್ತದ ಬೆಳೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬೆಳೆಗೆ ನೀರು ಭಾರವಾಗಿ ಪರಿಣಮಿಸಿರುವುದು ಬೆಳೆಗಾರರ ಜಂಘಾಬಲವನ್ನೇ ಉಡುಗಿಸಿದೆ!

ವಿಭಿನ್ನ ಭೂಪ್ರದೇಶವನ್ನು ಹೊಂದಿರುವ ರೋಣ ತಾಲ್ಲೂಕಿನಲ್ಲಿ 46,415 ಹೆಕ್ಟೇರ್‌ ಮಸಾರಿ (ಕೆಂಪು ಮಿಶ್ರಿತ ಜವಗು)  ಪ್ರದೇಶ, 92,475 ಹೆಕ್ಟೇರ್‌ ಎರಿ (ಕಪ್ಪು ಮಣ್ಣಿನ) ಪ್ರದೇಶವಿದೆ. ಎರಿ ಪ್ರದೇಶದಲ್ಲಿ ಜಲ ಮೂಲ ಇಲ್ಲದ ಕಾರಣ ತಲೆಮಾರುಗಳಿಂದಲೂ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಆದರೆ, ಮಸಾರಿ ಪ್ರದೇಶದಲ್ಲಿ ಜಲ ಹೇರಳವಾಗಿದೆ. ಹೀಗಾಗಿ ಸಾಂಪ್ರದಾಯಿಕ ಬೆಳೆಗಳಿಂದ ಹೊರ ಬಂದ ಕೆಲ ಪ್ರಗತಿ ಪರ ಕೃಷಿಕರು ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೊರ ಬಂದು ಅನ್ವೇಷನೆ ಮೂಲಕ ವಿನೂತನ ಬೆಳೆಗಳನ್ನು ಬೆಳದು ಯಶಸ್ಸು ಕಂಡಿದ್ದಾರೆ. ಅದರಲ್ಲಿ ಭತ್ತವೂ ಒಂದು.

ಅಲ್ಪ ಮಳೆಗೂ ಅತಿಯಾದ ತೇವಾಂಶವನ್ನು ಹೊಂದುವ ಮಸಾರಿ ಪ್ರದೇಶದಲ್ಲಿ ಜಲ ಮೂಲಕ್ಕೆ ಕೊರತೆ ಇಲ್ಲ. ಅತಿಯಾದ ತೇವಾಂಶವಿರುವ ಭೂಪ್ರದೇಶದಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ತೇವಾಂಶವಿರುವ ಪ್ರದೇಶ ಪ್ರತಿ ವರ್ಷವೂ ನಿರುಪಯುಕ್ತವಾಗಿಯೇ ಉಳಿದುಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಮೂರು ದಶಕದ ಹಿಂದೆ ಬೆರಳೆಣಿಕೆಯಷ್ಟು ಕೃಷಿಕರು ಭತ್ತ ಬೆಳೆದು ಯಶಸ್ಸು ಕಂಡರು. ಯಶಸ್ವಿ ಕೃಷಿಕರನ್ನು ಆದರ್ಶವಾಗಿಸಿಕೊಂಡ ಕೃಷಿಕರು ಭತ್ತ ಬೆಳೆಯಲು ಮುಂದಾದರು.

ಸದ್ಯ ತಾಲ್ಲೂಕಿನ ಅತಿ ತೇವಾಂಶ ಹೊಂದಿರುವ ಮಸಾರಿ ಪ್ರದೇಶಗಳಾದ ಕಾಲಕಾಲೇಶ್ವರ, ಲಕ್ಕಲಕಟ್ಟಿ, ದಿಂಡೂರ, ನಾಗೇಂದ್ರಗಡ, ಗೋಗೇರಿ, ನಾಗರಸಕೊಪ್ಪ, ಮ್ಯಾಕಲ್‌ಝರಿ, ಜಿಗೇರಿ, ಮಾಟರಂಗಿ, ವದೇಗೋಳ ಮುಂತಾದ ಗ್ರಾಮಗಳಲ್ಲಿ ಭತ್ತಕ್ಕೆ ಪ್ರಥಮ ಪ್ರಾಶಸ್ತ್ಯ ದೊರೆತಿದೆ. ಹೀಗಾಗಿಯೇ ಪ್ರಸಕ್ತ ವರ್ಷ 2,446 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕೃಷಿಕರ ನಿರೀಕ್ಷೆಯಂತೆ ಭತ್ತವೂ ಸಹ ಬೆಳೆಗಾರರಿಗೆ ನಿರಾಸೆ ಮೂಡಿಸದೆ ನಿರೀಕ್ಷೆಗೂ ಮೀರಿ ಫಸಲು ನೀಡುತ್ತಾ ಭರವಸೆಯ ಬೆಳೆಯಾಗಿ ಹೊರ ಹೊಮ್ಮಿದೆ.

ನೀರು ‘ಭಾರ’ವಾದಿದ್ದೇಕೆ?: ಅಲ್ಪ ಮಳೆಯಾದರೂ ಸಾಕಷ್ಟು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಸಾರಿ ಭೂ ಪ್ರದೇಶದಲ್ಲಿ ಪ್ರಸಕ್ತ ವರ್ಷ 477 ಮಿಲಿ ಮೀಟರ್‌ ಸುರಿದ ಪರಿಣಾಮ ಐತಿಹಾಸಿಕ ಬೆಟ್ಟ–ಗುಡ್ಡಗಳಿಂದ ಊಟಿ (ಜಲ) ಫುಟಿಯಲಾರಂಭಿಸಿದೆ. ಹೀಗಾಗಿ ತಗ್ಗು ಪ್ರದೇಶದಲ್ಲಿರುವ ಭತ್ತದ ಗದ್ದೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ಇಲ್ಲಿನ ಕೃಷಿಕರಿಗೆ ಭತ್ತದ ಬೆಳೆಯ ಬಗ್ಗೆ ಸಮಗ್ರ ಮಾಹಿತಿ ಇಲ್ಲದ ಕಾರಣ ಭತ್ತಕ್ಕೆ ನೀರು ಭಾರವಾಗುತ್ತದೆ ಎಂಬ ಕನಿಷ್ಠ ಪರಿಜ್ಞಾನವಿಲ್ಲದಿರುವುದೇ ಭತ್ತಕ್ಕೆ ನೀರು ಭಾರವಾಗಿ ಪರಿಣಮಿಸಲು ಪ್ರಮುಖ ಕಾರಣ ಎನ್ನುತ್ತಾರೆ ಕಳಕಪ್ಪ ಹೂಗಾರ. ಮಲ್ಲಯ್ಯ ಪೂಜಾರ.

‘ಸಮಗ್ರ ಮಾಹಿತಿ ಇಲ್ಲ’
ಭತ್ತಕ್ಕೆ ಅಗತ್ಯಕ್ಕಿಂತ ತೇವಾಂಶವಿದ್ದರೆ ಬೆಳೆಗೆ ಕುತ್ತು ಕಟ್ಟಿಟ್ಟ ಬುತ್ತಿ. ಇಲ್ಲಿನ ಕೃಷಿಕರಿಗೆ ಭತ್ತದ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಹೀಗಾಗಿ ಈ ವರ್ಷದ ಸುರಿದ ಸಮರ್ಪಕ ಮಳೆಯಿಂದ ತಗ್ಗು ಪ್ರದೇಶಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಲ ಹೊಂದಿರುವುದೇ ಭತ್ತಕ್ಕೆ ನೀರು ಭಾರವಾಗಿ ಪರಿಣಮಿಸಲು ಕಾರಣ. ಕೃಷಿಕರು ಭತ್ತದ ಗದ್ದೆಗಳಲ್ಲಿನ ನೀರನ್ನು ತೆರವುಗೊಳಿಸಿ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದು ಸೂಕ್ಯ.
ಎಸ್‌.ಎ.ಸೂಡಿಶೆಟ್ಟರ್‌, ತಾಲ್ಲೂಕು ಕೃಷಿ ನಿರ್ದೇಶಕರು ರೋಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT