ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಕರಿ ವಿರುದ್ಧ ಅಡ್ವಾಣಿ ಗುಟುರು

Last Updated 31 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ರಾಷ್ಟ್ರೀಯ ಕಾರ್ಯಕಾರಿಣಿ ಅಂತ್ಯದಲ್ಲಿ ನಡೆದ ಸಾರ್ವಜನಿಕ ಸಭೆಗೆ ಗೈರುಹಾಜರಾಗಿ ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬ ಸುಳಿವು ನೀಡಿದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಈಗ, ಮತ್ತೊಂದು ಹೆಜ್ಜೆ ಮುಂದೆ ಹೋಗಿ `ಬಿಜೆಪಿ ಬಗೆಗೆ ಜನರು ಹತಾಶರಾಗಿದ್ದು, ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ~ ಎಂದು ಅಭಿಪ್ರಾಯಪಟ್ಟಿದ್ದಾರೆ.

`ಬಿಎಸ್‌ಪಿ ನಾಯಕಿ ಮಾಯಾವತಿ ಹೊರಹಾಕಿದ ಭ್ರಷ್ಟ ಸಚಿವರಿಗೆ ಮಣೆ ಹಾಕಿದ್ದು; ಕರ್ನಾಟಕ ಹಾಗೂ ಜಾರ್ಖಂಡ್ ಬೆಳವಣಿಗೆಗಳನ್ನು ನಿಭಾಯಿಸಿದ ರೀತಿ ಬಿಜೆಪಿಯು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬೆಲೆ ತೆರುವಂತೆ ಮಾಡಿದೆ. ಇದರಿಂದ ನಾವು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಚಳವಳಿಗೂ ಹಿನ್ನಡೆ ಆಗಿದೆ~ ಎಂದು ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಗಡ್ಕರಿ ವಿರುದ್ಧ ವಾಗ್ದಾಳಿ: ಬಿಜೆಪಿ ಅಧ್ಯಕ್ಷ ಗಡ್ಕರಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಅಡ್ವಾಣಿ, ಕರ್ನಾಟಕ ಮತ್ತು ಜಾರ್ಖಂಡ್ ವಿದ್ಯಮಾನಗಳನ್ನು ವಿವರವಾಗಿ ಪ್ರಸ್ತಾಪಿಸಿಲ್ಲ. ಉತ್ತರ ಪ್ರದೇಶದಲ್ಲಿ ಬಾಬು ಸಿಂಗ್ ಕುಶವಾ ಅವರನ್ನು ಸೇರ್ಪಡೆ ಮಾಡಿಕೊಂಡ ಕ್ರಮವನ್ನು ಸೂಕ್ಷ್ಮವಾಗಿ ಪ್ರಶ್ನೆ ಮಾಡಿದ್ದು, ಎಲ್ಲೂ ಗಡ್ಕರಿ ಹೆಸರು ಪ್ರಸ್ತಾಪ ಮಾಡಿಲ್ಲ. `ಈ ವಿಷಯಗಳಲ್ಲಿ ನಾಯಕರು ನಡೆದುಕೊಂಡ ರೀತಿಯಿಂದ ಜನ ನಾವು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಚಳವಳಿಯನ್ನೇ ಅನುಮಾನದಿಂದ ನೋಡುತ್ತಿದ್ದಾರೆ~ ಎಂದು ವಿಶ್ಲೇಷಣೆ ಮಾಡಿದ್ದಾರೆ.

`ಹಗರಣಗಳ ಸುಳಿಯಲ್ಲಿ ಸಿಕ್ಕಿರುವ ಯುಪಿಎ ಸರ್ಕಾರದ ಮೇಲಿನ ಸಿಟ್ಟು- ಅಸಹನೆಯನ್ನು ಪಕ್ಷ ಸೂಕ್ತವಾಗಿ ಬಳಸಿಕೊಳ್ಳುವ ಕೆಲಸ ಮಾಡಿಲ್ಲ. ಇದರಿಂದ ನಮ್ಮ ಬಗೆಗೂ ಜನರಿಗೆ ಹತಾಶ ಭಾವನೆ ಬಂದಿದೆ. ಈ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ಮಾತನ್ನು ಪಕ್ಷದ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆಯಲ್ಲೇ ಹೇಳಿದ್ದೇನೆ. ಹಲವು ಹಗರಣಗಳ ಕಾರಣಕ್ಕಾಗಿ ಸರ್ಕಾರವನ್ನು ಟೀಕಿಸುತ್ತಿರುವ ಮಾಧ್ಯಮಗಳು, ಬಿಜೆಪಿ ಸಂದರ್ಭಕ್ಕೆ ಎದ್ದು ನಿಲ್ಲುತ್ತಿಲ್ಲ ಎಂದೂ ಬರೆಯುತ್ತಿವೆ. ಜನರ ಭಾವನೆ ಬಿಂಬಿಸುವ ಮಾಧ್ಯಮಗಳ ಮಾತಿನಲ್ಲಿ ಸತ್ಯವಿದೆ ಎಂಬುದು ನನ್ನ ಅಭಿಪ್ರಾಯವೂ ಆಗಿದೆ~ ಎಂದಿದ್ದಾರೆ.

`1984 ಬಿಜೆಪಿ ದೃಷ್ಟಿಯಿಂದ ಅತ್ಯಂತ ಕೆಟ್ಟ ಚುನಾವಣೆ. ಇಂದಿರಾ ಹತ್ಯೆಯ ಅನುಕಂಪ ರಾಜೀವ ಗಾಂಧಿ ಪರವಾದ ಅಲೆಯನ್ನೇ ಸೃಷ್ಟಿಸಿತ್ತು. ಆಗ ನಾನು ಪಕ್ಷದ ಅಧ್ಯಕ್ಷನಾಗಿದ್ದೆ. ಸ್ಪರ್ಧೆ ಮಾಡಿದ್ದು 229 ಸ್ಥಾನಗಳಿಗೆ ದಕ್ಕಿದ್ದು ಮಾತ್ರ ಎರಡು ಸ್ಥಾನ. 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ನಮಗೆ ಮೂರು ಸ್ಥಾನ ಬಂದಿತ್ತು. ಈಗ ದೊಡ್ಡ ಸಂಖ್ಯೆಯಲ್ಲಿ ನಮ್ಮ ಸಂಸದರು ಇದ್ದಾರೆ. ಎರಡೂ ಸದನಗಳಲ್ಲೂ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ನಾಯಕತ್ವದಲ್ಲಿ ಪಕ್ಷ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಇದಲ್ಲದೆ, 9 ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಇದರರ್ಥ ನಾವು ತಪ್ಪುಗಳನ್ನು ಮಾಡಬಹುದೆಂದಲ್ಲ. ನಮ್ಮ ಬಲ ನಾವು ಮಾಡುವ ತಪ್ಪುಗಳಿಗೆ ಸಮರ್ಥನೆ ಆಗಲಾರದು~ ಎಂದು ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿ ಕಳೆದ 24 ಹಾಗೂ 25ರಂದು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಅಡ್ವಾಣಿ ಕೊನೆಯಲ್ಲಿ ನಡೆದ ಸಾರ್ವಜನಿಕ ಸಭೆಯಿಂದ ದೂರ ಉಳಿದರು.  ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಹಿಂಬಾಲಿಸಿದರು. ಹಿರಿಯ ನಾಯಕ ಈಗ ಪಕ್ಷದ ನಾಯಕತ್ವದ ವಿರುದ್ಧ ದನಿ ಎತ್ತಿದ್ದಾರೆ.

ಅಡ್ವಾಣಿ ತಮ್ಮ ರಾಜಕೀಯ ಜೀವನದಲ್ಲಿ  ಹೀಗೆ ನಡೆದುಕೊಳ್ಳುತ್ತಿರುವುದು ಇದೇ ಮೊದಲು. ಬಿಜೆಪಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಗಡ್ಕರಿ ಅವರ ಪ್ರಾಬಲ್ಯ ಹೆಚ್ಚಿರುವುದು ಅಡ್ವಾಣಿ ಮತ್ತು ಸುಷ್ಮಾ ಅವರಿಗೆ ಕಿರಿಕಿರಿ ಉಂಟುಮಾಡಿದೆ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT