ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು

Last Updated 13 ಜನವರಿ 2012, 18:45 IST
ಅಕ್ಷರ ಗಾತ್ರ

ಕೆಂಗೇರಿ: `ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು. ಹಿರಿಯರಿಂದ ಕತೆ ಕೇಳುವ ಹವ್ಯಾಸ ಇದ್ದುದರಿಂದ ಅದಕ್ಕೆ ಬರವಣಿಗೆ ಮೂಲಕ ರೂಪ ಕೊಡಲು ಪ್ರಯತ್ನಿಸಿದೆ. ಅದೇ ಬರವಣಿಗೆ ನಂತರದ ದಿನಗಳಲ್ಲಿ ನನಗೆ ಅಚ್ಚುಮೆಚ್ಚಿನ ಕೆಲಸವಾಯಿತು~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ನಾಗದೇವನಹಳ್ಳಿಯ ವಿ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ `ಮಕ್ಕಳೊಂದಿಗೆ ಕಂಬಾರ~ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ನನ್ನ ವಿದ್ಯಾರ್ಥಿ ಜೀವನದಲ್ಲಿ ಓದಬೇಕೆಂಬ ಮನಸ್ಸು ಇರಲಿಲ್ಲ. ದನ ಕಾಯುತ್ತಿದ್ದ ನನ್ನನ್ನು ಮನೆಯವರು ಕೈ ಕಾಲು ಕಟ್ಟಿ ಹೊತ್ತುಕೊಂಡು ಹೋಗಿ ಶಾಲೆಗೆ ಬಿಡುತ್ತಿದ್ದರು. ನಂತರ ಶಿಕ್ಷಕರ ಭಯದಿಂದ ನಿತ್ಯ ಶಾಲೆಗೆ ಹೋಗಲು ಆರಂಭಿಸಿದೆ. ಕತೆ, ಹಾಡು, ಬಯಲಾಟ, ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದುವುದರಿಂದ ನನ್ನ ಆಸಕ್ತಿ ಕೆರಳಿ ಉತ್ತಮ ಬರಹಗಾರನಾಗಿ ರೂಪುಗೊಳ್ಳಲು ಸಹಕಾರಿಯಾಯಿತು~ ಎಂದು ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

`ನಮ್ಮ ಅನುಭವಗಳಿಗೆ ಸ್ಪಷ್ಟವಾದ ಭಾಷೆ ಕೊಡುವುದೇ ಸಾಹಿತ್ಯ. ಆದರೆ ಅಂತಹ ಬರವಣಿಗೆ ಓದುಗನ ನೆನಪಿನಲ್ಲಿ ಉಳಿಯುವಂತಿರಬೇಕು. ಅದರ ವಿಸ್ತಾರದ ಬಗ್ಗೆ ಹೆಚ್ಚು ಹೇಳಲಾರೆ. ಅದು ಅವರವರ ಅನುಭವಗಳಿಗೆ ತಕ್ಕಂತೆ ವಿಸ್ತರಿಸಿಕೊಳ್ಳುವಂಥಾದ್ದು~ ಎಂದು ಸಾಹಿತ್ಯ ಹೇಗಿರಬೇಕೆಂಬ ಮಕ್ಕಳ ಪ್ರಶ್ನೆಗೆ ಉತ್ತರಿಸಿದರು.
`ನಾನು ಊರು ಬಿಟ್ಟು ಬೆಂಗಳೂರಿಗೆ ಬಂದಾಗ ಬಿ.ಎಸ್ಸಿಗೆ ಸೇರುತ್ತೇನೆಂದು ಹೇಳಿ ಬಂದು ಇಲ್ಲಿ ಬಿ.ಎ.ಗೆ ಸೇರಿದೆ.
 
ಆರು ತಿಂಗಳ ಕಾಲ ನನ್ನ ಕುಟುಂಬದವರಿಗೆ ವಿಷಯ ತಿಳಿಸಿರಲಿಲ್ಲ. ಆನಂತರ ಮನೆಯವರಿಗೆ ವಿಷಯ ಗೊತ್ತಾಯಿತು. ವಿದ್ಯಾಭ್ಯಾಸ ಮುಂದುವರಿದಿದ್ದರಿಂದ ನನ್ನನ್ನು ವಾಪಸ್ ಊರಿಗೆ ಕರೆಸಿಕೊಳ್ಳಲಿಲ್ಲ. ಮೊದಲೇ ಏನಾದರೂ ನಾನು ಬಿ.ಎ ಸೇರಿರುವ ವಿಷಯ ತಿಳಿಸಿದ್ದರೆ ನನಗೆ ಅಧ್ಯಾಪಕನಾಗುವ ಅವಕಾಶವೇ ತಪ್ಪಿ ಹೋಗುತ್ತಿತ್ತು. ಬಹುಶಃ ನನ್ನ ಸಾಹಿತ್ಯ ಕೃಷಿ ಕೂಡ ಈ ಪ್ರಮಾಣದಲ್ಲಿ ಆಗುತ್ತಿರಲಿಲ್ಲ ಎನಿಸುತ್ತದೆ~ ಎಂದರು. ಮಕ್ಕಳು ಕೇಳಿದ ಅನೇಕ ಪ್ರಶ್ನೆಗಳಿಗೆ ಕಂಬಾರರು ಹಸನ್ಮುಖಿಯಾಗಿ ಉತ್ತರಿಸಿದರು.

ವಸತಿ ಸಚಿವ ವಿ.ಸೋಮಣ್ಣ, ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ವಿ. ಸೋಮಣ್ಣ, ಮುಖ್ಯ ಶಿಕ್ಷಕಿ ದಮಯಂತಿ, ಪಾಲಿಕೆ ಸದಸ್ಯರಾದ ಉಮೇಶ ಶೆಟ್ಟಿ, ರೂಪಾ ದೇವಿ, ರವೀಂದ್ರ, ಶಿಕ್ಷಣ ಇಲಾಖೆಯ ಅಧಿಕಾರಿ ಕೆಂಪಯ್ಯ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT