ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ: 60 ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು

ಶಾಂತಿಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ಮಾಹಿತಿ
Last Updated 5 ಸೆಪ್ಟೆಂಬರ್ 2013, 7:04 IST
ಅಕ್ಷರ ಗಾತ್ರ

ದಾವಣಗೆರೆ: `ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದ ಸೂಕ್ಷ್ಮ ಪ್ರದೇಶದ 60 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವರ್ಷ ನಗರದ 38 ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಪ್ರಸಕ್ತ ವರ್ಷ 60 ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಪಾಲಿಕೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಶಾಂತಿ- ಸೌಹಾರ್ದದಿಂದ ಹಬ್ಬ ಆಚರಣೆ ಮಾಡಬೇಕು. ಶಾಂತಿ ಕದಡುವ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರದೇಶಗಳಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ. ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ.

ಪೊಲೀಸ್ ಕಾಯ್ದೆ ಅನ್ವಯವೂ ನಮಗೆ ಅಧಿಕಾರವಿದೆ. ಕಿರಿದಾದ ರಸ್ತೆ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡುತ್ತೇವೆ. ಬಲವಂತದಿಂದ ಚಂದಾ ವಸೂಲಿ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿಯಲ್ಲಿ ಬಲವಂತದಿಂದ ಚಂದಾ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಮಾಹಿತಿ ನೀಡಿದರು.

ಮೂರ್ತಿ ಪ್ರತಿಷ್ಠಾಪನೆ ಜಾಗದಲ್ಲಿ ಬೆಸ್ಕಾಂನಿಂದ ಅನುಮತಿ ಪಡೆದು, ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಬೇಕು. ಶಾರ್ಟ್ ಸರ್ಕಿಟ್‌ನಿಂದ ಯಾರಾದರೂ ಮೃತಪಟ್ಟರೆ ಮಂಡಳಿಯವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ವಿಸರ್ಜನಾ ಪೂರ್ವ ಮೆರವಣಿಗೆಯ ಮಾರ್ಗ ತಿಳಿಸಬೇಕು. ಮೆರವಣಿಗೆಯ ವೇಳೆ `ಲೌಡ್ ಸ್ಪೀಕರ್' ನಿಷೇಧ ಕುರಿತು ಸಾರ್ವಜನಕರಿಂದ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆಯಲ್ಲಿ ಕಚೇರಿ
ಜಿಲ್ಲಾಧಿಕಾರಿ ಎಸ್.ಟಿ.ಅಂಜನ್‌ಕುಮಾರ್ ಮಾತನಾಡಿ, ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಅಲೆದಾಟ ತಪ್ಪಿಸಲು ಪಾಲಿಕೆ ಆವರಣದಲ್ಲಿ ಕಚೇರಿ ತೆರೆಯಲಾಗುವುದು. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು, ಸಂಚಾರಕ್ಕೆ ಅಡ್ಡಿಪಡಿಸುವುದು, ಪರಿಸರ ಮಾಲಿನ್ಯ ಮಾಡಬಾರದು ಎಂದು ಸಲಹೆ ನೀಡಿದರು.

ಸೆ.5ರಂದು ಬೆಳಿಗ್ಗೆ ನಗರದ 10 ವಾರ್ಡ್‌ಗಳಲ್ಲಿ ನಗರ ಪ್ರದಕ್ಷಿಣೆ ಮಾಡಲಾಗುವುದು. ಪಾಲಿಕೆ ಆಯುಕ್ತರು, ನಗರಾಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್ ಪಾಲ್ಗೊಳ್ಳಲಿದ್ದಾರೆ. ಆಗ ನಿಮ್ಮ ಪ್ರದೇಶದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ಸಭೆಯಲ್ಲಿ ಎ.ಸಿ. ನಾಗರಾಜ್, ತಹಶೀಲ್ದಾರ್ ಮಂಜುನಾಥ್ ಬಳ್ಳಾರಿ, ನಗರ ಡಿವೈಎಸ್ಪಿ ಶಿವಕುಮಾರ್ ಗುಣಾರೆ, ಪಾಲಿಕೆ ಆಯುಕ್ತ ಎಚ್. ಬಿ.ನಾರಾಯಣಪ್ಪ, ಅಬಕಾರಿ ಉಪ ಆಯುಕ್ತರಾದ ರೂಪಾ ಹಾಜರಿದ್ದರು.

ಮುಸ್ಲಿಂ ಸಮುದಾಯದ ಮುಖಂಡ ಸೈಯದ್ ಸೈಫುಲ್ಲಾ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ರಾಜು, ಎಚ್.ಕೆ.ರಾಮಚಂದ್ರಪ್ಪ, ಮಂಜುನಾಥ್ ಮೊದಲಾದವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT