ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲದ ಗೂಡಾದ ನಗರಸಭೆ ಸಾಮಾನ್ಯ ಸಭೆ

Last Updated 19 ಡಿಸೆಂಬರ್ 2012, 10:14 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗದ್ದಲ ಗಲಾಟೆ, ಏಕವಚನಗಳ ಬಳಕೆ, ಸದಸ್ಯರೊಬ್ಬರ ಧರಣಿ, ತಳ್ಳಾಟ, ನೂಕಾಟ, ಕೈಕೈ ಮಿಲಾಸುವ ಹಂತಕ್ಕೂ ಹೋದ ಪ್ರಸಂಗಳಿಗೆ ಮಂಗಳವಾರ ನಗರಸಭೆ ವಿಶೇಷ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಹತ್ತು ವಿಷಯಗಳಿಗೆ ಒಪ್ಪಿಗೆ ಪಡೆಯಲು ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಂಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಮಾನ್ಯ ಸಭೆ ನಡೆಯಿತು.

ನಗರದ ವ್ಯಾಪ್ತಿಯಲ್ಲಿರುವ ಗುಡಿಸಲು ವಾಸಿಗಳು, ಖರಾಬು ಜಾಗದಲ್ಲಿ ವಾಸಮಾಡುತ್ತಿರುವ ಜನರಿಗೆ ಹಕ್ಕು ಪತ್ರ ವಿತರಣೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ನಗರದ ನಿವಾಸಿಗಳಿಗೆ  ಗುಂಡಿಯಾಗಿರುವ ಜಾಗ ನೀಡಿದರೆ ಮನೆ ಕಟ್ಟಿಕೊಳ್ಳಲು ಸಾಧ್ಯವೆ? ಎಂದು ಸದಸ್ಯ ಅಕ್ಮಲ್ ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಸದಸ್ಯೆ ಲೀಲಾ ಸಂಬಂಧಿಕರಿಗೆ ಜಾಗ ನೀಡಿದರೆ ಅದು ಗುಂಡಿಯಾಗಿದ್ದರೂ ಪರವಾಗಿಲ್ಲ ಮೌನವಹಿಸುತ್ತಾರೆ. ಸಾರ್ವಜನಿಕರಿಗೆ ಜಾಗ ಕೊಡಲು ಮುಂದಾದರೆ ಅದು ಸರಿಯಾಗಿರುವುದಿಲ್ಲ ಎಂಬ ಕೊಂಕು ಮಾತು ಸಲ್ಲದು ಎಂದರು.

ಕೆಲವರು ನಗರಸಭೆ ಆಸ್ತಿ ಕಬಳಿಸಲು ಮುಂದಾಗುತ್ತಾರೆಯೇ ಹೊರತು ಅದನ್ನು ಉಳಿಸಲು ಮುಂದಾಗುವುದಿಲ್ಲ ಎಂದು ಲೀಲಾ ಕೆಣಕಿದರು. ಆಗ ಅಕ್ಮಲ್ ಮತ್ತು ಲೀಲಾ ನಡುವೆ ವಾಗ್ವಾದ ನಡೆಯಿತು. ಇಬ್ಬರನ್ನು ಸುಮ್ಮನಿರಿಸಲು ನಡೆಸಿದ ಪ್ರಯತ್ನ ಫಲಿಸದಿದ್ದಾಗ ಅಧ್ಯಕ್ಷರು, ಇಬ್ಬರನ್ನು ಸಭೆಯಿಂದ ಹೊರಗೆ ಹಾಕಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ವೈಯಕ್ತಿಕ ವಿಷಯ ಬೇಡ. ಸಾರ್ವಜನಿಕರ ಹಿತದೃಷ್ಟಿಯಿಂದ ಆಯಾ ವಾರ್ಡಿನ ಸದಸ್ಯರು ಗುಡಿಸಲು ವಾಸಿಗಳ ಪಟ್ಟಿ ನೀಡಿದರೆ ಅದನ್ನು ಸರ್ಕಾರಕ್ಕೆ ಹಕ್ಕುಪತ್ರ ನೀಡಲು ಕಳುಹಿಸಿಕೊಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.

10ರಿಂದ 15 ವರ್ಷಗಳಿಂದ ಕೆಲವರು ವಾಸವಾಗಿದ್ದಾರೆ. ಹಕ್ಕುಪತ್ರ ಕೊಡುವಾಗ ಕೆಲವು ಮಾನದಂಡ ಅನುಸರಿಸುವುದು ಸೂಕ್ತ ಎಂದು ಸದಸ್ಯರಾದ ಶ್ರೀಧರ ಉರಾಳ್, ಚಂದ್ರೇಗೌಡ ಸಲಹೆ ನೀಡಿದರು.

ಹಿರೇಕೊಳಲೆಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಾಗ ಹೊಸಪೈಪ್‌ಲೈನ್ ಅಳವಡಿಸುವಾಗ ಹಳೆಯ ಪೈಪುಗಳ ಹರಾಜು ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ಪೈಪ್‌ಗಳು ಹರಾಜು ನಡೆದಿಲ್ಲ. ಇದರಿಂದ ನಗರಸಭೆಗೆ 1ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಕಾಂಗ್ರೆಸ್ ಸದಸ್ಯ ಶ್ರೀಧರ್ ಉರಾಳ್ ಆರೋಪಿಸಿದರು.

ಸರ್ಕಾರ ನೇರವಾಗಿ ಕೆಲವನ್ನು ನಗರ ನೀರು ಸರಬರಾಜು ಮಂಡಳಿಗೆ ನೀಡಿದೆ. ಅವರು ನೀಡಿದ ಪೈಪ್‌ಗಳನ್ನು ಫಿಲ್ಡರ್ ಬೆಡ್ಡಿನಲ್ಲಿಟ್ಟು ಹರಾಜು ಮಾಡಲಾಗಿದೆ ಎಂದು ಎಂಜಿನಿಯರ್‌ಗಳು ಸ್ಪಷ್ಟಪಡಿಸಿದರು. ಇದರಿಂದ ಸಮಾಧಾನಗೊಳ್ಳದ ಉರಾಳ್ ಸುಮಾರು 26 ಸಾವಿರ ಅಡಿ ಪೈಪ್‌ಗಳನ್ನು ನಗರಸಭೆಗೆ ನೀಡಲಾಗಿದೆ. ಅದರಲ್ಲಿ 5484 ಅಡಿ ಪೈಪ್ ಹರಾಜು ಮಾಡಲಾಗಿದೆ. ಉಳಿದ ಪೈಪು ಎಲ್ಲಿ? 8 ಲಕ್ಷ ರೂಪಾಯಿ ಬೆಲೆಯ 10 ಟನ್ ಸೀಸ ಇಲ್ಲ. ಉಳಿದ ಪೈಪು, ಸೀಸ ಎಲ್ಲಿವೆ? ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಸಮಜಾಯಿಷಿ ನೀಡಿದ ಅಧ್ಯಕ್ಷರ ಉತ್ತರ ಸಮರ್ಪಕವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ, ಅಧ್ಯಕ್ಷರ  ಮೇಜಿನ ಮುಂಭಾಗ ಧರಣಿ ನಡೆಸಿದರು.

ಈಗಾಗಲೇ ತೆಗೆದಿರುವ ಹಳೆಯ ಪೈಪುಗಳು ಅಲ್ಲಿಯೇ ಇದ್ದರೆ   ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇಲ್ಲದಿದ್ದರೆ ನೀವು ರಾಜಕೀಯದಿಂದ ನಿವೃತ್ತಿಯಾಗುತ್ತೀರಾ? ಎಂದು ಸವಾಲು ಹಾಕಿದರು.

ಸರಿಯಾದ ಉತ್ತರ ನೀಡದಿರುವುದನ್ನು ಇದರಲ್ಲಿ ನಿಮ್ಮ ಕೈವಾಡ ಇದೆಯೇ? ಎಂದು ಉರಾಳ್ ಹೇಳಿದ ಮಾತು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತು. ತಕ್ಷಣ ಎದ್ದು ನಿಂತ ಪುಷ್ಪರಾಜ್ ಮಾತನಾಡಲು ಮುಂದಾಗುತ್ತಿದ್ದಂತೆ, ದೇವಿಪ್ರಸಾದ್ ಮತ್ತು ಪುಷ್ಪರಾಜ್ ನಡುವೆ ಮಾತಿನ ಚಕಮಕಿ ನಡೆಯಿತು ತಳ್ಳಾಟ ನೂಕಾಟ ನಡೆಸಿದರು. ಉಳಿದ ಸದಸ್ಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಗರಸಭೆಯಲ್ಲಿ ನಡೆದಿರುವ 1 ಕೋಟಿ ರೂಪಾಯಿ ಅವ್ಯವಹಾರ ತನಿಖೆಗೆ ಲೋಕಾಯುಕ್ತಕ್ಕೆ ಹೋಗುವುದಾಗಿ ಉರಾಳ್ ತಿಳಿಸಿದರು.
ಯಾವ ವಿಷಯಕ್ಕೂ ಸರಿಯಾದ ಉತ್ತರ ನೀಡದ ಅಧ್ಯಕ್ಷರು ಕುಳಿತುಕೊಳ್ಳಲು ಹೇಳುತ್ತಾರೆ. ಸ್ಪಷ್ಟ ಉತ್ತರ ನೀಡಿದ್ದರೆ ಈ ವಿಷಯ ಇಷ್ಟು ಚರ್ಚೆ ಆಗುತ್ತಿರಲಿಲ್ಲ ಎಂದು ಸುರೇಖಾ ಹೇಳಿದರು. ತುರ್ತು ಸಭೆ ನಡೆಸಲು ಅಧ್ಯಕ್ಷರು ಮುಂದಾಗಬೇಕು. ಕೆ.ಯು.ಡಬ್ಲ್ಯೂ.ಎಸ್ ಇಲಾಖೆ ಎಂಜಿನಿಯರ್ ಅವರನ್ನು ಸಭೆಗೆ ಕರೆಸಬೇಕೆಂದು ಉರಾಳ್ ಪಟ್ಟುಹಿಡಿದರು.

ಐವರ ಸಮಿತಿ ರಚಿಸಿ ತನಿಖೆ ನಡೆಸಿ, ವರದಿ ತರಿಸಿಕೊಳ್ಳುವಂತೆ ಆಡಳಿತ ಪಕ್ಷದ ಸದಸ್ಯ ಎಚ್.ಡಿ.ತಮ್ಮ ಯ್ಯ ಸಲಹೆ ನೀಡಿದರು.
ಸಾಧ್ಯವಾದರೆ ತನಿಖೆಗೆ ನಡೆಸಲಾಗುವುದು ಎಂದು ತಿಳಿಸಿ ಮುಂದಾಗುವ ಚರ್ಚೆಗೆ ವಿರಾಮ ಹಾಕಿದರು.
ಉಪಾಧ್ಯಕ್ಷ ಲಕ್ಷ್ಮಮ್ಮ, ಆಯುಕ್ತ ಪ್ರಭಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT