ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಬಾಲಕಿಯರ ಕಾಲೇಜು

Last Updated 6 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಮಾಲೂರು: ಭದ್ರತೆ, ಗ್ರಂಥಾಲಯ, ಕಂಪ್ಯೂಟರ್ ಹಾಗೂ ಉತ್ತಮ ಪರಿಸರದಿಂದ ಕೂಡಿರುವ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಇತರೆ ಸರ್ಕಾರಿ ಕಾಲೇಜುಗಳಿಗೆ ಸಾಟಿ ಇಲ್ಲದಂತೆ ಗಮನ ಸೆಳೆಯುತ್ತಿದೆ.

2003-04ನೇ ಸಾಲಿನಲ್ಲಿ ಪಟ್ಟಣದ ಹೃದಯಭಾಗದಲ್ಲಿ ಕೇವಲ 2 ಬೋಧನಾ ಕೊಠಡಿಗಳಲ್ಲಿ 197 ವಿದ್ಯಾರ್ಥಿನಿಯರಿಂದ ಆರಂಭವಾದ ಈ ಕಾಲೇಜಿನಲ್ಲಿ ಇಂದು  1200ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. 
ಮಾಲೂರು ತಾಲ್ಲೂಕಷ್ಟೇ ಅಲ್ಲದೆ ಕೋಲಾರ ತಾಲ್ಲೂಕಿನ ವಕ್ಕಲೇರಿ, ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ, ದೇವನಗುಂದಿ ಇನ್ನು ಇತರೆ ಸ್ಥಳಗಳಿಂದ ವಿದ್ಯಾರ್ಥಿಗಳು ಇಲ್ಲಿ ದಾಖಲಾಗಿದ್ದಾರೆ.
 
ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ 40 ಮಂದಿ ದಾಖಲಾಗಿದ್ದರೆ, ಕಲಾ ವಿಭಾಗದಲ್ಲಿ 250, ವಾಣಿಜ್ಯ ವಿಭಾಗದಲ್ಲಿ 230 ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ಈಚಿನ ದಿನಗಳಲ್ಲಿ ಕಲಾ ವಿಭಾಗಕ್ಕಿಂತ ವಾಣಿಜ್ಯ ವಿಭಾಗಕ್ಕೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ವಿಶೇಷ.

ದಾನಿಗಳು ಮತ್ತು ಸರ್ಕಾರದ ಅನುದಾನಗಳಿಂದ 13 ಸುಸಜ್ಜಿತವಾದ ಬೋಧನಾ ಕೊಠಡಿಗಳು ನಿರ್ಮಾಣವಾಗಿವೆ. ರಂಗಮಂದಿರ, ಶೌಚಾಲಯಗಳಿವೆ. ಕುಡಿಯುವ ನೀರಿನ ಸರಬರಾಜಿಗಾಗಿ 3 ತೊಟ್ಟಿ ನಿರ್ಮಿಸಲಾಗಿದೆ.


ಪ್ರತಿ ಬೋಧನಾ ಕೊಠಡಿಗೆ ಫ್ಯಾನು, ವಿದ್ಯಾರ್ಥಿಗಳಿಗೆ ಡೆಸ್ಕ್‌ಗಳನ್ನು ಅಳವಡಿಸಲಾಗಿದೆ. ಕಂಪ್ಯೂಟರ್ ಕಲಿಕೆಗೆ ಉತ್ತಮ ಸೌಲಭ್ಯವಿದೆ. ಉತ್ತಮ ಗ್ರಂಥಾಲಯವೂ ಇದೆ. ಇವೆಲ್ಲಕ್ಕೂ ಹಸಿರು ಹೊದಿಕೆ ಇದೆ. ಕಾಲೇಜು ಆವರಣದಲ್ಲಿ ಸಾಕಷ್ಟು ಮರಗಿಡಗಳನ್ನು ಬೆಳಸಿ ಉತ್ತಮ ಪರಿಸರವನ್ನು ಸೃಷ್ಟಿಸಲಾಗಿದೆ.

ಗುಂಪು ಅಧ್ಯಯನ ವಿಶೇಷ ಬೋಧನಾ ತರಗತಿಗಳು  ಹಾಗೂ ಪರಿಹಾರ ಬೋಧನೆ ನಡೆಸಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಇಲ್ಲಿನ ಶಿಕ್ಷಕವೃಂದ ಯಶಸ್ವಿಯಾಗಿರುವುದು ಮತ್ತೊಂದು ಗಮನಾರ್ಹ ಸಂಗತಿ.
2011-12ರಲ್ಲಿ 1131 ವಿದ್ಯಾರ್ಥಿನಿಯರು (ಕಲಾ ವಾಣಿಜ್ಯ ಮತ್ತು ವಿಜ್ಞಾನ) ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ದಾಖಲಾಗಿದ್ದು, ಶೇ. 81 ರಷ್ಟು ಫಲಿತಾಂಶ ದೊರೆದಿದೆ. ಕಾಲೇಜಿನಲ್ಲಿ ಉತ್ತಮ ಕಲಿಕಾ ಪರಿಸರ ಹೊಂದಿದ್ದು, ಯಾವುದೇ ಪ್ರತಿಷ್ಠಿತ ಕಾಲೇಜಿಗಿಂತ ಕಡಿಮೆ ಇಲ್ಲ ಎಂಬಂತಿದೆ. ಪ್ರಸಕ್ತ ವರ್ಷದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ತರಗತಿಗಳಿಗೆ 1200 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ.

ಸಮವಸ್ತ್ರ ಮತ್ತು ಬ್ಯಾಡ್ಜ್ ಧರಿಸಿ ಬರುವುದನ್ನು ಪರಿಚಯಿಸಲಾಗಿದೆ ಎನ್ನುತ್ತಾರೆ ಪ್ರಾಚಾರ್ಯ ಕೆ.ವೆಂಕಟೇಶಪ್ಪ.
ಒಮ್ಮೆ ಕಾಲೇಜಿನ ಒಳಗೆ ಪ್ರವೇಶಿಸಿದರೆ  ಕಾಲೇಜು ಅವಧಿ ಮುಗಿಯವರೆವಿಗೂ ಹೊರಗೆ ಹೋಗುವಂತಿಲ್ಲ. ವಿದ್ಯಾರ್ಥಿನಿಯರ ಕುಂದು-ಕೊರತೆಗಳ ಪರಾಮರ್ಶೆಗೆ ಮಹಿಳಾ ಘಟಕ ಸ್ಥಾಪಿಸಲಾಗಿದೆ. ಇನ್‌ಫೋಸಿಸ್, ಜಿಂದಾಲ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಕಾರದಿಂದ ಉತ್ತಮ ಗ್ರಂಥಾಲಯ ವ್ಯವಸ್ಥೆ ಇದೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಕಾಲೇಜಿನ ಉತ್ತಮ ವಾತಾವರಣ ಹಾಗೂ ಫಲಿತಾಂಶಕ್ಕೆ ಬೋಧಕ ಮತ್ತು ಬೋಧಕೇತರರ ಸಹಕಾರದಿಂದ ಕಾಲೇಜಿಗೆ ಶೇ 81ರ ಫಲಿತಾಂಶ ದೊರಕಿದೆ. ಪ್ರಸಕ್ತ ವರ್ಷದಲ್ಲಿ ಶೇ  90ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆಯಲು ಆರಂಭದಿಂದಲೇ ಸಿದ್ದತೆ ನಡೆಸಲಾಗುತ್ತಿದೆ. ಕಾಲೇಜು ಅಭಿವೃದ್ಧಿ ಸಮಿತಿ ಸಹಕಾರವನ್ನು ಮರೆಯುವಂತಿಲ್ಲ ಎಂದು ಅವರು ವಿವರಿಸಿದರು.
-ವಿ.ರಾಜಗೋಪಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT