ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಂ ಮಸಾಲ!

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಯಾರು ಯಾರನ್ನು ಸಹಿಸಿಕೊಳ್ಳುವುದು ಎಂಬ ಪ್ರಶ್ನೆ ಎದ್ದಿತ್ತು ಅಲ್ಲಿ. `ನಿರ್ದೇಶಕ ಎಂ.ಎಸ್.ರಮೇಶ್ ಅವರು ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ಸಹಿಸಿಕೊಂಡರೋ ಅಥವಾ ಇವರೇ ಅವರನ್ನು ಸಹಿಸಿಕೊಂಡರೋ~ ಎಂಬ ಜಿಜ್ಞಾಸೆ ಕಾಡಿದ್ದು ಗೀತರಚನೆಕಾರ ಕವಿರಾಜ್ ಅವರಿಗೆ.

ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದು ನಿರ್ಮಾಪಕ ಯೋಗೀಶ್ ಹುಣಸೂರು. `ಯಾರು ಯಾರನ್ನು ಸಹಿಸಿಕೊಂಡರೋ ಗೊತ್ತಿಲ್ಲ, ಇಬ್ಬರನ್ನೂ ನಾನು ಸಹಿಸಿಕೊಂಡಿದ್ದೇನೆ~ ಎಂದರು.

ನಿರ್ಮಾಪಕರಾಗಿ ಅದು ಅವರ ಕರ್ತವ್ಯ ಕೂಡ! ಹೀಗೆ ಸಹಿಸಿಕೊಳ್ಳುವಿಕೆ ಸಾಧ್ಯವಾಗದೇ ಇದ್ದರೆ ಯೋಗೀಶ್ `ವಿಲನ್~ ಚಿತ್ರ ಧ್ವನಿ ಸುರಳಿ ಬಿಡುಗಡೆ ಸಮಾರಂಭದವರೆಗೂ ತಲುಪುತ್ತಿರಲಿಲ್ಲವೇನೊ. ಗುರುಕಿರಣ್ ಅವರಿಗೆ ಒಂದೇ ವಾರದಲ್ಲಿ ತಮ್ಮ ನಿರ್ದೇಶನದ ಎರಡು ಚಿತ್ರಗಳ ಧ್ವನಿ ಸುರುಳಿ ಬಿಡುಗಡೆಯಾದ ಸಂಭ್ರಮ. ಎಂ.ಎಸ್.ರಮೇಶ್ ನಿರ್ದೇಶನ ಆರಂಭಿಸಿದ ದಿನದಿಂದಲೂ ಈ ಜೋಡಿ ಅಗಲಿಲ್ಲವಂತೆ. ನಿರಂತರ ಹತ್ತು ಚಿತ್ರಗಳವರೆಗೆ ಇವರಿಬ್ಬರ ಜುಗಲ್‌ಬಂದಿ ಸಾಗಿ ಬಂದಿದೆ.

`ಚಿತ್ರದಲ್ಲಿ ನಾನು ಅಂಡರ್‌ವರ್ಲ್ಡ್ ಡಾನ್. ಆದರೂ ಗನ್ನು ಲಾಂಗು ಹಿಡಿದಿಲ್ಲ~ ಎಂದು ನಟ ಆದಿತ್ಯ ತಮ್ಮ ಪಾತ್ರವನ್ನು ಬಣ್ಣಿಸಿದರು. ರಮೇಶ್, ಹುಣಸೂರು, ಗುರುಕಿರಣ್ ಅವರನ್ನು ಚಿತ್ರದ ಆಧಾರ ಸ್ತಂಭಗಳೆಂದು ಹೇಳಿದ ಆದಿತ್ಯ, ನಟಿ ರಾಗಿಣಿ ಸಿನಿಮಾದಲ್ಲಿ ಮಂಡ್ಯ ಬೆಣ್ಣೆಯಂತೆ ಮುದ್ದಾಗಿ ಕಾಣಿಸುತ್ತಾರೆ ಎಂದು ಹೊಗಳಿದರು.

ರಾಗಿಣಿ ಚಿತ್ರದಲ್ಲಿ ರೇಡಿಯೊ ಜಾಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ಹಿರಿಯ, ಯುವ, ಅನುಭವಿ ನಿರ್ಮಾಪಕರ ಜತೆ ಕೆಲಸ ಮಾಡಿದ್ದೇನೆ. ಯೋಗೀಶ್ ಅವರಷ್ಟು ಸಹಕರಿಸಿದ, ಚಿತ್ರದಲ್ಲಿ ತನ್ಮಯರಾಗಿ ಇರುತ್ತಿದ್ದ ನಿರ್ಮಾಪಕರನ್ನು ಕಂಡಿಲ್ಲ~ ಎನ್ನುವುದು ಅವರ ಅನುಭವ. ಅವರ ಪ್ರಕಾರ `ವಿಲನ್~ನ ಎರಡು ಹಾಡುಗಳು ಹಿಟ್ ಆಗುತ್ತವಂತೆ, ಅದರಲ್ಲೂ `ಗರಂ ಮಸಾಲ~ ಗೀತೆ ಸೂಪರ್ ಹಿಟ್ ಆಗುತ್ತದಂತೆ.

ಹೈಹೀಲ್ಡ್ ತೊಟ್ಟರೆ ಹತ್ತಿರ ಹತ್ತಿರ ಆರಡಿ ಮುಟ್ಟುವ ರಾಗಿಣಿ, `ಸುದೀಪ್, ಉಪೇಂದ್ರ ನಂತರ `ಎತ್ತರದ~ ನಟ ಆದಿತ್ಯ ಅವರೊಂದಿಗೆ ನಟಿಸುತ್ತಿದ್ದೇನೆ~ ಎಂದು ಪಟ್ಟಿ ನೀಡಿದರು. `ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿಯೂ ಫಲಿಸಿದೆ. ಪ್ರೇಕ್ಷಕರಿಗೆ  ಈ ಜೋಡಿ ಇಷ್ಟವಾಗಲಿದೆ~ ಎಂದರು.

ಎಂದಿನಂತೆ ಮುಗುಮ್ಮಾಗಿ ಮಾತನಾಡಿದವರು ನಿರ್ದೇಶಕ ಎಂ.ಎಸ್.ರಮೇಶ್. `ವಿಲನ್~ ಜನವರಿಯಲ್ಲಿ ಬೆಳ್ಳಿತೆರೆಗೆ ಬರಲಿದ್ದಾನೆ ಎಂದು ಮಾಹಿತಿ ನೀಡಿದರು. ಎಲ್ಲರೂ ಸಂಭ್ರಮದಲ್ಲಿದ್ದರೆ ಅವರು ಮಾತ್ರ `ಕಂಠೀರವ ಸ್ಟುಡಿಯೋದಲ್ಲಿ ಚಿತ್ರಗಳು ತಯಾರಾಗಬೇಕು~ ಎಂದು ಗಂಭೀರ ಚಿಂತನೆ ಹರಿಯಬಿಟ್ಟರು.

ಇದಕ್ಕೆ ಸನಿಹದಲ್ಲಿ ಕಂಠೀರವ ಸ್ಟುಡಿಯೋದ ಅಧ್ಯಕ್ಷ ರುದ್ರೇಶ್ ಕುಳಿತದ್ದು ಮಾತ್ರವೇ ಕಾರಣವಾಗಿರಲಿಲ್ಲ; ಸ್ಟುಡಿಯೋವನ್ನು ಉಳಿಸಿ ಬೆಳೆಸಬೇಕು ಎಂಬ ಕಾಳಜಿಯೂ ಸೇರಿಕೊಂಡಿತ್ತು. `ಈಗಾಗಲೇ ರುದ್ರೇಶ್ ಅವರು ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಕೇಳಿದ್ದಾರೆ. ಅನೇಕ ಸುಧಾರಣೆಗಳು ಕಂಡು ಬಂದಿವೆ~ ಎಂದೂ ಸೇರಿಸಿದರು.

ಚಿತ್ರಕ್ಕೆ ಹಣ ಒದಗಿಸಿದ ಕೆ.ವಿ.ನಾಗೇಶ್‌ಕುಮಾರ್ ಅವರನ್ನು ಎಡಬಿಡದೆ ಸ್ಮರಿಸಿದರು ನಿರ್ಮಾಪಕ ಯೋಗಿಶ್. ಹಣ ಪಡೆಯುವ ಪ್ರಕ್ರಿಯೆ ಕುರಿತು ಸಾಕಷ್ಟು ಜೋಕುಗಳನ್ನೂ ಕತ್ತರಿಸಿದರು.

ಈ ಮಾತುಗಳ ಮಧ್ಯೆ ನಾಗೇಶ್ ಅವರಿಗೆ ನಗುವ ಕೆಲಸ. ಆನಂದ್ ಆಡಿಯೊದ ಶ್ಯಾಂ ಚಿತ್ರದ ಕುರಿತು ಎರಡು ಮಾತುಗಳನ್ನಾಡಿದರು. ಹೆಚ್ಚು ಮಾತನಾಡಿದ್ದಕ್ಕೆ ಕವಿರಾಜ್ ಅವರಿಂದ ಶ್ಯಾಂಗೆ ಧನ್ಯವಾದಗಳ ಮಹಾಪೂರವೇ ಹರಿಯಿತು. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT