ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ಬಜಾನಾ!

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೂ ಅಲ್ಲಿ ಜನ ಮಾತ್ರ ಒಂದಿಂಚೂ ಕದಲುತ್ತಿರಲಿಲ್ಲ. ಕಾರ್ಯಕ್ರಮಕ್ಕೆ ಮೊದಲೇ ಸಿಳ್ಳೆ ಚಪ್ಪಾಳೆಗಳು.

 ಕುಳಿತುಕೊಳ್ಳಲು ಜಾಗ ಸಿಗುತ್ತದೋ ಇಲ್ಲವೋ ಎಂಬ ಅನುಮಾನದಿಂದ ಸಿಕ್ಕ ಜಾಗದಲ್ಲಿಯೇ ತಾನು ನಿಂತು ಗೆಳತಿಗೆ ಕುಳಿತುಕೊಳ್ಳಲು ಪ್ರೇಮಿಯೊಬ್ಬ ಜಾಗ ಮಾಡಿಕೊಟ್ಟ.

ಇನ್ನು ಕೆಲವರು ಮಾಲ್ ಮೇಲಿನ ಮಹಡಿಯಲ್ಲಿ ನಿಂತು ತಾವಿಲ್ಲಿ ಇದ್ದೇವೆ ಎಂಬುದನ್ನು ಕೈಎತ್ತಿ ತೋರಿಸುತ್ತಿದ್ದರು.  ಕಾರ್ಯಕ್ರಮಕ್ಕೂ ಮೊದಲೇ ನಟ ಸುದೀಪ್ ಸದ್ದೇ ಇಲ್ಲದೇ ಬಂದು ಕುಳಿತಿದ್ದರು. ಚಿಕ್ಕದೊಂದು ಜುಟ್ಟು ಹಾಕಿ ಹೇರ್‌ಸ್ಟೈಲನ್ನು ಕೊಂಚ ಬದಲಾಯಿಸಿದ್ದ ಸುದೀಪ್ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದರು.  

ಅಂದು ಗರುಡಾ ಮಾಲ್‌ನಲ್ಲಿ ಜನಜಂಗುಳಿಯೇ ಸೇರಿತ್ತು. ಭಾನುವಾರದ ಸಂಜೆಯನ್ನು ಕಳೆಯಲು ಬಂದಿದ್ದ ಮಂದಿಗೆ ಅಲ್ಲಿ ಸಂಗೀತದ ರಸಗವಳ ಮ್ಲ್ಲೆಲುವ ಅವಕಾಶ.
`ಕರುನಾಡೆ ಕೈ ಚಾಚಿದೆ ನೋಡೆ....~ ಎಂದು ರಾಜೇಶ್ ಕೃಷ್ಣನ್ ಹಾಡುತ್ತಾ ಬಂದಾಗ ಜನ ನಿಂತಲ್ಲಿಯೇ ಹೆಜ್ಜೆ ಹಾಕಲು ಶುರು ಮಾಡಿದರು.

ರಾಷ್ಟ್ರಧ್ವಜವನ್ನು ಹಿಡಿದು `ವಂದೇ ಮಾತರಂ~ ಹಾಡಿಗೆ ಹೆಜ್ಜೆ ಹಾಕುತ್ತಿದ್ದವರನ್ನು ನೋಡಿ ಅರೆಕ್ಷಣ ಅಲ್ಲಿ ಮೌನ ಮನೆ ಮಾಡಿತ್ತು. ಆ ಹಾಡು ಅದರ ಜೋಶ್ ಮೈ ನವಿರೇಳಿಸುವಂತಿತ್ತು. ಒಂದಾದ ನಂತರ ಒಂದು ಹಾಡಿನ ಲಹರಿ ಅಲ್ಲಿ ಹರಿದು ಬಂದಾಗ ಜನ ಹುಚ್ಚೆದ್ದು ಕುಣಿಯಲು ಶುರು ಮಾಡಿದರು.

ಅಂದು ಗರುಡಾ ಮಾಲ್‌ನಲ್ಲಿ ಪ್ರತಿಭಾನ್ವೇಷಣೆಯ `ವಾಯ್ಸ ಆಫ್ ಬೆಂಗಳೂರು ಸೀಜನ್-6~ ಕಾರ್ಯಕ್ರಮ. ಇದರ ರಾಯಭಾರಿ ರಾಜೇಶ್ ಕೃಷ್ಣನ್ ಜತೆಗೆ ಹಿಂದಿನ ವಾಯ್ಸ ಆಫ್ ಬೆಂಗಳೂರು ಸ್ಪರ್ಧೆಯ ವಿಜೇತರಾದ ಪ್ರಗ್ಯಾ, ನಿತಿನ್, ಸುವರ್ಣಾ, ವ್ಯಾಸರಾಜ್ ಅವರು ಹಾಡಿಗೆ ದನಿಗೂಡಿಸಿದರು.

ಐದು ವರ್ಷಗಳಲ್ಲಿ ಯಶಸ್ವಿಯಾಗಿ ನಡೆದಿರುವ ಈ ಕಾರ್ಯಕ್ರಮ ನಗರದಾದ್ಯಂತ ಸಂಗೀತದ ಅಲೆಯನ್ನೇ ಎಬ್ಬಿಸಿದೆ. ಸುಮಾರು 30,000 ಗಾಯಕರು ಈ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಇದು ನಗರದ ಪ್ರತಿಭೆಗಳಿಗೆಂದೇ ಮೀಸಲಾಗಿರುವ ರಿಯಾಲಿಟಿ ಶೋ.

ಕಾರ್ಯಕ್ರಮದ ನಡುವೆಯೂ ಕ್ಯಾಮೆರಾ ಕಣ್ಣುಗಳು ಕ್ಲಿಕ್ಕಿಸುತ್ತಿದ್ದುದು ಸುದೀಪ್ ಫೋಟೊ. ಇನ್ನೇನು ಸುದೀಪ್ ವೇದಿಕೆಗೆ ಬಂದು ಮಾತನಾಡಲ್ದ್ದಿದಾರೆ ಎಂದು ಹೇಳಿ, ಅವರು ಕುಳಿತಲ್ಲಿ ಕಣ್ಣಾಯಿಸಿದಾಗ ಕಂಡಿದ್ದು ಖಾಲಿ ಕುರ್ಚಿ! ಯಾವ ಮಾಯದಲ್ಲಿ ಅವರು ಅಲ್ಲಿಂದ ಜಾರಿಕೊಂಡು, ವೇದಿಕೆ ಬಳಿ ಬಂದರು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.

`ಕೋರಾ ಕಾಗಜ್ ಥಾ ಯೇ ಮನ್ ಮೇರಾ...~ ರಾಜೇಶ್ ಹಾಡು ಆ ಮುಸ್ಸಂಜೆಯ ಸುರಿವ ಮಳೆಯಲ್ಲಿ ನಿಧಾನವಾಗಿ ಕೇಳಿ ಬಂದಾಗ ಮನಸ್ಸು ಮುದಗೊಂಡಿತ್ತು. ಹಾಡು ಕೇಳಿದ ಮನಸ್ಸಿಗೆ ಮತ್ತೊಂದು ಖುಷಿ ನೀಡಿದ್ದು ಫ್ಯಾಷನ್ ಶೋ. ಅದೇ ವೇದಿಕೆಯಲ್ಲಿ ಹೀಲ್ಡ್ಸ್ ತೊಟ್ಟು ಬೆಕ್ಕಿನ ನಡಿಗೆಯಲ್ಲಿ ಬಂದ ಹುಡುಗಿಯರಿಗೆ ಸಿಕ್ಕ ಚಪ್ಪಾಳೆಗಳು ಹುಡುಗರಿಗೆ ಮಾತ್ರ ಸಿಗಲಿಲ್ಲ.

ಮೈಗಂಟುವ ಬಟ್ಟೆ ತೊಟ್ಟು ರ‌್ಯಾಂಪ್ ವಾಕ್ ಮಾಡಿದ ರೂಪದರ್ಶಿಯರು ಸಲ್ವಾರ್ ಹಾಕಿ ಸಾಯಿಗೋಲ್ಡ್ ಪ್ಯಾಲೇಸ್‌ನ ಆಭರಣ ಧರಿಸಿ ಬಂದಾಗ  ಎಲ್ಲೆಡೆಯಿಂದ ಪ್ರಶಂಸೆ ಕೇಳಿಬಂದಿತ್ತು.

ಹಾಡಿನ ಮಳೆ ಮತ್ತೆ ಸುರಿಯಲಾರಂಭಿಸಿತು. `ಹಮ್ ಕಾಲೇ ಹೈ ತೋ ಕ್ಯಾ ಹುವಾ...~, `ಕೈಕೆ ಪಾನ್ ಬನಾರಸ್‌ವಾಲಾ~ ಹಾಡಿಗೆ ಶಿಳ್ಳೆಗಳ ಸುರಿಮಳೆ ಸಿಕ್ಕಿತು. `ಏಕ್ ಚತುರ್ ನಾರ್~ ಹಾಡಿನ ಜುಗಲ್‌ಬಂದಿ ಮಾತ್ರ ಅಲ್ಲಿದ್ದವರನ್ನೆಲ್ಲಾ ನಗೆಗಡಲಿನಲ್ಲಿ ತೇಲಿಸಿತ್ತು.

ಮೊಗದಲ್ಲಿ ನಗೆ ಮಿಂಚಿ ಮರೆಯಾಗುವ ಮೊದಲೇ ನಟಿ ನೀತು, `ಮನೆ ತನ್ಕ ಬಾರೆ ಮನೆ ತನ್ಕ...~ ಹಾಡಿಗೆ  ಕುಣಿದು ಕುಪ್ಪಳಿಸಿದರು. ದಪ್ಪಗಿದ್ದರೂ ಅವರು ಕುಣಿದ ಶೈಲಿಗೆ ಹುಡುಗರ ಕೇಕೆಯೂ ಸಾಥ್ ನೀಡಿತು.

ಕಾರ್ಯಕ್ರಮ ಮುಗಿಯಿತು ಎಂದು ಹೇಳಿದರೂ ಖಾಲಿಯಾದ ವೇದಿಕೆಯಲ್ಲಿ ತನ್ನ ಅವಳಿ ಮಕ್ಕಳನ್ನು ನಿಲ್ಲಿಸಿ ತಾಯಿಯೊಬ್ಬರು ಫೋಟೊ ಕ್ಲಿಕ್ಕಿಸುತ್ತಿದ್ದರು. ಹೊರಗೆ ಮಳೆನಿಂತ ಸೂಚನೆ. ಮನಸ್ಸಿನಲ್ಲಿಯೇ `ಕೋರಾ ಕಾಗಜ್ ಥಾ ಯೇ ಮನ್ ಮೇರಾ~ ಹಾಡು ಗುನುಗುನಿಸುತ್ತಾ ಮನಸ್ಸಿನೊಂದಿಗೆ ಕಾಲುಗಳೂ ಸಾಗಿದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT