ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನಪ್ರಿಯ ಗಣಪ

Last Updated 23 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಗಣೇಶ ಗೀತಪ್ರಿಯ. ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ ಹೀಗೆ ಲಲಿತಕಲೆಗಳ ಎಲ್ಲ ಪ್ರಕಾರಗಳಲ್ಲೂ ಗಣೇಶನದ್ದೇ ಗುಣಗಾನ, ವೈಭವ. ಗಣೇಶನಿಗೂ ಸಂಗೀತಕ್ಕೂ ಅನನ್ಯ ನಂಟು, ಬಿಡಿಸಲಾರದ ಮೋಹ. ದಾಸರು, ವಾಗ್ಗೇಯಕಾರರು, ಕೃತಿ ರಚನೆಕಾರರು ಎಲ್ಲರಿಗೂ ಗಣೇಶನ ಮೇಲೇ ಕಣ್ಣು. ಹೀಗಾಗಿ ದೇವರನಾಮ, ಕೀರ್ತನೆ, ಪದ, ಉಗಾಭೋಗ, ಭಜನೆ, ಯಕ್ಷಗಾನ, ಹಾಡು ಎಲ್ಲಿ ನೋಡಿದರೂ ಮೊದಲು ನೆನೆಯುವುದು ಗಣೇಶನನ್ನೇ.

ಹಬ್ಬ ಬಂತೆಂದರೆ ಸಾಕು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಹಲವು ರಾಗಗಳಿಂದ ಕೂಡಿದ ಗಣೇಶ ಪಂಚರತ್ನ..

`ಮುದಾಕರತ್ತ ಮೋದಕಂ; ಸದಾ ವಿಮುಕ್ತಿ ಸಾಧಕಂ
ಕಲಾಧರಾ ವತಂಸಕಂ; ವಿಲಾಸಿ ಲೋಕ ರಕ್ಷಕಂ...~

ಎಲ್ಲ ದೇವಸ್ಥಾನಗಳಲ್ಲೂ ಮನೆಮನೆಗಳಲ್ಲೂ ಮೊಳಗುತ್ತದೆ. ಶ್ರೇಷ್ಠ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ನಾಟ ರಾಗದ ಕೃತಿ `ಮಹಾಗಣಪತಿಂ ಮನಸಾಸ್ಮರಾಮಿ..~ ಬಹಳ ಜನಪ್ರಿಯ. ಇಲ್ಲಿ ಗಣೇಶನ ವರ್ಣನೆ ವರ್ಣನಾತೀತ. ಸಂಗೀತಪ್ರಿಯರು ಎಂದಿಗೂ ಇಷ್ಟಪಡುವ ಕೃತಿ `ಸಿದ್ಧಿವಿನಾಯಕಂ..~ ಮೇಳಕರ್ತ ರಾಗ ಷಣ್ಮುಖಪ್ರಿಯದಲ್ಲಿದ್ದು, ಕೇಳಿದರೆ ಭಕ್ತಿಯ ಪುಳಕ ಉಂಟಾಗುತ್ತದೆ. ಹಂಸಧ್ವನಿ ರಾಗದ `ವಾತಾಪಿ ಗಣಪತಿಂ ಭಜೆ...~ ಅಂತೂ ಲೋಕ ಖ್ಯಾತಿ. ಗೌಳ ರಾಗದ `ಪ್ರಣಮಾಮ್ಯಹಂ ಶ್ರೀ ಗೌರೀಸುತ..~ ಕೂಡ ಬಹಳ ಜನಪ್ರಿಯ ಕೃತಿಯೇ.

ಮುತ್ತಯ್ಯ ಭಾಗವತರು ಗಣಪನನ್ನು ಹೊಗಳಿರುವುದು `ಶಕ್ತಿ ಗಣಪತಿಂ ಭಜೇ ಹಂ, ರಕ್ತಿ ಭಕ್ತಿ ಭಾವ ಸಹಿತ ನಿಜ ಗಾನ ಕಲಾರಾಧಕಂ...~ ಎಂದು. ಪುರಂದರದಾಸರು ಅದೆಷ್ಟೋ ರಚನೆಗಳಲ್ಲಿ ಗಣೇಶನನ್ನು ವರ್ಣಿಸಿದ್ದಾರೆ. ನಾಟ ರಾಗದ `ವಂದಿಸುವುದಾದಿಯಲಿ ಗಣನಾಥನಾ..~ ಕೃತಿ ಭಕ್ತಿ ಭಾವದ ಪ್ರತೀಕ. ಹಂಸಧ್ವನಿ ರಾಗದ `ಗಜವದನಾ ಬೇಡುವೆ ಗೌರೀ ತನಯಾ...~ ಕೇಳದವರಿಲ್ಲ. ಪ್ರಾರ್ಥನಾ ಗೀತೆಯಾಗಿ ಇದು ಬಹಳ ಜನಪ್ರಿಯ.
ಭೂಪಾಲಿ ರಾಗದ ಸುಮಧುರ ಬಂದೀಶ್ `ಜೈ ಗಣಪತಿ ಗಜವದನ ವಿನಾಯಕ..~ ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯಲ್ಲಿ ಕೇಳಿದರೆ ಎಂಥವರಿಗೂ ಗಣೇಶನ ಮೇಲೆ ಭಕ್ತಿ, ಪ್ರೀತಿ ಉಕ್ಕಿ ಹರಿಯುತ್ತದೆ.

ಕರ್ನಾಟಕ ಸಂಗೀತದ ಬಾಲಪಾಠದಲ್ಲಿ ಮಲಹರಿ ರಾಗದ ಪಿಳ್ಳಾರಿ ಗೀತೆ `ಲಂಬೋದರ ಲಕುಮಿಕರ...~ ಸಂಗೀತ ವಿದ್ಯಾರ್ಥಿಗಳು ಆರಂಭ ಮಾಡುವುದು ಗಣೇಶನನ್ನು ನೆನೆಸಿಕೊಂಡೇ. ಹಳ್ಳಿಗಳಲ್ಲಿ ಸಂಜೆ ಹೊತ್ತು `ಗಜಮುಖನೆ ಗಣಪತಿಯೆ ನಿನಗೆ ವಂದನೆ... ನಂಬಿದವರ ಬಾಳಿನ ಕಲ್ಪತರು ನೀನೆ~ ಎಂದು ಮೈಕ್‌ನಲ್ಲಿ ಮೊಳಗುತ್ತಿದೆ ಎಂದರೆ ಏನೋ ಕಾರ್ಯಕ್ರಮ ಇದೆ ಎಂದೇ ಅರ್ಥ. ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭ ಆರಂಭವಾಗುವುದು ಗಣೇಶನ ಸ್ತುತಿಯೊಂದಿಗೇ ಎನ್ನುವಷ್ಟು ಇದೆ ಗಣೇಶನ ಪ್ರಾಬಲ್ಯ. 

ಯಕ್ಷಗಾನದಲ್ಲಿ ಚೆಂಡೆ ಮದ್ದಳೆ ಜಾಗಟೆ ನಾದದೊಂದಿಗೆ ಭಾಗವತರು ಆರಂಭಿಸುವುದು `ಗಜಮುಖದವಗೆ ಗಣಪಗೆ...~ ಎಂದೇ. ನೃತ್ಯದಲ್ಲೂ ಗಣಪನದೇ ಪಾರುಪತ್ಯ. ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಮೇಲೆ ಹೆಜ್ಜೆ ಹಾಕುವುದು ಗಣೇಶನ ಕೃತಿಯೊಂದಿಗೇ. ಹೀಗಾಗಿ ಗಣಪ ನಾಟ್ಯಪ್ರಿಯನೂ ಹೌದು.

ಚಿತ್ರಕಲೆಯಲ್ಲಿ ಕೂಡ ಗಣೇಶನ ನಾನಾ ರೂಪ ವ್ಯಕ್ತವಾಗುತ್ತಲೇ ಇರುತ್ತದೆ. ಸಂಗೀತ ವಾದ್ಯಗಳನ್ನು ಹಿಡಿದ ಗಣಪನ ಚಿತ್ರ ಸಂಪುಟ ನೋಡುವುದೇ ಒಂದು ಚೆಂದ. ಕೊಳಲು ಹಿಡಿದ ಗಣಪ, ವೀಣಾವಾದಕ ಗಣಪ, ತಬಲಾ ಗಣಪ, ಪಿಟೀಲು ಗಣಪ, ಸ್ಯಾಕ್ಸೊಫೋನ್ ಗಣೇಶ.. ಎಷ್ಟೊಂದು ಅವತಾರ ಈ ಗಣೇಶನದ್ದು. ಬಹುಶಃ ದೇವಾನುದೇವತೆಗಳಲ್ಲಿ ಅಗ್ರಪಟ್ಟ ಸಿಕ್ಕಿದ್ದು ಗಣೇಶನಿಗೆ ಮಾತ್ರ.  ಗಣೇಶ ಹಬ್ಬದ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತದ ಸುಗ್ಗಿ. ಗಣೇಶ ವಿಗ್ರಹಗಳ ಪೀಠಾರೋಹಣವೂ ಇದೇ ಸಂದರ್ಭದಲ್ಲಿ ಜೋರು. ಮನೆಮನೆಗಳಲ್ಲೂ ನಾನಾ ಅವತಾರದ ಗಣೇಶ ಜಾಗ ಅಲಂಕರಿಸುತ್ತಾನೆ. ಇನ್ನೇನು ಗಣೇಶನ ಹಬ್ಬ ಹತ್ತಿರ ಬರುತ್ತಿದೆ. ಗಣೇಶನ ಮೇಲೇ ಇರುವ `ಗಜಮುಖನರ್ಚಿಸಿ ಆರಂಭಿಸಲು; ಆವ ಬಗೆ ಸ್ತುತಿ ಕಾರ್ಯ ಸಿದ್ಧಗೊಳಿಸಿ...~ ಹಾಡುವ ಕಾಲ ಸನ್ನಿಹಿತವೂ ಆಗುತ್ತಿದೆ.

ಬನ್ನೇರುಘಟ್ಟ ರಸ್ತೆ ಅರಕೆರೆಯಲ್ಲಿರುವ ಉದ್ಯಮಿ ರಾಜೇಶ್ ಚಂಡಕ್ ಅವರ 10 ಸಾವಿರ ಗಣೇಶ ಸಂಗ್ರಹದಲ್ಲಿ ಈ ಎಲ್ಲ ಗಾನರೂಪಿ ಗಣೇಶನ ಅವತಾರಗಳು ಕಾಣ ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT