ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನೇವಾಲಿ ಗಂಗೂಬಾಯಿ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

 `ಶಿಸ್ತು, ಸಂಯಮ, ಸಂಗೀತವನ್ನು ಪ್ರೀತಿಸಿದರೆ ಸಂಗೀತಗಾರರಾಗಬಹುದು. ಸಂಗೀತ ಭಾಷೆ ಗೊತ್ತಿದ್ದರೆ ಸಾಕು. ಇಡೀ ಪ್ರಪಂಚವನ್ನೆಲ್ಲಾ ಸುತ್ತಬಹುದು. ಇದಕ್ಕೆ ನಾನೇ ಉದಾಹರಣೆ~ ಎಂದಿದ್ದ ಗಂಗೂಬಾಯಿ ಹಾನಗಲ್ ಸಂಗೀತ ಕ್ಷೇತ್ರದ ಮಹಾನ್ ಚೇತನ.

ಪಂಡಿತ್ ಭೀಮಸೇನ ಜೋಷಿ ಹಾಗೂ ಗಂಗೂಬಾಯಿಯವರ ಸ್ವರ ತಾರಕಕ್ಕೆ ಹೋದಾಗ ಅದೊಂದು ಬ್ರಹ್ಮಾನಂದದ ಕಲ್ಪನೆಯೇ ಸರಿ. ಅಜ್ಜಿ, ತಾಯಿಯಿಂದ ಬಂದ ಸಂಗೀತದ ಕೊಡುಗೆಯನ್ನು ಉನ್ನತ ಶಿಖರಕ್ಕೆ ಕೊಂಡೊಯ್ದ ಗಂಗೂಬಾಯಿ ಸಹೃದಯಿ, ಮಾನವತಾವಾದಿ ಆಗಿದ್ದರು.

ಅವರು ಬಾಲ್ಯದಲ್ಲಿ ಸಂಗೀತ ಕಲಿಯಲು ಪುರುಷ ಪ್ರಧಾನ ಸಮಾಜದಿಂದ ಅನೇಕ ವಿರೋಧಗಳು ಎದುರಾಗಿದ್ದವು. ಆದರೂ ದಿಟ್ಟತನದಿಂದ ಸಂಗೀತಾಭ್ಯಾಸ ಮಾಡುತ್ತಿದ್ದ ಗಂಗೂಬಾಯಿ ರಸ್ತೆಯಲ್ಲಿ ನಡೆದು ಬಂದರೆ `ಗಾನೇವಾಲಿ~ ಬರುತ್ತಿದ್ದಾಳೆ ಎನ್ನುತ್ತಿದ್ದರಂತೆ.

ಇದನ್ನು ಕೇಳಿದಾಗ ಮೊದಲಿಗೆ ಬೇಸರ, ಅವಮಾನ ಎನಿಸಿದರೂ ಅದೇ ಜನ ಅತ್ಯುನ್ನತ ಗೌರವ ನೀಡುವ ಮಟ್ಟಿಗೆ ಅವರು ಬೆಳೆದರು. ಇದು ಅವರ ಮನೋಸ್ಥೈರ್ಯಕ್ಕೆ ಒಂದು ಉದಾಹರಣೆ.

1924ರ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಹನ್ನೊಂದು ವರ್ಷದವರಿದ್ದಾಗಲೇ ಹಾಡಿ ಗಾಂಧೀಜಿಯವರಿಂದ `ಶಹಬ್ಬಾಸ್~ ಎನಿಸಿಕೊಂಡಿದ್ದ ಅವರು, ಸುಮಾರು 60 ವರ್ಷಗಳ ಕಾಲ ಸಂಗೀತ ಲೋಕದ ಧ್ರುವತಾರೆಯಾಗಿ ಮೆರೆದರು.
 
ಪತಿ ಗುರುರಾವ ಕೌಲಗಿ ಮದುವೆಯಾದ ನಾಲ್ಕನೇ ವರ್ಷಕ್ಕೇ ತೀರಿಕೊಂಡಾಗ ಮೂರು ಮಕ್ಕಳ ಜವಾಬ್ದಾರಿಯನ್ನು ಸಂಗೀತ ಕಲಿಯುತ್ತಲೇ ನಿಭಾಯಿಸಿದರು. ಇಂತಹ ಮಹಾ ತಾಯಿಯ ಸ್ವರವೂ ತಾಯಿಯಂತಹ ವಾತ್ಸಲ್ಯವನ್ನು ಕೇಳುಗರಿಗೆ ನೀಡುತ್ತಿತ್ತಂತೆ.

ಒಮ್ಮೆ ಮೈಸೂರಿನಲ್ಲಿ ನಡೆಯುತ್ತಿದ್ದ ಹನುಮ ಜಯಂತಿಯ ಸಂಗೀತೋತ್ಸವದಲ್ಲಿ ಕಚೇರಿ ಕೊಡುತ್ತಿರುವಾಗ ಸರಕ್ಕನೇ ಒಬ್ಬ ಹುಡುಗ ಅಲ್ಲಿಗೆ ಬಂದ. ಗಂಗೂಬಾಯಿಯವರ ಸಂಗೀತ ಸುಧೆಯಿಂದ ನಿಗೂಢವಾದ ಭಾವ ಹೊಮ್ಮುತ್ತಿತ್ತು. ಆ ಭಾವ ಹುಡುಗನಲ್ಲಿ ತುಂಬಿ ಹೋಗಿ `ನನಗಾಗಿಯೇ ಹಾಡುತ್ತಿದ್ದಾರೇನೋ~ ಎಂದೆನಿಸಿ ಕಾಲದ ಅರಿವೇ ಸತ್ತು ಹೋಗಿತ್ತಂತೆ-

ಹೀಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ. ಕುಂದಗೋಳದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಬರುವ ಸವಾಯಿ ಗಂಧರ್ವರ ಪುಣ್ಯತಿಥಿಯಲ್ಲಿ ಎರಡು ದಿನಗಳವರೆಗೆ ಅಹೋರಾತ್ರಿ ಸಂಗೀತೋತ್ಸವ ನಡೆಯುತ್ತದೆ.

ದೇಶದ ಮೂಲೆ ಮೂಲೆಯಿಂದ ಸಂಗೀತಗಾರರು ಬಂದು ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ಒಮ್ಮೆ ಬಸವರಾಜ ರಾಜಗುರು ಅವರು ಹಾಡುತ್ತಾ ಮೈಮರೆತಿದ್ದಾಗ ಸಭೆಯಲ್ಲಿ ಇದ್ದ ಗಂಗೂಬಾಯಿಯವರು `ಈ ಸಭೆ ನಮ್ಮ - ನಿಮ್ಮಂಥವರಿಗಲ್ಲ, ಬೆಳೆದು ಬರಬೇಕೆನ್ನುವ ತರುಣ ಕಲಾವಿದರಿಗೆ.

ದಯಮಾಡಿ ಲಗೂನ ಮುಗಿಸಿರಿ~ ಎಂದರಂತೆ. ತಮ್ಮನ್ನು ಬಿಟ್ಟು ಮತ್ತೊಬ್ಬರು ಮುಂದೆ ಬರಬಾರದೆಂಬ ಧೋರಣೆಯುಳ್ಳ ಅನೇಕ ಪಂಡಿತರು, ವಿದ್ವಾಂಸರ ನಡುವೆ, ಬೆಳೆಯುವ ಸಾಮರ್ಥ್ಯವುಳ್ಳ ತರುಣ ಕಲಾವಿದರಿಗೆ ಅವಕಾಶ ನೀಡಬೇಕೆಂಬ ಗಂಗೂಬಾಯಿ ಅವರ ಧ್ಯೇಯಕ್ಕೆ ಇದೊಂದು ಉದಾಹರಣೆ.

ಸರಳತೆ ಮೈಗೂಡಿಸಿಕೊಂಡಿದ್ದ ಅವರು ಎಲ್ಲರಿಗೂ ಅಕ್ಕ ಆಗಿದ್ದವರು. ಹುಬ್ಬಳ್ಳಿಯ ತಮ್ಮ ಮನೆಗೆ ಬಂದವರನ್ನು ಆತ್ಮೀಯ ನುಡಿಗಳಿಂದ ಉಪಚರಿಸಿ, ಪಕ್ಕದಲ್ಲೇ ಕೂರಿಸಿಕೊಂಡು ಫೋಟೋ ತೆಗೆಸಿ ಕೊಡುತ್ತಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಗಂಗೂಬಾಯಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದಾಗ, ಅವರು ನಗುತ್ತಾ, `ಅಯ್ಯೋ ನಾನು ಓದಿದ್ದು ಐದನೇ ಇಯತ್ತೆ. ನನಗಾವ ಡಾಕ್ಟರೇಟ್~ ಎಂದರಂತೆ.

ಗುರು - ಶಿಷ್ಯ ಪರಂಪರೆಯನ್ನು ಅಪಾರವಾಗಿ ಅನುಮೋದಿಸುತ್ತಿದ್ದ ಅವರು ಶಾಸ್ತ್ರೀಯ ಸಂಗೀತ ಅಭ್ಯಾಸದ ಮೂಲಕ ಸಂಸ್ಕೃತಿ ಕಾಪಾಡುವ ಕೆಲಸ ಮಾಡಬೇಕು ಎನ್ನುತ್ತಿದ್ದರು. ಸಂಗೀತದಲ್ಲಿ ಆಗುವ ಸಂಶೋಧನೆ, ಒಂದೇ ಘರಾಣಾದಲ್ಲಿ ಏನೆಲ್ಲಾ ಪ್ರಯೋಗಗಳನ್ನು ಮಾಡಬಹುದು ಎಂಬುದು ಎಲ್ಲರಿಗೂ ತಿಳಿಯುವಂತಾಗಬೇಕು ಎನ್ನುವ ಕಳಕಳಿಯನ್ನೂ ಹೊಂದಿದ್ದರು.

ಪದ್ಮ ಭೂಷಣ, ಪದ್ಮ ವಿಭೂಷಣ, ತಾನ್‌ಸೇನ್ ಪುರಸ್ಕಾರ, ಸವಾಯಿ ಗಂಧರ್ವರ ರಾಷ್ಟ್ರೀಯ ಪುರಸ್ಕಾರ ಹೀಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದ ಗಂಗೂಬಾಯಿ ಅವರ ಜೀವಮಾನದ ಸಾಧನೆಗೆ ನೆದರ್ಲೆಂಡ್ ಸರ್ಕಾರದಿಂದಲೂ ಪ್ರಶಸ್ತಿ ಲಭಿಸಿತ್ತು.

ಮೈಸೂರಿನಲ್ಲಿರುವ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗಂಗೂಬಾಯಿ ಅವರ ಹೆಸರನ್ನು ಹೊತ್ತು ಸಾರ್ಥಕಗೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT