ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ- ಮಳೆ: ಮಾವು, ತರಕಾರಿ ನಾಶ

Last Updated 17 ಮೇ 2012, 6:00 IST
ಅಕ್ಷರ ಗಾತ್ರ

ಮುಳಬಾಗಲು: ತಾಲ್ಲೂಕಿನಾದ್ಯಂತ ಮಂಗಳ ವಾರ ರಾತ್ರಿ ಬಿದ್ದ ಅಲಿಕಲ್ಲು ಮಳೆ ಮತ್ತು ಬಿರು ಗಾಳಿಗೆ ಸಾವಿರಾರು ಎಕರೆ ಮಾವು ಮತ್ತು ತರಕಾರಿ ಬೆಳೆ ನಷ್ಟವಾಗಿದೆ.ತಾಲ್ಲೂಕಿನ ಮಂಡಿಕಲ್, ಗೊಲ್ಲಹಳ್ಳಿ, ಹರಪನಾಯಕನ ಹಳ್ಳಿ, ಬಿಸನಹಳ್ಳಿ, ಕೊಂಡೇನಹಳ್ಳಿ, ಗುಜ್ಜನಹಳ್ಳಿ, ನಿಚ್ಚನಗುಂಟೆ, ತಾವರೆಕೆರೆ ಗ್ರಾಮಗಳಲ್ಲಿ ಸಾವಿರ ಎಕರೆಗೂ ಹೆಚ್ಚಿನ ಮಾವಿನ ಫಸಲು ಹಾಗೂ ತರಕಾರಿ ಬೆಳೆ ನಾಶವಾಗಿದೆ.

ಮಂಡಿಕಲ್ ಗ್ರಾಮದಲ್ಲಿ ನೂರಾರು ಮಾವಿನ ಮರಗಳು ಧರೆಗುರುಳಿವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಬಿ.ಎಲ್.ಶಿವಪ್ರಸಾದ್ ತಿಳಿಸಿದ್ದಾರೆ.ಸೊನ್ನವಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಿನ ತರಕಾರಿ ಬೆಳೆ ನಾಶವಾಗಿದೆ. ಸೊಪ್ಪು ಮತ್ತು ತರಕಾರಿಗೆ ಅಲಿಕಲ್ಲು ಮಳೆ ಬಿದ್ದು ನಷ್ಟ ವಾಗಿದೆ. ಕೀಲಾಗಾಣಿ ಗ್ರಾಮದಲ್ಲಿ ಲಿಂಗಮೂರ್ತಿ ಮನೆಯ ಶೀಟ್‌ಗಳು ಬಿರುಗಾಳಿಗೆ ಬಿದ್ದು ಹೋಗಿವೆ.

ಕೀಲಾಗಾಣಿ ಸೇರಿದಂತೆ ಹಲವಾರು ಗ್ರಾಮ ಗಳಲ್ಲಿ ಗಾಳಿಗೆ ವಿದ್ಯುತ್ ಕಂಬ ಉರುಳಿಬಿದ್ದಿದ್ದು, ತಕ್ಷಣ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಪಾಯ ತಪ್ಪಿಸಿದ್ದಾರೆ.ನಷ್ಟವಾಗಿರುವ ಮಾವಿನ ಬೆಳೆಗಾರರಿಗೆ ತಕ್ಷಣ ಸೂಕ್ತ ಪರಿಹಾರ ನೀಡುವಂತೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎನ್.ವೆಂಕಟಾಚಲಯ್ಯ ಒತ್ತಾಯಿಸಿದ್ದಾರೆ. ತಹಶೀಲ್ದಾರ್ ಪಿ. ಜಯಮಾಧವ, ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶ್ರೀನಿವಾಸಪುರ: ವ್ಯಾಪಕ ಮಳೆ
ಶ್ರೀನಿವಾಸಪುರ: ತಾಲ್ಲೂಕಿನಾದ್ಯಂತ ಮಂಗಳ ವಾರ ರಾತ್ರಿ ವ್ಯಾಪಕವಾಗಿ ಮಳೆಯಾಗಿದೆ. ತಾಲ್ಲೂಕಿನ ಗಡಿ ಸಮೀಪದ ರಾಯಲ್ಪಾಡ್ ಮತ್ತು ಮುದಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಜೋರು ಮಳೆಯಾಗಿದೆ.

  ತಾಲ್ಲೂಕಿನ ಬೇರೆ ಕಡೆಗಳಲ್ಲಿ ಕಳೆದ ಕೆಲವು ದಿನಗಳ ಹಿಂದೆ ಎರಡು ಮೂರು ಸಲ ಮಳೆ ಯಾಗಿದ್ದರೂ, ರಾಯಲ್ಪಾಡ್ ಮತ್ತು ಮುದಿಮಡಗು ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣ ದಲ್ಲಿ ಮಳೆ ಆಗಿರಲಿಲ್ಲ. ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಅಲ್ಲಿನ ಕೆರೆ ಕುಂಟೆಗಳಿಗೆ ಸ್ಪಲ್ಪ ಪ್ರಮಾಣದ ನೀರು ಹರಿದು ಬಂದಿದೆ. ಇಂಥ ಮಳೆಯನ್ನು ನೋಡಿ ಕೆಲವು ವರ್ಷಗಳು ಕಳೆದಿದ್ದವು. ಸುಮಾರು 5 ಹದ ಮಳೆ ಸುರಿದಿದೆ ಎಂದು ಕಡಪಲರೆಡ್ಡಿಹಳ್ಳಿ ಗ್ರಾಮದ ರೈತ ಬೈರೆಡ್ಡಿ ಹೇಳಿದರು.

ಉಳುಮೆ ಮಾಡಲು ತೇವ. ಇನ್ನು ಹದಿನೈದು ದಿನಗಳಲ್ಲಿ ನೆಲಗಡಲೆ ಬಿತ್ತನೆ ಮಾಡಲು ಜಮೀ ನನ್ನು ಹದಗೊಳಿಸಬೇಕು. ಈಗ ಬಿತ್ತನೆಗೆ ಅಗತ್ಯ ವಾದ ನೆಲಗಡಲೆ ಕಾಯಿಯನ್ನು ಸುಲಿಯುತ್ತಿ ದ್ದೇವೆ ಎಂದು ರೈತ ನರಸಿಂಹರೆಡ್ಡಿ ಹೇಳಿದರು.

ಶ್ರೀನಿವಾಸಪುರದ ಸುತ್ತಮುತ್ತ ಗುಡುಗು ಮಿಂಚಿನಿಂದ ಕೂಡಿದ ಮಳೆ ಸುರಿಯಿತು. ಉಳಿದ ಕಡೆಗಳಲ್ಲೂ ಸಾಧಾರಣದಿಂದ ಜೋರು ಮಳೆ ಸುರಿದಿದೆ.ರಾತ್ರಿಯಿಡೀ ಕಿವಿಗಡಚಿಕ್ಕುವ ಗುಡುಗು, ಕಣ್ಣು ಕೋರೈಸುವ ಮಿಂಚು, ಜೊತೆಯಲ್ಲಿ ಮಳೆ ಸುರಿಯಿತು. ಆದರೂ ಕೆರೆ ಕುಂಟೆಗಳಿಗೆ ಅಷ್ಟಾಗಿ ನೀರು ಬಂದಿಲ್ಲ. ಆದರೂ ಮಳೆಯಿಂದ ತೋಟದ ಬೆಳೆಗಳಿಗೆ ಹೆಚ್ಚಿನ ಸಹಾಯವಾಗಿದೆ. ದನಕರು ಗಳಿಗೆ ಕುಡಿಯುವ ನೀರು ದಕ್ಕಿದಂತಾಗಿದೆ. ಬಯಲಿನ ಮೇಲೆ ಹಸಿರು ಮೂಡಿದ್ದು, ಜಾನುವಾರುಗಳಿಗೆ ಮೇವು ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT