ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿ-ಶಿಖರದಲಿ ಅಕ್ಷರ ಝರಿ

ಬ್ಲಾಗಿಲನು ತೆರೆದು...
Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಳೇಬೀಡಿನ ಎಸ್‌. ಗಿರೀಶ್ ಅವರಿಗೆ ಬ್ಲಾಗ್‌ ಬರೆಯುವ ಮೂಲಕ ತಮ್ಮ ಅಭಿವ್ಯಕ್ತಿಯ ಹೊಸಬೀಡೊಂದನ್ನು ಕಂಡುಕೊಳ್ಳುವ ತವಕ. ಸುಂದರ ಕಲೆಗಳ ತವರೂರು, ಶಿಲ್ಪ ಕಲೆಗಳ ಬೀಡು ‘ಹಳೇಬೀಡು’ ಎಂದು ತನ್ನೂರಿನ ಬಗ್ಗೆ ಭಾವುಕತೆಯಿಂದ ಹೇಳಿಕೊಳ್ಳುವ ಗಿರೀಶರ ಬ್ಲಾಗಿನಲ್ಲಿ ಕೂಡ ಊರುಕೇರಿಯ ನೆನಪುಗಳು, ಹಳ್ಳಿಯ ಚಿತ್ರಗಳು ದಟ್ಟವಾಗಿವೆ. ಹಾಸನ- ಹಳೇಬೀಡು- ಬೇಲೂರು- ರಾಮಕುಂಜ (ಮಂಗಳೂರು)- ತುಮಕೂರು– ಹೀಗೆ, ಶಿಕ್ಷಣದ ನಿಮಿತ್ತ ಊರು ಸುತ್ತಿರುವ ಅವರು, ಪ್ರಸ್ತುತ ಬೆಂಗಳೂರಿನ ನಿವಾಸಿ. ಉದ್ಯೋಗ ನಿಮಿತ್ತಂ ಬೆಂಗಳೂರು ವಾಸ.

‘ಒಬ್ಬಂಟಿಯಾಗಿ ಊರೂರು ಸುತ್ತುವುದಕ್ಕೆ ಬಹಳ ಇಷ್ಟ’ ಎನ್ನುವ ಗಿರಿ, ತಮ್ಮ ಒಂಟಿ ಬದುಕಿನ ಆಲಾಪಗಳನ್ನು ‘ಗಿರಿ–ಶಿಖರ’ ಬ್ಲಾಗ್‌ನಲ್ಲಿ (giri-shikhara.blogspot.in) ದಾಖಲಿಸಿದ್ದಾರೆ. ‘ಶಿಖರ ಏರುವ ಹವಣಿಕೆಯಲ್ಲಿ, ಮುಗ್ಗರಿಸಿ ಮುಗ್ಗರಿಸಿ ಬೀಳುತ್ತಾ, ಮತ್ತೊಮ್ಮೆ ಏಳುತ್ತಾ, ಎಡರು ತೊಡರುಗಳನ್ನು ದಾಟುತ್ತಾ, ಧೈರ್ಯ ತಂದುಕೊಳ್ಳುತ್ತಾ ಮುನ್ನುಗ್ಗುತ್ತಿರುವೆ’ ಎನ್ನುವ ಅವರಿಗೆ, ಎಲ್ಲಿಯವರೆಗೆ ಏರಬೇಕು ಎನ್ನುವ ಗುರಿಯೇನೂ ಇಲ್ಲ. ಏರುವ ಪ್ರಕ್ರಿಯೆ ಎಂದೂ ನಿಲ್ಲುವುದಿಲ್ಲ, ನಿಲ್ಲಬಾರದು ಎನ್ನುವ ಸ್ಪಷ್ಟತೆಯಂತೂ ಇದೆ.

ಗಿರಿ–ಶಿಖರದ ಹರಹು ಸಾಕಷ್ಟಿದೆ. ಅಂಕೇಗೌಡರ ಪುಸ್ತಕಮನೆ, ತೇಜಸ್ವಿ ನೆನಪು, ಸ್ಟೇಷನ್‌ನಲ್ಲಿ ಕ್ರಿಕೆಟ್‌ ನೋಡಿದ್ದು, ಕಾಯಿ ಚಟ್ನಿ ಅನ್ನ ಮತ್ತು ಭಂಗಿ ಸೊಪ್ಪು, ಕಡಿಮೆ ವೆಚ್ಚದ ಗೋಬರ್‌ ಗ್ಯಾಸ್‌, ಆಹಾರ ಭದ್ರತೆ ಕಾಯ್ದೆ, ತೆಂಗಿನ ತೋಟದಲ್ಲಿ ಗೂಬೆಗಳು– ಈ ಶೀರ್ಷಿಕೆಗಳೇ ಬರಹಗಳ ವೈವಿಧ್ಯವನ್ನು ಹೇಳುವಂತಿವೆ. ಇವುಗಳ ಜೊತೆಗೆ ರುಚಿಗೆನ್ನುವಂತೆ ಕಥೆಗಳಿವೆ, ಪದ್ಯಗಳ ರಚನೆಗಳೂ ಜೊತೆಯಾಗಿವೆ. ಒಂದು ಚುಟುಕು ನೋಡಿ–
ಅದೆಷ್ಟು ಸೊಕ್ಕು ನಿನ್ನ ಮುಂಗುರುಳಿಗೆ
ರೆಪ್ಪೆ ಹಾದು, ಕಣ್ಣಂಚನು ಸರಿದು
ಕೆನ್ನೆಯ ಸವರುವುದು...
ಆಗ ಅದೇನೋ ಸಂಕಟ ನನ್ನೊಳಗೆ
ಇಲ್ಲವಲ್ಲ ಈ ಅವಕಾಶ ಎಂದೂ ನನ್ನ ತುಟಿಗೆ....

ಹೇಳಿಕೇಳಿ ಇದು ಗಣಪತಿಯ ಸಂಭ್ರಮದ ದಿನಗಳು. ರಾಜ್ಯೋತ್ಸವ ಬರುವವರೆಗೆ ಒಂದಲ್ಲಾ ಒಂದು ಕಡೆ ಗಣಪ ಪ್ರತ್ಯಕ್ಷನಾಗುತ್ತಲೇ ಇರುತ್ತಾನೆ. ಗಿರೀಶರ

ಬ್ಲಾಗಿನಲ್ಲೂ ಗಣೇಶೋತ್ಸವದ ಒಂದು ನೆನಪಿದೆ– “ಒಂದು ವರ್ಷ ಏನಾಯ್ತು ಅಂದ್ರೆ, ಗೌರಮ್ಮ ಮತ್ತೆ ಗಣಪನ್ನ ಕೂರ್ಸಿ ಪೂಜೆ ಗೀಜೆ ಎಲ್ಲ ಆಯ್ತು, ಮೈಕ್ ಸೆಟ್ ಎಲ್ಲ ಜೋಡ್ಸಿದ್ವಿ, ಜೋರಾಗಿ ಹಾಡು ಹಾಕಿ ಕುಣಿತಿದ್ವಿ... ನಮ್ಮ ಬೀದಿಯ ಒಬ್ರು ಮಹನೀಯರು ಪೂಜೆ ಮಾಡಿಸ್ಕಂಡ್ ಹೋಗೋಕ್ಕೆ ಬಂದವರು, ಒಮ್ಮೆಲೇ– ‘ಹುಡುಗರ, ಗಣಪತಿ ಇದೆ, ಇಲೀನೆ ಇಲ್ವಲ್ರೋ’ ಅಂದ್ರು. ಆಗ ನಾವೆಲ್ಲ ಸೇರಿ ಎಲ್ಲೋಯ್ತು ಎಲ್ಲೋಯ್ತು ಅಂತ ವಿಮರ್ಶೆ ಮಾಡಿದಾಗ, ಎಲ್ಲರು ನಂಗೊತ್ತಿಲ್ಲ ನಂಗೊತ್ತಿಲ್ಲ ಅಂದ್ರು. ಆಮೇಲೆ ಅಂಗಡಿಗೆ ಗಣಪತೀನ ತರಲಿಕ್ಕೆ ಹೋಗಿದ್ದ ಒಬ್ಬ ಪುಣ್ಯಾತ್ಮ, ‘ಆಟೋದಲ್ಲಿ ಹಿಂದೆ ಇಟ್ಟಿದ್ದೆ, ಅಲ್ಲೇ ಮರ್ತೆ ಅನ್ಸುತ್ತೆ’ ಅಂದ..

ಇನ್ನೇನ್ ಮಾಡೋದು, ಆ ಅಟೋದವನನ್ನ ಹುಡುಕೋ ಕೆಲ್ಸ ಅಂತು ಆಗಲ್ಲ, ಸರಿ ಅಂತ ಮತ್ತೆ ಅಂಗಡಿಗೆ ಹೋದ್ರೆ, ಅಂಗಡಿಯವನು, ‘ಬರಿ ಇಲಿ ಕೊಡಕ್ಕೆ ಆಗಲ್ಲ, ಒಂದೊಂದು ಗಣಪತಿಗೆ ಒಂದೊಂದು ಇಲಿ ಮಾಡಿರ್ತಿವಿ’ ಅಂದ. ಎಷ್ಟೇ ದಮ್ಮಯ್ಯ ಅಂದ್ರು, ‘ಕೊಡಲ್ಲ, ಬೇಕಾದ್ರೆ ಗಣಪತಿ ತಗೊಳ್ಳಿ, ಅದರ ಜೊತೆಗೆ ಇಲಿ ಕೊಡ್ತೀನಿ’ ಅಂದ.. ಸರಿ ಕೊಡಪ್ಪ ಅಂತ ತಂದು ಇಟ್ಟಿದ್ದು ಆಯ್ತು... ಆಮೇಲೆ ಆಟೋದಲ್ಲಿ ಇಲಿ ಬಿಟ್ಟು ಬಂದವನಿಗೆ ಎಲ್ಲರೂ ಸೇರಿ ಬೈದಿದ್ದೇ ಬೈದಿದ್ದು...’

ಗಣಪತಿಗೆ ಸಂಬಂಧಿಸಿದಂತೆ ಅನೇಕ ತಮಾಷೆಗಳು ಚಾಲ್ತಿಯಲ್ಲಿರುವಾಗ, ಆತನ ಉತ್ಸವದಲ್ಲಿ ಸ್ವಾರಸ್ಯಗಳಿಗೇನು ಕಡಿಮೆ? ಗಿರೀಶರ ಇಲಿ ಪ್ರಸಂಗದಂತಹ ಘಟನೆಗಳು ಎಲ್ಲ ಗಣೇಶಪ್ರಿಯರ ನೆನಪುಗಳಲ್ಲೂ ಇದ್ದಾವು. ಇರಲಿ, ಗಣೇಶನಿಂದ ಜನ ಗಣ ಮನದತ್ತ ಬರೋಣ. ‘ಟೀಂ ಅನುಭಾವ’ ಎನ್ನುವ ಯುವಜನರ ತಂಡವೊಂದರ ಬಗ್ಗೆ ಬ್ಲಾಗಿನಲ್ಲೊಂದು ಒಳ್ಳೆಯ ಬರಹವಿದೆ. ಅದರ ಕೆಲವು ಭಾಗ ನೋಡಿ–

‘‘ಆರ್ಕುಟ್, ಫೇಸ್ಬುಕ್‌ಗಳಂಥ ಸಾಮಾಜಿಕ ತಾಣಗಳನ್ನು ಈಗಿನ

ಯುವಪೀಳಿಗೆ ಉಪಯೋಗಿಸುವುದು ಸರ್ವೇ ಸಾಮಾನ್ಯ. ಕೆಲವರು ಕೇವಲ ಚಾಟಿಂಗ್ ಮತ್ತು ಇನ್ನಿತರ ಮೋಜಿಗೆ ಇಂಥ ತಾಣಗಳನ್ನು ಉಪಯೋಗಿಸುವುದುಂಟು. ಇನ್ನು ಕೆಲವರಿಗೆ ಹೊಸ ಸ್ನೇಹಿತರು ಸಿಗುತ್ತಾರೆ ಎಂಬ ಬಯಕೆ. ಆದರೆ ಇಲ್ಲೊಂದು ಯುವಕರ ಗುಂಪು ಇಂಥ ಸಾಮಾಜಿಕ ತಾಣದ ಒಂದು ಗುಂಪಿನ ಮುಖೇನ ಪರಿಚಯಗೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಆಸರೆ ಆಗಿದ್ದಾರೆ.. ‘ಅನುಭಾವ’ದ ಜಾಡು

ಹಿಡಿದು ಹೊರಟಿರುವ ಅನುಭವಿಗಳಲ್ಲದ ಈ ಯುವಕರ ತಂಡದ ಹೆಸರು ‘ಟೀಂ ಅನುಭಾವ’.

ಮೊದಮೊದಲು ಕೇವಲ ಹರಟೆ ಮತ್ತು ಇನ್ನಿತರ ವಿಷಯಗಳಿಗೆ ಸೀಮಿತವಾಗಿದ್ದ ಈ ಗುಂಪು, ನಂತರ ಕೆಲವರ ಸಲಹೆ ಮತ್ತು ನಿರ್ಧಾರಗಳಿಂದಾಗಿ ಸಮಾಜ ಸೇವೆಗೆ ಮುಂದಾಗಿದೆ. ಈ ಯುವಪಡೆಯ ಪ್ರತಿಯೊಂದು ಮನಸ್ಸಿನಲ್ಲಿ ಶಿಕ್ಷಣಕ್ಕೆ ಮೊದಲ  ಆದ್ಯತೆ ಕೊಡಬೇಕೆಂಬ ಹಂಬಲ ಇತ್ತು. ಇವರಿಗೆ ಈ ಒಂದು ಸಕಾರ್ಯ ಮಾಡುವುದಕ್ಕೆ ಸಿಕ್ಕಿದ್ದು ಮಾಗಡಿ ತಾಲ್ಲೂಕಿನಲ್ಲಿರುವ ಒಂದು ವಿದ್ಯಾರ್ಥಿ ನಿಲಯ. ಕೆಂಚಗಲ್ ಬಂಡೆ ಮಠದ ವತಿಯಿಂದ ನಡೆಯುತ್ತಿರುವ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಸುಮಾರು ೧೫೦ ಬಡ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಎಷ್ಟೋ ಮಕ್ಕಳ ಪೋಷಕರು ದೂರದ ಊರುಗಳಿಂದ ಬೆಂಗಳೂರು ಮತ್ತು ಇನ್ನಿತರ ಕಡೆ ಕೆಲಸ ಅರಸಿ ಬಂದು ತಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದ್ದಾರೆ, ಮತ್ತು ಅವರಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನದಿಂದ ಬಂದವರೇ. ಅಲ್ಲದೆ ಆ ಸಂಸ್ಥೆಗೆ ಕೂಡ ಇಷ್ಟು ಮಕ್ಕಳಿಗೆ ಎಲ್ಲಾ ರೀತಿಯ ಅವಶ್ಯಕತೆಗಳನ್ನು ಪೂರೈಸಬಲ್ಲ ಶಕ್ತಿ ಇರಲಿಲ್ಲ... ಇಂಥ ಸನ್ನಿವೇಶದಲ್ಲಿ ಅಲ್ಲಿನ ಮಕ್ಕಳಿಗೆ ಸಹಾಯಕ್ಕೆ ಬಂದಿದ್ದು ಈ ಯುವ ಪಡೆ.

೪ ವರ್ಷದ ಹಿಂದೆ ಕೇವಲ ಬೆರಳೆಣಿಕೆ ಅಷ್ಟು ಜನರಿಂದ ಶುರುವಾದ ತಂಡ ಈಗ ಸುಮಾರು ೧೦೦-೧೫೦ ಸಕ್ರಿಯ ಸದಸ್ಯರನ್ನು ಹೊಂದಿದೆ. ಈ ಟೀಂನ ವತಿಯಿಂದ ಆ ಹಾಸ್ಟೆಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯ ಎಲ್ಲಾ ಅವಶ್ಯಗಳನ್ನು ಪೂರೈಸಲಾಗುತ್ತಿದೆ’’.
ಹೀಗೆ, ‘ಗಿರಿ–ಶಿಖರ’ದ ಯಾನ ಮುಂದುವರೆಯುತ್ತದೆ. ಆರೋಹಣದ ಸಮಯದಲ್ಲಿ ಕಲ್ಲು ಕೊರಕಲುಗಳು ಇರುವಂತೆ ಬ್ಲಾಗಿನ ಹಾದಿಯಲ್ಲೂ ಅರೆಕೊರೆಗಳು ಇವೆಯಾದರೂ ಒಟ್ಟಾರೆ ಅನುಭವ ಆಹ್ಲಾದಕರವಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT