ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಸಾಗರ: ಚಂಗಳಿಕೆವ್ವನ ಸಗಣಿ ಓಕಳಿ

Last Updated 1 ಆಗಸ್ಟ್ 2012, 16:20 IST
ಅಕ್ಷರ ಗಾತ್ರ

ಬೀಳಗಿ: ಪೌರಾಣಿಕ ಹಿನ್ನೆಲೆಯುಳ್ಳ, ತಲೆತಲಾಂತರ ದಿಂದ ಆಚರಿಸಿಕೊಂಡು ಬಂದಿರುವ ಚಂಗಳಿಕೆವ್ವನ ಸಗಣಿ ಓಕುಳಿಯನ್ನು ಗಿರಿಸಾಗರ ಗ್ರಾಮದ ಮಹಿಳೆಯರು ಸಡಗರದಿಂದ ಆಚರಿಸಿದರು.

ಜಂಗಮ ರೂಪದಲ್ಲಿ ಭಿಕ್ಷೆಗೆ ಬಂದಿದ್ದ ಪರಮೇಶ್ವರನಿಗೆ ತನ್ನ ಮಗ ಚಿಲ್ಲಾಳನನ್ನೇ ಕೊಯ್ದು ಮಾಂಸದೆಡೆ ಮಾಡಿ ಉಣ ಬಡಿಸಿದ ಶಿವಭಕ್ತೆ ಚೆಂಗಳಿಕೆವ್ವ ಕೈಲಾಸದಲ್ಲಿ ಶಿವ ಗಣದೊಡನೆ    ಅಹಂಕಾರದಿಂದ    ವರ್ತಿಸಿದಳಂತೆ. ಆಗ ಶಿವ ಗಣಂಗಳು ಆಕೆಯ ಮುಖಕ್ಕೆ ಸಗಣಿ ಎರಚಿ ಅವಮಾನಿಸಿ ಆಕೆಯ ಗರ್ವ ಭಂಗ ಮಾಡಿದರಂತೆ. ಅದಕ್ಕಾಗಿಯೇ ಅಹಂಕಾರದಿಂದ      ವರ್ತಿಸುವವರಿಗೆ “ಥೂ! ಅವ್ರ ಮುಖಕ್ಕೆ ಹೆಂಡಿ ಒಗಿಲೀ “ ಎಂದು    ಬೈಯ್ಯುತ್ತಾರೆ. ಈ ಪೌರಾಣಿಕ ಹಿನ್ನೆಲೆಯನ್ನಿಟ್ಟುಕೊಂಡೇ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ಚೆಂಗಳಿಕೆವ್ವನ ಹೆಸರಿನಲ್ಲಿ ಮಹಿಳೆಯರೇ ಶೆಗಣಿ ಎರಚಾಡುತ್ತಾರೆ.

ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ನಂತರ ಬರುವ ಸೋಮವಾರದಂದು ಈ ಹಬ್ಬ ಆಚರಿಸುತ್ತಾರೆ. ಅದಕ್ಕಿಂತಲೂ ಮುಂಚೆಯೇ ಪಂಚಮಿ ಹಬ್ಬದಂದು ಗ್ರಾಮದ ಸಂಗಮೇಶ್ವರ ದೇವಸ್ಥಾನದ ಎದುರು ಚೆಂಗಳಿಕೆವ್ವನನ್ನು ಪ್ರತಿಷ್ಠಾಪಿಸಿ ದಿನಂಪ್ರತಿ ಪೂಜೆ ಆರತಿ ಮಾಡುತ್ತಿರುತ್ತಾರೆ. ಸೋಮವಾರ ಇನ್ನೂ ಮುಂದಿರುವಾಗಲೇ ಶೆಗಣಿ ಎರಚಾಡುವ ಎರಡು ಬಣದವರು ಸಗಣಿ ಸಂಗ್ರಹಿಸಿಡುತ್ತಾರೆ.

ಹಬ್ಬದ ದಿನ ಮುಖ್ಯ ರಸ್ತೆಯಲ್ಲಿ ಕಂಬಗಳನ್ನು ನೆಟ್ಟು, ಕಂಬಗಳಿಗೆ ಹಗ್ಗಗಳನ್ನು ಕಟ್ಟಿ ಎರಡು ಪ್ರತ್ಯೇಕ ಅಂಕಣಗಳನ್ನು ನಿರ್ಮಿಸುತ್ತಾರೆ. ಬಾಜಾ ಭಜಂತ್ರಿಯವರು ಎರಡೂ ತಂಡಗಳನ್ನು ಪ್ರತ್ಯೇಕವಾಗಿ ಕರೆತಂದ ನಂತರ ಎರಡೂ ತಂಡಗಳ ಮುಂಚೂಣಿ ನಾಯಕರಾಗಿರುವ ವಾಲಾಡಮ್ಮ ಗಳು (ಅಡಗೊಡ್ಡಿಗಳು) ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದಂತೆ ವೇಷ ಭೂಷಣ ಮಾಡಿಕೊಂಡು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.

ಹರಿದ ಬಟ್ಟೆ, ತರಕಾರಿಯಿಂದ ಮಾಡಿದ ಹಾರ, ಹರಕು ಬುಟ್ಟಿ, ಪೊರಕೆಗಳನ್ನು ಪರಸ್ಪರ ಆಯೇರಿ ಮಾಡಿ ಕೂಡಿದ ಜನರನ್ನು ರಂಜಿಸುತ್ತಾರೆ. ನಂತರ ಪ್ರಮುಖನೊಬ್ಬ ಕೈಯ್ಯಲ್ಲಿ  ಸಗಣಿ ಹಿಡಿದು ಎರಡೂ ಅಂಕಣಗಳತ್ತ ಇಷ್ಟಿಷ್ಟು ಎರಚುತ್ತಾನೆ. ಎಂದರೆ ಇದು ವಿದ್ಯುಕ್ತವಾಗಿ ಉದ್ಘಾಟನೆ ಯಾದಂತೆ. ತಕ್ಷಣವೇ ಮಹಿಳೆಯರು ತಮ್ಮ ಎದುರಾಳಿ ತಂಡದ ಮೇಲೆ ಸಗಣಿಯನ್ನು ಎಸೆ ಯಲು ಪ್ರಾಂಭಿಸುತ್ತಾರೆ. ಇಲ್ಲಿಂದ ಎಸೆದಷ್ಟು ಸಗಣಿ ಆಕಡೆಯಿಂದ ಬಂದು ಸಂಗ್ರಹ ಗೊಳ್ಳುತ್ತಿರುತ್ತದೆ.

ಮಹಿಳೆಯರ  ದೇಹವೆಲ್ಲ  ಸಗಣಿ ತುಂಬಿ ಕೊಂಡಿರುತ್ತದೆ.  ಪ್ರೇಕ್ಷಕರು ಇವರನ್ನು ಹುರಿ ದುಂಬಿಸುತ್ತಲೇ ಇರುವುದರಿಂದ ಕ್ಷಿಪಣಿಗಳನ್ನು ಮೀರಿ ಇವರ ಸಗಣಿ ಎರಚಾಟ ನಡೆದಿರುತ್ತದೆ. ಸ್ವಲ್ಪ ಹೊತ್ತಿನ ನಂತರ ಕದನ ವಿರಾಮ ಘೋಷಣೆಗೆ ಮುಖಂಡರುಗಳು ಮಧ್ಯ ಪ್ರವೇಶಿಸಿ ಯತ್ನಿಸುತ್ತಾರೆ. ಅಗ ಅವರ ಸ್ಥಿತಿಯಂತೂ ಹೇಳು ವುದೇ ಬೇಡ, ಯಾಕೆಂದರೆ ಎರಡೂ ತಂಡಗಳ ಸಗಣಿಯ ದಾಳಿ ಇವರ ಮೇಲಾಗುತ್ತಿರುವುದರಿಂದ ಅವರ ಗುರುತು ಸಿಗದಷ್ಟು ಸಗಣಿ ಇವರನ್ನು ಆವರಿಸಿಕೊಂಡು ಬಿಟ್ಟಿರುತ್ತದೆ.

ಬಾಜಾ ಭಜಂತ್ರಿಯವರು ಸ್ವರ ಹೊರಡಿಸುತ್ತಿದ್ದಂತೆಯೇ ಚಂಗಳಿಕೆವ್ವನನ್ನು ಎತ್ತಿ ಬಿಡುತ್ತಾರೆ. ನಂತರ ಎಲ್ಲರೂ ಹೊಳೆಗೆ ಹೋಗಿ ಕೈ ಕಾಲು, ಮುಖ ತೊಳೆದುಕೊಂಡು ಬರುತ್ತಾರೆ. ಅಷ್ಟೊತ್ತಿನವರೆಗೆ ಶತ್ರುಗಳಾಗಿ ಪರಸ್ಪರ ಕಾದಾಡಿದ ವೀರ ವನಿತೆಯರು ಯುದ್ಧದ ರಸ ನಿಮಿಷಗಳನ್ನು ಹಂಚಿಕೊಳ್ಳುತ್ತ ನಗುತ್ತಾ ಬರುತ್ತಿರುತ್ತಾರೆ.

ನಂತರ ಚಂಗಳಿಕೆವ್ವನ ಮಗ ಚಿಲ್ಲಾಳನನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುತ್ತಾರೆ. ಮನೆಗೆ ಹೋಗುವಾಗ ಓಕುಳಿಯ ಅಂಕಣದಲ್ಲಿ ಬಿದ್ದ ಸಗಣಿಯನ್ನು ಎಲ್ಲರೂ ಇಷ್ಟಿಷ್ಟು ತೆಗೆದುಕೊಂಡು ಹೋಗುತ್ತಾರೆ.

ಈ ಸಗಣಿಯನ್ನು ಹೊಲಕ್ಕೆ ಹಾಕುವುದರಿಂದ ಹೊಲಗಳು ಹುಲುಸಾಗಿ ಬೆಳೆಯುತ್ತವೆ. ಬೆಳೆಗಳಿಗೆ ಕ್ರಿಮಿ ಕೀಟಗಳ ಬಾಧೆ ತಗುಲದಿಲ್ಲವೆನ್ನುವುದು ಗ್ರಾಮೀಣ ಜನರ ನಂಬುಗೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT