ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತ ಮಾಧುರ್ಯಕ್ಕೆ ತಲೆದೂಗಿದ ಜನ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ಸಭಿಕರು ಕೂರುವ ಜಾಗದಲ್ಲಿ ಸಹಸ್ರ ಗಾಯಕರು ನಿಂತು ಜನಪದ ಗಾನ ಸುಧೆ ಹರಿಸುತ್ತಿದ್ದರೆ ವೇದಿಕೆಯ ಮೇಲೆ ಹಾಗೂ ಅಕ್ಕ ಪಕ್ಕಗಳಲ್ಲಿ ಕುಳಿತ, ನಿಂತ ಜನರು ಗೀತೆಗಳಿಗೆ ತಲೆದೂಗಿದರು. ಬಯಲಲ್ಲಿ ಹರಿಯುತ್ತಿದ್ದ ಜನಪದ ಗೀತೆಗಳ ನಾದ ಕಡಲಲ್ಲಿ ಕೇಳುಗರೊಂದಿಗೆ ಹುಣ್ಣಿಮೆಯ ತಿಂಗಳು ಮಾವನೂ ಬಾನ ಮೇಲೆ ತೇಲುತ್ತಿದ್ದ.
 
ಯಾವುದು ವೇದಿಕೆ, ಯಾವುದು ಸಭಾಗೃಹ ಎಂಬುದೇ ತಿಳಿಯದಂತೆ ಜನ ಸಾಗರ ಅಲ್ಲಿ ತುಂಬಿ ತುಳುಕುತ್ತಿತ್ತು. ಜನಪದ ಗಾಯಕರು, ವಿದ್ವಾಂಸರು, ಕೇಳುಗರು ಎಂಬ ಭೇದವಿಲ್ಲದೇ ಎಲ್ಲರೂ ಜನಪದ ಸೊಲ್ಲಿಗೆ ಮನದಣಿಯೆ ಮಣಿದರು. ಜನಪದ ಗೀತ ಮಾಧುರ್ಯಕ್ಕೆ ನಮಿಸಿದರು.

ಇದೆಲ್ಲವೂ ನಡೆದದ್ದು ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಮಂಗಳವಾರ ರಂಗಸಂಸ್ಥಾನ ಆಯೋಜಿಸಿದ್ದ `ಕನ್ನಡ ಜಾನಪದ ಝೇಂಕಾರ~ ಕಾರ್ಯಕ್ರಮದಲ್ಲಿ. ತನ್ನ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ರಂಗಸಂಸ್ಥಾನ ಸಂಸ್ಥೆ ಒಂದೇ ವೇದಿಕೆಯಲ್ಲಿ ಒಂದು ಸಾವಿರ ಜನರಿಂದ ಜನಪದ ಗೀತೆಗಳನ್ನು ಹಾಡಿಸುವ ತನ್ನ ಮೊದಲ ಪ್ರಯೋಗದಲ್ಲಿಯೇ ಯಶಸ್ಸು ಕಂಡಿತು. ಸಾವಿರ ಜನ ಹಂತ ಹಂತವಾಗಿ ನಿಲ್ಲಲು ಅನುಕೂಲವಾಗುವಂತೆ ಸಂಸ ಬಯಲು ರಂಗಮಂದಿರದ ಸಭಿಕರು ಕೂರುವ ಜಾಗವನ್ನೇ ವೇದಿಕೆಯಾಗಿ ಮಾರ್ಪಡಿಸಲಾಗಿತ್ತು.

ರಾಜ್ಯದ ವಿವಿಧ ಭಾಗದ ಶಾಲಾ ಮಕ್ಕಳು ಹಾಗೂ ಜಾನಪದ ಆಸಕ್ತರನ್ನು ಒಂದು ಗೂಡಿಸಿ ಒಂದು ಸಾವಿರ ಜನ ಗಾಯಕರಿಂದ ಒಂದೇ ವೇದಿಕೆಯಲ್ಲಿ ಜನಪದ ಗೀತೆಗಳನ್ನು ಹಾಡಿಸಲಾಯಿತು. ನೂರು ಕಂಠಗಳು ಸೇರಿದರೂ ಒಂದೇ ಶ್ರುತಿಯಲ್ಲಿ ಹಾಡಿದ ಅನುಭವ ಅಪೂರ್ವವಾಗಿತ್ತು. ಕಾರ್ಯಕ್ರಮ ಜಾನಪದ ಸಂಸ್ಕೃತಿಗೆ ಸಾವಿಲ್ಲ ಎಂಬುದನ್ನು ಸಾರಿ ಹೇಳುವಂತಿತ್ತು.

ಕಾರ್ಯಕ್ರಮದಲ್ಲಿ `ಜಾನಪದ ತೇರು~ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, `ಜಾಗತೀಕರಣವನ್ನು ಜಾನಪದೀಕರಣದ ಮೂಲಕವೇ ಗೆಲ್ಲಬೇಕಿದೆ. ಜಾಗತೀಕರಣವನ್ನು ಎದುರಿಸುವ ಶಕ್ತಿ ಇರುವುದು ಜಾನಪದಕ್ಕೆ ಮಾತ್ರ. ಸಾವಿರ ಜನರಿಂದ ಜನಪದ ಗೀತೆಗಳನ್ನು ಒಂದೇ ವೇದಿಕೆಯ ಮೇಲೆ ಹಾಡಿಸಿದ ಕಾರ್ಯಕ್ರಮ ಇದೇ ಮೊದಲು.
 
ಇದು ಮಾರ್ಗದ ವಿರುದ್ಧ ದೇಸಿಗೆ ಹಾಗೂ ನಗರ ಪ್ರಜ್ಞೆಯ ವಿರುದ್ಧ ಗ್ರಾಮೀಣ ಪ್ರಜ್ಞೆಗೆ ಸಂದ ಜಯ. ಸರಳತೆ ಹಾಗೂ ಸಹಜತೆಯ ಜಾನಪದ ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ್ದು ಇಂದಿನ ಅನಿವಾರ್ಯವಾಗಿದೆ~ ಎಂದರು. ಸಂಗೀತ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಮಾತನಾಡಿ, `ಯಾವುದೇ ಶಾಸ್ತ್ರೀಯ ಸಂಗೀತದ ಕಂಠಗಳಿಗೆ ಕಡಿಮೆ ಇಲ್ಲದಂತೆ ಜನಪದ ಗೀತೆಗಳನ್ನು ಇಲ್ಲಿ ಹಾಡಲಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಡೆಸಲು ಸರ್ಕಾರ ಮುಂದಾಗಬೇಕು.

ಈ ಮೂಲಕ ಜನಪದ ಗೀತೆಗಳ ಪರಂಪರೆಯ ಉಳಿವು ಸಾಧ್ಯ~ ಎಂದು ಅವರು ಅಭಿಪ್ರಾಯ ಪಟ್ಟರು.
ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡ ಅವರು `ಜಾನಪದ ಮಕರಂದ~ ಪುಸ್ತಕವನ್ನು ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ `ಜಾನಪದ ಝೇಂಕಾರ~ ಜನಪದ ಗೀತೆಗಳ ಸಿಡಿಯನ್ನು ಬಿಡುಗಡೆಗೊಳಿಸಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ, ಸುಗಮ ಸಂಗೀತ ಗಾಯಕ ವೈ.ಕೆ.ಮುದ್ದುಕೃಷ್ಣ, ಜನಪದ ಗಾಯಕರಾದ ಬನ್ನೂರು ಕೆಂಪಮ್ಮ ಮತ್ತು ಕೊಪ್ಪಳದ ಮರೆಪ್ಪ ಚೆನ್ನದಾಸರ ಅವರಿಗೆ ರಂಗಸಂಸ್ಥಾನ ದಶಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜನಪದ ಗಾಯಕರಾದ ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಾರ್ದನ (ಜನ್ನಿ),  ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ರಂಗಸಂಸ್ಥಾನದ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT