ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾ ಮಹಾಭಿಯಾನ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 2007ರಲ್ಲಿ ಆರಂಭವಾದ ಭಗವದ್ಗೀತಾ ಅಭಿಯಾನ ಈಗ 5ನೇ ವರ್ಷದಲ್ಲಿದೆ. ಇದು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲ್ಲೂಕು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ರೂಪಿಸಿದ ಕಾರ್ಯಕ್ರಮ.

`ವಿಕೃತ ಮನಸ್ಸುಗಳು ವಿಶ್ವದೆಲ್ಲೆಡೆ ಸೃಷ್ಟಿಸಿದ ತಲ್ಲಣಕ್ಕೆ, ಮತಧರ್ಮವನ್ನು ಮೀರಿದ ಆದರೆ ಎಲ್ಲ ಧರ್ಮಗಳ ಸಾರವನ್ನು ಹೊತ್ತ ಭಗವದ್ಗೀತೆಯ ದಿವ್ಯ ಸಂದೇಶವೇ ಪರಿಹಾರ~ ಎನ್ನುವುದು ಶ್ರೀಗಳ ನಂಬಿಕೆ. ಅದಕ್ಕಾಗಿಯೇ ಗೀತೆಯ ಸಾರವನ್ನು ನಾಡಿನುದ್ದಕ್ಕೆ ಸಾರುವ ಮಹಾ ಸಂಕಲ್ಪ ಕೈಗೊಂಡರು.

ನೈತಿಕ ಮೌಲ್ಯಗಳ ಆಧಾರದ ಮೇಲೆ ವ್ಯಕ್ತಿತ್ವ ವಿಕಸನ, ಸಾಮಾಜಿಕ ಸ್ವಾಸ್ಥ್ಯ ರಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯ ಈ ಅಭಿಯಾನದ ಮುಖ್ಯ ಗುರಿ. ಇದಕ್ಕಾಗಿ ನಾಡಿನ ಚಿಂತಕರು, ವಿದ್ವಾಂಸರು, ಸಾಧು-ಸಂತರು, ಸಮಾಜ ಸೇವಕರು, ಸಾರ್ವಜನಿಕರನ್ನು ನೇರವಾಗಿ, ವ್ಯವಸ್ಥಿತವಾಗಿ ಸಂಪರ್ಕಿಸುತ್ತ ಅಭಿಯಾನವನ್ನು ಮುನ್ನಡೆಸಿದರು. ಇದೊಂದು ತಪಸ್ಸು ಎನ್ನುವಂತೆ ತಾವೂ ತೊಡಗಿಸಿಕೊಂಡು ಜನತೆಯನ್ನೂ ಪ್ರೇರೇಪಿಸಿದರು. ಇದಕ್ಕೆ ಸ್ಪಂದಿಸಿದ ಜನಸಮೂಹ ಜಾತಿ, ಮತ, ಪಂಥ, ಲಿಂಗ ಭೇದವನ್ನು ಮೀರಿ ಕೈಜೋಡಿಸಿದ್ದು ಯಶಸ್ಸಿಗೆ ಮುಖ್ಯ ಕಾರಣ.

ಕಂಠಪಾಠ, ಉಪನ್ಯಾಸ, ಕಲಾಪ್ರಕಾರ, ಗೀತಾವೈಭವ, ಗೀತಾಪುಸ್ತಕ ವಿತರಣೆ ಈ ಐದು ಮಾರ್ಗದ ಮೂಲಕ ಭಗವದ್ಗೀತೆಯನ್ನು ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲ ವಯೋಮಾನದವರಿಗೆ ತಲುಪಿಸುವ ಪ್ರಯೋಗಕ್ಕೆ ಯಶ ದೊರಕಿದ್ದು ಸಂಘಟಕರ ಉತ್ಸಾಹ ಹೆಚ್ಚಿಸಿದೆ. 

ಮಕ್ಕಳು ಮತ್ತು ಮಹಿಳೆಯರಿಗೆ ಗೀತೆಯ 15ನೇ ಅಧ್ಯಾಯ ಕಂಠಪಾಠಕ್ಕಾಗಿ ಸುಶ್ರಾವ್ಯ ಗಾಯನದ ಸೀಡಿಗಳನ್ನು ಹೊರತರಲಾಗಿದೆ. ಒಟ್ಟು 30 ಜಿಲ್ಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಕಂಠಪಾಠ ಕೇಂದ್ರಗಳು ನಡೆದಿವೆ. ನೃತ್ಯರೂಪಕ, ಯಕ್ಷಗಾನ, ಹರಿಕಥೆಗಳ ಮೂಲಕ ಗೀತೆಯ ವಸ್ತು ಮತ್ತು ತತ್ತ್ವವನ್ನು ಪ್ರತಿಪಾದಿಸಲಾಗಿದೆ. ಪ್ರತಿ ಮನೆಯಲ್ಲೂ ಭಗವದ್ಗೀತೆ ಇರಬೇಕು ಎಂಬ ಉದ್ದೇಶದಿಂದ ಸುಮಾರು 15 ಲಕ್ಷಕ್ಕೂ ಮೀರಿ ಪುಸ್ತಕ ವಿತರಿಸಲಾಗಿದೆ.

ಇಂಥ ಬೃಹತ್ ಅಭಿಯಾನದ ಯಶಸ್ಸಿಗಾಗಿ ಸಹಸ್ರಾರು ಕಾರ್ಯಕರ್ತರು ದುಡಿದಿದ್ದಾರೆ. ಇದಕ್ಕೆ ಕಳಸವಿಟ್ಟಂತೆ ಕಳೆದ 8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ, ಎಲ್ಲ ಜಿಲ್ಲೆಗಳ ಪ್ರತಿನಿಧಿಗಳನ್ನೊಳಗೊಂಡ ಜನತಾ ಸಮೂಹದ ಸಮ್ಮುಖದಲ್ಲಿ ರಾಜ್ಯಮಟ್ಟದ `ಮಹಾಸಮರ್ಪಣೆ~ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT