ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಯಲ್ಲಿಯೇ ಉಳಿದ ಟ್ರೀ ಪಾರ್ಕ್!

Last Updated 7 ಜುಲೈ 2012, 10:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಸಿರು ವಲಯ ನಿರ್ಮಾಣದ ಜತೆಗೆ, ಜನರಿಗೆ ಅರಣ್ಯದ ಹಿತಾನುಭವ ಕಲ್ಪಿಸುವ ಅರಣ್ಯ ಇಲಾಖೆಯ `ಟ್ರೀ ಪಾರ್ಕ್~ ಯೋಜನೆಗೆ ಬರದ ಬಿಸಿ ತಟ್ಟಿದೆ.

ನಗರದ ಹೊರವಲಯದ ಜೋಗಿಮಟ್ಟಿ ಅರಣ್ಯ ಪ್ರದೇಶ ಪ್ರವೇಶಿಸುವ ಮಾರ್ಗದಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ  ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು ್ಙ 75 ಲಕ್ಷ ಅನುದಾನ ಮಂಜೂರಾಗಿದೆ. ಆದರೆ, ಈ ಅನುದಾನದವನ್ನು ಪರಿಪೂರ್ಣವಾಗಿ ನಿಗದಿತ ಅವಧಿಯಲ್ಲಿ ಬಳಸಲು ಸಾಧ್ಯವಾಗಿಲ್ಲ.

ಅರಣ್ಯ ಇಲಾಖೆ ಎರಡು ವರ್ಷಗಳ ಹಿಂದೆ `ಟ್ರೀ ಪಾರ್ಕ್~ ಯೋಜನೆಯನ್ನು ಕೈಗೆತ್ತಿಕೊಂಡಿತು. ಲಾಲ್‌ಬಾಗ್ ಮಾದರಿಯಲ್ಲಿ ಉದ್ಯಾನ ಬೆಳೆಸುವ ಜತೆಗೆ, ಪರಿಸರ ಸಮತೋಲನ ಕಾಪಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹಲವು ಬಗೆಯ ಗಿಡಗಳನ್ನು ನೆಡುವುದು, ಔಷಧ ಸಸ್ಯಗಳನ್ನು ಬೆಳೆಸುವುದು, ಪಾದಚಾರಿ ಮಾರ್ಗ ನಿರ್ಮಿಸುವುದು, ಉದ್ಯಾನ ಹಾಗೂ ಮಕ್ಕಳ ಪಾರ್ಕ್, ನರ್ಸರಿ ಮತ್ತು ವೃದ್ಧರಿಗೆ ವಿಶ್ರಾಂತಿ ಪಡೆಯಲು ವಿಶಾಲವಾದ ಜಾಗ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಈ ಮೂಲಕ ವಾರಾಂತ್ಯದಲ್ಲಿ ಮತ್ತು ಬಿಡುವಿನ ವೇಳೆಯಲ್ಲಿ ತಮ್ಮ ಸಮಯ ಕಳೆಯಲು ಆಗಮಿಸುವ ನಾಗರಿಕರಿಗೆ ಅರಣ್ಯದ ವಾತಾವರಣದಲ್ಲಿ ವಿಶ್ರಾಂತಿ ಪಡೆಯುವಂತೆ ಅನುಕೂಲ ಕಲ್ಪಿಸುವುದು ಯೋಜನೆ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಕನಿಷ್ಠ 10 ಸಾವಿರ ಗಿಡಗಳನ್ನು ನೆಡುವ ಮೂಲಕ ಮಣ್ಣು ಸವಕಳಿ ತಡೆಯುವ ಅಂಶವನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಜನರ ಸುರಕ್ಷತೆಗಾಗಿ `ಟ್ರೀ ಪಾರ್ಕ್~ ಸುತ್ತ ಬೇಲಿ ಹಾಕಲಾಗುವುದು. ಇದರಿಂದ ಪ್ರಾಣಿಗಳ ಹಾವಳಿ ತಡೆಗಟ್ಟಲು ಮತ್ತು ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ರೂಪಿಸಿ ಅನುಮೋದನೆ ಪಡೆಯಲಾಗಿತ್ತು. ರಾಜ್ಯ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಲು ್ಙ 50 ಲಕ್ಷ ಬಿಡುಗಡೆ ಮಾಡಿತ್ತು. ಆದರೆ, ಕಳೆದ ವರ್ಷ ಬರ ಪರಿಸ್ಥಿತಿ ಉಂಟಾಗಿದ್ದರಿಂದ ಈ ಯೋಜನೆಗೆ ಹಿನ್ನೆಡೆ ಉಂಟಾಯಿತು. ಮಳೆಯಾಗದ ಪರಿಣಾಮ `ಟ್ರೀ ಪಾರ್ಕ್~ನಲ್ಲಿ ಗಿಡಗಳನ್ನೇ ನೆಡಲು ಸಾಧ್ಯವಾಗಲಿಲ್ಲ. ಇದರಿಂದ ಈ ಯೋಜನೆ ಬಾಲಗ್ರಹಪೀಡಿತವಾಯಿತು.
ಈ ವರ್ಷವೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಪ್ರಸಕ್ತ ವರ್ಷ ರಾಜ್ಯ ಸರ್ಕಾರ ರೂ 25 ಲಕ್ಷ ಬಿಡುಗಡೆ ಮಾಡಿದ್ದರೂ ಬಳಸಲು ಸಾಧ್ಯವಾಗುತ್ತಿಲ್ಲ.

ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡಿರುವುದನ್ನು ಬಿಟ್ಟರೆ ಮತ್ತೆ ಯಾವುದೇ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ವರುಣ ಕೃಪೆ ದೊರೆತರೆ ಮಾತ್ರ ಗಿಡಗಳನ್ನು ನೆಡಲು ಚಾಲನೆ ದೊರೆಯಲಿದೆ. ಸತತ ಎರಡನೇ ವರ್ಷ ಮಳೆರಾಯ ಕೈಕೊಟ್ಟಿದ್ದರೂ ಆಶಾಭಾವ ಹೊಂದಿರುವ ಅಧಿಕಾರಿಗಳು ಈ ಯೋಜನೆ  ಅನುಷ್ಠಾನಗೊಳಿಸಿ `ಮಾದರಿ ಪಾರ್ಕ್~ ಅನ್ನಾಗಿ ರೂಪಿಸುವ ಆಶಾಭಾವ ವ್ಯಕ್ತಪಡಿಸುತ್ತಾರೆ.

`ಯೋಜನೆ ಪ್ರಗತಿಯಲ್ಲಿದೆ. ಗಿಡಗಳನ್ನು ನೆಡಬೇಕು. ಆದರೆ, ಮಳೆ ಇಲ್ಲ. `ಟ್ರೀ ಪಾರ್ಕ್~ನಲ್ಲಿ ಜನರು ಸಂಚರಿಸಿದರೆ ಅರಣ್ಯದಲ್ಲಿ ನಡೆದಾಡುತ್ತಿದ್ದೇವೆ ಎನ್ನುವ ಅನುಭವವಾಗಬೇಕು. ಆ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ~ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಕುಮಾರಸ್ವಾಮಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT