ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಂದನೆಗೆ ಭಕ್ತ ಸಾಗರ

Last Updated 3 ಡಿಸೆಂಬರ್ 2012, 7:42 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮುಗಳಖೋಡ- ಜಿಡಗಾದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಅವರಿಗೆ ಸುವರ್ಣ ಕಿರೀಟವನ್ನು ಗಣ್ಯರು ತೊಡಿಸುವ ಮೂಲಕ ಗುರುವಂದನೆ ಸಲ್ಲಿಸಿದರು.

ಬೆಳಗಾವಿಯ ಬಾಲಭವನ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 28ನೇ ಗುರುವಂದನೆ, `ಸಿದ್ಧಶ್ರೀ'  ಪ್ರಶಸ್ತಿ ಪ್ರದಾನ, ಸರ್ವ ಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮುರುಘರಾಜೇಂದ್ರ ಸ್ವಾಮೀಜಿಗೆ ಸಹಸ್ರಾರು ಭಕ್ತರು ಗುರುವಂದನೆ ಸಲ್ಲಿಸುವ ಮೂಲಕ ಭಕ್ತಿ ಸಾಗರದಲ್ಲಿ ತೇಲಿದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎನ್. ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸ್ವಾಮೀಜಿಗಳಿಗೆ ಸುವರ್ಣ ಕಿರೀಟ ತೊಡಿಸಿ, ಸುವರ್ಣ ಮಾಲೆಯನ್ನು ಅರ್ಪಿಸಲಾಯಿತು. ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಸಿದ್ಧಶ್ರೀ ಆಡಳಿತ ಭವನ ಉದ್ಘಾಟನೆ ಹಾಗೂ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, `ಬಲಾಢ್ಯ ಸಮುದಾಯವು ತುಳಿತಕ್ಕೊಳಗಾದ ಸಮುದಾಯದವರನ್ನು ಮೇಲಕ್ಕೆ ಎತ್ತಬೇಕು. ನಮ್ಮ ಆಚಾರದಿಂದ ಅರಸನಾಗಬೇಕು. ಯಾವುದೇ ತಾರತಮ್ಯ ಮಾಡದೇ ವೀರಶೈವ ಮಠಗಳು ಎಲ್ಲ ಸಮುದಾಯದವರಿಗೆ ಶಿಕ್ಷಣ ದಾಸೋಹ ನೀಡಿವೆ' ಎಂದು ಹೇಳಿದರು.

`ಮಠಾಧೀಶರು ಧರ್ಮ ಪ್ರಜ್ಞೆ, ಸಮಾಜ ಪ್ರಜ್ಞೆ ಮೂಡಿಸಿ, ಅರ್ಧರ್ಮದಲ್ಲಿ ಮುನ್ನಡೆಯದಂತೆ ಎಚ್ಚರಿಸಬೇಕು. ಭಕ್ತರ ಬಾಳಿನ ಕತ್ತಲೆಯನ್ನು ದೂರ ಮಾಡಬೇಕು' ಎಂದ ಅವರು, ಚುನಾಯಿತ ಪ್ರತಿನಿಧಿಯು ನಾಡನ್ನು ಕಟ್ಟುವ ಕೆಲಸ ಮಾಡಬೇಕು. ಮಾದರಿ ರಾಜ್ಯ ಮಾಡುವ ನಿಟ್ಟಿನಲ್ಲಿ ನನಗೆ ಮತ್ತೆ ಅವಕಾಶ ಸಿಗಲಿ' ಎಂದು ಆಶಿಸಿದರು.

ಶಾಲೆಯ ಕಟ್ಟಡಕ್ಕೆ ಅಡಿಗಲ್ಲು ಹಾಕಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, `ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಮಠಗಳು ಮಾಡುತ್ತಿವೆ. ಬಡವ ಜನರಿಗೆ ಶಿಕ್ಷಣ- ಅನ್ನ ದಾಸೋಹ ಮಾಡುವ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡುತ್ತಿವೆ. ಮಠಾಧೀಶರು ಇನ್ನಷ್ಟು ಶ್ರಮಿಸುವ ಮೂಲಕ ಸಮಾಜವನ್ನು ಮುನ್ನಡೆಸಲಿ' ಎಂದು ಹೇಳಿದರು.

ಸಸಿ ವಿತರಿಸಿ ಮಾತನಾಡಿದ ಬಿ.ಎಸ್.ಆರ್. ಪಕ್ಷದ ಅಧ್ಯಕ್ಷ ಶ್ರೀರಾಮುಲು, `ಈ ಭಾಗದ ಮಠಗಳು ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿವೆ. ಬಸವಣ್ಣ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿವೆ. ಶೋಷಿತರಿಗೆ ರಾಜಕಾರಣಿಗಳಿಂದ ನ್ಯಾಯ ಸಿಗುತ್ತಿಲ್ಲ. ಆದರೆ, ಮಠಗಳು ಇವರಿಗೆ ನ್ಯಾಯವನ್ನು ದೊರಕಿಸಿಕೊಡುತ್ತಿವೆ' ಎಂದು ಅಭಿಪ್ರಾಯಪಟ್ಟರು.

`ದಿವ್ಯ ಬೆಳಕು' ಪುಸ್ತಕ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, `ಬಸವಣ್ಣನ ನೆಲದಲ್ಲಿ ಜಾತಿವಾದ ನಡೆಯುತ್ತಿರುವುದು ದುರಂತವಾಗಿದೆ. ಹೀಗಿದ್ದರೂ ಮುಗಳಖೋಡ- ಜಿಡಗಾ ಮಠವು ಜಾತಿವಾದವನ್ನು ಮೀರಿರುವುದರಿಂದ ಎಲ್ಲ ಧರ್ಮದವರ ಶ್ರದ್ಧಾಕೇಂದ್ರವಾಗಿದೆ' ಎಂದು ಹೇಳಿದರು.

ಆರ್ಟ್ ಆಫ್ ಲೀವಿಂಗ್‌ನ ಸಂಸ್ಥಾಪಕ ರವಿಶಂಕರ ಗುರೂಜಿ ಅವರಿಗೆ 1 ಲಕ್ಷ ರೂಪಾಯಿ ನಗದು ಹಾಗೂ ಬೆಳ್ಳಿ ಕಿರೀಟವನ್ನು ಒಳಗೊಂಡ `ಸಿದ್ಧಶ್ರೀ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಜೋಡಿಗಳ ಸರ್ವ-ಧರ್ಮ ಸಾಮೂಹಿಕ ವಿವಾಹಗಳು ನಡೆದವು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎ.ಬಿ. ಪಾಟೀಲ, ಶಾಸಕ ಆನಂದ ಮಾಮನಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್, ಮಾಜಿ ಸಚಿವರಾದ ಬಸವರಾಜ ಪಾಟೀಲ ಯತ್ನಾಳ, ಬಂಡೆಪ್ಪ ಕಾಶೆಂಪೂರ ಮತ್ತಿತರರು ಹಾಜರಿದ್ದರು. ಶಂಕರ ಪ್ರಕಾಶ್ ನಿರೂಪಿಸಿದರು. ರೂಪಾ ಗೊಳಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT