ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಜಾರ್ ಎಂಬ ಕವಿತೆ...

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

`ಸಾಬ್ ಆಟೊಗ್ರಾಫ್ ಪ್ಲೀಸ್' ಎನ್ನುತ್ತಿತ್ತು ಉದ್ದಾನುದ್ದದ ಸರತಿ ಸಾಲು. ಅವರದೋ ಬೆಳ್ಳಂಬೆಳಕೂ ನಾಚುವಂಥ ಬಿಳಿ ಉಡುಗೆ. ಕೈಯಲ್ಲೊಂದು ಪುಸ್ತಕ. ಮಾತು ಅರಳೆಯಷ್ಟು ಮೆತ್ತಗೆ. ನಡುವೆ ಮಿರ್ಜಾ ಗಾಲಿಬ್ ಅಥವಾ ಯಾವುದೋ ಶಾಯಿರಿಯ ಮಿಂಚು.

ಅವರು ಕವಿ ಗುಲ್ಜಾರ್. ಹಾಗೆಂದರೆ ಅನೇಕರಿಗೆ ಥಟ್ಟನೆ ನೆನಪಾಗದು. `ಕಜ್‌ರಾರೇ ಕಜ್‌ರಾರೇ' ಅಥವಾ `ಬೀಡಿ ಜಲೈಲೆ' ಗುಲ್ಜಾರ್ ಎಂದರೆ ಸಾಕು ಅನೇಕರಿಂದ `ಹೋ' ಎನ್ನುವ ಉದ್ಗಾರ. ಆದರೆ ಇದೆಲ್ಲಾ ಆ ಹಿರಿಯ ಕವಿಗೆ ಬೇಕಿಲ್ಲ. ಹಾಗೆಂದೇ ಮಾತಿಗೆ ಮೊದಲು ಸಿನಿಮಾ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ ಎಂಬ ಷರತ್ತು. ಎಷ್ಟಾದರೂ ಕವಿಯಲ್ಲವೇ? ತಮ್ಮ ಷರತ್ತನ್ನು ತಾವೇ ಮುರಿದರು. ಸಂದರ್ಭ: ಬೆಂಗಳೂರು ಸಾಹಿತ್ಯ ಉತ್ಸವ.

ಬದುಕಿನ ಮೊದಲ ದಿನಗಳು. ಆಗಿನ್ನೂ ಅವರು `ಗುಲ್ಜಾರ್' ಅಲ್ಲ, ಕೇವಲ ಸಂಪೂರ್ಣ್ ಸಿಂಗ್ ಕಲ್ರಾ. ಮನೆಯಲ್ಲಿ ಅವರೊಬ್ಬ ವಣಿಕನಾಗಬೇಕೆಂಬ ಆಸೆ. ಆದರೆ ಅವರೊಳಗಿನ ಸೃಜನಶೀಲತೆ ಅದಕ್ಕೆ ಅವಕಾಶ ನೀಡಲಿಲ್ಲ. ದೆಹಲಿಯ ಗೆಳೆಯರಿಂದಾಗಿ ಮಗ ಕೆಟ್ಟ ಎಂಬ ಆತಂಕ ಅಪ್ಪ ಅಮ್ಮನಿಗೆ. ದೂರದ ಮುಂಬೈಗೆ ಅವರನ್ನು ಸಾಗಹಾಕಿದರು. ಅದೊಂದು ರೀತಿ ಒಳ್ಳೆಯದೇ ಆಯಿತು ಎಂಬ ಭಾವ ಹುಡುಗನಿಗೆ. ಲೆಕ್ಕ ಬರೆಯಬೇಕಿದ್ದ ಕೈ ಪದ್ಯ ಬರೆಯತೊಡಗಿತು, ಚಿತ್ರರಂಗದ ಬಾಗಿಲು ತಟ್ಟಿತು.

ಕಷ್ಟದ ದಿನಗಳು ಸರಿಯತೊಡಗಿದವು. ಗೀತರಚನೆಕಾರರಾದವರು ಅನೇಕ ಚಿತ್ರಗಳಿಗೆ ಸಂಭಾಷಣೆ ಬರೆದರು. ಎಪ್ಪತ್ತನೇ ದಶಕದ ಹೊತ್ತಿಗೆ ನಿರ್ದೇಶನಕ್ಕೂ ಕೈ ಹಾಕಿದರು. ಹೀಗೆ ಹಲವು ದೋಣಿಗಳಲ್ಲಿ ಯಾನ ಆರಂಭವಾಯಿತು. ಎಲ್ಲ ಕ್ಷೇತ್ರಗಳಲ್ಲೂ ಆಟವಾಡಬಲ್ಲ ಈ `ಬಹುರೂಪಿತ್ವ' ಸಾಧ್ಯವಾದದ್ದು ಹೇಗೆ ಎಂಬ ಪ್ರಶ್ನೆಗೆ ರೂಪಕವೊಂದನ್ನು ಬಿಚ್ಚಿಟ್ಟರು. `ಮನೆಯಲ್ಲಿ ಹೆಣ್ಣುಮಕ್ಕಳು ಎಲ್ಲ ಬಗೆಯ ಅಡುಗೆಯನ್ನೂ ಮಾಡುತ್ತಾರೆ. ಸಾಂಬಾರು ಮಾಡಲು ಬರುವವರಿಗೆ ಅನ್ನ ಕೂಡ ಮಾಡಲು ಬರುತ್ತದೆ. ಹಾಗೆಯೇ ನನ್ನ ಕೆಲಸವೂ'...

ಯಶ್ ಚೋಪ್ರಾ ಅವರಷ್ಟೇ ಸಲೀಸಾಗಿ ಎ.ಆರ್.ರೆಹಮಾನ್ ಅವರಂಥ ಹೊಸ ಪೀಳಿಗೆಯ ಪ್ರತಿಭೆಗಳಿಗೂ ಅವರ ಬರವಣಿಗೆ ಇಷ್ಟ. ಎಂಬತ್ತು ದಾಟಿದ ನಂತರವೂ `ದಿಲ್ ತೋ ಬಚ್ಚಾ ಹೈ ಜೀ' ಎಂದು ಬರೆಯಬಲ್ಲ ಏರು ಜವ್ವನ ಅವರದ್ದು. ಇದರ ಹಿಂದಿನ ಗುಟ್ಟು `ಎಲ್ಲಿಯೂ ನಿಲ್ಲದಿರು' ಎನ್ನುವ ಅವರ ಜಂಗಮ ಸ್ವಭಾವವಂತೆ.

`ಯುವಜನರಲ್ಲಿ ಕೋರುವುದಿಷ್ಟೇ. ನನ್ನನ್ನು ದಯವಿಟ್ಟು ಭೂತದಲ್ಲಿಯೇ ಬಿಡಬೇಡಿ. ಇವತ್ತಿನ ಕಾಲದೊಂದಿಗೆ ನಾನಿರಬೇಕು. ಜತೆಜತೆಗೆ ಕೈ ಹಿಡಿದು ನಡೆಸಿ. ನಿಮ್ಮಿಂದ ಕಲಿಯುವುದು ಸಾಕಷ್ಟಿದೆ' ಎಂಬ ಮಾತು ಅವರಿಂದ.

ಅವರೊಳಗಿನ ಗೀತರಚನೆಕಾರ ಹಾಗೂ ಕವಿಯ ನಡುವೆ ಸ್ಪಷ್ಟ ಗೆರೆಯಿದೆ. `ಇಬ್ಬರೂ' ಒಬ್ಬರ ಮೇಲೊಬ್ಬರು ಸವಾರಿ ಮಾಡಿಕೊಳ್ಳದಂತೆ ಎಚ್ಚರವಹಿಸಿದ್ದಾರೆ. `ನನ್ನ ಭಾವಗಳನ್ನು ಹೇಳಿಕೊಳ್ಳಲು ಪುಸ್ತಕಗಳನ್ನು ನೆಚ್ಚಿದ್ದೇನೆ. ಆದರೆ ಸಿನಿಮಾದ ವಿಷಯಕ್ಕೆ ಬಂದಾಗ ಅಲ್ಲಿನ ಪಾತ್ರಕ್ಕೆ ಬದ್ಧ' ಎನ್ನುತ್ತಾರೆ.

ಗುಲ್ಜಾರ್ ಛಾಯೆ ಕೆಲವು ಕವಿಗಳು, ಗೀತರಚನೆಕಾರರಲ್ಲಿ ಇಣುಕಿರುವುದುಂಟು. ಆದರೆ ಈ ಬಗ್ಗೆ ಅವರಿಗೆ ಆಕ್ಷೇಪಗಳಿಲ್ಲ. `ನಾನು ಕೂಡ ಗಾಲಿಬ್‌ನಿಂದ ಕಲಿಯುವುದು ಸಾಕಷ್ಟಿದೆ. ಅಂದಮಾತ್ರಕ್ಕೆ ಅದು ನಕಲಾಗುವುದಿಲ್ಲ. ಅಲ್ಲದೆ ಎಲ್ಲರೂ ಅನುಕರಣೆ ಮಾಡುತ್ತಾರೆ ಎಂದು ಸಾಮಾನ್ಯೀಕರಿಸುವುದು ಸಾಧ್ಯವಿಲ್ಲ' ಎಂದು ಉತ್ತರಿಸುತ್ತಾರೆ.

ಉರ್ದು ಅವರನ್ನು ಪ್ರಭಾವಿಸಿರುವುದರ ಸುತ್ತ ಮಾತು ಹೊರಳಿತು. ಕಳೆದ ಒಂದೆರಡು ದಶಕಗಳಿಂದೀಚೆಗೆ ಹಿಂದಿ ಜನರಿಗೆ ಹೆಚ್ಚು ಹತ್ತಿರವಾಗಿದೆ. ಅದರ ಸಂಸ್ಕೃತತೆ ಕಡಿಮೆಯಾಗಿದೆ. ಶೇಕಡಾ ಎಂಬತ್ತರಷ್ಟು ಹಿಂದಿಯಲ್ಲಿ ಉರ್ದು ಪದಗಳಿವೆ. ಉರ್ದು ಒಂದು ಕಾವ್ಯಮಯ ಭಾಷೆ. ಇಂಥ ಬದಲಾವಣೆ ಉರ್ದುವಿನಲ್ಲೂ ಸಾಕಷ್ಟಾಗಿದೆ. ಆಧುನಿಕ ದೋಹಾಗಳೆಲ್ಲಾ ಪಾಕಿಸ್ತಾನದಿಂದ ಬಂದವು. ಮೊದಲೆಲ್ಲಾ ಉರ್ದುವಿಗೆ ಆ ದೇಶ, ಈ ದೇಶ ಎಂಬ ಗಡಿ ಇರಲಿಲ್ಲ...

ಸಂಗೀತದಂತೆ ಕವಿತೆಯನ್ನು ಒಲಿಸಿಕೊಳ್ಳಲು ಕೂಡ ತಾಲೀಮು ಬೇಕು ಎನ್ನುವ ಅವರು, ಯಾವುದೇ ಕವಿ ಸ್ವೋಪಜ್ಞತೆಯನ್ನು ಕಾಪಾಡಿಕೊಳ್ಳಬೇಕು. ಸಮಾಜವನ್ನು ನೋಡುವ ಬಗೆಯಲ್ಲಿ ಆತನ ಸ್ವೋಪಜ್ಞತೆ ಅಡಗಿದೆ ಎಂದು ಗಟ್ಟಿಯಾಗಿ ನಂಬಿದ್ದಾರೆ.
ಚಿತ್ರ: ಬಿ.ಕೆ.ಜನಾರ್ದನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT