ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳಿಕೆನ್ನೆಯ ಚೆಲುವೆ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಎಷ್ಟೊಂದು ಮುದ್ದಾಗಿ ನಗುವ ಮಗುವೆಂದು ವರ್ಷಗಳ ಹಿಂದೆ ಮುದ್ದಾಡಿದವರು ಬಹಳಷ್ಟು. ಪುಟ್ಟ ಹೆಜ್ಜೆ ಇಟ್ಟಾಗಿನಿಂದಲೂ ಎಲ್ಲರೂ ಹೊಗಳಿದ್ದು ಚೆಂದದ ಕೆನ್ನೆಯಲ್ಲಿ ಬೀಳುತ್ತಿದ್ದ ಗುಳಿಯನ್ನು. ಅದೇ ಬಾಲಕಿ ವೈದೇಹಿ ಈಗ ಯುವತಿ.
 
ಈಗಲೂ ಗ್ಲಾಮರ್ ಲೋಕದ ಬೆಳಕಿನಲ್ಲಿ ಎದ್ದು ಕಾಣಿಸುತ್ತಿರುವುದು ಅದೇ ಚೆಂದದ ನಗೆಯಿಂದ. `ನಿವಿಯಾ ಮಿಸ್ ಬ್ಯೂಟಿಫುಲ್ ಸ್ಮೈಲ್~ ಗೌರವವೂ ಸಿಕ್ಕಿದೆ. ಮಂದಹಾಸವೇ ಈ ಚೆಲುವೆಯ ಬಂಡವಾಳ.

ಕ್ಯಾಮೆರಾ ಮುಂದೆ ನಿಂತು ನಕ್ಕಾಗಲೆಲ್ಲ ಹೊಸದೊಂದು ಅವಕಾಶ ಸಿಕ್ಕಿದೆ. ಆದ್ದರಿಂದಲೇ ಇವಳಿಗೆ ಸಂತೋಷ. ಜತಿನ್ ಕೋಚರ್, ಲೀಲಾ ಲುಲಾ, ಅತುಲ್ ಗಂಗ್ವಾನಿ... ಹೀಗೆ ಹತ್ತಾರು ಫ್ಯಾಷನ್ ವಿನ್ಯಾಸಕರ ಪ್ರದರ್ಶನಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿರುವ ಹುಡುಗಿಗೆ ಹೆಚ್ಚು ಯಶಸ್ಸು ಸಿಕ್ಕಿದ್ದು ಜಾಹೀರಾತು ತುಣುಕುಗಳಲ್ಲಿ ಮುಖ ತೋರಿಸಿದಾಗ.
 
ಒಂದಿಷ್ಟು ಅಭಿನಯದ ಪಾಠ ಕಲಿತು ಈಗ ನಟಿಯಾಗುವತ್ತ ಗಮನ. ದಿಲ್ಲಿ ಬಿಟ್ಟು ಬಂದಾಗಿದೆ. ದಕ್ಷಿಣದ ಸಿನಿಮಾಗಳಿಗೆ ಒಪ್ಪುವ ತನ್ನ ರೂಪಕ್ಕೆ ಹಿರಿತೆರೆಯಲ್ಲಿ ತಕ್ಕ ಬೆಲೆ ಬರುವುದೆಂದು ಕನಸು ಕಟ್ಟಿಕೊಂಡು ಕಾಯುತ್ತಿದ್ದಾಳೆ. ಗಿಟ್ಟಿಸಿದರೆ ದೊಡ್ಡ ಅವಕಾಶ; ಇಲ್ಲದಿದ್ದರೆ ರ‌್ಯಾಂಪ್ ಶೋ ಹಾಗೂ ಜಾಹೀರಾತುಗಳಲ್ಲಿಯೇ ಸಾವಕಾಶವಾಗಿ ಬದುಕು  ಸಾಗಲಿ ಎಂದು ನಿರ್ಣಯಿಸಿರುವ ಈ `ಸ್ಮೈಲಿಂಗ್ ಬ್ಯೂಟಿ~ಯ ಜೊತೆಗೊಂದಿಷ್ಟು ಚುಟುಕು ಮಾತು...

ದಕ್ಷಿಣದ ಸಿನಿಮಾ, ಸ್ಯಾಂಡಲ್‌ವುಡ್ ಕನಸು?

ವೈಯಕ್ತಿಕವಾಗಿ ನಾನು ಮೆಚ್ಚಿಕೊಳ್ಳುವುದು ದಕ್ಷಿಣದ ಸಿನಿಮಾ. ನನ್ನ ರೂಪವೂ ಇಲ್ಲಿನವರ ಇಷ್ಟಕ್ಕೆ ಒಪ್ಪುವಂತಿದೆ. ಕನ್ನಡವೊಂದೇ ಅಲ್ಲ, ದಕ್ಷಿಣದ ಯಾವುದೇ ಭಾಷೆಯಲ್ಲಿ ಅಭಿನಯಿಸಲು ಸಿದ್ಧ. ಆದರೆ ಉತ್ತಮವಾದ ಪಾತ್ರ ಒಪ್ಪಿಕೊಳ್ಳುವುದು ಹಾಗೂ ಒಳ್ಳೆಯ ಜನರೊಂದಿಗೆ ಕೆಲಸ ಮಾಡುವುದು ಉದ್ದೇಶ ಹಾಗೂ ಗುರಿ.

ರೂಪದರ್ಶಿಯಾಗಿ ಅನುಭವ?

ಶಾಲೆಯಲ್ಲಿ ಓದುತ್ತಿದ್ದಾಗಲೇ ನಾನು ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೇನೆ. ಈಗಲೂ ಕೆಲವು ಪ್ರಾಡಕ್ಟ್‌ಗಳಿಗೆ ರೂಪದರ್ಶಿ. ಆದರೆ ಎಲ್ಲದರಲ್ಲಿಯೂ ಮುಖ ಕಾಣಿಸಿದ್ದು `ಕ್ಲೋಸ್ ಅಪ್~ ಶಾಟ್‌ನಲ್ಲಿ. ಕತ್ತಿನಿಂದ ಕೆಳಗೆ ಕ್ಯಾಮೆರಾ ಚಿತ್ತ ಹರಿಸಿದ್ದೇ ಇಲ್ಲ. ರ‌್ಯಾಂಪ್‌ನಲ್ಲಿ ನಾನು `ಫುಲ್‌ಸ್ಕೇಪ್~ ಬ್ಯೂಟಿ. ದೇಶದ ಖ್ಯಾತ ವಿನ್ಯಾಸಕರ ಜೊತೆಗೆ ಕೆಲಸ ಮಾಡಿದ ತೃಪ್ತಿಯಿದೆ. ದೊಡ್ಡ ಪ್ರದರ್ಶನಗಳಲ್ಲಿ `ಶೋ ಓಪನರ್~ ಆಗಿದ್ದೇನೆ.

ಇಷ್ಟವಾಗುವ ಕ್ಷೇತ್ರ?

ಗ್ಲಾಮರ್ ಮಾಡೆಲಿಂಗ್ ತುಂಬಾ ಮೆಚ್ಚಿಕೊಂಡಿದ್ದೇನೆ. ಆದರೆ ಎಲ್ಲರೂ ನಿಮ್ಮ ಸ್ಮೈಲ್ ಚೆನ್ನಾಗಿದೆ ಕ್ಲೋಸ್ ಅಪ್ ಬೇಕು ಎಂದು ಹೇಳುವವರೇ ಹೆಚ್ಚು. ನಾನು ಬಯಸುವುದು ವಿಭಿನ್ನವಾದ ಪೋಷಾಕು ತೊಟ್ಟುಕೊಂಡು ಕ್ಯಾಮೆರಾ ಫೇಸ್ ಮಾಡುವುದು. ಮುದ್ರಣ ರೂಪದರ್ಶಿಯಾಗಿ ಕೆಲಸ ಮಾಡಿದಾಗ ತೃಪ್ತಿ ಸಿಕ್ಕಿದೆ. ರ‌್ಯಾಂಪ್‌ನಲ್ಲಿಯಂತೂ ನನಗಿಷ್ಟವಾದಂತೆ ವಿಶಿಷ್ಟವಾದ ವಿನ್ಯಾಸದ ಉಡುಪು ತೊಟ್ಟು ನಡೆದಿದ್ದೇನೆ.

ಇಲ್ಲಿಯವರೆಗಿನ ಕೆಲಸದಲ್ಲಿ ಒಳ್ಳೆಯದೆಂದು ಅನಿಸಿದ್ದು?

ಹೃದೇಶ್ ಕಾಂಬ್ಳೆ ನಿರ್ದೇಶನದ `ಪ್ರನಾಳಿ~ ಸಿನಿಮಾದಲ್ಲಿನ ಅಭಿನಯ. ಅದು ಸಂಪ್ರದಾಯಸ್ಥ ಸಮಾಜದ ವಿರುದ್ಧ ಮಹಿಳೆ ಸಿಡಿದೇಳುವಂಥ ಕಥಾ ವಸ್ತುವಿರುವ ಚಿತ್ರ. ಅದರಲ್ಲಿ ನನ್ನ ಪಾತ್ರಕ್ಕೂ ಒಳ್ಳೇ ಸ್ಕೋಪ್. ನೋಡಿದಾಗ ನನಗಂತೂ ಭಾರಿ ಖುಶಿಯಾಗಿತ್ತು. ರಜತ ಪರದೆಯ ಮೇಲೆ ಕಾಣಿಸಿಕೊಳ್ಳುವ ಸಂತಸ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದೊಂಥರಾ ನಶೆ!

ಎದುರಿಸಿದ ಸವಾಲು?

ಸ್ವಲ್ಪ ಸಮಯದ ಹಿಂದೆ ದೇಹ ತೂಕ ಹೆಚ್ಚಿತ್ತು. ಆಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಾಯಿಗೆ ಹಿಡಿತವಿಲ್ಲ. ತಿಂಡಿ ಪ್ರಿಯೆ ನಾನು. ಲಿಕ್ವಿಡ್ ಡಯಟ್ ಒಂದು ರೀತಿಯಲ್ಲಿ ನರಕ ಯಾತನೆ. ಆದರೂ ಪಟ್ಟು ಬಿಡದೇ ದೇಹಭಾರ ಕಡಿಮೆ ಮಾಡಿಕೊಂಡೆ.

ಮುಂದಿನ ಗುರಿ?
ಹೇಳಬೇಕೆ...? ನನ್ನಂಥ ಯಾರನ್ನು ಕೇಳಿದರೂ ಸಿದ್ಧ ಉತ್ತರ. ಅದು ನಿಮಗೂ ಗೊತ್ತು. ರಜತ ಪರದೆಯ ಯಶಸ್ವಿ ನಟಿ ಆಗುವುದು. ಕಷ್ಟ; ಆದರೂ ಪ್ರಯತ್ನ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT