ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಂಡಾ ಕಾಯ್ದೆ ತಿದ್ದುಪಡಿಗೆ ಚರ್ಚೆ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಚಿತ್ರರಂಗಕ್ಕೆ ಮಾರಕವಾಗಿರುವ ಪೈರಸಿ ಹಾವಳಿ ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಗೂಂಡಾ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಗೃಹ ಸಚಿವ ಆರ್. ಅಶೋಕ ತಿಳಿಸಿದರು. ಈ ಸಾಲಿನ ಬಜೆಟ್‌ನಲ್ಲಿ ಚಿತ್ರರಂಗದ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಮಂಡಿಸಲು ಸಹಕರಿಸಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕನ್ನಡ ಸಿನಿಮಾಗಳನ್ನು ಪೈರಸಿ ಪಿಡುಗು ಕಾಡುತ್ತಿದ್ದು ಪ್ರಸ್ತುತ ಗೂಂಡಾ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆ ರಾಷ್ಟ್ರಪತಿಗಳ ಬಳಿ ಇದೆ. ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಸಚಿವರನ್ನು ಭೇಟಿ ಮಾಡುವ ವೇಳೆ ಚಲನಚಿತ್ರರಂಗದ ಗಣ್ಯರು ಕೂಡ ಹಾಜರಿರಬೇಕು’ ಎಂದು ಮನವಿ ಮಾಡಿದರು.

‘ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆಯಲು ಇನ್ನು ಮುಂದೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಪ್ರತಿ ದೇವಾಲಯಗಳ ಉಸ್ತುವಾರಿ ನೋಡಿಕೊಳ್ಳುವ ಪ್ರಾಚ್ಯವಸ್ತು ಕಚೇರಿಗಳಿಂದ ಪ್ರತ್ಯೇಕವಾಗಿ ಅನುಮತಿ ಪಡೆಯುವ ತೊಂದರೆ ತಪ್ಪಲಿದೆ’ ಎಂದರು. ‘ಚಲನಚಿತ್ರ ಹಂಚಿಕೆದಾರರ ನೋಂದಣಿ ತೆರಿಗೆಯಿಂದ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಅಲ್ಲದೇ ಚಲನಚಿತ್ರ ಲೀಸಿಂಗ್ ಮತ್ತು ಕಾಪಿರೈಟ್ ಹಕ್ಕು ಮಾರಾಟ ತೆರಿಗೆಯಿಂದ ಕೂಡ ವಿನಾಯಿತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಹೇಳಿದರು.

‘ಪದ್ಮನಾಭನಗರದಲ್ಲಿ ಕಿರುತೆರೆ ಕಲಾವಿದರ ಸಂಘಕ್ಕೆ ಎರಡು ಎಕರೆ ಜಾಗ ನೀಡಲಾಗಿದೆ. ಅಲ್ಲದೇ ಅಲ್ಲಿ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂಪಾಯಿಗಳ ಅನುದಾನ ಕೊಡಲಾಗಿದೆ. ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಬಿಡಿಎ ವತಿಯಿಂದ ನಿವೇಶನ ನೀಡಲಾಗುವುದು’ ಎಂದರು. ‘ಬಜೆಟ್‌ನಲ್ಲಿ ಕಂಠೀರವ ಸ್ಟುಡಿಯೊ ಅಭಿವೃದ್ಧಿ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ತಲಾ 5 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ರಾಜ್‌ಕುಮಾರ್ ಸ್ಮಾರಕವನ್ನು ಭವ್ಯವಾಗಿ ರೂಪಿಸಲಾಗಿದೆ.

ಇದಕ್ಕಾಗಿ ಕೋಟ್ಯಂತರ ರೂಪಾಯಿ ಮೊತ್ತದ ಭೂಮಿಯನ್ನು ಸರ್ಕಾರ ಒದಗಿಸಿದೆ. ವಿಷ್ಣುವರ್ಧನ್ ಹಾಗೂ ಬಾಲಕೃಷ್ಣ ಅವರ ಸ್ಮಾರಕಗಳನ್ನು ಕೂಡ ಅಭಿವೃದ್ಧಿಗೊಳಿಸಲಾಗುವುದು’ ಎಂದು ತಿಳಿಸಿದರು. ನಟ ಜಗ್ಗೇಶ್ ಮಾತನಾಡಿ ‘ಚಿತ್ರರಂಗದ ಸದಸ್ಯರಿಗೆ ನಿವೇಶನಗಳನ್ನು ಒದಗಿಸಿಕೊಡಲು ಸರ್ಕಾರ ಮುಂದಾಗಬೇಕಿದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಠೀರವ ಸ್ಟುಡಿಯೊ ಅಭಿವೃದ್ಧಿಗೊಳಿಸಿದರೆ ಹೊರರಾಜ್ಯಗಳ ಫಿಲಂ ಸಿಟಿಗಳಲ್ಲಿ ಚಿತ್ರೀಕರಣ ನಡೆಸುವ ತೊಂದರೆ ತಪ್ಪುತ್ತದೆ.

ಸಾಮಾನ್ಯ ಜನರೂ ಸಿನಿಮಾ ನೋಡುವ ನಿಟ್ಟಿನಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿಯಾಗಿರುವ ಟಿಕೆಟ್‌ದರವನ್ನು ಪರಿಷ್ಕರಿಸಬೇಕು’ ಎಂದರು. ‘ಬಜೆಟ್ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆಯ ಮನವೊಲಿಸಿ ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಿರುವ ಅಶೋಕ ಅವರ ಕಾರ್ಯ ಶ್ಲಾಘನೀಯ. ಸಿನಿಮಾ ಮಂದಿಯ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ’ ಎಂದು ಅವರು ನುಡಿದರು.

ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮಾತನಾಡಿ ‘ಚಿತ್ರಮಂದಿರಗಳ ಸೇವಾಶುಲ್ಕದ ಲೆಕ್ಕಪತ್ರ ಕೇಳುವ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುವುದು ತಪ್ಪಬೇಕು. ಚಿತ್ರಮಂದಿರಗಳ ವಿದ್ಯುತ್ ದರದಲ್ಲಿ ವಿನಾಯಿತಿ ನೀಡಬೇಕು. 200ರಿಂದ 300 ಆಸನಗಳ ಚಿಕ್ಕ ಚಿತ್ರಮಂದಿರಗಳ ನಿರ್ಮಾಣಕ್ಕೆ ಅವಕಾಶ ನೀಡಬೇಕು. ನಿರ್ಮಾಪಕರು ಹಾಗೂ ಹಂಚಿಕೆದಾರರಿಗೆ ನೀಡಿರುವ ಆದ್ಯತೆಯನ್ನು ಪ್ರದರ್ಶಕರಿಗೂ ನೀಡಬೇಕು’ ಎಂದು ಕೋರಿದರು. ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರು, ನಟಿ ಜಯಂತಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT