ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಅಲೆಯಲ್ಲಿ...

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ‘ಎ’ ತಂಡಗಳ ನಡುವಿನ ಪಂದ್ಯಗಳಿಗಿಂತ ಉತ್ತಮ ಅವಕಾಶ ಇನ್ನೊಂದಿಲ್ಲ. ಆದರೆ, ಪ್ರತಿ ಹೆಜ್ಜೆಯಲ್ಲೂ ಸವಾಲು ಎದುರಿಸಬೇಕಾಗುತ್ತಿದೆ. ಪ್ರಬಲ ಪೈಪೋಟಿಯ ನಡುವೆಯೂ ಭಾರತ ಎ ತಂಡ ನ್ಯೂಜಿಲೆಂಡ್‌ ಎ ಎದುರು ಅಮೋಘ ಪ್ರದರ್ಶನ ತೋರಿ ಸರಣಿ ಜಯಿಸಿದೆ.

ಹಲವು ದಿನಗಳಿಂದ ವಿಶಾಖ ಪಟ್ಟಣ ಕ್ರಿಕೆಟ್‌ ಚಟುವಟಿಕೆಗಳ ಕಾರಣದಿಂದ ಸಾಕಷ್ಟು ಸುದ್ದಿಯಲ್ಲಿದೆ. ಜಿದ್ದಿಗೆ ಬಿದ್ದವರಂತೆ ಹೋರಾಟ, ನಾ ಮುಂದು, ತಾಮುಂದು ಎನ್ನುವ ಪೈಪೋಟಿ, ರಾಷ್ಟ್ರೀಯ ಆಯ್ಕೆದಾದರ ಗಮನ ಸೆಳೆಯಲು ಕಸರತ್ತು ಎಲ್ಲವೂ ಕ್ರಿಕೆಟ್‌ ಸರಣಿ ವೇಳೆ ನಡೆದವು.

ಇದಕ್ಕೆಲ್ಲಾ ವೇದಿಕೆ ಒದಗಿಸಿದ್ದು ‘ಎ’ ತಂಡಗಳ ನಡುವಿನ ಸರಣಿ. ನ್ಯೂಜಿಲೆಂಡ್‌ ಮತ್ತು ಭಾರತ ತಂಡಗಳ ನಡುವೆ 2010ರಲ್ಲಿ ಹೈದರಾಬಾದ್‌­ನಲ್ಲಿ ಒಂದು ಟೆಸ್ಟ್‌ ಪಂದ್ಯ ನಡೆದಿತ್ತು. ಮೂರು ವರ್ಷಗಳ ನಂತರ ಕಿವೀಸ್‌ ‘ಎ’ ವಿಶಾಖ ಪಟ್ಟಣದಲ್ಲಿ ಸರಣಿ ಆಡಿತು. ಆದರೆ, ಚಾಂಪಿಯನ್‌ ಆಗಿದ್ದು ಭಾರತ ‘ಎ’ ತಂಡ. ಇದು ತವರೂರ ಅಭಿಮಾನಿಗಳ ಖುಷಿಗೂ ಕಾರಣವಾಯಿತು.

ರಾಷ್ಟ್ರೀಯ ತಂಡವೇ ಇರಲಿ ಅಥವಾ ‘ಎ’ ತಂಡವೇ ಆಗಲಿ ಬೇರೆ ದೇಶಗಳ ಪ್ರವಾಸ ಕೈಗೊಂಡಾಗ ಇಲ್ಲವೇ ಬೇರೆ ರಾಷ್ಟ್ರಗಳ ತಂಡಗಳು ಭಾರತಕ್ಕೆ ಬಂದಾಗ ಬೇರೆ ಬೇರೆ ಸ್ಥಳಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ, ಈ ಸಲ ನ್ಯೂಜಿಲೆಂಡ್‌ ‘ಎ’ ತಂಡ ಟೆಸ್ಟ್‌ ಹಾಗೂ ಏಕದಿನ ಸರಣಿಯನ್ನು ಒಂದೇ ಕ್ರೀಡಾಂಗಣದಲ್ಲಿ ಆಡಿದ್ದು ವಿಶೇಷ­ವಾಗಿತ್ತು. ‘ಎ’ ಪಂದ್ಯಗಳ ಕ್ರಿಕೆಟ್‌ನಲ್ಲಿನ ಅಂಕಿ ಅಂಶ­ಗಳು, ಮೂಡಿ ಬಂದ ದಾಖಲೆಗಳು ಅಧಿಕೃತ­ವಾಗಿ ಲೆಕ್ಕಕ್ಕಿಲ್ಲ. ಆದ್ದರಿಂದ ಇದನ್ನು ಸೂಚ್ಯವಾಗಿ ‘ಅನಧಿಕೃತ’ ಪಂದ್ಯವೆಂದೂ ಕರೆಯಲಾಗುತ್ತದೆ.

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಿನ ಕ್ರಿಕೆಟ್‌ ಬಾಂಧವ್ಯ ಇಂದು ನಿನ್ನೆಯದಲ್ಲ. 1975ರಲ್ಲಿ ಉಭಯ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆದಿತ್ತು. ಆದರೆ, ಈ ಎರಡೂ ತಂಡಗಳು ಭಾರತದಲ್ಲಿ ಮೊದಲ ಪಂದ್ಯವನ್ನಾಡಲು 12 ವರ್ಷ ಕಾಯಬೇಕಾಯಿತು.

ಭಾರತ ಮತ್ತು ಕಿವೀಸ್‌ ನಡುವಿನ ಭಾರತದಲ್ಲಿನ ಮೊದಲ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿದ ಹೆಗ್ಗಳಿಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಲ್ಲುತ್ತದೆ. 1987ರಲ್ಲಿ ಈ ಪಂದ್ಯ ನಡೆದಿತ್ತು.

ಆಂಧ್ರದ ನಂಟು: ಹೈದರಾಬಾದ್‌ಗೂ ಹಾಗೂ ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡಕ್ಕೂ ಬಿಡಿಸಲಾಗದ ನಂಟು ಇದೆ. ಏಕೆಂದರೆ, ಕಿವೀಸ್‌ ತಂಡ

ಭಾರತದಲ್ಲಿ ಆಡಿದ ಮೊದಲ ಟೆಸ್ಟ್‌ ಪಂದ್ಯ ನಡೆದಿದ್ದು ಹೈದರಾಬಾದ್‌ನಲ್ಲಿ. 1955­ರಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ­ಯನ್ನಾ­ಡಲು ಕಿವೀಸ್‌ ಭಾರತಕ್ಕೆ ಬಂದಾಗ ಮೊದಲ ಪಂದ್ಯ ಮುತ್ತಿನ ನಗರಿಯಲ್ಲಿ ಆಯೋಜನೆ­ಯಾ­ಗಿತ್ತು. ಇದುವರೆಗೂ ಈ ತಂಡ ಒಟ್ಟು 18 ಸಲ ಟೆಸ್ಟ್‌ ಸರಣಿಯನ್ನಾಡಿವೆ. ಭಾರತ 9 ಸಲ ಸರಣಿ ಜಯಿಸಿದರೆ, ಕಿವೀಸ್‌ ಐದು ಸಲ ಗೆಲುವು ಪಡೆದಿದೆ.

ಭಾರತದ ಸೀನಿಯರ್‌ ತಂಡದ ಆಟಗಾರರು ಟೆಸ್ಟ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ಎದುರು ಸಾಧಿಸಿರುವ ಮೇಲುಗೈಯನ್ನು ಭಾರತ ‘ಎ’ ತಂಡದವರೂ ಮುಂದುವರಿಸುತ್ತಿದ್ದಾರೆ. ಇದು ‘ಎ’ ತಂಡದ ಶಕ್ತಿಗೆ ಸಾಕ್ಷಿ.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ‘ಎ’ ಪಂದ್ಯಗಳ ಸರಣಿ ಮತ್ತು ದೇಶಿಯ ಪಂದ್ಯ­ಗಳಿ­ಗಿಂತ ಉತ್ತಮ ಅವಕಾಶ ಇನ್ನೊಂದಿಲ್ಲ. ರಾಷ್ಟ್ರೀಯ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವಂತೆ ‘ಎ’ ತಂಡವೂ ಪ್ರತಿ ಹೆಜ್ಜೆಯಲ್ಲೂ ತನ್ನ ಸಾಮರ್ಥ್ಯ ಸಾಬೀತು ಮಾಡುತ್ತಲೇ ಇದೆ. ಸಿಂಗಪುರದಲ್ಲಿ ನಡೆದ ಉದಯೋನ್ಮುಖರ ಕ್ರಿಕೆಟ್‌ ಟೂರ್ನಿ­ಯಲ್ಲಿ ಭಾರತ ಚಾಂಪಿಯನ್‌ ಆಗಿದ್ದು ಇದಕ್ಕೆ ಸಾಕ್ಷಿ. 2010 ಮತ್ತು 2011ರಲ್ಲೂ ಭಾರತವೇ ಪ್ರಶಸ್ತಿ ಎತ್ತಿ ಹಿಡಿದಿತ್ತು.


ಕ್ರಿಕೆಟ್‌ ಇಂಗ್ಲೆಂಡ್‌ನಲ್ಲಿ ಹುಟ್ಟಿತಾದರೂ ಬೆಳೆದಿದ್ದು ಹಾಗೂ ಖ್ಯಾತಿ ಪಡೆದಿದ್ದು ಭಾರತದಲ್ಲಿ. ಇಲ್ಲಿ ಬೇರೆ ರಾಷ್ಟ್ರಗಳಿಗಿಂತ ಹೆಚ್ಚು ಕ್ರಿಕೆಟ್‌ ಕ್ಲಬ್‌ಗಳಿವೆ. ಆದ್ದರಿಂದ ಪ್ರತಿದಿನವೂ ಪ್ರತಿಭೆಗಳು ಹೊರ ಬರುತ್ತಿವೆ. ಸಹಜವಾಗಿ ಪೈಪೋಟಿಯೂ ಹೆಚ್ಚಿದೆ.  ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಟ್ಟಿಯಾಗಿ ಉಳಿಯಬೇಕಾದರೆ ಪ್ರತಿ ಪಂದ್ಯದಲ್ಲೂ ಉತ್ತಮವಾಗಿ ಆಡುವುದು ಅನಿವಾರ್ಯ. ಇಲ್ಲವಾದರೆ, ತಂಡದಿಂದ ಹೊರ ಬೀಳುವುದು ಖಚಿತ. ಇದಕ್ಕೆ ಕಾರಣ ‘ಎ’ ಪಂದ್ಯಗಳಲ್ಲಿ ಆಟಗಾರರು ತೋರುತ್ತಿರುವ ಸಾಮರ್ಥ್ಯ. ಇದು ಅನೇಕ ಸಲ ಹಿರಿಯ ಆಟಗಾರರ ಸ್ಥಾನಕ್ಕೂ ಕುತ್ತು ತಂದಿದೆ. ವೀರೇಂದ್ರ ಸೆಹ್ವಾಗ್‌ ಮತ್ತು ಗೌತಮ್‌ ಗಂಭೀರ್‌ ರಾಷ್ಟ್ರೀಯ ತಂಡದಿಂದ ಸ್ಥಾನ
ಕಳೆದುಕೊಂಡಿದ್ದು ಇದಕ್ಕೆ ಉದಾಹರಣೆ.

ಪ್ರಥಮ ದರ್ಜೆ ಪಂದ್ಯಗಳು, ಉದಯೋನ್ಮುಖರ ಟೂರ್ನಿಗಳು ಮತ್ತು ‘ಎ’ ತಂಡಗಳ ನಡುವಿನ ಪಂದ್ಯಗಳು ಯುವ ಆಟಗಾರರಿಗೆ ಅವಕಾಶವೆನಿಸಿದರೆ, ಹಿರಿಯ ಕ್ರಿಕೆಟಿಗರಿಗೆ ‘ಜೀವದಾನ’. ವೆಸ್ಟ್‌ ಇಂಡೀಸ್‌ ‘ಎ’ ತಂಡದ ಎದುರು ಸರಣಿಯನ್ನಾಡಲು ಕೆಲ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅದನ್ನು ಅವರು ಸರಿಯಾಗಿ ಬಳಸಿಕೊಂಡರೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಮತ್ತೆ ಗಟ್ಟಿ. ಆದರೆ, ಪ್ರತಿ ಸರಣಿಯಲ್ಲಿ ಗೆಲುವಿನ ಸವಿ ಕಾಣುತ್ತಿರುವ ಭಾರತ ‘ಎ’ ತಂಡದವರ ವಿಶ್ವಾಸದ ಮುಂದೆ ಅನುಭವಿ ಆಟಗಾರರು ಹೇಗೆ ಆಡುತ್ತಾರೋ ಎನ್ನುವ ಕುತೂಹಲವಿದೆ.

ನ್ಯೂಜಿಲೆಂಡ್‌ ‘ಎ‘ ಎದುರು ನಡೆದ ಸರಣಿಯಲ್ಲಿ ಅಶೋಕ್‌ ಮನಾರಿಯಾ, ನಾಯಕ ಉನ್ಮುಕ್ತ್ ಚಾಂದ್‌, ಸರಣಿಯಲ್ಲಿದ್ದ ಕರ್ನಾಟಕದ ಏಕೈಕ ಆಟಗಾರ ರಾಬಿನ್‌ ಉತ್ತಪ್ಪ, ಮನ್‌ದೀಪ್‌ ಸಿಂಗ್‌ ಅಮೋಘ ಪ್ರದರ್ಶನ ತೋರಿದ ಕಾರಣ ಭಾರತ ಚಾಂಪಿಯನ್‌ ಆಯಿತು. 18 ವರ್ಷದ ಸಂಜು ಸ್ಯಾಮ್ಸನ್‌ ಹಾಗೂ ಸಚಿನ್‌ ಬೇಬಿ ಕೂಡಾ ತಂಡದಲ್ಲಿದ್ದರು.

ಕೆಂಡದ ಮೇಲಿನ ನಡಿಗೆ...
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ಬಿರುಗಾಳಿಯ ವೇಗದಲ್ಲಿ ಚೆಂಡು ಎಸೆಯುವ ಜಹೀರ್‌ ಖಾನ್, ಯುವರಾಜ್ ಸಿಂಗ್‌, ಹಿರಿಯ ಆಟಗಾರ ಗೌತಮ್‌ ಗಂಭೀರ್‌ ಅವರಿಗೆ ‘ಎ’ ತಂಡಗಳ ನಡುವಿನ ಕ್ರಿಕೆಟ್‌ ಪಂದ್ಯಗಳು ಭರವಸೆ ಎನಿಸಿವೆ.

ರಾಷ್ಟ್ರೀಯ ತಂಡದಲ್ಲಿದ್ದಾಗ ಈ ಆಟಗಾರರು ಕಳಪೆ ಪ್ರದರ್ಶನ ತೋರಿದ ಕಾರಣ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ವೆಸ್ಟ್‌ ಇಂಡೀಸ್‌ ‘ಎ’ ವಿರುದ್ಧದ ಸರಣಿಗೆ ನಾಲ್ವರೂ ಆಟಗಾರರು ಆಯ್ಕೆಯಾಗಿದ್ದಾರೆ. ಏಳು ಏಕದಿನ ಪಂದ್ಯಗಳ ಸರಣಿಯನ್ನಾಡಲು ಆಸ್ಟ್ರೇಲಿಯಾ ತಂಡ ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ನಂತರ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
ಆದ್ದರಿಂದ ‘ಎ’ ಪಂದ್ಯಗಳು ಅನುಭವಿ ಮತ್ತು ಯುವ ಆಟಗಾರರಿಗೆ ಮಹತ್ವವೆನಿಸಿವೆ. ಆದ್ದರಿಂದ ಪ್ರತಿಯೊಬ್ಬ ಆಟಗಾರರೂ ಪ್ರತಿ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಪ್ರತಿ ಹೆಜ್ಜೆಯೂ ಕೆಂಡದ ಮೇಲಿನ ನಡಿಗೆಯಾಗಿದೆ. ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಕೂಡಾ ಇದೇ ಮಾತು ಹೇಳಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT