ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳತಿಯನ್ನೇ ಗುಂಡಿಟ್ಟು ಕೊಂದ ಪಿಸ್ಟೋರಿಯಸ್

ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅಂಗವಿಕಲ ಅಥ್ಲೀಟ್ ಬಂಧನ
Last Updated 14 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್ (ಎಎಫ್‌ಪಿ/ಐಎಎನ್‌ಎಸ್): ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಐತಿಹಾಸಿಕ ಸಾಧನೆಗೆ ಕಾರಣರಾಗಿದ್ದ ದಕ್ಷಿಣ ಆಫ್ರಿಕಾದ ಅಂಗವಿಕಲ ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್ ತಮ್ಮ ಗೆಳತಿಯನ್ನೇ ಗುಂಡಿಟ್ಟು ಕೊಂದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾರೆ.

ಮನೆಯೊಳಗೆ ಯಾರೊ ಅತಿಕ್ರಮಣ ಪ್ರವೇಶ ಮಾಡಿದ್ದಾರೆ ಎಂದು ಭಾವಿಸಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಆದರೆ ಕೊಲೆ ಆರೋಪದ ಮೇಲೆ ಎರಡೂ ಕಾಲಿಲ್ಲದ ಆಸ್ಕರ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪ್ರೇಮಿಗಳ ದಿನವೇ ಈ ಅನಾಹುತ ನಡೆದು ಹೋಗಿದೆ.

`30 ವರ್ಷ ವಯಸ್ಸಿನ ಮಹಿಳೆಯನ್ನು ಕೊಂದ ಆರೋಪದ ಮೇಲೆ 26 ವರ್ಷ ವಯಸ್ಸಿನ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ' ಎಂದು ಪೊಲೀಸ್ ವಕ್ತಾರೆ ಕಟ್ಲೆಗೊ ಮೊಗಾಲೆ ತಿಳಿಸಿದ್ದಾರೆ.

`ಈ ಹತ್ಯೆ ಪ್ರಕರಣದಲ್ಲಿ ಪಿಸ್ಟೋರಿಯಸ್ ಏಕೈಕ ಆರೋಪಿ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಿಂದ ನಮಗೆ ಆಘಾತವಾಗಿದೆ' ಎಂದು ಅವರ ತಂದೆ ಹೆಂಕೆ ಪಿಸ್ಟೋರಿಯಸ್ ಕೂಡ ಸ್ಪಷ್ಟಪಡಿಸಿದ್ದಾರೆ.

ಆದರೆ ಆ ವ್ಯಕ್ತಿಯೇ ಪಿಸ್ಟೋರಿಯಸ್ ಎಂಬುದನ್ನು ಮಾತ್ರ ಪೊಲೀಸರು ಸ್ಪಷ್ಟವಾಗಿ ಖಚಿತಪಡಿಲ್ಲ. `ನ್ಯಾಯಾಲಯದ ಮುಂದೆ ಹಾಜರಾದ ಮೇಲೆ ನಾವು ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುತ್ತೇವೆ. ಆ ಮಹಿಳೆ ಮೇಲೆ ನಾಲ್ಕು ಗುಂಡು ಹಾರಿಸಲಾಗಿದೆ. ತಲೆ ಹಾಗೂ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಮಹಿಳೆಯು ಆರೋಪಿಯ ಗೆಳತಿ ಎಂಬುದು ನಮಗೆ ಗೊತ್ತಾಗಿದೆ' ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಆರೋಪಿಯಿಂದ 9ಎಂಎಂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಪ್ರಿಟೋರಿಯಾ ಹೊರ ವಲಯದಲ್ಲಿರುವ ಸಿಲ್ವರ್ ಲೇಕ್ಸ್‌ನ ಪಿಸ್ಟೋರಿಯರ್ಸ್ ಅವರ ಐಷಾರಾಮಿ ಬಂಗಲೆಯಲ್ಲಿ ಈ ಘಟನೆ ನಡೆದಿದೆ. ಪಿಸ್ಟೋರಿಯಸ್ ಗೆಳತಿ ರೀವಾ ಸ್ಟೀನ್‌ಕಾಂಪ್ ರೂಪದರ್ಶಿ ಕೂಡ ಆಗಿದ್ದವರು. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

`ತಮ್ಮ ಗೆಳೆತಿಯನ್ನು ಆಸ್ಕರ್ ಏಕೆ ಕೊಲೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ ಯಾರೊ ಕಳ್ಳರು ಒಳನುಗ್ಗಿದ್ದಾರೆ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿರಬಹುದು' ಎಂದು ಜೋಹಾನ್ಸ್‌ಬರ್ಗ್‌ನ ಟಾಕ್ ರೇಡಿಯೊ 702 ವರದಿ ಮಾಡಿದೆ.

ಆದರೆ ಆರೋಪಿ ಈ ಸಮರ್ಥನೆ ನೀಡಿರುವುದಕ್ಕೆ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ. `ಆ ರೀತಿ ಆಗಲು ಸಾಧ್ಯವಿಲ್ಲ. ಏಕೆಂದರೆ ಅವರಿರುವ ಪ್ರದೇಶ ಭಾರಿ ಭದ್ರತೆಯಿಂದ ಕೂಡಿದೆ. ಈ ಹಿಂದೆಯೂ ಆರೋಪಿಯ ಮನೆಯಲ್ಲಿ ಜಗಳ ನಡೆದಿದ್ದು ವರದಿಯಾಗಿತ್ತು' ಎಂದು ಪೊಲೀಸ್ ವಕ್ತಾರೆ ಡೆನಿಸೆ ಬ್ಯೂಕ್ಸ್ ಹೇಳಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಿಸ್ಟೋರಿಯಸ್ ಪಾಲ್ಗೊಂಡು ಗಮನ ಸೆಳೆದಿದ್ದರು. ಅವರು ದಕ್ಷಿಣ ಆಫ್ರಿಕಾದ 4x400ಮೀಟರ್ ರಿಲೇ ತಂಡದಲ್ಲಿ ಓಡಿದ್ದರು. ಎರಡೂ ಕಾಲಿಲ್ಲದ ವ್ಯಕ್ತಿಯೊಬ್ಬರು ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದದ್ದು ಅದೇ ಮೊದಲು. ಈ ಕೂಟದಲ್ಲಿ ಅವರು ಸೆಮಿಫೈನಲ್ ತಲುಪಿದ್ದ. ಆ ಬಳಿಕ ಅವರು ದಕ್ಷಿಣ ಆಫ್ರಿಕಾದಲ್ಲಿ ಹೀರೊ ಪಟ್ಟಕ್ಕೇರಿದ್ದರು.

ಆನುವಂಶಿಕ ಕಾಯಿಲೆಯಿಂದಾಗಿ ಆಸ್ಕರ್ ಪಿಸ್ಟೋರಿಯಸ್    ಚಿಕ್ಕ ವಯಸ್ಸಿನಲ್ಲೆ ತಮ್ಮ ಎರಡೂ ಕಾಲು ಕಳೆದುಕೊಂಡಿದ್ದರು. 2005ರಲ್ಲಿ ನಡೆದ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ   ಕ್ರೀಡಾಕೂಟದಲ್ಲಿ ಸಮರ್ಥರೊಂದಿಗೆ ಸ್ಪರ್ಧಿಸಿ 400 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದಿದ್ದರು. `ಫಾಸ್ಟೆಸ್ಟ್ ಥಿಂಗ್       ಆನ್ ನೋ ಲೆಗ್ಸ್' ಖ್ಯಾತಿಯ ಪಿಸ್ಟೋರಿಯಸ್ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ 200 ಮೀ, 200 ಮೀ, 400 ಮೀ ಹಾಗೂ 4x100ಮೀ. ರಿಲೇನಲ್ಲಿ ಅವರು ಸ್ಪರ್ಧಿಸುತ್ತಾರೆ.

ದಕ್ಷಿಣ ಕೊರಿಯಾದ ಡೇಗುನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ 400 ಮೀ.ನಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು `ಬ್ಲೇಡ್ ರನ್ನರ್' ಖ್ಯಾತಿಯ ಪಿಸ್ಟೋರಿಯಸ್ ಕೊಂಚದರಲ್ಲಿ ಕಳೆದುಕೊಂಡಿದ್ದರು.

ಮುಖ್ಯಾಂಶಗಳು
ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಐತಿಹಾಸಿಕ ಸಾಧನೆಗೆ ಕಾರಣರಾಗಿದ್ದ ದಕ್ಷಿಣ ಆಫ್ರಿಕಾದ ಅಂಗವಿಕಲ ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್ ತಮ್ಮ ಗೆಳತಿಯನ್ನೇ ಗುಂಡಿಟ್ಟು ಕೊಂದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT