ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಬ್ಬರ ಮಾರ್ಪಾಡು ಘಟಕ ನೆಲಸಮ

ಕಸ ವಿಲೇವಾರಿ ವಿರುದ್ಧ ದಸಂಸ ಪ್ರತಿಭಟನೆ
Last Updated 4 ಡಿಸೆಂಬರ್ 2012, 19:56 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಚಿಕ್ಕನಾಗಮಂಗಲದ ಬಳಿಯಲ್ಲಿ ನಿರ್ಮಾಣದ ಹಂತದಲ್ಲಿದ್ದ ಪ್ಲಾಸ್ಟಿಕ್‌ರಹಿತ ತೇವ ತ್ಯಾಜ್ಯವನ್ನು ಗೊಬ್ಬರವಾಗಿ ಮಾರ್ಪಡಿಸುವ ಘಟಕವನ್ನು ಸ್ಥಳೀಯರು ಮಂಗಳವಾರ ನೆಲಸಮಗೊಳಿಸಿದರು.

ಬಿಬಿಎಂಪಿಯು ಈ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಸಂಘಟನಾ ಸಂಚಾಲಕ ಎಂ.ಗೋವಿಂದರಾಜು ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಈ ಘಟನೆ ನಡೆಯಿತು.

`ಗ್ರಾಮೀಣ ಪ್ರದೇಶದ ಜನವಸತಿ ಸ್ಥಳಗಳನ್ನು ಬಿಬಿಎಂಪಿ ತಿಪ್ಪೆ ಗುಂಡಿಗಳನ್ನಾಗಿಸುವ ಹುನ್ನಾರ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಸ್ಥಳೀಯರು ಇದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಪ್ರತಿಭಟನಾಕಾರರು ಕೆಂಡಕಾರಿದರು. ಸ್ಥಳಕ್ಕೆ ಆಗಮಿಸಿದ್ದ ಬಿಬಿಎಂಪಿ ಎಂಜಿನಿಯರ್ ಅವರ ಯಾವುದೇ ಸಮಜಾಯಿಷಿಯನ್ನು ಕಿವಿಗೆ ಹಾಕಿಕೊಳ್ಳದೆ ರೋಷಾವೇಶ ಭರಿತರಾಗಿ ಕಟ್ಟಡವನ್ನು ಧ್ವಂಸಗೊಳಿಸಿದರು. ಎಂಜಿನಿಯರ್ ವಿರುದ್ಧ  ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಂ.ಗೋವಿಂದರಾಜು `ಕಸ ವಿಲೇವಾರಿ ಸ್ಥಳದಿಂದ ಕೇವಲ ನೂರು ಮೀಟರ್ ಅಂತರದಲ್ಲಿ ಚಿಕ್ಕನಾಗಮಂಗಲ ಮತ್ತು ದೊಡ್ಡನಾಗಮಂಗಲ ಗ್ರಾಮಗಳಿವೆ. ಸುತ್ತಮುತ್ತ ಸುಸಜ್ಜಿತ ಬಡಾವಣೆಗಳಿವೆ.

ಸಮೀಪದಲ್ಲಿಯೇ ಶಾಲಾ ಕಾಲೇಜುಗಳಿವೆ. ಕೇವಲ ಎರಡು ಕಿ.ಮೀ ದೂರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಇದ್ದು ನೂರಾರು ಕಂಪೆನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದ್ಯಾವುದನ್ನೂ ಗಮನಿಸದೇ ಬಿಬಿಎಂಪಿ ಇಲ್ಲಿನ 30ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಲು ಮುಂದಾಗಿರುವುದು ಖಂಡನೀಯ' ಎಂದರು.

ತಹಶೀಲ್ದಾರ್ ಶಿವೇಗೌಡ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ, `ಈಗಾಗಲೇ ಜಿಲ್ಲಾಡಳಿತಕ್ಕೆ ವಾಸ್ತವ ಸ್ಥಿತಿಯ ಕುರಿತು ವರದಿ ಸಲ್ಲಿಸಲಾಗಿದೆ' ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT