ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಬ್ಬರಗಾಲ: ಅನಾಥವಾದ ಚಿತ್ರಗಲ್ಲು

Last Updated 3 ಜುಲೈ 2013, 7:44 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಐತಿಹಾಸಿಕ ಕುರುಹುಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ತಾಲ್ಲೂಕಿನ ಗೊಬ್ಬರಗಾಲ ಗ್ರಾಮ ಈ ಭಾಗದ ವಿಶಿಷ್ಟ ಊರು ಎಂಬ ಹೆಗ್ಗಳಿಕೆ ಪಡೆದಿದೆ.

ಗ್ರಾಮದ ಹೃದಯಭಾಗದಲ್ಲಿರುವ, ಶತಮಾನಗಳಷ್ಟು ಹಳೆಯದಾದ ಅಪರೂಪದ ಚಿತ್ರಗಲ್ಲುಗಳು ಹಾಗೂ ಮಾಸ್ತಿ ಕಲ್ಲುಗಳು ಈ ಗ್ರಾಮಕ್ಕೆ ವಿಶೇಷ ಆಕರ್ಷಣೆ ತಂದುಕೊಟ್ಟಿವೆ. ಪ್ರತಿಯೊಂದು ಕಲ್ಲಿನಲ್ಲಿ ಚಿತ್ರಗಳನ್ನು ಕಡೆದಿದ್ದು, ಒಂದೊಂದೂ ಕತೆ ಹೇಳುತ್ತವೆ. ಕೆಳಗಿನ ಸಾಲಿನಲ್ಲಿ ಕಾಳಗದ ದೃಶ್ಯ, ಎರಡನೇ ಸಾಲಿನಲ್ಲಿ ವೀರ ಮರಣವನ್ನಪ್ಪಿದ ಸೇನಾನಿಯನ್ನು ದೇವ ಕನ್ನಿಕೆಯರು ಸ್ವರ್ಗಕ್ಕೆ ಹೊತ್ತೊಯ್ಯುತ್ತಿರುವುದು ಹಾಗೂ ಮೂರನೇ ಸಾಲಿನಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳು (ಆಚಂದ್ರಾರ್ಕ ಹೆಸರು ಉಳಿಯಲಿ ಎಂಬುದರ ಸೂಚಕ) ಕಂಡು ಬರುತ್ತವೆ. ಬರಹ ರೂಪದ ಸಾಹಿತ್ಯ ತೀರಾ ವಿರಳವಾಗಿದ್ದ ಕಾಲದಲ್ಲಿ ಶಿಲ್ಪಿ ಬೆಣಚು ಕಲ್ಲನ್ನೇ ಪುಸ್ತಕ ಮಾಡಿಕೊಂಡು ಆ ಕಾಲಘಟ್ಟದ ಘಟನಾವಳಿಗಳನ್ನು ಚಿತ್ರಿಸಿದ್ದಾನೆ.

ಈ ಚಿತ್ರಗಲ್ಲುಗಳ ಜತೆಗೆ ಅಪರೂಪದ ಮಾಸ್ತಿ (ಮಹಾಸತಿ)ಕಲ್ಲು ಕೂಡ ಈ ಊರಿನಲ್ಲಿ ಗಮನ ಸೆಳೆಯುತ್ತದೆ. ಸೈನಿಕ ಕಾಳಗದಲ್ಲಿ ಸ್ವರ್ಗಸ್ಥನಾದರೆ ಆತನ ಪತ್ನಿ `ಸತಿ ಹೋಗುವ' (ಸತಿ ಸಹಗಮನ)ಪದ್ಧತಿ ಈ ಭಾಗದಲ್ಲಿ ಆಚರಣೆಯಲ್ಲಿ ಇದ್ದಿತು ಎಂಬುದಕ್ಕೆ ಈ ಮಹಾಸತಿ ಕಲ್ಲು ಪುಷ್ಟಿ ನೀಡುತ್ತದೆ. ಈ ಗ್ರಾಮ ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿತ್ತು ಎಂಬುದಕ್ಕೆ ಈ ಚಿತ್ರಗಲ್ಲು ಹಾಗೂ ಮಾಸ್ತಿ ಕಲ್ಲುಗಳು ಸಾಕ್ಷ್ಯ ಒದಗಿಸುತ್ತವೆ.

ದೊಡ್ಡ ಬೆಟ್ಟದ ಬುಡದಲ್ಲಿರುವ ಗೊಬ್ಬರಗಾಲ ಗ್ರಾಮದ ಕದಗರಾಯ ದೇವಾಲಯದ ಬಳಿ 20ಕ್ಕೂ ಹೆಚ್ಚು ಚಿತ್ರಕಲ್ಲುಗಳು ಕಾಣಸಿಗುತ್ತವೆ. ಒಂದು ಅಡಿಯಿಂದ 5 ಅಡಿ ಎತ್ತರದವರೆಗಿನ ಬಳಪದ ಕಲ್ಲುಗಳಲ್ಲಿ ಆಕರ್ಷಕ ಉಬ್ಬುಶಿಲ್ಪ ಕಡೆಯಲಾಗಿದೆ. ಈ ಚಿತ್ರಗಲ್ಲುಗಳಲ್ಲಿ ಆ ಕಾಲಮಾನದ ಧಾರ್ಮಿಕ ಆಚರಣೆಗಳು ಹಾಗೂ ಸೈನಿಕರ ಸಾಹಸಗಾಥೆಯನ್ನು ಚಿತ್ರಿಸಲಾಗಿದೆ. ಖಡ್ಗಧಾರಿ ಕುದುರೆ ಮೇಲೆ ಸವಾರಿ ಹೊರಟಿರುವುದು, ಗ್ರಾಮ ದೇವತೆಗೆ ಪೂಜೆ ಸಲ್ಲಿಸುತ್ತಿರುವುದು, ಕತ್ತಿ ಹಿಡಿದು ಕಾದಾಡುತ್ತಿರುವುದು ಇನ್ನಿತರ ಸನ್ನಿವೇಶಗಳನ್ನು ಈ ಮುಕ್ಕಾಗಿರುವ ಚಿತ್ರಗಲ್ಲುಗಳ ಮೂಲಕ ಬಿಂಬಿಸಲಾಗಿದೆ. ಇಂತಹ ಅಪರೂಪದ, ಇತಿಹಾಸ ಸಾರುವ ಚಿತ್ರಗಲ್ಲುಗಳು ರಕ್ಷಣೆ ಇಲ್ಲದೇ ಅನಾಥವಾಗಿವೆ.

`ನಮ್ಮೂರ್ನಾಗೆ ಸಾನೆ ವರ್ಷದಿಂದ ಈ ಕಲ್ಲುಗಳು ಹಂಗೇ ಬಿದ್ದವೆ. ಇವುಗಳ ಕತೆ, ವ್ಯಥೆ ಯಾವ್ದೆ ಗೊತ್ತಿಲ್ಲ. ಅದರ ಮ್ಯಾಲೆ ಅಕ್ಷರ ಇಲ್ದೇ ಇರೋದ್ರಿಂದ ಯಾರ್ ಕಾಲದ್ದು ಅಂತ ತಿಳಿಯಾಕ್ಕಿಲ್ಲ. ಮಾರಾಜರು ಕಾಲದಲ್ಲಿ ಇವುನ್ನ ನಿಲ್ಸವ್ರೆ ಅಂತ ನಮ್ಮಪ್ಪ ಹೇಳ್ತಿದ್ದ, ಅಷ್ಟೆಯಾ..' ಎಂದು ಊರಿನ ಹಿರೀತಲೆ ಎನಿಸಿದ 90 ವರ್ಷದ ಸಣ್ಣಪ್ಪನ ಬೋರೇಗೌಡ ಹೇಳುತ್ತಾರೆ. `ನಮ್ಮೂರಿಗೆ ಹಲವು ಶತಮಾನಗಳ ಇತಿಹಾಸವೇ ಇದೆ. ಆದರೆ ಯಾರೂ ಇತ್ತ ಗಮನ ಹರಿಸಿಲ್ಲ. ಪುರಾತತ್ವ ಇಲಾಖೆ ಈ ಚಿತ್ರಗಲ್ಲುಗಳ ಬಗ್ಗೆ ಸಂಶೋಧನೆ ನಡೆಸಿ ಇತಿಹಾಸದ ಮೇಲೆ ಬೆಳಕು ಚೆಲ್ಲಬೇಕು' ಎಂಬುದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಇತರರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT