ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿನ ಮಹತ್ವ ಅರಿಯದಿದ್ದರೆ ಕೃಷಿಗೆ ಕುತ್ತು

ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮೀಜಿ ಆತಂಕ
Last Updated 6 ಏಪ್ರಿಲ್ 2013, 10:07 IST
ಅಕ್ಷರ ಗಾತ್ರ

ಸಾಗರ: ಗೋವಿನ ಮಹತ್ವವನ್ನು ನಾವು ಅರಿಯದೆ ಇರುವುದರಿಂದಲೆ ಕೃಷಿ ವ್ಯವಸ್ಥೆ ದುಸ್ಥಿತಿಗೆ ತಲುಪಿದೆ ಎಂದು ಶೃಂಗೇರಿ ಮಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹೊಸಗುಂದ ಗ್ರಾಮದಲ್ಲಿ ಶುಕ್ರವಾರ ಉಮಾಮಹೇಶ್ವರ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೇಶದ ನಾನಾ ರಾಜ್ಯಗಳ ವಿವಿಧ ಗೋತಳಿಗಳ ಗೋಶಾಲೆ ಶಂಕುಸ್ಥಾಪನೆ, ಹೊಸಗುಂದ ಕುರಿತ ಕಿರುಹೊತ್ತಿಗೆ ಹಾಗೂ ಸಂಗೀತ ಧ್ವನಿ ಸುರಳಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಮ್ಮ ಕೃಷಿ ವ್ಯವಸ್ಥೆ ಉಳಿಯಬೇಕಾದರೆ ಗೋವಿನ ಸಂತತಿ ಕಾಪಾಡಿಕೊಳ್ಳಬೇಕಾದದ್ದು ಅಗತ್ಯ ಮತ್ತು ಅನಿವಾರ್ಯ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷವಾದ ಸ್ಥಾನವಿದೆ. ಕೇವಲ ವಾಣಿಜ್ಯ ಭಾವನೆಯಿಂದ ಗೋವನ್ನು ನೋಡುವುದು ಸರಿಯಲ್ಲ ಎಂದು ಹೇಳಿದರು.

ಜೀವನದಲ್ಲಿ ಬಡತನ ಮತ್ತು ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಮುಖ್ಯ. ಬದುಕಿನಲ್ಲಿ ನೆಮ್ಮದಿ ಎಂಬುದು ಇಲ್ಲದಿದ್ದರೆ ಅಗಾಧ ಶ್ರೀಮಂತಿಕೆ ಇದ್ದರೂ ಯಾವುದೆ ಪ್ರಯೋಜನವಿಲ್ಲ. ಭಗವಂತನ ಆರಾಧನೆಯ ಮೂಲಕ ನಾವು ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದರು.

ಹಳೇ ದೇವಸ್ಥಾನಗಳ ಜೀರ್ಣೋದ್ಧಾರ ಪುಣ್ಯದಾಯಕ ಕೆಲಸ. ಹೊಸಗುಂದ ದೇವಸ್ಥಾನವನ್ನು ಪುನರ್ ನಿರ್ಮಿಸುವ ಕೆಲಸವನ್ನು ಹೊಸಗುಂದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನವರು ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಈ ಮಟ್ಟಕ್ಕೆ ಅಭಿವದ್ಧಿ ಪಡಿಸಿರುವುದು ಮಾದರಿ ಕಾರ್ಯ ಎಂದು ಶ್ರೀಗಳು ಶ್ಲಾಘಿಸಿದರು.

ದೆಹಲಿಯ ಸರ್ವಾನಂದ ಸ್ವಾಮೀಜಿ, ಸಾಗರ ಶಂಗೇರಿ ಶಂಕರಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ, ಕಟ್ಟೆ ಶಂಕರಭಟ್, ಅಶ್ವಿನಿಕುಮಾರ್, ಕೆ. ದಿವಾಕರ್ ಹಾಜರಿದ್ದರು.

ಚಿನ್ಮಯ ಎಂ. ರಾವ್ ಪ್ರಾರ್ಥಿಸಿದರು.ಹೊಸಗುಂದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ಎನ್. ಶಾಸ್ತ್ರಿ ಸ್ವಾಗತಿಸಿದರು. ದೀಪಕ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT