ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಅಧ್ಯಕ್ಷೆ, ರಾಮ ಕುಲಾಲ್ ಉಪಾಧ್ಯಕ್ಷ

Last Updated 11 ಅಕ್ಟೋಬರ್ 2012, 6:25 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿಯ ಗೌರಿ ವಿ. ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ರಾಮ ಕುಲಾಲ್ ಆಯ್ಕೆಯಾಗಿದ್ದಾರೆ.

41 ಸದಸ್ಯ ಬಲದ ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿ 23 ಸದಸ್ಯರನ್ನು ಹೊಂದಿದೆ. ಬುಧವಾರ ನಡೆದ ಚುನಾವಣೆಯಲ್ಲಿ ಎಲ್ಲ 23 ಸದಸ್ಯರು ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಡಾ. ಸುನಿತಾ ಶೆಟ್ಟಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಉಮೇಶ್ ನಾಯ್ಕ ಅವರು 18 ಮತಗಳನ್ನು ಗಳಿಸಿ ಪರಾಭವಗೊಂಡರು. ಪಕ್ಷೇತರ ಸದಸ್ಯ ರಹಮತ್ ಉಲ್ಲಾ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು.

ಚುನಾವಣಾಧಿಕಾರಿ ಕುಂದಾಪುರದ ಉಪ ವಿಭಾಗಾಧಿಕಾರಿ ಸದಾಶಿವ ಪ್ರಭು ಗೆಲವು ಸಾಧಿಸಿದ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಗೌರಿ ಅವರು, `ಅಧ್ಯಕ್ಷ ಸ್ಥಾನ ಸಿಗಲು ಕಾರಣರಾದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ. ಪಕ್ಷದ ಎಲ್ಲ ಮುಖಂಡರ ಸಹಾಯದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾನೆ. ಇಪ್ಪತ್ತು ತಿಂಗಳ ಆಡಳಿತ ನಡೆಸಲು, ಉತ್ತಮ ಕೆಲಸ ಮಾಡಲು ಎಲ್ಲ ಸದಸ್ಯರ ಬೆಂಬಲ ಬೇಕು~ ಎಂದರು.

`ತಾಲ್ಲೂಕು ಪಂಚಾಯಿತಿಗೆ ಸಿಗುವ ಅನುದಾನ ಕಡಿಮೆ ಇದೆ. ಹೆಚ್ಚು ಅನುದಾನ ಪಡೆಯಲು ಮತ್ತು ಹೆಚ್ಚು ಸದಸ್ಯರು ಇರುವ ಕಡೆ ಅಧಿಕ ಅನುದಾನ ಬಳಕೆ ಮಾಡಲು ಯತ್ನಿಸುತ್ತೇನೆ~ ಎಂದರು.

`ಉಡುಪಿ ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಗೌರಿ ಮತ್ತು ರಾಮ ಕುಲಾಲ್ ಅವರೂ ಸಹ ಉತ್ತಮವಾಗಿ ಕೆಲಸ ಮಾಡಲಿ~ ಎಂದು ಶಾಸಕ ಕೆ. ರಘುಪತಿ ಭಟ್ ಹಾರೈಸಿದರು.

ಅಭಿವೃದ್ಧಿಯ ಪ್ರಶ್ನೆ ಬಂದಾಗ ಯಾರೂ ರಾಜಕೀಯ ಮಾಡದೆ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಆಡಳಿತ ಪಕ್ಷದವರು ಎಲ್ಲ ಸದಸ್ಯರನ್ನೂ ಜತೆ ಕರೆದುಕೊಂಡು ಹೋಗಬೇಕು ಎಂದು ಅವರು ಸಲಹೆ ನೀಡಿದರು.
`ಉತ್ತಮ ಆಡಳಿತ ನೀಡಿ ಮಾದರಿ ಎನಿಸುವಂತೆ ಕೆಲಸ ಮಾಡಿ~ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹಾರೈಸಿದರು. ಜಿ.ಪಂ. ಹಂಗಾಮಿ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ತಾ.ಪಂ. ಇಒ ಡಿ. ಮಂಜುನಾಥಯ್ಯ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಗೌರಿ
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಗೌರಿ ವಿ. ಪೂಜಾರಿ ಅವರು ಬಾರ್ಕೂರಿನ ಹೊಸಾಳ ಗ್ರಾಮದವರು. ಕಳೆದ ಬಾರಿ ಬಾರ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು.  ದ್ವಿತೀಯ ಪಿಯುಸಿ ಓದಿರುವ ಅವರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಸಂಘ- ಸಂಸ್ಥೆಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಬಾರ್ಕೂರು ಶಾಂತಾರಾಮ ಶೆಟ್ಟಿ ಅವರೇ ರಾಜಕೀಯಕ್ಕೆ ಬರಲು ಪ್ರೇರಣೆ ಎಂದು ಗೌರಿ ಹೇಳಿದ್ದಾರೆ.

ಉಪಾಧ್ಯಕ್ಷರಾಗಿರುವ ರಾಮ ಕುಲಾಲ್ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಎರಡು ಬಾರಿ ಪೆರ್ಡೂರು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು. ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷರಾಗಿರುವ ಅವರು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾಗಿದ್ದಾರೆ.

ಜಿಲ್ಲಾ ಪಂಚಾಯಿತಿ ಚುನಾವಣೆ ಹಾದಿ ಸುಗಮ
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೆಂಬಲಿಗರಾದ ಗೌರಿ ವಿ. ಪೂಜಾರಿ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿರುವುದರಿಂದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಸುಗಮವಾಗಿ ನಡೆಯಲಿದೆ.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಉಪೇಂದ್ರ ನಾಯಕ್ ಅವರನ್ನು ಹಾಲಾಡಿ ಬೆಂಬಲಿಗರು ಬೆಂಬಲಿಸುವುದು ಖಚಿತವಾದಂತಾಗಿದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ನೀಡಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬೆಂಬಲ ಪಡೆಯುವ ಬಗ್ಗೆ ಹಾಲಾಡಿ ಬೆಂಬಲಿಗ ಜಿಲ್ಲಾ ಪಂಚಾಯಿತಿ ಸದಸ್ಯರ ಜೊತೆ ಈಗಾಗಲೇ ಒಪ್ಪಂದವಾಗಿದೆ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT