ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ – ಗಣೇಶ ಹಬ್ಬದ ಸಂಭ್ರಮಾಚರಣೆ

Last Updated 11 ಸೆಪ್ಟೆಂಬರ್ 2013, 10:08 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದ ವಿವಿಧ ವಾರ್ಡ್ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಭಾನು­ವಾರ– ಸೋಮವಾರ ಮಹಿಳೆ­ಯರು ನಾಗರಕಟ್ಟೆಗೆ ಪೂಜೆ ಸಲ್ಲಿಸಿದರು.

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿ­ಷ್ಠಾಪನೆಗಾಗಿ ಕೆಲ ದಿನಗಳ ಹಿಂದಿ­ನಿಂದಲೇ ಚಂದಾ ವಸೂಲಿ ಮಾಡಿ, ಸಕಲ ಸಿದ್ಧತೆಗಳು ಮಾಡಲಾಗಿತ್ತು. ಗ್ರಾಮೀಣ ಪ್ರದೇಶಗಳ ದೇಗುಲಗಳಲ್ಲಿ, ಖಾಲಿ ಇರುವ ಸ್ಥಳಗಳಲ್ಲಿ ವೇದಿಕೆ ನಿರ್ಮಿಸಿ, ತಳಿರು– ತೋರಣಗಳಿಂದ ಸಿಂಗರಿಸಿದ್ದರು.

ಗೌರಿ ಹಬ್ಬದ ಪ್ರಯುಕ್ತ ಭಾನುವಾರ ಪಟ್ಟಣದ ನ್ಯಾಷನಲ್ ಕಾಲೇಜು ರಸ್ತೆ, ಪೊಲೀಸ್ ವಸತಿ ಗೃಹಗಳ ಮುಂದೆ, ಬೈಲಾಂಜನೇಯ ಸ್ವಾಮಿ ದೇಗುಲದ ಬಳಿ ಸೇರಿದಂತೆ ವಿವಿಧ ನಾಗರಕಟ್ಟೆಗಳಿಗೆ ಮಹಿಳೆಯರು ಅರಿಶಿಣ-ಕುಂಕುಮ ಹಚ್ಚಿ, ನೈವೇದ್ಯ, ಪ್ರಸಾದ ಹಾಗೂ ಹಾಲು ಸುರಿದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸೋಮವಾರ ಗಣೇಶನನ್ನು ಪ್ರತಿ­ಷ್ಠಾಪಿಸಿ, 21 ಕಡಬು ಹಾರ ಮಾಡಿ ಹಾಕಲಾಗಿತ್ತು. ಗಣೇಶನಿಗೆ ವಿಶೇಷ ಪೂಜೆ, ದೀಪಾಲಂಕಾರ ಮಾಡ­ಲಾ­ಗಿತ್ತು. ಗ್ರಾಮೀಣ ಭಾಗದ ಯುವ­ಕರು ದೇಸಿ ಕ್ರೀಡೆಗಳನ್ನು ಆಡುತ್ತಿದ್ದ ದೃಶ್ಯ ನೋಡುಗರಿಗೆ ಮನರಂಜನೆ ಒದಗಿಸಿತು.
ಸಂಜೆ ಹೆಣ್ಣುಮಕ್ಕಳು ಹೊಸ ಬಟ್ಟೆ­ಗಳು ಧರಿಸಿ, ವಿವಿಧೆಡೆ ಕೂರಿಸಿದ್ದ ಗಣೇಶ ಮೂರ್ತಿಗಳ ದರ್ಶನ ಮಾಡಿದರು.

‘ನಮ್ಮೂರಿನಲ್ಲಿ ಗಣೇಶ ಹಬ್ಬದಂದು ಕಬಡ್ಡಿ, ಉದ್ದ ಜಿಗಿತ, ಎತ್ತರ ಜಿಗಿತ ಆಟೋಟ ಆಯೋಜಿಸುತ್ತೇವೆ. ಮಡಕೆ ಒಡೆಯುವುದು, ಪಾವಲಕಿ ಪೆಳ್ಳಿ (ನಾಲ್ಕಾಣೆಗೆ ಮದುವೆ) ಎಂಬ ಕಿರು ನಾಟಕ ಆಡುತ್ತಿದ್ದೆವು. ಈ ಆಟಗಳಿಗೆ ನಮ್ಮ ಊರು ತಾಲ್ಲೂಕಿಗೆ ಹೆಸರಾಗಿತ್ತು. ಗ್ರಾಮೀಣ ಕ್ರೀಡೆಗಳು ಶಾಶ್ವತ­ವಾಗಿರ­ಬೇಕು' ಎಂದು ಪೋತೇ-­ಪಲ್ಲಿಯ ಪಿ.ಸಿ.­ರಾಮಕೃಷ್ಣ ‘ಪ್ರಜಾವಾಣಿ'ಗೆ ತಿಳಿಸಿದರು.

ಧ್ವನಿವರ್ಧಕದಲ್ಲಿ ಅಶ್ಲೀಲ ಸಂಗೀತ: ಸಾರ್ವಜನಿಕರ ಆಕ್ಷೇಪ
ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆ ಸೇರಿ ವಿವಿಧ ವಾರ್ಡ್ ಗಳಲ್ಲಿ ಸುಮಾರು 80 ಗಣೇಶ ಮೂರ್ತಿ­ಗಳನ್ನು ಪ್ರತಿಷ್ಠಾಪಿಸಲಾಗಿದೆ.
ಕೆಲ ವಾರ್ಡ್‌ಗಳಲ್ಲಿ ಪೈಪೋಟಿಗಾಗಿ ಗಣೇಶ ಕೂರಿಸಿ, ದಿನವಿಡೀ ಧ್ವನಿ­ವರ್ಧಕಗಳಲ್ಲಿ ಆಶ್ಲೀಲ ಹಾಡುಗಳು ಹಾಕುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಶ್ನಿಸುವ ಗೋಜಿಗೂ ಹೋಗು­ವುದಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಅಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾ­ಡುವ ಭರವಸೆ ನೀಡಲಾಗಿತ್ತು. ಆದರೆ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಬಹುತೇಕ ಕಡೆ ಅಶ್ಲೀಲ ಹಾಡುಗಳು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಬೇಸರ.

ಕಳೆದ ವರ್ಷ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಚಿಂತಾಮಣಿಯಲ್ಲಿ ಆದ ಗಲಭೆಯಲ್ಲಿ ತಾಲ್ಲೂಕಿನ ಏಟಗಡ್ಡಪಲ್ಲಿ ಗ್ರಾಮದ ಪೊಲೀಸ್ ಪೇದೆ ಸುಧಾಕರರೆಡ್ಡಿ ಮೃತಪಟ್ಟಿದ್ದರು.

ಆ ಘಟನೆಯಿಂದ ಪಾಠ ಕಲಿಯಬೇಕಿತ್ತು. ಸಿಬ್ಬಂದಿಯಿಂದ ಮಾಹಿತಿ ತರಿಸಿಕೊಂಡರೆ ಸಾಲದು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾತಾವರಣ ಹೇಗಿದೆ ಎಂದು ಗಮನಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT