ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್ ಏಜೆನ್ಸಿ ವಿರುದ್ಧ ಪಟ್ಟಣ ಬಂದ್

Last Updated 5 ಅಕ್ಟೋಬರ್ 2012, 8:45 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಯದಿಂದ ಗ್ರಾಹಕರಿಗೆ ನಿರಂತರ ತೊಂದರೆ ಯಾಗುತ್ತಿದೆ. ಮುಂದಿನ 10 ದಿನಗಳೊಳಗೆ ಇದನ್ನು ಸರಿಪಡಿಸದಿದ್ದರೆ ವಿರಾಜಪೇಟೆ ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ಎಚ್ಚರಿಸಿದ್ದಾರೆ.

ವಿರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಗುರುವಾರ ಇಲ್ಲಿಯ ಪುರ ಭವನದಲ್ಲಿ ಹಮ್ಮಿಕೊಂಡಿದ್ದ ಪಟ್ಟಣದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಗ್ಯಾಸ್ ಏಜೆನ್ಸಿಯವರ ಬೇಜವಾಬ್ದಾರಿತನ ಹಾಗೂ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದೇ ವಿತರಣೆಯಲ್ಲಿ ವ್ಯತ್ಯಯವಾಗಲು ಕಾರಣ. ತಾಲ್ಲೂಕು ಕಚೇರಿಯ ಆಹಾರ ಸರಬರಾಜು ವಿಭಾಗ ಹಾಗೂ ಎಚ್.ಪಿ. ಗ್ಯಾಸ್‌ನ ಮಾರಾಟ ವಿಭಾಗದ ಅಧಿಕಾರಿಗಳು ಅಡುಗೆ ಅನಿಲ ವಿತರಕ ಏಜೆನ್ಸಿ ಯೊಂದಿಗೆ ಶಾಮಿಲಾಗಿದ್ದಾರೆ. ಗ್ರಾಹಕರು ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿ ಸುತ್ತಿಲ್ಲ ಎಂದು ಆರೋಪಿಸಿದರು.

ಪಟ್ಟಣದ ಕೆಲವು ಗ್ರಾಹಕರಿಗೆ ಮೂರು ತಿಂಗಳು ಕಳೆದರೂ ಸಿಲಿಂಡರ್ ಸರಬರಾಜು ಆಗುತ್ತಿಲ್ಲ. ಏಜೆನ್ಸಿ ಯವರು ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಹೊಸ ಕಟ್ಟಡಕ್ಕೆ ಈಚೆಗೆ ಕಚೇರಿಯನ್ನು ಸ್ಥಳಾಂತರಿಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಏಜೆನ್ಸಿಗೆ ತಿಳಿವಳಿಕೆ ನೋಟಿಸ್ ನೀಡಿದರೂ ಪ್ರಯೋಜನ ವಾಗಿಲ್ಲ ಎಂದರು.

ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಕಟ್ಟಿ ಪೂಣಚ್ಚ ಮಾತನಾಡಿ ಗ್ಯಾಸ್ ಏಜೆನ್ಸಿ ವಿರುದ್ಧ ಪಂಚಾಯಿತಿಗೆ ನಿರಂತರ ದೂರುಗಳು ಬರುತ್ತಿವೆ. ಏಜೆನ್ಸಿ ಮಾಲೀಕ ಸ್ಥಳದಲ್ಲಿಯೇ ಇರುವುದಿಲ್ಲ. ಗ್ಯಾಸ್ ವಿತರಣಾ ಕಚೇರಿ ಯಾವಾಗಲೂ ಮುಚ್ಚಿರುತ್ತದೆ. ಕಚೇರಿಗೆ ಮೂರು ದೂರವಾಣಿಗಳ ಸಂಪರ್ಕ ಇದ್ದರೂ ಗ್ರಾಹಕರ ಕರೆಗೆ ಉತ್ತರ ಬರುವುದಿಲ್ಲ. ಪಂಚಾಯಿತಿ ಯಿಂದ ಈಗಾಗಲೇ ಮಂಗಳೂರಿನ ಎಚ್.ಪಿ. ಗ್ಯಾಸ್ ಕಂಪೆನಿ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ದೂರು ನೀಡಲಾಗಿದೆ ಎಂದರು.

ಗೋಣಿಕೊಪ್ಪದಿಂದ ಕುಟ್ಟದವರೆಗೆ ಎರಡು ಬೇರೆ ಕಂಪೆನಿಗಳ ಉಪ ಏಜೆನ್ಸಿಗಳಿದ್ದರೂ ವಿರಾಜಪೇಟೆಯ ಏಜೆನ್ಸಿಯಿಂದ ಗೋಣಿಕೊಪ್ಪಲು, ಕುಟ್ಟ ವಿಭಾಗಕ್ಕೆ ಸಿಲಿಂಡರ್‌ಗಳು ಕಾನೂನು ಬಾಹಿರವಾಗಿ ಸರಬರಾಜು ಆಗುತ್ತಿವೆ. ಕಚೇರಿಯಲ್ಲಿರುವ ಸಿಬ್ಬಂದಿ ಗ್ರಾಹಕರೊಂದಿಗೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜನಪ್ರತಿನಿಧಿಗಳು, ಸಂಸದರು ಈ ಗ್ಯಾಸ್ ಏಜೆನ್ಸಿ ಮುಂದುವರಿಸಿದರೆ ಗ್ರಾಹಕರ ಬವಣೆಯೂ ನಿರಂತರವಾಗಿ ಮುಂದುವರಿಯಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ದೂರಿದರು.

ಗ್ಯಾಸ್ ಏಜೆನ್ಸಿಯ ವಿರುದ್ಧ ರಾಜಕೀಯ ಬದಿಗಿಟ್ಟು ಹೋರಾಡುವುದು. ಜಿಲ್ಲೆಯ ಜನಪ್ರತಿನಿಧಿಗಳು, ಕಂಪೆನಿಯ ಅಧಿಕಾರಿಗಳು, ಜಿಲ್ಲೆಯ ಆಹಾರ ಇಲಾಖೆ ಹಾಗೂ ಜಿಲ್ಲಾಧಿಕಾರಿಳಿಗೆ ಗಡುವು ನೀಡಿ ತುರ್ತು ದೂರು ನೀಡಲು ಸಭೆ ನಿರ್ಣಯ ಅಂಗೀಕರಿಸಿತು.

ಪಂಚಾಯಿತಿ ಉಪಾಧ್ಯಕ್ಷೆ ಕೌಶರ್, ಸದಸ್ಯರಾದ ಬಿ.ಕೆ.ಚಂದ್ರು, ಬಿ.ಎಂ.ಕುಮಾರ್, ಪಂಚಾಯಿತಿ ಸದಸ್ಯರು, ನಾಮನಿರ್ದೇಶಿತ  ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT