ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ

Last Updated 20 ಸೆಪ್ಟೆಂಬರ್ 2011, 9:40 IST
ಅಕ್ಷರ ಗಾತ್ರ

ಶಹಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಲು ಆಗುವುದಿಲ್ಲ.  ಶಿಕ್ಷಕರು ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪೂರ ಅಭಿಪ್ರಾಯಪಟ್ಟರು.

ಪಟ್ಟಣದ ಜಿಹ್ವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜ್ಞಾನ ದೇಗುಲಗಳ ಅಭಿವೃದ್ದಿಗೆ ಸರ್ಕಾರದಿಂದ ಹಣಕಾಸಿನ ಕೊರತೆಯಿಲ್ಲ. ಆದರೂ ಪ್ರೌಢಶಾಲೆಗಳ ಕಟ್ಟಡಗಳ ಕೊರತೆಯಿದೆ.  ಶಾಲೆಯ ಅಭಿವೃದ್ಧಿಗೆ ಶಾಲಾ ಎಸ್‌ಡಿಎಂಸಿಯ ಪಾತ್ರ ಬಹುಮುಖ್ಯವಾಗಿದ್ದು ಕೆಲ ಕಡೆ ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆಯು ತಲೆ ನೋವಾಗಿ ಪರಿಣಮಿಸಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಹಾಕಿ ಅಹ್ವಾನಿಸುವುದು ಸರಿಯಲ್ಲ. ಸರ್ಕಾರವೇ  ಗ್ರಾಮೀಣ ಹಾಗೂ ಪಟ್ಟಣದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳ ಏಳ್ಗೆಗಾಗಿ ಶ್ರಮಿಸಿದ ಅಲ್ಲದೆ ಪ್ರತಿಭೆಗಳನ್ನು ಗುರುತಿಸಿ ಮುಂದೆ ತಂದ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಬೇಕು.

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ವಸತಿ ಸಮಸ್ಯೆ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಹೇಳಿದರು.

ವೇದಿಕೆ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಯಪ್ಪರೆಡ್ಡಿ,ಪುರಸಭೆ ಅಧ್ಯಕ್ಷೆ ರೇಣುಕಾ ರುದ್ರಪ್ಪ ಚಟ್ರಿಕಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೋವಿಂದಮ್ಮ ದೊರೆ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಯಾಳಗಿ, ಜಿಲ್ಲಾ ಅಧ್ಯಕ್ಷ ಹಳ್ಳೆಪ್ಪ ಖಾಜಾಂಚಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿ.ಬಿ.ಜೋಷಿ, ಎಚ್.ಬಿ.ಪಾಟೀಲ್, ಮಲ್ಲಪ್ಪ ಬಗಲಿ, ಸುಮಂಗಲಾ ಮಣ್ಣೂರ, ತಾಲ್ಲೂಕು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಂದಪ್ಪ ಸೀತ್ನಿ, ತಾಪಂ ಉಪಾಧ್ಯಕ್ಷ ಶಿವಣ್ಣಗೌಡ ಪಾಟೀಲ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ  ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (ಪ್ರೌಢಶಾಲಾ ವಿಭಾಗ) ಪಡೆದ ಅನಸೂಯ ಕುಲಕರ್ಣಿ, ಪ್ರಾಥಮಿಕ ಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗೋಪಾಲ ಪತ್ತಾರ, ಅಲ್ಲದೆ ನಿವೃತ್ತಿ ಹೊಂದಿದ ಶಿಕ್ಷಕರನ್ನ ಸನ್ಮಾನಿಸಲಾಯಿತು. ತಾಲ್ಲೂಕಿನ ಉತ್ತಮ ಎಸ್‌ಡಿಎಂಸಿ ಶಾಲೆ ಪ್ರಶಸ್ತಿ ಪಡೆದ ದರ್ಶನಾಪೂರ, ಶಹಾಪುರ ಗಾಂಧಿಚೌಕ, ಬಿರನೂರ, ದೋರನಹಳ್ಳಿ ಅಗಸಿ, ಕುರುಕುಂದಾ ಉರ್ದು ಶಾಲೆಯ ಅಧ್ಯಕ್ಷ ಹಾಗು ಮುಖ್ಯಗುರು ಅವರನ್ನು ಅಭಿನಂದಿಸಲಾಯಿತು.

ಸಭೆ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ನಾಗಣ್ಣಗೌಡ ಸುಬೇದಾರವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆ ಶಿಕ್ಷಕ ಲಕ್ಷ್ಮಣ, ಸ್ವಾಗತ ಎಚ್.ಬಿ.ಪಾಟೀಲ್, ಚಂದಪ್ಪ ಎಚ್.ಎಸ್.ವಂದಿಸಿದರು.

ಇದಕ್ಕೂ ಪೂರ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಸರ್ವಪಲ್ಲಿ ರಾಧಾಕೃಷ್ಣನ ಅವರ ಭಾವಚಿತ್ರ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮರೆವಣಿಗೆ ನಡೆಸುತ್ತಾ ವೇದಿಕೆಗೆ ಕರೆತರಲಾಗಿತ್ತು. ಮೆರವಣಿಗೆಯಲ್ಲಿ ಆಕರ್ಷಕ ಡೊಳ್ಳು ಕುಣಿತ ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT