ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕನಿಗೆ ವಿದ್ಯುತ್ ಶಾಕ್

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿರುವ ಬೆನ್ನಲ್ಲೇ ಸರಾಸರಿ ಯೂನಿಟ್‌ಗೆ 28 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ `ಶಾಕ್~ ನೀಡಲಾಗಿದೆ.

ಗೃಹ ಬಳಕೆಗೆ ತಿಂಗಳಿಗೆ 200 ಯೂನಿಟ್‌ಗಿಂತ ಹೆಚ್ಚು ಬಳಸುವ ಗ್ರಾಹಕರು ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚಿಗೆ ಭರಿಸಬೇಕಾಗುತ್ತದೆ. ದರ ಪರಿಷ್ಕರಣೆ ಜೊತೆಗೆ ಬಳಕೆದಾರರು ಪ್ರತಿ ತಿಂಗಳು  ಪಾವತಿ ಮಾಡುವ ನಿಗದಿತ ಶುಲ್ಕದಲ್ಲೂ ಪ್ರತಿ ಕಿಲೋವಾಟ್‌ಗೆ ಐದು ರೂಪಾಯಿ ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು ಮುಂದಿನ ಮೀಟರ್ ರೀಡಿಂಗ್‌ನ ಬಿಲ್ ಮೊತ್ತದಲ್ಲಿ ಏರಿಕೆಯಾಗಲಿದೆ. ವಿದ್ಯುತ್ ದರ ಹೆಚ್ಚಳ ಸಂಬಂಧ ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಶುಕ್ರವಾರ ದರ ಹೆಚ್ಚಳ ಆದೇಶ ಹೊರಡಿಸಿದೆ.

ಕಳೆದ ಡಿಸೆಂಬರ್ 7ರಂದು ಯೂನಿಟ್‌ಗೆ 30 ಪೈಸೆ ದರ ಹೆಚ್ಚಳ ಮಾಡಲಾಗಿತ್ತು. ವರ್ಷ ತುಂಬುವ ಮೊದಲೇ ಮತ್ತೊಮ್ಮೆ ಯೂನಿಟ್‌ಗೆ 28 ಪೈಸೆ ದರ ಹೆಚ್ಚಳವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ಕತ್ತಲೆಯಲ್ಲಿರುವ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

 ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪೆನಿಗಳು ಯೂನಿಟ್‌ಗೆ 88 ಪೈಸೆ ದರ ಹೆಚ್ಚಳ ಮಾಡುವಂತೆ ಇದೇ ಜೂನ್‌ನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದ್ದವು. ಆದರೆ ಆಯೋಗ ಯೂನಿಟ್‌ಗೆ 28 ಪೈಸೆ ಜಾಸ್ತಿ ಮಾಡಿದೆ. ದರ ಹೆಚ್ಚಳ ಆದೇಶದ ಪ್ರತಿಗಳನ್ನು ಶುಕ್ರವಾರವೇ ಆಯಾ ಕಂಪೆನಿಗಳ ಪ್ರತಿನಿಧಿಗಳಿಗೆ ನೀಡಲಾಯಿತು.

ಒಟ್ಟಾರೆ ಶೇ 7ರಷ್ಟು ವಿದ್ಯುತ್ ದರ ಹೆಚ್ಚಳವಾಗಿದ್ದು, ಕನಿಷ್ಠ 10 ಪೈಸೆಯಿಂದ ಗರಿಷ್ಠ 60 ಪೈಸೆ ಹೆಚ್ಚಳವಾಗಿದೆ. ಭಾಗ್ಯಜ್ಯೋತಿ, ಕುಟೀರಜ್ಯೋತಿ ಮತ್ತು ಹತ್ತು ಅಶ್ವಶಕ್ತಿಯೊಳಗಿನ ನೀರಾವರಿ ಪಂಪ್‌ಸೆಟ್ ಬಳಕೆದಾರರನ್ನು ಹೊರತುಪಡಿಸಿ ಉಳಿದ ಎಲ್ಲ ವರ್ಗದ ಗ್ರಾಹಕರಿಗೆ ದರ ಹೆಚ್ಚಳ ಅನ್ವಯವಾಗಲಿದೆ ಎಂದು ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದರ ಹೆಚ್ಚಳದಿಂದ ವಾರ್ಷಿಕ ಒಟ್ಟು 2504.78 ಕೋಟಿ ರೂಪಾಯಿ ಹೆಚ್ಚಿನ ಆದಾಯ ಸಂಗ್ರಹವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಸ್ಕಾಂಗೆ 1614.33 ಕೋಟಿ ರೂ, ಮೆಸ್ಕಾಂಗೆ 224.10 ಕೋಟಿ ರೂ, ಚೆಸ್ಕಾಂಗೆ 218.44 ಕೋಟಿ ರೂ, ಹೆಸ್ಕಾಂಗೆ 283.36 ಕೋಟಿ ರೂ ಮತ್ತು ಜೆಸ್ಕಾಂಗೆ 164.55 ಕೋಟಿ ರೂಪಾಯಿ ಹೆಚ್ಚಿನ ಆದಾಯ ಸಂಗ್ರಹವಾಗಲಿದೆ.

ನಗರ ಪ್ರದೇಶಗಳಲ್ಲಿ 30 ಯೂನಿಟ್‌ವರೆಗೆ ಮತ್ತು ಗ್ರಾಮಾಂತರ ಪ್ರದೇಶದ ಗೃಹ ಬಳಕೆದಾರರಿಗೆ ಮೊದಲ 100 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ ಹತ್ತು ಪೈಸೆ ದರ ಹೆಚ್ಚಳ ಮಾಡಲಾಗಿದೆ.

ಹತ್ತು ಅಶ್ವಶಕ್ತಿಗಿಂತ ಹೆಚ್ಚಿನ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳು, ಖಾಸಗಿ ನರ್ಸರಿಗಳು, ಕಾಫಿ ಮತ್ತು ಟೀ ತೋಟಗಳಿಗೆ ಬಳಕೆಯಾಗುವ ವಿದ್ಯುತ್ ದರವನ್ನು ಯೂನಿಟ್‌ಗೆ ರೂ 1.25ರಿಂದ ರೂ 1.40ಕ್ಕೆ ಹೆಚ್ಚಿಸಲಾಗಿದೆ. ಆದರೆ ನಗರ ಮತ್ತು ಗ್ರಾಮಾಂತರ ನೀರು ಸರಬರಾಜು ಯೋಜನೆಗಳು, ಮಲಿನ ನೀರು ಶುದ್ದೀಕರಣ ಘಟಕಗಳಿಗೆ ಬಳಕೆಯಾಗುವ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿಲ್ಲ ಎಂದು ಅವರು ಹೇಳಿದರು.

ನಗರ ಪ್ರದೇಶಗಳಲ್ಲಿ ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಮೊದಲ 50 ಯೂನಿಟ್‌ಗಳಿಗೆ ರೂ 5.60ರಿಂದ 6ಕ್ಕೆ, 50 ಯೂನಿಟ್‌ಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ ರೂ 6.80ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳ ವಾಣಿಜ್ಯ ಬಳಕೆಯ ದರಗಳನ್ನು ಪ್ರತಿ ಯೂನಿಟ್‌ಗೆ ಹತ್ತು ಪೈಸೆ ಹೆಚ್ಚಿಸಲಾಗಿದೆ. ಆಯಾ ಹಂತಕ್ಕೆ (ಸ್ಲ್ಯಾಬ್) ಅನುಗುಣವಾಗಿ ರೂ 5.40ರಿಂದ ರೂ 6.40ಕ್ಕೆ ನಿಗದಿ ಮಾಡಲಾಗಿದೆ.

ಎಲ್.ಟಿ. ಕೈಗಾರಿಕೆಗಳಿಗೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸದ್ಯ ಯೂನಿಟ್‌ಗೆ ಇರುವ ರೂ 3.60 ಮತ್ತು ರೂ 4.70 ದರವನ್ನು ಕ್ರಮವಾಗಿ ರೂ 4 ಮತ್ತು ರೂ 5ಕ್ಕೆ ಹೆಚ್ಚಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಪರಿಷ್ಕೃತ ದರ ರೂ 4ರಿಂದ 4.80ಕ್ಕೆ ಹೆಚ್ಚಿಸಲಾಗಿದೆ. ಹೈಟೆನ್ಶನ್ ಕೈಗಾರಿಕೆಗಳಿಗೆ ಇರುವ ಯೂನಿಟ್ ದರವನ್ನು ರೂ 4.60ರಿಂದ ರೂ 4.90ಕ್ಕೆ ಮತ್ತು ರೂ 5ರಿಂದ ರೂ 5.30ಕ್ಕೆ ಹೆಚ್ಚಿಸಲಾಗಿದೆ.

ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಮತ್ತು ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ನೀಡುವ ವಿದ್ಯುತ್‌ಗೆ ಸರ್ಕಾರ ಕಳೆದ ವರ್ಷ 3,577 ಕೋಟಿ ರೂಪಾಯಿ ಸಹಾಯಧನ ನೀಡಿತ್ತು. ಈ ವರ್ಷ ಅದನ್ನು 4,156 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಬೆಸ್ಕಾಂ ಹೊರತುಪಡಿಸಿ ಉಳಿದ ಕಂಪೆನಿಗಳ ವ್ಯಾಪ್ತಿಯಲ್ಲಿ ಬಹುತೇಕ ಒಂದೇ ರೀತಿಯ ದರ ಪಾವತಿಸಬೇಕಾಗುತ್ತದೆ. ಕೈಗಾರಿಕೆಗಳಿಗೆ ಯೂನಿಟ್‌ಗೆ 30 ಪೈಸೆ ದರ ಹೆಚ್ಚಳವಾಗಿದೆ. 2011ರ ಸಾಲಿನ ದರ ಪರಿಷ್ಕರಣೆ ನಂತರ ಕಂಪೆನಿಗಳು ಆದಾಯದಲ್ಲಿ 869.80 ಕೋಟಿ ರೂಪಾಯಿ ಕೊರತೆ ಎದುರಿಸುತ್ತಿದ್ದವು.

ಈ ಕೊರತೆ ವರಮಾನದ ಪೈಕಿ 2012ನೇ ಸಾಲಿನಲ್ಲಿ 468.80 ಕೋಟಿ ರೂಪಾಯಿ ಮತ್ತು 2013ರಲ್ಲಿ 401 ಕೋಟಿ ರೂಪಾಯಿಯನ್ನು ಹೊಂದಿಸಿ ಎರಡು ವರ್ಷಗಳಲ್ಲಿ ಕೊರತೆಯನ್ನು ಸರಿದೂಗಿಸಲಾಗುತ್ತದೆ ಎಂದು ಅವರು ಹೇಳಿದರು. ಆಯೋಗದ ಸದಸ್ಯರಾದ ವಿ.ಹಿರೇಮಠ, ಕೆ.ಶ್ರೀನಿವಾಸ ರಾವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT