ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಕಿ ಮಾಮ ಚಕ್ಕುಲಿ ಮಾಮ...

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಒಂದು ದಿನ ಚಂದ್ರ, ಹಳ್ಳಿಯ ಕೊಡಸೇ ಗುಡ್ಡದ ಅಂಚಿನಲ್ಲಿ ಕಾಣಿಸಿಕೊಂಡ. ಕೈ ಚಾಚಿ ಅವನನ್ನ ಹಿಡಿಯಬಹುದು ಎಂದು ಹಳ್ಳಿಯ ಇಂದುಶೇಖರ ಎಂಬ ಬಾಲಕ ಓಡಿದ.

ಇಂದುಶೇಖರ ಗುಡ್ಡದ ತುದಿಗೆ ಹೋಗುವಾಗ ಚಂದ್ರ ನಿಧಾನವಾಗಿ ಮೇಲೆ ಏರಿದ. ಇನ್ನು ಅವನು ಸಿಗುವುದೇ ಇಲ್ಲ ಅನ್ನುವ ಹಾಗೆ ಮೇಲೆ ಏರಿ ಸಣ್ಣವನಾದ. ಶೇಖರನಿಗೆ ಇದು ವಿಚಿತ್ರವೆನಿಸಿತು. ಈ ಚಂದ್ರನನ್ನ ನಾವೆಲ್ಲ ಮಕ್ಕಳು ಪ್ರೀತಿಸುತ್ತೇವೆ.

`ಚಂದಕಿ ಮಾಮ ಚಕ್ಕುಲಿ ಮಾಮ~ ಎಂದು ಹಾಡುತ್ತೇವೆ, `ಚಂದಪ ಚಂದಪ ಚೆಲುವ ಜುಟ್ಲ ಬಿಟಕೊಂಡು ಬರುವ~ ಎಂದು ಕುಣಿಯುತ್ತೇವೆ. ಆದರೆ ಈ ಚಂದಪ್ಪ ನಮ್ಮಿಂದ ದೂರ ಯಾಕೆ?

ಮನಸ್ಸಿನಲ್ಲಿ ಇಂತಹ ಒಂದು ಪ್ರಶ್ನೆ ಎದ್ದರೆ ಶೇಖರ ಹೋಗುತ್ತಿದ್ದುದು ಪುಟ್ಟಜ್ಜಿಯ ಬಳಿಗೆ. ಇಂದೂ ಅವನು ಹಾಗೆಯೇ ಮಾಡಿದ.

`ಪುಟ್ಟಜ್ಜೀ ಪುಟ್ಟಜ್ಜೀ~ ಆತ ಪುಟ್ಟಜ್ಜಿಯ ಮನೆಗೆ ಬಂದ. ಅಂಗಳದಲ್ಲಿ ನಿಂತು ಅವಳನ್ನ ಕೂಗಿದ. ಪುಟ್ಟಜ್ಜಿ ಒಳಗಿನಿಂದ ಬಂದಳು.
`ಏನು ಮರೀ?~ ಎಂದು ಕೇಳಿದಳು.
`ಪುಟ್ಟಜ್ಜಿ, ಈ ಚಂದಮಾಮ ನಮ್ಮಿಂದ ಯಾಕೆ ದೂರ?~ ಎಂದು ಕೇಳಿದ.

`ನಾವು ಅವನನ್ನ ನೋಡಿ ಸಂತೋಷ ಪಡತೀವಿ, ಹಾಡಿ ಕುಣೀತೀವಿ. ಅವನು ಸಿಕ್ಕರೆ ಅವನ ಜೊತೆಯಲ್ಲಿ ಆಡಬೇಕು ಅಂತ ನಮಗೆ ಆಸೆ. ಆದರೂ ಅವನು ನಮ್ಮಿಂದ ದೂರ ದೂರ ಹೋಗತಾನೆ, ಯಾಕೆ?~

`ಹಿಂದೆ ಅವನು ಮಕ್ಕಳಿಗೆ ಹತ್ತಿರದಲ್ಲೇ ಇದ್ದ ಮರಿ... ಅವನು ಮಕ್ಕಳ ಜೊತೆ ಸೇರಿ ಆಟ ಆಡತಿದ್ದ, ಆದರೆ...~ ಎಂದು ಅಜ್ಜಿ ರಾಗ ಎಳೆದಳು.
`ಮತ್ತೆ ಯಾಕೆ ಅವನು ದೂರ ಹೋದ?~
`ಅಯ್ಯೋ ಅದೊಂದು ಕತೆ...~ ಎಂದು ಅಜ್ಜಿ ಗಂಟಲು ಸರಿ ಮಾಡಿಕೊಂಡಳು.

ಒಂದಾನೊಂದು ಕಾಲದಲಿ ಚಂದ್ರನು ಕೂಡ ಕೆಳಗಿದ್ದ
ಮಕ್ಕಳ ಕೈಗೆ ಎಟುಕುತ್ತ ಮಕ್ಕಳ ಜೊತೆಯಲಿ ಆಡುತ್ತ
ಆಟವ ಆಡಿ ಕುಣಿಕುಣಿದು ಮಕ್ಕಳ ಕುಣಿಸಿ ತಾ ದಣಿದು
ಮಕ್ಕಳ ಮನೆಯಲಿ ತಾ ಮಲಗಿ ಏಳುತಲಿದ್ದ ಮಗುವಾಗಿ.


ಚಿಣ್ಣರ ಬಾಯಲಿ ಚಂದಮಾಮ ಆದನು ಬೆಳ್ಳಿಯ ಚೆಂಡು
ಕೆಲವರು ಕರೆದರು ಅವನನ್ನ ದುಂಡನೆ ಚಕ್ಕುಲಿ ಎಂದು
ಎತ್ತಿ ಕೊಂಡೊಯ್ದರು ಅವನನ್ನ ತಮ್ಮಯ ಮನೆಗಳಿಗೆ
ಹಾಸಿಗೆಯಲ್ಲಿಯೆ ನಿದ್ದೆ ಹೋದರು ಅವನ ಜತೆಜತೆಗೆ.

ಚಂದಿರ ಎಲ್ಲರ ಬಾಯಲ್ಲಿ ಮಕ್ಕಳ ಮುದ್ದಿನ ಮಾಮ
ಹಳ್ಳಿಯ ಮಕ್ಕಳಿಗಾದವ ಅವನೇ ತಿಂಗಳ ಮಾಮ
ಬೆಳದಿಂಗಳಿನಲಿ ನಲಿದವು ಮಕ್ಕಳು ಆವನ ಜತೆಯಲ್ಲಿ
ಆಟವ ಆಡಿ ಕತೆಗಳ ಕೇಳಿ ಬೆಳದಿಂಗಳಲಿ ನಲಿದಾಡಿ

ಹಾಡು ನಿಲ್ಲಿಸಿ ಪುಟ್ಟಜ್ಜಿ ಹೇಳಿದಳು.
`ಕೊಡಸೆ ಗುಡ್ಡದ ಮೇಲಿನಿಂದ ಇಳಿದು ಬರುತಿದ್ದ ಈ ಚಂದಿರ. ಇವನು ಊರ ಮಕ್ಕಳಿಗೆ ಒಂದು ಆಟದ ವಸ್ತುವಾದ. ಇವನ ಬೆಳದಿಂಗಳ ತಂಪು ಎಲ್ಲರಿಗೆ ಹಿತವನ್ನ ನೀಡಿತು. ಚಂದಿರ ಮಕ್ಕಳಿಗೆ ಪ್ರಿಯನಾದ, ಅಚ್ಚುಮೆಚ್ಚಿನವನಾದ. ಆತ ಎಲ್ಲ ಮಕ್ಕಳ ಜೊತೆ ಆಡತೊಡಗಿದ~.
ಪುಟ್ಟಜ್ಜಿ ಕತೆಯನ್ನ ಮುಂದುವರೆಸಿದಳು.

ಎದುರಿನ ಮನೆಯಾ ರಂಗನ ಜೊತೆಗೆ ರಾತ್ರಿಯ ಕಾಲದಲಿ
ದೊರೆಯಿತು ಮಾಮಗೆ ಬಿಸಿಬಿಸಿ ಊಟ ಪಾಯಸದ ಜೊತೆಗೆ
ಈ ಬದಿಯಲ್ಲಿಯ ಲಲಿತಳ ಮನೆಯಲಿ ರಾತ್ರೆ ಕಳೆದುದಕೆ
ಚಂದಮಾಮನಿಗೆ ದೊರೆಯಿತು ಅಲ್ಲಿ ಹಾಲು - ಹೋಳಿಗೆ

ಚಿಕ್ಕ ಮಗುವಿನ ತೊಟ್ಟಿಲಿಗಾದನು ಚಂದಿರ ದುಂಡನೆ ಚೆಂಡು
ಗೋಪಿ ಕೃಷ್ಣರ ಪಾಲಿಗೆ ಇವನೇ ಬಯಲಿನ ಕಾಲು ಚೆಂಡು
ಎತ್ತಿ ಆಡಲು ಇವನೇ ದುಂಡನೆ ಗುಂಡಿನ ಬೆಳ್ಳಿಯ ಚೆಂಡು
ಬಗೆ ಬಗೆಯಾ ವಿನೋದದ ಆಟಕೆ ಸಿಕ್ಕನು ಚಂದಿರ ಸುಲಭದಲಿ

`ಆದರೆ ಒಂದು ದಿನ ಏನಾಯಿತು ಅಂದರೆ... ಮಕ್ಕಳ ನಡುವೆ ಒಬ್ಬ ಹೊಸ ಹುಡುಗ ಕಾಣಿಸಿಕೊಂಡ. ಅವನ ಉಡುಗೆ ತೊಡುಗೆ ಬೇರೆ, ಮಾತು ರೀತಿ ಬೇರೆ. ಅವನ ಜೊತೆಯಲ್ಲಿ ಅಂಗರಕ್ಷಕರು ಬೇರೆ....
`ಇವನು ಯಾರು?~ ಎಂದು ಕೇಳಿದರು ಎಲ್ಲ.

`ಇವನು ರಾಜಕುಮಾರ. ಇಲ್ಲಿಯ ಬೇರೆ ಹುಡುಗರ ಹಾಗೆ ಇವನಲ್ಲ. ಇವನು ಊರಿನ ದೊರೆಯ ಮಗ, ರಾಜಕುಮಾರ~ ಎಂದರು ಅವನ ಜೊತೆಯಲ್ಲಿ ಇದ್ದ ಸೇವಕರು.
ಈ ರಾಜಕುಮಾರ ಬಂದದ್ದೇ ಚಂದ್ರ ಬೇರೆಯವರಿಗೆ ಸಿಗದಾದ. ಚಂದ್ರ ಇವನ ಜೊತೆಯಲ್ಲಿಯೇ ಆಡಬೇಕು, ಇವನ ಜೊತೆಯಲ್ಲಿಯೇ ಇರಬೇಕು, ಊಟ ಮಾಡಬೇಕು ಎಂದರು ರಾಜಕುಮಾರನ ಜೊತೆಯಲ್ಲಿ ಇದ್ದ ಸೇವಕರು. ಚಂದ್ರ ರಾಜಕುಮಾರನ ಜೊತೆ ಆಡುವಾಗ ಬೇರೆ ಹುಡುಗರು ಅವರ ಜೊತೆ ಸೇರಬಾರದು ಎಂದರು.

ಚಂದ್ರ ಗೋಪಿಯ ಮನೆಗೆ ಹೋಗುವಂತಿಲ್ಲ. ಕೃಷ್ಣನ ಜೊತೆಯಲ್ಲಿ ಆಡುವಂತಿಲ್ಲ. ರಂಗ ಲಲಿತೆಯರನ್ನ ಮಾತನಾಡಿಸುವಂತಿಲ್ಲ. ಇದು ಅವರಿಗೆಲ್ಲ ಬೇಸರ ತರಿಸಿತು. ಚಂದ್ರನಿಗೆ ಕೂಡ ಇದು ಹಿಡಿಸಲಿಲ್ಲ. ಏನಾದರೂ ಮಾಡಿ ಈ ರಾಜಕುಮಾರನಿಂದ ತಪ್ಪಿಸಿಕೊಳ್ಳಬೇಕು ಎಂದು ಬಯಸಿದ. ರಾಜಕುಮಾರನ ಜೊತೆಯಲ್ಲಿ ಆಡಲಿಕ್ಕೆ ಚಂದ್ರನಿಗೆ ಮನಸ್ಸಿರಲಿಲ್ಲ.

ರಾಜಕುಮಾರನ ಸಹವಾಸ ಹಿಂಸೆ ಅನಿಸಿತು ಚಂದ್ರನಿಗೆ
ರಾಜಕುಮಾರನ ಸೇವಕರು ತೊಂದರೆ ಕೊಟ್ಟರು ಆತನಿಗೆ
ಸಲಿಗೆಯು ಇಲ್ಲ ಸ್ನೇಹವು ಇಲ್ಲ ಏನೋ ಬಂಧನ ಹಗಲೆಲ್ಲ
ಚಂದಿರ ನೊಂದನು ಇದರಿಂದೆ ಬೇರೆ ದಾರಿಯ ಹುಡುಕಿದನು  

ಒಂದು ದಿನ ಚಂದ್ರ ಕೊಡಸೆ ಗುಡ್ಡದ ಮರೆಯಲ್ಲಿ ಕಾಣಿಸಿಕೊಂಡ. ರಾಜಕುಮಾರ ಕೂಡಲೇ ಅಲ್ಲಿಗೆ ಹೋಗಿ ಚಂದ್ರನನ್ನ ಹಿಡಿದುಕೊಳ್ಳಬೇಕು ಅನ್ನುವಾಗ ಚಂದ್ರ ಮೇಲೆ ಏರಿದ. ರಾಜಕುಮಾರನ ಕೈಯಿಂದ ತಪ್ಪಿಸಿಕೊಂಡು ಆಕಾಶದಲ್ಲಿ ಏರಿ ನಿಂತ. ರಾಜಕುಮಾರನನ್ನ ಅಣಕಿಸಿ ಮೇಲೆ ಮೇಲೆ ಏರಿದ. ರಾಜಕುಮಾರನ ಜೊತೆಗಿದ್ದ ಸೇವಕರ ಕೈಗೂ ಚಂದ್ರ ಸಿಗಲಿಲ್ಲ. ಗಾತ್ರದಲ್ಲಿ ಚಿಕ್ಕವನಾದ. ಚಂದ್ರ ತ್ತೆ ಭೂಮಿಗೆ ಇಳಿದು ಬರಲಿಲ್ಲ.

ಅಯ್ಯೋ ಚಂದಿರ ಮೇಲೇರಿ ಕೈಗೆ ಎಟುಕದೆ ದೂರಾಗಿ
ಆಕಾಶದಲಿ ತೇಲುತಿರೆ ರಾಜಕುಮಾರನ ಮುಖ ಬಾಡಿ
ಹಳ್ಳಿಯ ಮಕ್ಕಳು ಕುಣಿಕುಣಿದು ರಾಜಕುಮಾರನ ನೋಡಿದರು
ಚಂದಿರನಿಲ್ಲದ ರಾಜಕುಮಾರ ಸಪ್ಪೆ ಮೋರೆಯ ಹಾಕಿದನು.

ಮತ್ತೆ ಚಂದಿರನು ನೆಲಕಿಳಿದು ಆಟವಾಡಲು ಬರಲಿಲ್ಲ
ರಾಜಕುಮಾರನಿಗೆ ಸಿಗದೆ ಆಕಾಶದಲ್ಲಿಯೇ ಉಳಿದನಲ್ಲ
ಉಳಿದ ಮಕ್ಕಳಿಗೂ ಚಂದಿರ ಸಿಗಲಿಲ್ಲ ಚಂದಿರ ಸಿಗಲಿಲ್ಲ
ನೆಲಕವ ಇಳಿದು ಮಕ್ಕಳ ಜೊತೆಯಲಿ ಆಡಲೇ ಇಲ್ಲ

ಇದರಿಂದ ರಾಜಕುಮಾರನಿಗೆ ಸಿಟ್ಟು ಬಂದಿತು. ಇನ್ನು ನಿನ್ನ ಸಹವಾಸ ನನಗೆ ಬೇಡ ಎಂದು ರಾಜಕುಮಾರ ಚಂದ್ರನನ್ನ ದೂರ ಮಾಡಿದ. ಆದರೆ ಹಳ್ಳಿ ಮಕ್ಕಳು ಚಂದ್ರನನ್ನ ಮರೆಯಲಿಲ್ಲ. ಕೊಡಸೆ ಗುಡ್ಡದ ಮೇಲೆ ಆತ ಕಾಣಿಸಿಕೊಂಡ ಕೂಡಲೇ ಕ್ಕಳು ಕುಣಿಯುತ್ತಿದ್ದವು. ಚಂದಕಿ ಮಾಮ ಚಕ್ಕುಲಿ ಮಾಮ ಎಂದು ಹಾಡುತ್ತಿದ್ದವು. ಅವನ ಬೆಳದಿಂಗಳ ತಂಪಿಗೆ ನಲಿದಾಡುತ್ತಿದ್ದವು. ಇದನ್ನು ನೋಡಿದ ಚಂದ್ರ ಒಂದು ದಿನ ಮಕ್ಕಳಿಗೆ ಹೇಳಿದ-    

`ಬೇಸರ ಪಡದಿರಿ ಕ್ಕಳೇ ನಿಮ್ಮ ಜೊತೆ ನಾನಿಲ್ಲೆಂದು
ದೂರದಿ ನಿಂತು ಬೆಳಕನು ನೀಡುವೆ ನಾನೆಂದೆಂದು
ಊಟದ ಸಮಯದಿ ಆಟದ ಸಮಯದಿ ನಾ ಬರುವೆ
ಕರೆದರೆ ನಾನು ಗಗನಕೆ ಬಂದು ನಿಮ್ಮಯ ಜೊತೆಗಿರುವೆ~

ಮೇಲಕೆ ಹೋದ ಚಂದಿರ ಮತ್ತೆ ನೆಲಕೆ ಇಳಿಯಲಿಲ್ಲ
ಇಲ್ಲಿಯ ಮಕ್ಕಳು ಚಂದಿರನನ್ನ ಎಂದು ಮರೆಯಲಿಲ್ಲ
ಆಟವ ಆಡುತ ಊಟವ ಮಾಡುತ ಅವನ ಕರೆದರಲ್ಲ
ಮನದಲಿ ಉಳಿದ ಚಂದಿರ ಅವರನ ದೂರ ಮಾಡಲಿಲ್ಲ  

ಕತೆ ಮುಗಿಸಿದ ಪುಟ್ಟಜ್ಜಿ ಹೇಳಿದಳು-
`ಆವತ್ತಿನಿಂದ ಚಂದ್ರ ದೂರ ಇದ್ದರೂ ಮಕ್ಕಳು ಅವನನ್ನ ಪ್ರೀತಿಸುತ್ತವೆ, ಅವನನ್ನ ನೋಡಿ ಕುಣಿದಾಡುತ್ತವೆ... ಚಂದ್ರ ಮಕ್ಕಳಿಗೆ ಸದಾ ಬೇಕಾದವನಾಗಿದ್ದಾನೆ~. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT