ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಶೇಖರಯ್ಯ, ಸಿ.ಎಂಗೆ ನೋಟಿಸ್

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಲೋಕಾಯುಕ್ತ ಸ್ಥಾನಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ನೇಮಕ ಮಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಸರ್ಕಾರ, ಮುಖ್ಯಮಂತ್ರಿ ಹಾಗೂ ನ್ಯಾ.ಚಂದ್ರಶೇಖರಯ್ಯ ಅವರಿಗೆ ಶುಕ್ರವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಇವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಿಸಿ ಸರ್ಕಾರ ಹೊರಡಿಸಿರುವ ಆದೇಶ ರದ್ದತಿಗೆ ಕೋರಿ ವಕೀಲ ಜೆ.ಸಿ.ಕೃಷ್ಣ ಹಾಗೂ ಆನಂದಮೂರ್ತಿ ಎನ್ನುವವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ಕುಮಾರ್, ರವಿ ಎಸ್.ಮಳೀಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ಇವರನ್ನು ಈ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ದಾಖಲೆಗಳ ಹಾಜರಿಗೆ ಸರ್ಕಾರಕ್ಕೆ ಆದೇಶಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಅರ್ಜಿದಾರರ ದೂರೇನು?: `ನ್ಯಾ.ಚಂದ್ರಶೇಖರಯ್ಯನವರ ನೇಮಕ ಲೋಕಾಯುಕ್ತ ಕಾಯ್ದೆಯ 3(2)(ಬಿ) ಕಲಮಿಗೆ ವಿರುದ್ಧವಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ಈ ಹುದ್ದೆಗೆ ನೇಮಕ ಮಾಡುವ ಹಿನ್ನೆಲೆಯಲ್ಲಿ ನೇಮಕಾತಿಗೂ ಮುನ್ನ ಮುಖ್ಯ ನ್ಯಾಯಮೂರ್ತಿಗಳ ಸಲಹೆಯನ್ನು ಸರ್ಕಾರ ಕೇಳುವುದು ಕಡ್ಡಾಯ. ಇದು ತಿಳಿದಿದ್ದರೂ ಆ ರೀತಿ ನಡೆದುಕೊಂಡಿಲ್ಲ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇವರ ನೇಮಕಾತಿಯನ್ನು ವಿರೋಧಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎಫ್.ಸಲ್ಡಾನಾ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರವನ್ನೂ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.

`ನ್ಯಾ.ಚಂದ್ರಶೇಖರಯ್ಯನವರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ವೇಳೆ 1997ರಲ್ಲಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದಾರೆ. ಲೋಕಾಯುಕ್ತರಾಗಿದ್ದ ನ್ಯಾ.ಶಿವರಾಜ ಪಾಟೀಲ್ ಹಾಗೂ ಉಪಲೋಕಾಯುಕ್ತರಾಗಿದ್ದ ನ್ಯಾ.ಆರ್.ಗುರುರಾಜನ್ ಇಲ್ಲಿ ನಿವೇಶನ ಖರೀದಿಸಿದ ಕಾರಣದಿಂದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ನ್ಯಾ.ಸಲ್ಡಾನಾ ಅವರ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಪರಿಗಣನೆಗೆ ತೆಗೆದುಕೊಂಡರೂ ನ್ಯಾ.ಚಂದ್ರಶೇಖರಯ್ಯ ಅವರ ನೇಮಕಾತಿ ಕಾನೂನುಬಾಹಿರ ಎನ್ನುವುದು ಅರ್ಜಿದಾರರ ದೂರು.

ಚಪ್ಪಲಿ ಎಸೆತ: `ಹೈಕೋರ್ಟ್‌ನಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಗಂಭೀರ ಕಾರಣಕ್ಕಾಗಿ ಎಲ್ಲರ ಎದುರೇ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ. ಇದು ನ್ಯಾ.ಸಲ್ಡಾನಾ ಅವರ ಪತ್ರದಲ್ಲಿಯೂ ಉಲ್ಲೇಖಗೊಂಡಿದೆ. ಅಷ್ಟೇ ಅಲ್ಲದೇ, 2004ರಲ್ಲಿ ಮೈಸೂರಿನ ರೆಸಾರ್ಟ್ ಒಂದರಲ್ಲಿ ಹೈಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳು ನಡೆಸಿದರು ಎನ್ನಲಾದ ಲೈಂಗಿಕ ಹಗರಣ `ಮೈಸೂರು ರೂಸ್ಟ್ ರೆಸಾರ್ಟ್ ಪ್ರಕರಣ~ ಎಂದೇ ಪ್ರಸಿದ್ಧಿ ಪಡೆದಿದೆ. ಅದರಲ್ಲಿ ನ್ಯಾ.ಚಂದ್ರಶೇಖರಯ್ಯ ಅವರ ಹೆಸರೂ ಕೇಳಿಬಂದಿತ್ತು. ಈ ಬಗ್ಗೆ ಪ್ರಕಟ ಮಾಡಿದ್ದ ಮಾಧ್ಯಮಗಳ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಾಗಿತ್ತು. ಅದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದು ಎಂಟು ವರ್ಷಗಳಿಂದ ಪ್ರಕರಣ ಹಾಗೆಯೇ ಇದೆ. ಈ ಬಗ್ಗೆಯೂ ನ್ಯಾ.ಸಲ್ಡಾನಾ ಪತ್ರದಲ್ಲಿ ತಿಳಿಸಿದ್ದಾರೆ~ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ತಡೆ ಬೇಡ: ಸರ್ಕಾರದ ಪರವಾಗಿ ವಾದ ಮಂಡಿಸಲು ಅಡ್ವೊಕೇಟ್ ಜನರಲ್ ಎಸ್. ವಿಜಯಶಂಕರ್ ಹಾಜರು ಇದ್ದರು. ಚಂದ್ರಶೇಖರಯ್ಯ ಈಗಾಗಲೇ ಉಪಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಹಂತದಲ್ಲಿ ನೇಮಕಾತಿಗೆ ಮಧ್ಯಂತರ ತಡೆ ನೀಡುವುದು ಉಚಿತವಲ್ಲ ಎಂದು ಅವರು ಹೇಳಿದರು. ಒಂದೇ ಬಾರಿಗೆ ಪ್ರಕರಣ ಇತ್ಯರ್ಥಗೊಳಿಸುವಂತೆ ಅವರು ಕೋರಿದರು. ಆದುದರಿಂದ ಪೀಠ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಿತು. ಅಂದು ವಿಚಾರಣೆ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಆನಂದ ಮೂರ್ತಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿವಾದಿಯಾಗಿದ್ದ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗಳನ್ನು ಪ್ರತಿವಾದಿ ಪಟ್ಟಿಯಿಂದ ತೆಗೆದುಹಾಕುವಂತೆ ಪೀಠ ನಿರ್ದೇಶಿಸಿತು. ಇವರನ್ನು ಪ್ರತಿವಾದಿಯನ್ನಾಗಿಸಿದ ಕ್ರಮಕ್ಕೆ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT