ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಹೊಸ-ಹಳೆಯ ಲೆಕ್ಕಾಚಾರದ ನಿರೀಕ್ಷೆ

Last Updated 5 ಏಪ್ರಿಲ್ 2013, 8:38 IST
ಅಕ್ಷರ ಗಾತ್ರ

ಚನ್ನಗಿರಿ: ಅಡಿಕೆ ಬೆಲೆಯ ಹಾವು-ಏಣಿ ಆಟ, ಪಾತಾಳಕ್ಕೆ ಇಳಿದ ಅಂತರ್ಜಲ, ಅರೆ ಮಲೆನಾಡಿನ ಸೆರಗಿನಲ್ಲಿದ್ದರೂ ಬರದ ಛಾಯೆ...
ಇದು ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದರೂ, ಹಲವು ಕೊರತೆಗಳ ನಡುವೆ ಕೊರಗುತ್ತಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಚಿತ್ರಣ.

ರಾಜ್ಯಕ್ಕೆ ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ನೀಡಿದರೂ, ಚಂದನೆಯ ಬದುಕು ಕಟ್ಟಿಕೊಳ್ಳಲಾಗದ ದುಸ್ಥಿತಿ ಚನ್ನಗಿರಿ ಜನರದು. ಅಡಿಕೆ ಬೆಲೆಯ ರೀತಿ ಇಲ್ಲಿವ ಜನರ ಬದುಕು ಕೂಡಾ ನಿತ್ಯ ಏರಿಳಿತಗಳ ಗ್ರಾಫ್...

ತಾಲ್ಲೂಕಿಗೆ ಜೀವದಾಯಿನಿ ಆಗಿರುವ ರೂ 100 ಕೋಟಿ ವೆಚ್ಚದ ಉಬ್ರಾಣಿ ಏತ ನೀರಾವರಿ ಯೋಜನೆ ಹತ್ತು ವರ್ಷಗಳಿಂದ ನಿರಂತರವಾಗಿ ನಡೆದು ರೈತರಿಗೆ ಲೋಕಾರ್ಪಣೆಯಾಗಿದೆ. ಈ ಹೋಬಳಿಯ 87 ಕೆರೆಗಳಿಗೆ ಭದ್ರಾ ನದಿಯ ನೀರನ್ನು ತುಂಬಿಸಿ ಈ ಭಾಗದ ಪಾತಾಳಕ್ಕಿಳಿದ ಅಂತರ್ಜಲಮಟ್ಟ ಹೆಚ್ಚಲು ಕಾರಣವಾಗಿದೆ. 

ಈಗಾಗಲೇ ಕಳೆದ ಐದು ವರ್ಷಗಳ ಅವಧಿಯಲ್ಲಿ ರೂ 800 ಕೋಟಿಗಿಂತಲೂ ಹೆಚ್ಚು ಅನುದಾನ ಸರ್ಕಾರದಿಂದ ಹರಿದು ಬಂದಿದ್ದು, ಈ ಕ್ಷೇತ್ರ ರಾಜ್ಯದ ಮುಂದುವರಿದ ಹತ್ತು ತಾಲ್ಲೂಕುಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.

ಇಷ್ಟೆಲ್ಲಾ ಅನುದಾನ ತಂದರೂ ಇನ್ನೂ ಹಲವಾರು ಕೊರತೆಗಳು ಕಾಡುತ್ತಿವೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೇಲಕ್ಕೆ ಎತ್ತಲು ಯಾವುದೇ ಕೈಗಾರಿಕೆಗಳ ಸ್ಥಾಪನೆ ಆಗದಿರುವುದು, ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತಹ ವೃತ್ತಿಪರ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳ ಸ್ಥಾಪನೆಗೆ ಮುಂದಾಗದೇ ಇರುವುದು, ಸರ್ಕಾರಿ ಬಸ್‌ಡಿಪೋ ನಿರ್ಮಾಣಕ್ಕೆ ಅಗತ್ಯ ನಿವೇಶನ ಇಲ್ಲದೇ ನೆನೆಗುದಿಗೆ ಬಿದ್ದಿರುವುದು -ಹೀಗೆ ಹತ್ತು ಹಲವು ಕೊರತೆಗಳು ಕಣ್ಣಿಗೆ ರಾಚುತ್ತವೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರಕ್ಕೆ ಚನ್ನಗಿರಿ ಪಟ್ಟಣ, ಸಂತೇಬೆನ್ನೂರು 1ಮತ್ತು 2ನೇ ಹೋಬಳಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಳೆಹೊನ್ನೂರು ಕ್ಷೇತ್ರಕ್ಕೆ ಸೇರಿದ್ದ ಉಬ್ರಾಣಿ ಹೋಬಳಿಗಳು ಸೇರಿವೆ. ಇನ್ನು ಬಸವಾಪಟ್ಟಣ 1 ಮತ್ತು 2ನೇ ಹೋಬಳಿಗಳು ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ.

ಸ್ವಾತಂತ್ರ್ಯ ನಂತರದ ಮೊದಲ ಚುನಾವಣೆಯಲ್ಲಿ ಎಲ್. ಸಿದ್ದಪ್ಪ 1952ರಲ್ಲಿ ಕೆಎಂಪಿ ಪಕ್ಷದಿಂದ ಮೊದಲ ಶಾಸಕರಾಗಿ ಆಯ್ಕಯಾದರು. ನಂತರ ಕುಂದೂರು ರುದ್ರಪ್ಪ 57ರಲ್ಲಿ ಪಿಎಸ್‌ಪಿಯಿಂದ ಹಾಗೂ 62ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದರು. 1967, 1972 ಮತ್ತು 1989ರಲ್ಲಿ ಕಾಂಗ್ರೆಸ್‌ನ ಎನ್.ಜಿ. ಹಾಲಪ್ಪ ಮೂರು ಬಾರಿ ಆಯ್ಕೆಯಾಗಿ, ಒಮ್ಮೆ ಪರಿಸರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು. 1978, 83, 85ರಲ್ಲಿ ಜೆ.ಎಚ್. ಪಟೇಲ್ ಜನತಾಪಕ್ಷದಿಂದ ಹಾಗೂ 94ರಲ್ಲಿ ಒಮ್ಮೆ ಜನತಾದಳದಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದರು.

1999ರಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾದ ವಡ್ನಾಳ್ ರಾಜಣ್ಣ ಪಟೇಲ್‌ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ನಂತರ ಕಾಂಗ್ರೆಸ್ ಸೇರಿದರು. 2004ರಲ್ಲಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮ ಪಟೇಲ್ ಆಯ್ಕೆಯಾದರೆ, 2008ರಲ್ಲಿ ಬಿಜೆಪಿಯ ಮಾಡಾಳ್ ವಿರೂಪಾಕ್ಷಪ್ಪ ಕೇವಲ 993 ಮತಗಳಿಂದ ವಡ್ನಾಳ್ ರಾಜಣ್ಣ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

ಒಟ್ಟಾರೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದುವರೆಗೂ ಅದೇ ಕೋಮಿನವರು ಆಯ್ಕೆಯಾಗುತ್ತಾ ಬಂದಿರುವುದು ವಿಶೇಷವಾಗಿದೆ. ನಂತರದ ಸ್ಥಾನದಲ್ಲಿ ನಾಯಕ, ಕುರುಬ ಹಾಗೂ ಮುಸ್ಲಿಮರು ಇದ್ದಾರೆ. ಈ ಭಾಗದಲ್ಲಿ ಇರುವ ಮುಸ್ಲಿಮರು ಪ್ರತಿ ಚುನಾವಣೆಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದ್ದಾರೆ.

ಬಿಜೆಪಿ ತೊರೆದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಜೆಪಿ ಅಭ್ಯರ್ಥಿ, ಜಿಲ್ಲಾ  ಪಂಚಾಯ್ತಿ ಮಾಜಿ ಸದಸ್ಯ ಹೊದಿಗೆರೆ ರಮೇಶ್ ಜೆಡಿಎಸ್ ಈಗಾಗಲೇ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಈ ಇಬ್ಬರೂ ಸದ್ದಿಲ್ಲದೇ ಪ್ರಚಾರ ಪ್ರಾರಂಭಿಸಿದ್ದಾರೆ.

ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಹಾಗೂ ಮಹಿಮ ಪಟೇಲ್ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ  ಪೈಪೋಟಿ ನಡೆಸಿದ್ದಾರೆ. ಈ ಪಕ್ಷದಿಂದ ನಲ್ಕುದುರೆಯ ಮಾಜಿ ಸಂಸತ್ ಸದಸ್ಯ ಟಿ.ವಿ. ಚಂದ್ರಶೇಖರಪ್ಪ ಅವರ ಪುತ್ರ ಗಂಗಾಧರ್, ಕೆರೆಬಿಳಚಿಯ ಮಹಿಬುಲ್ಲಾ ಖಾನ್ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇನ್ನುಳಿದಂತೆ ಬಿಜೆಪಿಯಿಂದ ಹೊನ್ನೆಬಾಗಿ ಶಿವಾನಂದಮೂರ್ತಿ, ತುಮ್ಕೊಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ವಿಜಯಕುಮಾರ್ ಪಾಟೀಲ್, ವೈ, ಮಂಜಪ್ಪ, ಎಂ.ಬಿ. ಅಣ್ಣೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ ನಡುವೆ ಟಿಕೆಟ್‌ಗಾಗಿ ಸ್ಪರ್ಧೆ ಇದ್ದು, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಹಿರೇಕೋಗಲೂರಿನ ಅಮೀರ್ ಅಹಮದ್ ಹಾಗೂ ಸಮಾಜವಾದಿ, ಜೆಡಿಯು ಪಕ್ಷದಿಂದ ಅಭ್ಯರ್ಥಿಗಳು ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT