ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಪ್ರಶಸ್ತಿ ರದ್ದತಿ ಕೋರಿ ಅರ್ಜಿ- ನೋಟಿಸ್

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: 2009-10ನೇ ಸಾಲಿನ ಕನ್ನಡ ಚಲನಚಿತ್ರ ಪ್ರಶಸ್ತಿ ಆಯ್ಕೆ ಪಟ್ಟಿಯ ರದ್ದತಿಗೆ ಕೋರಿ ಚಿತ್ರ ನಿರ್ಮಾಪಕರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಚಿತ್ರನಿರ್ಮಾಪಕಿ ಎಸ್.ರಾಧಾ ಅವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಚಲನಚಿತ್ರ ಆಯ್ಕೆ ಸಮಿತಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ನೋಟಿಸ್ ಜಾರಿಗೆ ಬುಧವಾರ ಆದೇಶಿಸಿದ್ದಾರೆ.

ತಮಗೆ ಬೇಕಾದ ಚಲನಚಿತ್ರಗಳನ್ನು ಆಯ್ಕೆ ಮಾಡಲು, ವೈಯಕ್ತಿಕ ಹಿತಾಸಕ್ತಿಗಾಗಿ ಆಯ್ಕೆ ಸಮಿತಿಯ ಅಧ್ಯಕ್ಷರು ಎಲ್ಲ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಅವ್ಯವಹಾರ ಎಸಗಿರುವುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅರ್ಜಿದಾರರ ಆರೋಪವೇನು: `ಈ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು 2010ರ ಮೇ 19 ಕೊನೆಯ ದಿನವಾಗಿತ್ತು. ಈ ಅವಧಿಯಲ್ಲಿ 46 ಅರ್ಜಿಗಳು ಬಂದಿದ್ದವು.

 ಆದರೆ ಈ ಅವಧಿ ಮುಗಿದ ಮೇಲೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಇನ್ನೂ 10 ಚಿತ್ರಗಳನ್ನು ಆಯ್ಕೆಗೆ ಸೇರಿಸಿಕೊಳ್ಳುವಂತೆ ಆಯ್ಕೆ ಸಮಿತಿಗೆ ತಿಳಿಸಿದರು. ಇದರ್ಲ್ಲಲಿ `ರಾಜ್~ ಚಲನಚಿತ್ರ ಕೂಡ ಒಂದು. `ಅದಾದ ಮೇಲೆ ಸಮಿತಿಗೆ ಬೇರೊಬ್ಬ ಅಧ್ಯಕ್ಷರನ್ನು ನೇಮಕ ಮಾಡಲಾಯಿತು (ಮೊದಲು ಭಾರತಿ ವಿಷ್ಣುವರ್ಧನ್ ಅಧ್ಯಕ್ಷರಾಗಿದ್ದರು. ನಂತರ ಈ ಸ್ಥಾನಕ್ಕೆ ದ್ವಾರಕೀಶ್ ಬಂದರು). ನಂತರ ಪುನಃ ನಾಲ್ಕು ಚಲನಚಿತ್ರಗಳನ್ನು ಅಧೀನ ಕಾರ್ಯದರ್ಶಿಗಳ ಆದೇಶದ ಮೇರೆಗೆ ಸೇರಿಸಲಾಯಿತು. ಇದರಲ್ಲಿ `ಒಲವೇ ಜೀವನ ಲೆಕ್ಕಾಚಾರ~ ಕೂಡ ಒಂದು. `ಅವಧಿ ಮುಗಿದ ನಂತರ ಬಂದ `ರಾಜ್~ ಹಾಗೂ `ಒಲವೇ ಜೀವನ..~ ಚಿತ್ರಗಳಿಗೆ ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ. ಇವೆಲ್ಲ ಕಾನೂನುಬಾಹಿರ.

`ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಇತಿಹಾಸದಲ್ಲಿಯೇ ಮರಣೋತ್ತರ ಪ್ರಶಸ್ತಿ ನೀಡಿಲ್ಲ. ಬದುಕಿದ್ದವರಿಗೆ ಮಾತ್ರ ಜೀವಮಾನದ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಈ ಬಾರಿ ಅಧ್ಯಕ್ಷರು ನಿಯಮ ಮೀರಿ ಸ್ವಹಿತಾಸಕ್ತಿಗಾಗಿ ಮರಣೋತ್ತರ ಪ್ರಶಸ್ತಿಯನ್ನೂ ಪ್ರಕಟಿಸಿದ್ದಾರೆ (ವಿಷ್ಣುವರ್ಧನ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ) ಎನ್ನುವುದು ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.

ಪದವೀಧರ ಕ್ಷೇತ್ರ ಚುನಾವಣೆ: ನೋಟಿಸ್
ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕಾಗಿ ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಆದೇಶಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಅಶ್ವಿನ್ ಮಹೇಶ್ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಈಗ ಇರುವ ಪದ್ಧತಿ ಪ್ರಕಾರ, ಅರ್ಜಿದಾರರು ಯಾವ ಭಾಗದಲ್ಲಿ ವಾಸವಾಗಿರುತ್ತಾರೆಯೋ, ಆ ಕ್ಷೇತ್ರದಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬೇಕು. ಇದರಿಂದ ಜನರಿಗೆ ಬಹಳ ಕಷ್ಟವಾಗುತ್ತಿದೆ ಎನ್ನುವುದು ಅರ್ಜಿದಾರರ ದೂರು. ವಿಚಾರಣೆ ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT