ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲುವ ನಾರಾಯಣನ ಮೇಲುಕೋಟೆ

Last Updated 19 ಜನವರಿ 2011, 13:00 IST
ಅಕ್ಷರ ಗಾತ್ರ

ಮೇಲುಕೋಟೆ ಮಂಡ್ಯ ಜಿಲ್ಲೆ ಪ್ರಮುಖ ಯಾತ್ರಾಸ್ಥಳ. ಇಲ್ಲಿ ಪ್ರತಿ ವರ್ಷ ನಡೆಯುವ ವೈರಮುಡಿ ಉತ್ಸವ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳ ಅಸಂಖ್ಯಾತ ಭಕ್ತರನ್ನು ಸೆಳೆಯುತ್ತದೆ. ಚಲುವ ನಾರಾಯಣಸ್ವಾಮಿ ಮತ್ತು ಯೋಗಾನರಸಿಂಹಸ್ವಾಮಿ ದೇವಸ್ಥಾನಗಳು ಮೇಲುಕೋಟೆಯ ಪ್ರಮುಖ ಆಕರ್ಷಣೆ.

 ಮೇಲುಕೋಟೆ ದಕ್ಷಿಣ ಭಾರತದ ನಾಲ್ಕು ಪ್ರಮುಖ ಶ್ರೀವೈಷ್ಣವ ಕ್ಷೇತ್ರಗಳಲ್ಲಿ ಒಂದು. ಕಂಚಿ, ತಿರುಪತಿ ಮತ್ತು ಶ್ರೀರಂಗಂ ಇನ್ನುಳಿದ ಮೂರು ಕ್ಷೇತ್ರಗಳು.ಮೇಲುಕೋಟೆ ದೇವಸ್ಥಾನಗಳಲ್ಲಿ ನಿತ್ಯ ಪೂಜೆ, ಅಭಿಷೇಕ ಇತ್ಯಾದಿ ಧಾರ್ಮಿಕ ಆಚರಣೆಗಳು ನಡೆದರೂ ವರ್ಷಕ್ಕೊಮ್ಮೆ
ನಡೆಯುವ (ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಏಕಾದಶಿ ಸಂದರ್ಭದಲ್ಲಿ) ವೈರಮುಡಿ ಉತ್ಸವ ಅತ್ಯಂತ ಪ್ರಮುಖ ಸಂದರ್ಭ.

ಬೆಟ್ಟಗುಡ್ಡಗಳು, ಆಕರ್ಷಕ ಶಿಲ್ಪಗಳು ಹಾಗೂ ಐತಿಹಾಸಿಕ ಹಿನ್ನೆಲೆಗಳಿಂದ ಮೇಲುಕೋಟೆ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಎನಿಸಿಕೊಂಡಿದೆ.ಇತಿಹಾಸದಲ್ಲಿ ಮೇಲುಕೋಟೆಗೆ ಯಾದವಾದ್ರಿ, ವೇದಾದ್ರಿ, ನಾರಾಯಣಾದ್ರಿ, ಯತಿ ಶೈಲ, ಯದುಗಿರಿ ಎಂಬ ಹೆಸರುಗಳೂ ಇದ್ದವು. ತ್ರೇತ್ರಾಯುಗದಲ್ಲಿ ದತ್ತಾತ್ರೇಯರು ಮೇಲುಕೋಟೆ ಪ್ರದೇಶದಲ್ಲಿ ವೇದ ಪಾರಾಯಣ ಮಾಡಿದ್ದರಿಂದ ವೇದಾದ್ರಿ ಎಂಬ ಹೆಸರು ಬಂತು.

ದ್ವಾಪರದಲ್ಲಿ ಶ್ರೀಕೃಷ್ಣ ಪೂಜಿಸಲ್ಪಟ್ಟಿದ್ದರಿಂದ ಇಲ್ಲಿಗೆ ಯಾದವಾದ್ರಿ ಎಂಬ ಹೆಸರಿತ್ತು. 12ನೆಯ ಶತಮಾನದಲ್ಲಿ ಆಚಾರ್ಯ ರಾಮಾನುಜರು ಮೇಲುಕೋಟೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದರಿಂದ ಯತಿಶೈಲ ಎಂಬ ಹೆಸರಿತ್ತು ಎಂಬುದು ಈಗ ಇತಿಹಾಸ.

ಕಲ್ಯಾಣಿಗಳು ಮೇಲುಕೋಟೆಯ ಪ್ರಮುಖ ಆಕರ್ಷಣೆಗಳು. ಅಕ್ಕ- ತಂಗಿಯರ ಕೊಳ ಸೇರಿದಂತೆ ಇಲ್ಲಿ ಒಟ್ಟು 101 ಕಲ್ಯಾಣಿಗಳಿದ್ದುವಂತೆ. ಈಗ 40 ರಿಂದ 50 ಕಲ್ಯಾಣಿಗಳಿವೆ. ಭುವನೇಶ್ವರಿ ಮಂಟಪ ಒಳಗೊಂಡ ಪಂಚ ಕಲ್ಯಾಣಿ, ಯದುಗಿರಿ ಅಮ್ಮನ ದೇಗುಲ ಬಳಿಯ ಕಲ್ಯಾಣಿ ಮುಖ್ಯ ಆಕರ್ಷಣೆಗಳು.

ವೈರಮುಡಿ ಉತ್ಸವ ಸಂದರ್ಭದಲ್ಲಿ ಜಿಲ್ಲಾ ಖಜಾನೆಯಿಂದ ಆಭರಣಗಳನ್ನು ತಂದು ಚಲುವ ನಾರಾಯಣ ಸ್ವಾಮಿಗೆ ಅಲಂಕಾರ ಮಾಡುತ್ತಾರೆ. ನಂತರ ದೇವಾಲಯದ ಸುತ್ತ ಉತ್ಸವದಲ್ಲಿ ಕರೆತರುತ್ತಾರೆ.

ದೇವ ದರ್ಶನ
ಬೆಟ್ಟದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಬೆಳಿಗ್ಗೆ 9 ರಿಂದ ಮಧ್ಯಾಹ್ನದವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಈ ಸಂದರ್ಭದಲ್ಲಿ ಪೂಜೆ ನಡೆಯುತ್ತದೆ. ಚೆಲುವ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಿತ್ಯ 10.30ರಿಂದ ಮಧ್ಯಾಹ್ನ 1ರವರೆಗೆ ಮತ್ತು 3.30ರಿಂದ ಸಂಜೆ 6 ಗಂಟೆಯವರೆಗೆ, ರಾತ್ರಿ 7 ರಿಂದ 8.30ರ ವರೆಗೆ ದರ್ಶನ ಮತ್ತು ಪೂಜೆಗೆ ಅವಕಾಶವಿದೆ. ಎರಡೂ ದೇವಸ್ಥಾನಗಳಲ್ಲಿ ಶನಿವಾರ, ಭಾನುವಾರ ಮತ್ತು ರಜೆ ದಿನಗಳಲ್ಲಿ ಪೂಜೆ ಮತ್ತು ದರ್ಶನಕ್ಕೆ ಒಂದು ಗಂಟೆ ಹೆಚ್ಚಿನ ಸಮಯವಿದೆ.

ನಿತ್ಯ ದರ್ಶನದ ಅವಧಿಯಲ್ಲಿ ಅಷ್ಟೋತ್ತರ ಪೂಜೆಗೆ ರೂ 10, ಸಹಸ್ರನಾಮ ಸಹಿತ ಪೂಜೆಗೆ ರೂ 30 ನಿಗದಿ  ಮಾಡಲಾಗಿದೆ. ದೇವಸ್ಥಾನದ ವತಿಯಿಂದ ಬೆಳಿಗ್ಗೆ ಹಾಗೂ ಸಂಜೆ ನಿತ್ಯ ಕಟ್ಲೆ ಪೂಜೆ ನಡೆಯುತ್ತದೆ. ಸೋಮವಾರ ಹಾಗೂ ಗುರುವಾರ ಅಭಿಷೇಕ ಮತ್ತು ಪೂಜೆ ಮಾಡಿಸಲು ಅವಕಾಶವಿದೆ. ಇದಕ್ಕೆ ರೂ 600 ಶುಲ್ಕ ನಿಗದಿ ಮಾಡಲಾಗಿದೆ. ರಜೆ ದಿನಗಳಲ್ಲಿ ಈ ಸೇವೆ ಇಲ್ಲ.

ಬೆಟ್ಟದ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶನಿವಾರ, ಭಾನುವಾರ ಹಾಗೂ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ವಿಶೇಷ ಪೂಜೆಗೆ ಅವಕಾಶವಿದೆ. ಉಳಿದಂತೆ ವಾಹನೋತ್ಸವ ಮತ್ತು ಪ್ರಾಕಾರೋತ್ಸವಕ್ಕೆ ಅವಕಾಶವಿದೆ. ವಾಹನೋತ್ಸವವನ್ನು ಭಕ್ತರು ಅಪೇಕ್ಷಿಸುವ ದಿನ ಸಂಜೆ 5.30 ಗಂಟೆಗೆ ಮಾಡಲಾಗುತ್ತದೆ. ರೂ ಇದಕ್ಕೆ 2000  ಶುಲ್ಕವಿದೆ. ಪ್ರಾಕಾರೋತ್ಸವಕ್ಕೆ ರೂ1,500. ವಾಹನೋತ್ಸವ, ಪ್ರಾಕಾರೋತ್ಸವ ಮಾಡಿಸುವವರು ಮೂರು ದಿನ ಮೊದಲೇ ತಿಳಿಸಬೇಕು.

ಮೇಲುಕೋಟೆಗೆ ದಾರಿ
ಮೇಲುಕೋಟೆ ತಲುಪಲು ಉತ್ತಮ ರಸ್ತೆ ಸಂಪರ್ಕವಿದೆ. ಮೇಲುಕೋಟೆ ಮಂಡ್ಯದಿಂದ 35 ಕಿ.ಮೀ, ಬೆಂಗಳೂರಿನಿಂದ ಸುಮಾರು 120 ಕಿ.ಮೀ ಹಾಗೂ ಮೈಸೂರಿನಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. ಮಂಡ್ಯ ಬಸ್ ನಿಲ್ದಾಣದಿಂದ ಮೇಲುಕೋಟೆಗೆ ಗಂಟೆಗೊಮ್ಮೆ ಬಸ್ ಸೌಲಭ್ಯವಿದೆ. ಬೆಂಗಳೂರಿನಿಂದ ಬರುವವರು ಮಂಡ್ಯಕ್ಕೆ ಬಂದು ಜಕ್ಕನಹಳ್ಳಿ ಕ್ರಾಸ್ ಮೂಲಕ ಮೇಲುಕೋಟೆಗೆ ಹೋಗಬೇಕು.

ಮೈಸೂರಿನಿಂದ ಬರುವ ಪ್ರವಾಸಿಗರು ಶ್ರೀರಂಗಪಟ್ಟಣ- ಪಾಂಡವಪುರ ಮೂಲಕ ಮೇಲುಕೋಟೆಗೆ ಹೋಗಬಹುದು. ಉತ್ತರ ಕರ್ನಾಟಕದ ಕಡೆಯಿಂದ ಬರುವವರು ಕೆ.ಆರ್.ಪೇಟೆ ಮೂಲಕ, ತುಮಕೂರು ಕಡೆಯಿಂದ ಬರುವವರು ನಾಗಮಂಗಲ ಮೂಲಕ ಬರಬೇಕು. ಜಕ್ಕನಹಳ್ಳಿ ಕ್ರಾಸ್‌ನಿಂದ ಮೇಲುಕೋಟೆಗೆ ಆಟೋಗಳಿವೆ.

ದೇವಸ್ಥಾನ ವತಿಯಿಂದ ಉಟೋಪಚಾರಗಳ ಸೌಲಭ್ಯವಿಲ್ಲ. ಆದರೆ ಆಂಧ್ರಪ್ರದೇಶ ಮೂಲದ ಸ್ವಾಮೀಜಿಯೊಬ್ಬರು ನಿತ್ಯ ಮಧ್ಯಾಹ್ನ ಸುಮಾರು 50 ಜನರಿಗೆ ಊಟ ಹಾಕುತ್ತಾರೆ. ಮೇಲುಕೋಟೆಗೆ ಬರುವ ಜನರ ಸಂಖ್ಯೆ ಹೆಚ್ಚಿರುವ ಕಾರಣ ಎಲ್ಲರಿಗೂ ಊಟ ಸಿಗುವ ಸಾಧ್ಯತೆ ಇಲ್ಲ. ಆದರೆ ಊಟದ ಹೋಟೆಲ್‌ಗಳಿವೆ. ಹೆಚ್ಚಿನ ಮಾಹಿತಿಗೆ ದೇವಸ್ಥಾನದ ದೂರವಾಣಿ ನಂಬರ್-08236-299839.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT