ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚಳಿ' ಬಿಡಿಸಿದ ಮಿಥುನ್, ಸ್ಟುವರ್ಟ್ ಬಿನ್ನಿ

ರಣಜಿ: 13 ಓವರ್‌ಗಳಲ್ಲಿ 9 ವಿಕೆಟ್ ಉರುಳಿಸಿದ ಕರ್ನಾಟಕ, ಮಹಾರಾಷ್ಟ್ರಕ್ಕೆ ಸಮಾಧಾನ ನೀಡಿದ ಹರ್ಷದ್ ಶತಕ
Last Updated 31 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಪುಣೆ: ಕ್ರೀಡಾಂಗಣದ ಸುತ್ತಲೂ ಮಂಜು ಮುಸುಕಿದ್ದ ಕಾರಣ ಸೋಮವಾರ ಬೆಳಿಗ್ಗೆ ಪೂರ್ಣವಾಗಿ ಚಳಿ ಬಿಟ್ಟಿರಲಿಲ್ಲ. ಆದರೆ ಕರ್ನಾಟಕದ ವೇಗಿಗಳಾದ ಅಭಿಮನ್ಯು ಮಿಥುನ್ ಹಾಗೂ ಸ್ಟುವರ್ಟ್ ಬಿನ್ನಿ ತಮ್ಮ ಕರಾರುವಾಕ್ಕಾದ ಬೌಲಿಂಗ್‌ನಿಂದ ಮಹಾರಾಷ್ಟ್ರದ ಬ್ಯಾಟ್ಸ್‌ಮನ್‌ಗಳ `ಚಳಿ' ಬಿಡಿಸಿದರು.

ಅಬ್ಬರದ ಬ್ಯಾಟಿಂಗ್ ಮೂಲಕವೇ ಹೆಚ್ಚು ಸುದ್ದಿ ಮಾಡುವ ಕರ್ನಾಟಕ, ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಆರ್ಭಟಿಸಿತು. ಮೂರನೇ ದಿನ 75 ನಿಮಿಷದಲ್ಲಿ ಒಂಬತ್ತು ವಿಕೆಟ್ ಉರುಳಿಸಿದ್ದೇ ಇದಕ್ಕೆ ಸಾಕ್ಷಿ.

ಮಿಥುನ್ ಬಿಟ್ಟ `ಬಾಣ'ಕ್ಕೆ ದಿಟ್ಟ ಉತ್ತರ ನೀಡಲು ಆತಿಥೇಯ ತಂಡದವರಿಗೆ ಸಾಧ್ಯವಾಗಲಿಲ್ಲ. ಈ ಪರಿಣಾಮ ಮಹಾರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 29.1 ಓವರ್‌ಗಳಲ್ಲಿ ಕೇವಲ 99 ರನ್‌ಗೆ ಆಲ್‌ಔಟ್ ಆಯಿತು.

ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಮಹಾರಾಷ್ಟ್ರ ಗಳಿಸಿದ ಕನಿಷ್ಠ ಸ್ಕೋರು ಇದಾಗಿದೆ. 2009-10ರಲ್ಲಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ ಕೇವಲ 105 ರನ್‌ಗೆ ಆಲ್‌ಔಟ್ ಆಗಿತ್ತು. ರೋಹಿತ್ ಮಟವಾನಿ ನೇತೃತ್ವದ ತಂಡ ಈ ರಣಜಿ ಋತುವಿನಲ್ಲಿ ನೂರು ರನ್‌ಗಳ ಒಳಗೆ ಆಲ್‌ಔಟ್ ಆಗಿದ್ದು ಇದು ಎರಡನೇ ಸಲ. ತಮಿಳುನಾಡು ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 88 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.

ಆದರೆ, ಮಹಾರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಮರು ಹೋರಾಟ ನಡೆಸಿದೆ. ಸೋಮವಾರದ ಅಂತ್ಯಕ್ಕೆ 74 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 315 ರನ್ ಕಲೆ ಹಾಕಿದೆ. ಕರ್ನಾಟಕದ ಮೊದಲ ಇನಿಂಗ್ಸ್‌ನ ಮೊತ್ತದ ಲೆಕ್ಕ ಚುಕ್ತಾ ಮಾಡಲು ಇನ್ನು 158 ರನ್ ಗಳಿಸಬೇಕಿದೆ.

ಮಿಥುನ್ ಮ್ಯಾಜಿಕ್: ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ ನೀಡಿದ್ದ 572 ರನ್‌ಗಳ ಹಾದಿಯನ್ನು ಮುಟ್ಟಲು ಸಾಧ್ಯವಾಗದೆ ಮಹಾರಾಷ್ಟ್ರ ಫಾಲೋ ಆನ್‌ನಲ್ಲಿ ಬಿದ್ದು ಒದ್ದಾಡಿತು. ಭಾನುವಾರದ ಅಂತ್ಯಕ್ಕೆ 16 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತ್ತು. ಆದರೆ, ಮೂರನೆಯ ದಿನ ಮುಂಜಾನೆಯ ಮಂಜು ಕರಗುವ ಹೊತ್ತಿಗೆ ಆತಿಥೇಯರ ಬ್ಯಾಟಿಂಗ್ ಶಕ್ತಿಯೂ ಕರಗಿ ಹೋಗಿತ್ತು. ಇದಕ್ಕೆ ಕಾರಣವಾಗಿದ್ದು ಮಿಥುನ್.

ಎರಡು ದಿನ ಸರಾಗವಾಗಿ ರನ್ ಹರಿದಿದ್ದ ಈ ಪಿಚ್‌ನಲ್ಲಿ ಸೋಮವಾರ ಬೆಳಿಗ್ಗಿನ ಅವಧಿಯಲ್ಲಿ ಬೌಲರ್‌ಗಳು ಮಿಂಚು ಹರಿಸಿದರು. ಮಿಥುನ್ 28 ಎಸೆತಗಳಲ್ಲಿ 16 ರನ್ ನೀಡಿ ಆರು ವಿಕೆಟ್ ಪಡೆದರೆ, ಬಿನ್ನಿ 22 ಎಸೆತಗಳಲ್ಲಿ 14 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.

24ನೇ ಓವರ್‌ನ ಮೂರು ಹಾಗೂ ನಾಲ್ಕನೇ ಎಸೆತದಲ್ಲಿ ಕ್ರಮವಾಗಿ ರೋಹಿತ್ ಮಟವಾನಿ ಹಾಗೂ ಶ್ರೀಕಾಂತ್ ಮುಂಡೆ ವಿಕೆಟ್ ಪಡೆದ ಮಿಥುನ್‌ಗೆ `ಹ್ಯಾಟ್ರಿಕ್' ಸಾಧ್ಯತೆ ಇತ್ತು. ಆದರೆ, ರಾಹುಲ್ ತ್ರಿಪಾಠಿ ಇದಕ್ಕೆ ಅವಕಾಶ ನೀಡಲಿಲ್ಲ.

ಮೊದಲ ಎಸೆತವನ್ನು ಅವರು ರಕ್ಷಣಾತ್ಮಕವಾಗಿ ಆಡಿದರು. ಬಿನ್ನಿ ಕೂಡಾ ಕೇದಾರ್ ಜಾಧವ್, ಅಂಕಿಂತ್ ಬಾವ್ನೆ ಹಾಗೂ ತ್ರಿಪಾಠಿ ವಿಕೆಟ್ ಉರುಳಿಸಿ ಆತಿಥೇಯರ ಮೊದಲ ಇನಿಂಗ್ಸ್‌ನ ಹೋರಾಟಕ್ಕೆ ಬೇಗನೆ ಅಂತ್ಯ ಹಾಡಿದರು.

ಕರ್ನಾಟಕದ ಬೌಲಿಂಗ್ ಎಷ್ಟೊಂದು ಚುರುಕಾಗಿತ್ತೆಂದರೆ ಆತಿಥೇಯ ತಂಡದ ಒಂಬತ್ತು ಜನ ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತ ಮುಟ್ಟದೆ ಪೆವಿಲಿಯನ್ ಸೇರಿಕೊಂಡರು. ಹರ್ಷದ್ ಕಾಡೆವಾಲ ಅವರನ್ನು ಮಿಥುನ್ ಬೌಲ್ಡ್ ಮಾಡಿದ ರೀತಿಯಂತೂ ಆಕರ್ಷಕವಾಗಿತ್ತು. ಮಧ್ಯದ ವಿಕೆಟ್ ಎಗಿರಿಸಿ ಸಂಭ್ರಮಿಸಿದ ಕ್ಷಣವಂತೂ ಅಮೋಘ. ಅಷ್ಟೇ ಸುಂದರ.

ದಾಖಲೆ ಸುಧಾರಣೆ: ಮಿಥುನ್ ಆರು ವಿಕೆಟ್ ಉರುಳಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿನ ತಮ್ಮ ಹಿಂದಿನ ಸಾಧನೆಯನ್ನು ಉತ್ತಮ ಪಡಿಸಿಕೊಂಡರು. 2009-10ರಲ್ಲಿ ಮೈಸೂರಿನಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಮಿಥುನ್ 71ಕ್ಕೆ6 ವಿಕೆಟ್ ಪಡೆದಿದ್ದರು. ಇದು ಬಲಗೈ ವೇಗಿಯ ಶ್ರೇಷ್ಠ ಸಾಧನೆಯಾಗಿತ್ತು. ಆದರೆ, ಪುಣೆಯಲ್ಲಿ 36ಕ್ಕೆ6 ವಿಕೆಟ್ ಪಡೆಯುವ ಮೂಲಕ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಮರು ಹೋರಾಟ: ಮೊದಲ ಇನಿಂಗ್ಸ್‌ನಲ್ಲಿ ಜಿದ್ದಿಗೆ ಬಿದ್ದವರಂತೆ ವಿಕೆಟ್ ಒಪ್ಪಿಸಿದ್ದ ಮಹಾರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಮರು ಹೋರಾಟ ತೋರಿದೆ. ಹರ್ಷದ್ (136, 193 ಎಸೆತ, 19 ಬೌಂಡರಿ, 1 ಸಿಕ್ಸರ್ ) ಮತ್ತು ಸಂಗ್ರಾಮ್ (78, 94 ಎಸೆತ, 12 ಬೌಂಡರಿ ) ಮೊದಲ ವಿಕೆಟ್ ಜೊತೆಯಾಟದಲ್ಲಿ 156 ರನ್ ಕಲೆ ಹಾಕಿದರು.

ನಂತರ ಬಂದ ಅಂಕಿತ್ ಬಾವ್ನೆ (ಬ್ಯಾಟಿಂಗ್ 80, 142 ಎಸೆತ, 13 ಬೌಂಡರಿ) ಕರ್ನಾಟಕದ ಗೆಲುವಿನ ಆಸೆಗೆ ತಡೆಗೋಡೆಯಾಗಿದ್ದಾರೆ. ಒಂದು ದಿನದ ಆಟ ಬಾಕಿಯಿದ್ದು, ಕರ್ನಾಟಕದ ಕ್ವಾರ್ಟರ್ ಫೈನಲ್ ಕನಸು ಉಳಿಯಬೇಕಾದರೆ ಬೌಲರ್‌ಗಳು ಹೊಸ ವರ್ಷದ `ಉಡುಗೊರೆ' ನೀಡಲು ನಿರ್ಣಾಯಕ ಪಾತ್ರ ವಹಿಸಬೇಕಿದೆ.

ಮಹಾರಾಷ್ಟ್ರ ತಂಡದವರಿಗೆ ಪ್ರಥಮ ಇನಿಂಗ್ಸ್‌ನಲ್ಲಿ `ಪೆವಿಲಿಯನ್ ಪರೇಡ್' ನಡೆಸಿದ ಖುಷಿಯಲ್ಲಿದ್ದ ಬಿನ್ನಿ ಬಳಗದ ಬೌಲರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ಕೆಡವಲು ಭಾರಿ ಪರದಾಟ ನಡೆಸಿದರು.  ಚೊಚ್ಚಲ ಪಂದ್ಯ ಆಡಿದ ಎಸ್.ಕೆ. ಮೊಯಿನುದ್ದೀನ್ ದಿನದಾಟದ ಕೊನೆಯಲ್ಲಿ ಹರ್ಷದ್ ಅವರನ್ನು ಬೌಲ್ಡ್ ಮಾಡಿ ರಣಜಿಯಲ್ಲಿ ಮೊದಲ ವಿಕೆಟ್ ಪಡೆದರು. ಕರ್ನಾಟಕಕ್ಕೆ ಇದು ದಿನದ ಕೊನೆಯಲ್ಲಿ ಸಿಕ್ಕ ಸಮಾಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT