ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ತಾಲ್ಲೂಕು ಕಚೇರಿಗೆ ಮುತ್ತಿಗೆ

Last Updated 24 ಜನವರಿ 2012, 5:00 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಹಾಗೂ ಕುದಾಪುರ ಅಮೃತ ಮಹಲ್ ಕಾವಲಿನ ಭೂಮಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ನೀಡಿರುವ ಸರ್ಕಾರದ ಕ್ರಮ ಜನವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿ ಸೋಮವಾರ ಭಾರತೀಯ ಕಿಸಾನ್ ಮಹಾಸಭಾದ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಹಿಂದೆ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಅಮೃತ ಮಹಲ್ ಕಾವಲಿನ ಭೂಮಿಯನ್ನು ವಿವಿಧ ಸಂಸ್ಥೆಗಳಿಗೆ ಹಸ್ತಾಂತರಿಸುವಾಗ ಸುತ್ತಲಿನ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ, ಅನುಮತಿ ಪಡೆಯದೇ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ ಎಂದು ದೂರಿದರು.

ಭೂ ಕಂದಾಯ ಕಾಯ್ದೆ ಅನ್ವಯ 100 ಜಾನುವಾರುಗಳಿಗೆ 30 ಎಕರೆ ಜಮೀನನ್ನು ಮೀಸಲಿಡಬೇಕೆಂಬ ಕಾನೂನು ಇದ್ದರೂ ಅವರು ನಿರ್ಲಕ್ಷ್ಯಿಸಿದ್ದಾರೆ ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ರಾಜ್ಯದಲ್ಲಿ ಚಳ್ಳಕೆರೆ ತಾಲ್ಲೂಕು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಭೌಗೋಳಿಕವಾಗಿ ದೃಢಪಟ್ಟಿದೆ. ಇಂತಹ ಹಿಂದುಳಿದ ಪ್ರದೇಶದಲ್ಲಿನ ಸುಮಾರು 8,932 ಎಕರೆ ಫಲವತ್ತಾದ ಭೂಮಿಯನ್ನು ಅಣು ಸಂಶೋಧನಾ ಕೇಂದ್ರ ಹಾಗೂ ಯುದ್ಧ ವಿಮಾನಗಳ ತಯಾರಿಕೆ ಮಾಡುವ ಸಂಸ್ಥೆಗಳಿಗೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಅಮೃತ ಮಹಲ್ ಕಾವಲ್ ಅನ್ನು ಬೇರೆ ಯಾರಿಗೂ ಯಾವ ಉದ್ದೇಶಕ್ಕೂ ಪರಭಾರೆ ಮಾಡಬಾರದೆಂದು ಹೈಕೋರ್ಟ್ ಆದೇಶ ನೀಡಿದೆ. ಇದರ ಹಿನ್ನೆಲೆಯಲ್ಲಿ ಕಿಸಾನ್ ಸಭಾ ಸೇರಿದಂತೆ ನಾನಾ ಸಂಘಟನೆಗಳು ಹಲವು ಬಾರಿ ಹೋರಾಟಗಳನ್ನು ಮಾಡುತ್ತಾ ಬಂದರೂ ಸರ್ಕಾರ, ಜಿಲ್ಲಾಡಳಿತ ಗಮನಹರಿಸುತ್ತಿಲ್ಲ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರು ಪ್ರಭುತ್ವದ ಜನ ವಿರೋಧಿ ಧೋರಣೆಗಳ ವಿರುದ್ಧ ಬೀದಿಗೀಳಿದು ಹೋರಾಟ ಮಾಡಿದರೂ ಎಚ್ಚೆತ್ತುಕೊಳ್ಳದೇ ಇರುವುದು ವಿಪರ್ಯಾಸ. ಅಮೃತ ಮಹಲ್ ಕಾವಲಿನ ಭೂಮಿಯನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಿಸಾನ್ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವಿ. ಹನುಮಂತರೆಡ್ಡಿ, ಜಿಲ್ಲಾ ಸಂಚಾಲಕ ಸಿ.ವೈ. ಶಿವರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡಉಳ್ಳಾರ್ತಿ ಕರಿಯಣ್ಣ ಪಾಲ್ಗೊಂಡಿದ್ದರು.

ಕೆಎಎಸ್ ತರಬೇತಿಶಿಬಿರ
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆ ಅಲಂಕರಿಸುವ ಸಾಧನೆಯನ್ನು ಮಾಡಬೇಕಾದರೆ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ಆವಶ್ಯಕ ಎಂದು ಸ್ಪರ್ಧಾಚೈತ್ರ ತರಬೇತಿ ಕೇಂದ್ರದ ಮುಖ್ಯಸ್ಥ ಗಂಗಾಧರ್ ಅಭಿಪ್ರಾಯಪಟ್ಟರು.

ಪಟ್ಟಣದ ರೋಟರಿ ಕ್ಲಬ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕೆಎಎಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರಸ್ತುತ ಸ್ವರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು- ಹೆಚ್ಚು ಹೊಸ ವಿಷಯದ ಕಡೆಗೆ ಗಮನ ನೀಡವ ಮೂಲಕ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಡಿ. ಧರಣೇಂದ್ರಯ್ಯ ಮಾತನಾಡಿ, ಅತಿ ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಸ್ಪರ್ಧೆ ಪ್ರತಿಯೊಂದು ಕ್ಷೇತ್ರದಲ್ಲಿ ಇರುತ್ತದೆ. ಅದನ್ನು ಸಾಧಿಸಲು ವಿದ್ಯಾರ್ಥಿಗಳು ಪೂರ್ವ ತಯಾರಿ ಮಾಡಿಕೊಳ್ಳುವುದು ಆವಶ್ಯಕ. ಹೆಚ್ಚು ಜ್ಞಾನವನ್ನು ಪಡೆಯಲು ದಿನಪತ್ರಿಕೆ, ವಿವಿಧ ಸ್ವರ್ಧಾತ್ಮಕ ಪುಸ್ತಕ, ನಿರಂತರ ಅಭ್ಯಾಸ ಮುಖ್ಯವಾಗಿರಬೇಕು ಎಂದರು.

ಡಾ.ಜಯಕುಮಾರ್, ಪಶುವೈದ್ಯ ಡಾ.ಪ್ರಶಾಂತನಾಯಕ, ಜಯಪ್ರಕಾಶ್, ತಿಪ್ಪೇಸ್ವಾಮಿ, ಶಿಕ್ಷಣ ಸಂಯೋಜಕ ಕೆ.ಎ. ಮೂರ್ತಪ್ಪ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT