ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚಾಮುಂಡೇಶ್ವರಿ' ಆಶೀರ್ವಾದ ಬಯಸಿದ ಅಂಗವಿಕಲ!

ಈ ಅಭ್ಯರ್ಥಿ ಎಂ.ಎ, ಎಲ್‌ಎಲ್‌ಬಿ ಪದವೀಧರ
Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿ ಇಳಿದಿರುವ ಅಂಗವಿಕಲ ವ್ಯಕ್ತಿ ಸಿದ್ದರಾಜು ಅವರು ಮೂರು ಗಾಲಿ ಸೈಕಲ್‌ನಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲು ಅಣಿಯಾಗಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ `ಪ್ರಾಚ್ಯ ಇತಿಹಾಸ' ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ ಪದವಿ ಪಡೆದಿರುವ ಇವರು ಮೂಲತಃ ಮೈಸೂರಿನವರು. ಬಡಕುಟುಂಬದಿಂದ ಬಂದ ಇವರು ಹುಟ್ಟಿನಿಂದ ಅಂಗವಿಕಲರಾಗಿರಲಿಲ್ಲ. ದುರಂತವೊಂದರಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರು. ಈ ಘಟನೆಯೇ ಅವರ ಜೀವನಕ್ಕೆ ಹೊಸ ತಿರುವು ನೀಡಿದೆ.

ಪದವಿ ಪಡೆದ ಬಳಿಕ ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದೇ ಬಂತು, ಕೆಲಸ ಮಾತ್ರ ದಕ್ಕಲಿಲ್ಲ. ಇದರಿಂದ ವಿಚಲಿತರಾಗದ ಇವರು ಚಾಮರಾಜನಗರದ ಹೊಂಗನೂರು ಸಮೀಪದ ಕರಡೀಗುಡ್ಡದಲ್ಲಿ ನಡೆಯುತ್ತಿದ್ದ ಕರಿಕಲ್ಲು ಗಣಿಗಾರಿಕೆಯಲ್ಲಿ ಕೂಲಿ ಕೆಲಸ ಆರಂಭಿಸಿದರು. ಬರುವ ಕೂಲಿ ಹಣದಲ್ಲಿ ಸಂಸಾರದ ಬಂಡಿ ಸಾಗುತ್ತಿತ್ತು.

ಇವರು ಕೆಲಸ ಮಾಡುತ್ತಿದ್ದ ಕಲ್ಲುಗಣಿಯ ಮಾಲೀಕರಿಗೆ ಸಿದ್ದರಾಜು ಸ್ನಾತಕೋತ್ತರ ಪದವೀಧರ ಎಂಬುದು ಗೊತ್ತಾಯಿತು. ಹೀಗಾಗಿ ಕೂಲಿ ಕೆಲಸ ಬಿಡಿಸಿ, ಲೆಕ್ಕಪತ್ರ ಬರೆಯುವ ಕೆಲಸ ಕೊಟ್ಟರು. ಅಲ್ಲದೆ, ರಾತ್ರಿ ಅಲ್ಲಿಯೇ ತಂಗಿದರೆ ಹೆಚ್ಚಿನ ಸಂಬಳ ನೀಡುವುದಾಗಿಯೂ ಭರವಸೆ ನೀಡಿದರು. ಪ್ರತಿನಿತ್ಯ ಮೈಸೂರಿನಿಂದ ಚಾಮರಾಜನಗರಕ್ಕೆ ಸಂಚರಿಸುತ್ತಿದ್ದ ಇವರು ಅಲ್ಲಿಯೇ ವಾಸ್ತವ್ಯ ಹೂಡಿದರು. ಅದೊಂದು ದಿನ ರಾತ್ರಿ ಕೊಂಚ ಮಳೆಯಾಯಿತು.

ಇದರಿಂದ ಕಂಗಾಲಾದ ಕಾರ್ಮಿಕರು ಹಗಲು ಹೊತ್ತಿನಲ್ಲೇ ಕಲ್ಲುಬಂಡೆ ಸ್ಫೋಟ ಮಾಡಿದರು. ಆಗ ದೊಡ್ಡ ಕಲ್ಲೊಂದು ಇವರ ಎರಡೂ ಕಾಲಿನ ಮೇಲೆ ಬಿತ್ತು. ಪರಿಣಾಮ ಕಾಲು ಊದಿಕೊಂಡಿತು. ತಕ್ಷಣ ಆಸ್ಪತ್ರೆಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. `ನೀವು ಬದುಕಬೇಕು ಎಂದರೆ ಎರಡೂ ಕಾಲುಗಳನ್ನು ತೆಗೆಯಲೇಬೇಕು' ಎಂದು ವೈದ್ಯರು ಹೇಳಿದ್ದರಿಂದ ಸಿದ್ದರಾಜು ಕಾಲು ಕಳೆದುಕೊಂಡರು.

ನಂತರ ಕೆಲಸ ಬಿಟ್ಟ ಇವರು ಪರಿಹಾರ ನೀಡುವಂತೆ ಮಾಲೀಕರನ್ನು ಪರಿಪರಿಯಾಗಿ ಕೇಳಿಕೊಂಡರು. ಆದರೆ, ಮಾಲೀಕ ಸೊಪ್ಪು ಹಾಕಲಿಲ್ಲ. ನ್ಯಾಯ ಪಡೆಯಲು ವಕೀಲರ ಮೊರೆ ಹೋದರೂ ಪರಿಹಾರ ದೊರಕಲಿಲ್ಲ. ಇದರಿಂದ ತೀವ್ರ ಮನನೊಂದ ಸಿದ್ದರಾಜು, ತಾವೇ ಕಾನೂನು ಅಧ್ಯಯನ ಮಾಡಿ ತಮ್ಮ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂಬ ಹಟಕ್ಕೆ ಬಿದ್ದರು.

ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಅಧ್ಯಯನ ಮಾಡಿ, ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾದರು. ವಾದ ಮಂಡಿಸಲು ಮುಂದಾಗಬೇಕು ಎನ್ನುವಷ್ಟರಲ್ಲಿ ಇವರ ಹಿತೈಷಿಗಳು `ನೀವು ವಕೀಲರಾಗಿ ಹೋರಾಡಿದರೆ ಪರಿಹಾರ ಧನದ ಮೊತ್ತ ಕಡಿಮೆ ಆಗಬಹುದು. ಅಂಗವಿಕಲ ವ್ಯಕ್ತಿಯಾಗಿ ಹೋರಾಡಿದರೆ ಹೆಚ್ಚಿನ ಸಹಾಯಧನ ಪಡೆಯಬಹುದು' ಎಂದು ಸಲಹೆ ನೀಡಿದರು. ಹೀಗಾಗಿ ವಕೀಲಿ ವೃತ್ತಿ ಕೈಬಿಟ್ಟು, ಪರಿಹಾರ ಧನಕ್ಕಾಗಿ ಹೋರಾಟ ಮುಂದುವರೆಸಿದ್ದಾರೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ವಿದ್ಯಾವಂತರು ಸುಳ್ಳು ಹೇಳಿ ಬದುಕು ಸಾಗಿಸಬಾರದು. ಸತ್ಯ, ಪ್ರಾಮಾಣಿಕತೆಯಿಂದ ಬದುಕಬೇಕು. ನಾನು ಪರಿಶಿಷ್ಟ ಜಾತಿ ವ್ಯಕ್ತಿಯಾದರೂ ನನಗೆ ಸರ್ಕಾರ ಉದ್ಯೋಗ ನೀಡಲಿಲ್ಲ. ಆದ್ದರಿಂದ ಚಾಮುಂಡೇಶ್ವರಿ ಆಶೀರ್ವಾದ ಬಯಸಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 3,676 ಮತಗಳನ್ನು ಪಡೆದಿದ್ದೆ. ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಬೇಕು ಎಂಬುದು ನನ್ನ ಗುರಿಯಾಗಿದೆ' ಎಂದು ಹೇಳಿದರು.

`ಪತ್ನಿ ಉಮಾದೇವಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಿ ದರ್ಜೆ ಉದ್ಯೋಗಿ. ಮಗಳು ಉಮಾದೇವಿ, ಮಗ ಸಂತೋಷಕುಮಾರ್ ಪದವಿ ಓದುತ್ತಿದ್ದಾರೆ. ಹಣ ಇಲ್ಲದ ನಮ್ಮಂತವರು ಗೆದ್ದರೆ ಹಣವಿಲ್ಲದವರ ಕಷ್ಟ ಸುಖಗಳಿಗೆ ಸ್ಪಂದಿಸಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT